ADVERTISEMENT

ತುಮಕೂರು ವಿ.ವಿ. | ಆನ್‌ಲೈನ್‌ ಕಲಿಕೆ: ಲಾಕ್‌ಡೌನ್‌ ಬಳಿಕ ಪರೀಕ್ಷೆ

‘ಪ್ರಜಾವಾಣಿ’ ಫೋನ್‌–ಇನ್‌ನಲ್ಲಿ ವಿದ್ಯಾರ್ಥಿಗಳ ಗೊಂದಲ ನಿವಾರಿಸಿದ ತುಮಕೂರು ವಿ.ವಿ ಕುಲಪತಿ ಪ್ರೊ.ವೈ.ಎಸ್‌.ಸಿದ್ದೇಗೌಡ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2020, 19:39 IST
Last Updated 20 ಏಪ್ರಿಲ್ 2020, 19:39 IST
ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ವೈ.ಎಸ್‌.ಸಿದ್ದೇಗೌಡ
ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ವೈ.ಎಸ್‌.ಸಿದ್ದೇಗೌಡ   

ತುಮಕೂರು: ಸೆಲೆಬಸ್ಸೇ ಕಂಪ್ಲೀಟ್‌ ಆಗಿಲ್ಲ, ಎಕ್ಸಾಂ ಯಾವಾಗ ನಡೆಸುತ್ತೀರಾ..., ಈ ಬಾರಿ ಪ್ರಾಯೋಗಿಕ ಪರೀಕ್ಷೆಗಳು ಇರುತ್ತಾ..., ಡೆಸರ್ಟೇಷನ್‌, ಪ್ರಾಜೆಕ್ಟ್‌ ವರ್ಕ್‌ ಮಾಡಲು ಆಗುತ್ತಿಲ್ಲ, ಮರು ಮೌಲ್ಯಮಾಪನಕ್ಕೆ ಶುಲ್ಕ ಕಟ್ಟಲು ದಿನಾಂಕ ವಿಸ್ತರಣೆ ಮಾಡುತ್ತೀರಾ....

ತುಮಕೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಸಮೂಹ ಹೀಗೆ ತಮ್ಮಲ್ಲಿದ್ದ ಹತ್ತಾರು ಗೊಂದಲ, ಸಮಸ್ಯೆಗಳನ್ನು ಹೊರಗೆಡವಿದರು. ಇಂತಹ ಹತ್ತಾರು ಪ್ರಶ್ನೆಗಳು ಹಾಗೂ ಆತಂಕಗಳಿಗೆ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ವೈ.ಎಸ್‌.ಸಿದ್ದೇಗೌಡ ಅವರು ಪರಿಹಾರ ಕಲ್ಪಿಸಿದರು.

ಇದಕ್ಕೆ ವೇದಿಕೆಯಾಗಿದ್ದು ‘ಪ್ರಜಾವಾಣಿ’ ಸೋಮವಾರ ಆಯೋಜಿಸಿದ್ದ ‘ಫೋನ್‌– ಇನ್‌’ ಕಾರ್ಯಕ್ರಮ. ಬೆಳಿಗ್ಗೆ 10.30ರಿಂದ 11.30 ಗಂಟೆಗೆ ನಿಗದಿಪಡಿಸಿದ್ದರೂ, ತದನಂತರವೂ ಕರೆಗಳು ಬರುತ್ತಲೇ ಇದ್ದವು.ಸಮಾಧಾನದಿಂದ ಉತ್ತರಿಸಿ, ವಿದ್ಯಾರ್ಥಿಗಳ ಮನದಲ್ಲಿ ಮನೆಮಾಡಿದ್ದ ಗೊಂದಲ, ಆತಂಕ, ಅನುಮಾನಗಳನ್ನು ಕುಲಪತಿ ಪರಿಹರಿಸಿದರು.

ADVERTISEMENT

ಎಂ.ಎಸ್ಸಿ ಅಂತಿಮ ವರ್ಷದಲ್ಲಿ ಓದುತ್ತಿದ್ದು, ಪ್ರಾಕ್ಟಿಕಲ್ ಪರೀಕ್ಷೆ ಯಾವಾಗ ಮಾಡುತ್ತೀರಿ?
-ಶಶಾಂಕ್, ಹತ್ತಿಗುಡ್ಡೆ, ಚಿಕ್ಕನಾಯಕನಹಳ್ಳಿ ತಾ:

ಕುಲಪತಿ: ಯಾವೊಬ್ಬ ವಿದ್ಯಾರ್ಥಿಗೂ ತೊಂದರೆ ಆಗಬಾರದು ಎಂಬುದು ನಮ್ಮ ಉದ್ದೇಶ. ಲಾಕ್‌ಡೌನ್‌ ಮುಗಿದ ನಂತರ ಪ್ರಾಕ್ಟಿಕಲ್‌ ಪರೀಕ್ಷೆಗೆ ಅನುಕೂಲ ಮಾಡಿಕೊಡಲಾಗುವುದು.

ಲ್ಯಾಬ್‌ ಪರೀಕ್ಷೆ ಎದುರಿಸುವುದು ಹೇಗೆ ಎಂಬ ಆತಂಕ ಕಾಡುತ್ತಿದೆ.
-ನಿತಿನ್‌ ಚಂದ್ರ, ಮಮತಾ, ಮಧುಗಿರಿ, ಯತೀಶ್, ಚಿಕ್ಕನಾಯಕನಹಳ್ಳಿ:

ಕುಲಪತಿ: ಯಾವುದೇ ಭಯ, ಆತಂಕ ಬೇಡ. ಲಾಕ್‌ಡೌನ್‌ ಮುಗಿದ ನಂತರ ಲ್ಯಾಬ್‌ ಪರೀಕ್ಷೆಗೆ ವ್ಯವಸ್ಥೆ ಮಾಡಲಾಗುವುದು. ಅಲ್ಲದೆ, ಪರೀಕ್ಷಾ ಶುಲ್ಕ ಪಾವತಿಸಲು ಸಮಯ ವಿಸ್ತರಿಸಲಾಗುವುದು.

ಆನ್‌ಲೈನ್‌ನಲ್ಲಿ ಪಾಠ ಕೇಳಲು ಸಮಸ್ಯೆ ಆಗುತ್ತಿದೆ. ನೆಟ್‌ವರ್ಕ್‌ ಸಮಸ್ಯೆಯಿಂದಾಗಿ ಸ್ಪಷ್ಟವಾಗಿ ಅರ್ಥವಾಗುತ್ತಿಲ್ಲ.
-ಗೀತಾ, ತುಮಕೂರು:

ಕುಲಪತಿ: ಮೇ 3ರ ನಂತರ ಕನಿಷ್ಠ ಮೂರು ವಾರ ಬೆಳಿಗ್ಗೆ 9ರಿಂದ ಸಂಜೆ 6ರ ವರೆಗೆ ತರಗತಿಗಳನ್ನು ನಡೆಸಲಾಗುವುದು.

ಗ್ರಾಮೀಣ ಭಾಗದಲ್ಲಿ ನೆಟ್‌ವರ್ಕ್‌ ಸಮಸ್ಯೆಯಿಂದಾಗಿ ಜೂಮ್‌ ಆ್ಯಪ್‌ ಇನ್‌ಸ್ಟಾಲ್‌ ಮಾಡಿಕೊಳ್ಳುವುದು ಕಷ್ಟವಾಗುತ್ತಿದೆ.
-ಲೋಕೇಶ್, ಬೆಳ್ಳಾವಿ

ಕುಲಪತಿ: ವಿದ್ಯಾರ್ಥಿಗಳ ಹಿತಾದೃಷ್ಟಿಯಿಂದ ನಾವು ಕೇವಲ ಜೂಮ್‌ ಆ್ಯಪ್‌ ಮಾತ್ರವಲ್ಲದೇ, ವೆಬ್‌ಸೈಟ್‌, ವಾಟ್ಸ್‌ಆ್ಯಪ್‌ ಗ್ರೂಪ್, ಯುಟ್ಯೂಬ್‌ನಲ್ಲಿಯೂ ಪಠ್ಯ, ಪಾಠದ ವಿಡಿಯೊ, ಬುಕ್ಸ್‌, ಇತರೆ ಮಾಹಿತಿಗಳನ್ನು ಹಾಕಲಾಗುತ್ತಿದೆ. ಅದನ್ನೂ ಗಮನಿಸಿ.

ಎಂ.ಎಸ್ಸಿ ಭೌತವಿಜ್ಞಾನ ಓದುತ್ತಿದ್ದು, ಕೆಲವೊಂದು ವಿಷಯಗಳನ್ನು ಚಾಲೆಂಜ್ ಇವ್ಯಾಲುವೇಷನ್‌ಗೆ ಹಾಕಬೇಕು.
-ಅನು, ದಾವಣಗೆರೆ

ಕುಲಪತಿ: ಲಾಕ್‌ಡೌನ್‌ ಮುಗಿದ ತಕ್ಷಣ ಶುಲ್ಕ ಪಾವತಿಸಿ, ಇದಕ್ಕೆ ಅನುಕೂಲ ಕಲ್ಪಿಸಲಾಗುವುದು.

ನನ್ನ ಬಳಿ ಆ್ಯಂಡ್ರಾಯ್ಡ್ ಮೊಬೈಲ್‌ ಇಲ್ಲ, ಆನ್‌ಲೈನ್‌ನಲ್ಲಿ ಪಾಠ ಕೇಳಲು ಆಗುತ್ತಿಲ್ಲ. ಇದೀಗ ಸೈಬರ್‌ ಸೆಂಟರ್‌ಗಳು ಇಲ್ಲ.
-ವೀರಭದ್ರಯ್ಯ, ಬಸವಪಟ್ಟಣ

ಕುಲಪತಿ: ಹತ್ತಿರದಲ್ಲಿ ಸ್ನೇಹಿತರಿದ್ದರೆ ಅವರ ಬಳಿ ಕುಳಿತು ಪಾಠ ಕೇಳಿ. ಹೆಚ್ಚಿನ ಮಾಹಿತಿಗೆ ನಿಮ್ಮ ಪ್ರಾಧ್ಯಾಪಕರನ್ನು ಸಂಪರ್ಕಿಸಿ.

ಪ್ರಾಣಿವಿಜ್ಞಾನ ವಿಭಾಗದಲ್ಲಿ ಓದುತ್ತಿದ್ದು, ಪ್ರಾಜೆಕ್ಟ್‌ ಬಾಕಿ ಉಳಿದುಕೊಂಡಿದೆ.
-ದೀಪಕ್, ತುಮಕೂರು

ಕುಲಪತಿ: ನಿಮ್ಮ ಗೈಡ್ ಸಂಪರ್ಕಿಸಿ. ಮುಂದೆ ನಿಮಗೆ ಪಿಎಚ್‌.ಡಿಗೆ ಸಮಸ್ಯೆ ಆಗದಂತೆ ಕ್ರಮ ವಹಿಸಲಾಗುವುದು.

ನಮ್ಮ ತಮ್ಮ ಬಿಬಿಎಂ ಓದುತ್ತಿದ್ದು, ಆನ್‌ಲೈನ್‌ ತರಗತಿ ನಡೆಯುತ್ತಿಲ್ಲ ಎನ್ನುತ್ತಿದ್ದಾನೆ.
-ಅಶೋಕ್, ಪಾವಗಡ

ಕುಲಪತಿ: ಅವರಿಗೆ ಈಗಾಗಲೇ 151 ಗಂಟೆ ಪಾಠ ಮಾಡಲಾಗಿದೆ. ನಿಮ್ಮ ತಮ್ಮ ಮನೆಯಲ್ಲಿ ಸಿನಿಮಾ ನೋಡುತ್ತಾ ಕುಳಿತಿರಬೇಕು, ಗಮನಹರಿಸಿ.

ಸ್ಟಡಿ ಹಾಲಿಡೇಸ್‌ ನೀಡುತ್ತೀರಾ? ನೇರವಾಗಿ ಅಂತಿಮ ಪರೀಕ್ಷೆ ಬರೆಯಬೇಕಾ?
-ಸಿಂಧೂಷ, ಮಧುಗಿರಿ

ಕುಲಪತಿ: ಲಾಕ್‌ಡೌನ್‌ ದಿನಗಳೇ ಸ್ಟಡಿ ಹಾಲಿಡೇಸ್. ಪುನಾಃ ರಜೆ ನೀಡುವುದಿಲ್ಲ. ಲಾಕ್‌ಡೌನ್‌ ಮುಗಿದ ನಂತರ 10 ದಿನಸಮಯಾವಕಾಶ ನೀಡಲಿದ್ದು, ಆ ಸಮಯದಲ್ಲಿ ಪ್ರಾಧ್ಯಾಪಕರು ವಿದ್ಯಾರ್ಥಿಗಳ ಗೊಂದಲ ಬಗೆಹರಿಸಲಿದ್ದಾರೆ. ಪುನರ್ ಮನನ ತರಗತಿ ನಡೆಸಿಕೊಡಲಿದ್ದಾರೆ.

ಲಾಕ್‌ಡೌನ್‌ ಘೋಷಣೆ ಮಾಡುವ ಮುಂಚೆಯೇ ನಮ್ಮನ್ನು ಬಿಸಿಎಂ ವಸತಿ ನಿಲಯಗಳಿಂದ ಮನೆಗೆ ಕಳುಹಿಸಲಾಗಿದೆ. ನೋಟ್ಸ್‌ಗಳು ಹಾಸ್ಟೆಲ್‌ಗಳಲ್ಲೆ ಇವೆ. ಓದಲು ಆಗುತ್ತಿಲ್ಲ.
-ರಂಜಿತಾ, ಕಲ್ಲೂರು, ಗುಬ್ಬಿ ತಾ.

ಕುಲಪತಿ: ಸದ್ಯ ಆನ್‌ಲೈನ್‌ ತರಗತಿಯಲ್ಲಿ ಪಾಠ ಕೇಳಿ ಅಧ್ಯಯನ ನಡೆಸಿ, ಮನನ ಮಾಡಿಕೊಳ್ಳಿ. ಲಾಕ್‌ಡೌನ್‌ ಮುಗಿದ ಬಳಿಕ, ಮೂರು ವಾರಗಳ ಸೇತುಬಂಧದ ತರಗತಿ ನಡೆಯುವ ವೇಳೆ ವಸತಿ ನಿಲಯಗಳನ್ನು ತೆರೆಯಲಾಗುತ್ತದೆ. ಆ ವೇಳೆ ನೋಟ್ಸ್‌ಗಳನ್ನು ಓದಿಕೊಳ್ಳಬಹುದು.

**

ಹೆಚ್ಚು ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗಳು

-ಎಕ್ಸಾಂ ಯಾವಾಗ ನಡೆಸುತ್ತೀರಾ?

ಕುಲಪತಿ: ಲಾಕ್‌ಡೌನ್‌ ಮುಗಿದ ಬಳಿಕ ಪರಿಸ್ಥಿತಿ ತಿಳಿಯಾದರೆ, ಜೂನ್‌ ಎರಡನೇ ಅಥವಾ ಮೂರನೇ ವಾರದಲ್ಲಿ ಪರೀಕ್ಷೆ ನಡೆಸಲು ಯೋಜಿಸಿದ್ದೇವೆ.

-ಪ್ರಾಯೋಗಿಕ ಪರೀಕ್ಷೆ ಈ ಬಾರಿ ನಡೆಯುತ್ತವೆಯೇ?

ಮೇ 3ರ ಬಳಿಕ ಮೂರು ವಾರಗಳ ಪುನರ್‌ ಮನನ ತರಗತಿಗಳನ್ನು ಬೆಳಿಗ್ಗೆ 9ರಿಂದ ಸಂಜೆ 6ರ ವರೆಗೆ ನಡೆಸಲಾಗುವುದು. ಆ ವೇಳೆಯಲ್ಲೇ ಪ್ರಾಯೋಗಿಕ ಪರೀಕ್ಷೆ ನಡೆಸಲು ವೇಳಾಪಟ್ಟಿ ಹಾಕಿಕೊಳ್ಳುತ್ತೇವೆ.

-ಚಾಲೆಂಜಿಗ್‌ ರಿವ್ಯಾಲುವೇಷನ್‌ಗೆ ಅವಕಾಶ ಕೊಡುತ್ತೀರಾ?

ಮೇ 3ರ ಬಳಿಕ ತರಗತಿಗಳು ನಡೆದರೆ, ಆ ವೇಳೆಯೇ ರಿವ್ಯಾಲುವೇಷನ್‌ಗೆ ಶುಲ್ಕ ಕಟ್ಟಲು ಅವಕಾಶ ಕಲ್ಪಿಸಲಾಗುವುದು.

ಕರೆ ಮಾಡಿದವರು: ಪ್ರಜ್ವಲ್‌ ಸೇಠ್‌, ಕಾರವಾರ; ಗಿರೀಶ್‌, ಹಿರಿಯೂರು; ಕಾಂತಾಮಣಿ, ಕೊಂಡ್ಲಿ ಕ್ರಾಸ್‌; ರಂಗನಾಥ್‌, ನರಸಿಂಹ, ಪಾವಗಡ; ಅಭಯ್, ವಿನೋದ್‌, ತುಮಕೂರು; ಪ್ರವೀಣ್‌, ತಿಪಟೂರು; ತಿಲಕ್‌, ಕೊರಟಗೆರೆ; ನವ್ಯ, ಗುಬ್ಬಿ, ಸುಷ್ಮಾ, ತುಮಕೂರು.

**

ನಿಟ್ಟೂರು ಹಿತ್ತಲಹಳ್ಳಿ ಭಾಗದಲ್ಲಿ ನೆಟ್‌ವರ್ಕ್‌ ಸಮಸ್ಯೆಯಿಂದಾಗಿ ಆನ್‌ಲೈನ್‌ ಕ್ಲಾಸ್‌ ಕೇಳಲು
ಕಷ್ಟವಾಗುತ್ತಿದೆ. ನೆಟ್‌ವರ್ಕ್‌ ಸಿಗಬೇಕಾದರೆ 4 ಕಿ.ಮೀ ಹೋಗಬೇಕು ಎಂದು ಪದವಿ
ಕಾಲೇಜಿನ ದರ್ಶನ್‌ ತಮ್ಮ ಸಮಸ್ಯೆ ಹೇಳಿಕೊಂಡರು.

ಇದಕ್ಕೆ ಪ್ರತಿಕ್ರಿಯಿಸಿದ ಕುಲಪತಿ, ‘ಕಲಿಯುವ ಆಸಕ್ತಿ ಇದ್ದರೆ ಕೆಲವೊಮ್ಮೆ ಶ್ರಮಪಡಬೇಕಾಗುತ್ತದೆ. ಅನಿವಾರ್ಯ ಪರಿಸ್ಥಿತಿ ಇರುವುದರಿಂದ ಸೈಕಲ್‌ ಅಥವಾ ಬೈಕ್‌ ತೆಗೆದುಕೊಂಡು ನೆಟ್‌ವರ್ಕ್‌ ಸಿಗುವ ಜಾಗಕ್ಕೆ ಹೋಗಬೇಕಾಗುತ್ತದೆ. ಆಗುವ ತೊಂದರೆ ಸಹಿಸಿಕಂಡು ಕಲಿಯಬೇಕು’ ಎಂದು ತಿಳಿಹೇಳಿದರು.

ತುಮಕೂರು ವಿ.ವಿ. ಜಾಲತಾಣದಲ್ಲೂ ಆನ್‌ಲೈನ್‌ ಪಾಠದ ವಿಡಿಯೊಗಳು ಲಭ್ಯವಿವೆ:
http://www.tumkuruniversity.ac.in/

ಮೊದಲು ಪಾಠ ಕೇಳು
ಹುಳಿಯಾರಿನ ಲೋಕೇಶ್ ‘ವಿದ್ಯಾಸಿರಿ ಸ್ಕಾಲರ್‌ಶಿಪ್‌ ಯಾವಾಗ ಬರುತ್ತೆ’ ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಕುಲಪತಿ, ‘ಮೊದಲು ಆನ್‌ಲೈನ್‌ನಲ್ಲಿ ಪಾಠ ಕೇಳುವ ಕಡೆಗೆ ಗಮನ ಹರಿಸಿ. ಆ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಬೇಡಿ. ಹಣ ನೇರವಾಗಿ ನಿನ್ನ ಖಾತೆಗೆ ಬರಲಿದೆ’ ಎಂದರು.

ಮುಂದಿನ ವ್ಯವಸ್ಥೆಗೆ ಅಡಿಪಾಯ
ಈಗಾಗಲೇ ವಿವಿಧ ರಾಜ್ಯ, ದೇಶಗಳಲ್ಲಿ ಆನ್‌ಲೈನ್‌ ಪಾಠ, ಪ್ರವಚನಗಳು ಚಾಲ್ತಿಯಲ್ಲಿವೆ. ಮುಂದಿನ ದಿನಗಳಲ್ಲಿ ನಮ್ಮಲ್ಲೂ ಈ ವ್ಯವಸ್ಥೆ ಬರುತ್ತದೆ. ಹಾಗಾಗಿ ಈಗ ನಡೆಯುತ್ತಿರುವ ಆನ್‌ಲೈನ್‌ ತರಗತಿಗಳು ಮುಂದಿನ ವ್ಯವಸ್ಥೆಗೆ ಅಡಿಪಾಯ. ಹಾಗಾಗಿ ವಿದ್ಯಾರ್ಥಿಗಳು, ಶಿಕ್ಷಕರು ಈ ವ್ಯವಸ್ಥೆಗೆ ಹೊಂದಿಕೊಳ್ಳಬೇಕು ಎಂದು ಕುಲಪತಿ ಸಲಹೆ ನೀಡಿದರು.

ಸಾಫ್ಟ್‌ ಕಾಪಿಯಲ್ಲಿ ಡೆಸರ್ಟೇಷನ್ ಸಲ್ಲಿಸಿ

ಪ್ರಾಜೆಕ್ಟ್‌ ವರ್ಕ್‌, ಡೆಸರ್ಟೇಷನ್ ಸಿದ್ಧಪಡಿಸಲು, ಅವುಗಳನ್ನು ಸಲ್ಲಿಸಲು ಹೆಚ್ಚು ಸಮಯ ಕೊಡುತ್ತೀರಾ?
-ಶ್ರೀಕಾಂತ್‌, ಹುಳಿಯಾರ್‌; ಶ್ರೀನಿವಾಸ್‌, ಮಾಗಡಿ

ಕುಲಪತಿ: ಈಗ ನಿಮಗೆ ಸಮಯ ಇದೆ. ಆನ್‌ಲೈನ್‌ನಲ್ಲೇ ವಿಷಯ ಸಂಗ್ರಹಿಸಿ ಅಧ್ಯಯನ ಪ್ರಬಂಧವನ್ನು (ಡೆಸರ್ಟೇಷನ್‌) ಸಿದ್ಧಪಡಿಸಿ, ನಿಮ್ಮ ಪರಿಸರದಲ್ಲಿನ ವಸ್ತು–ವಿಷಯಗಳನ್ನು ಆಯ್ದುಕೊಂಡು ಪ್ರಾಜೆಕ್ಟ್‌ ಮುಗಿಸಿ. ಅದಕ್ಕಾಗಿ ನಿಮ್ಮ ಮಾರ್ಗದರ್ಶಕರಿಂದ ಸಲಹೆ ಪಡೆಯಿರಿ.

ಸಮಯದ ಅಭಾವದಿಂದ ಡೆಸರ್‌ಟೇಷನ್ ಟೈಪ್‌ ಮಾಡಿ, ಹಾರ್ಡ್‌ಕಾಪಿಯಲ್ಲಿ ಸಲ್ಲಿಸಲು ಆಗದಿದ್ದರೆ, ಸಾಫ್ಟ್‌ಕಾಪಿಯಲ್ಲೇ ಮೌಲ್ಯಮಾಪನ ಮಾಡುವ ಚಿಂತನೆ ಇದೆ.

ಹೊಸ ಕ್ಯಾಂಪಸ್‌ಗೆ ಸ್ಥಳಾಂತರ ಚಿಂತನೆ
ಮುಂದಿನ ಶೈಕ್ಷಣಿಕ ವರ್ಷದಿಂದಲೇ ಬಿದರಕಟ್ಟೆಯಲ್ಲಿನ ಹೊಸ ಕ್ಯಾಂಪಸ್‌ಗೆ ವಿ.ವಿ ಸ್ಥಳಾಂತರಿಸುವ ಚಿಂತನೆ ಇದೆ ಎಂದು ಪ್ರೊ.ವೈ.ಎಸ್.ಸಿದ್ದೇಗೌಡ ತಿಳಿಸಿದರು.

ಹೊಸ ಕ್ಯಾಂಪಸ್‌ಗೆ ಬಸ್‌ ವ್ಯವಸ್ಥೆ ಮಾಡಲು ಕೆಎಸ್‌ಆರ್‌ಟಿಸಿ ಜತೆ ಮಾತುಕತೆ ನಡೆಸಲಾಗಿದೆ. 240 ಎಕರೆಯ ಕ್ಯಾಂಪಸ್‌ನಲ್ಲಿ 40 ಎಕರೆಯಲ್ಲಿ ಮಾತ್ರ ಕಟ್ಟಡ ನಿರ್ಮಾಣವಾಗಲಿದೆ. 80 ಎಕರೆಯಲ್ಲಿ ಸೈನ್ಸ್‌ ಸೆಂಟರ್‌ ಆರಂಭವಾಗಲಿದ್ದು, ಅದರಲ್ಲಿ ಜೀವವಿಜ್ಞಾನ ಅಧ್ಯಯನ, ಪ್ರಾಯೋಗಿಕ ತರಗತಿಗಳಿಗೆ ಬೇಕಾದ ಕಿರುಉದ್ಯಾನಗಳೂ ಇರಲಿವೆ. ಇನ್ನೂ ಎಂಟು ವಿಭಾಗಗಳ ಕಟ್ಟಡಗಳ ನಿರ್ಮಾಣ ಆಗಬೇಕಿದೆ ಎಂದರು.

*

ಅಂಕಿ–ಅಂಶ
13,612:
ಗಂಟೆಗಳ ಕಾಲ ಪದವಿ ಕೋರ್ಸ್‌ಗಳಿಗೆ ನಡೆಸಿದ ಆನ್‌ಲೈನ್‌ ತರಗತಿ
2,360:ಗಂಟೆಗಳ ಕಾಲ ಸ್ನಾತಕೋತ್ತರ ಪದವಿ ಕೋರ್ಸ್‌ಗಳಿಗೆ ನಡೆಸಿದ ಆನ್‌ಲೈನ್‌ ತರಗತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.