ADVERTISEMENT

ಶಿರಾ: ₹ 50 ಲಕ್ಷ ವೆಚ್ಚದಲ್ಲಿ ಆರ್‌ಟಿಪಿಸಿಆರ್ ಪ್ರಯೋಗಾಲಯ

ಕೋವಿಡ್‌ ಸಮಯದಲ್ಲಿ ಆರೋಗ್ಯ ಕ್ಷೇತ್ರಕ್ಕೆ ಆದ್ಯತೆ: ರಸ್ತೆ ಕಾಮಗಾರಿಗಳಿಗೂ ಒತ್ತು

ಎಚ್.ಸಿ.ಅನಂತರಾಮು
Published 24 ಸೆಪ್ಟೆಂಬರ್ 2021, 4:18 IST
Last Updated 24 ಸೆಪ್ಟೆಂಬರ್ 2021, 4:18 IST
ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ
ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ   

ಶಿರಾ: ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ ಅವರುಶಾಸಕರ ಸ್ಥಳೀಯ ಪ್ರದೇಶ ಅಭಿವೃದ್ಧಿ ಅನುದಾನದಲ್ಲಿ ₹50
ಲಕ್ಷವನ್ನು ಆರ್‌ಟಿಪಿಸಿಆರ್ ಪ್ರಯೋಗಾಲಯ ನಿರ್ಮಾಣಕ್ಕೆ ಬಳಕೆ ಮಾಡಿದ್ದಾರೆ.ವೈದ್ಯರಾಗಿದ್ದ ಶಾಸಕ ರಾಜೇಶ್ ಗೌಡ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದಾರೆ.

ಶಿರಾ ಶಾಸಕರಾಗಿದ್ದ ಬಿ.ಸತ್ಯನಾರಾಯಣ ಅವರ ನಿಧನದಿಂದ ತೆರವಾಗಿದ್ದ ಶಿರಾ ವಿಧಾನಸಭೆ ಕ್ಷೇತ್ರಕ್ಕೆ 2020ರಲ್ಲಿ ನಡೆದ ಚುನಾವಣೆಯಲ್ಲಿ ರಾಜೇಶ್ ಗೌಡ ಅವರು ಶಾಸಕರಾಗಿ ಆಯ್ಕೆಯಾದರು. ಹಾಗಾಗಿ 2018 ಮತ್ತು 2019ರ ಅನುದಾನವನ್ನು ಅಂದಿನ ಶಾಸಕರಾಗಿದ್ದ ಬಿ.ಸತ್ಯನಾರಾಯಣ ಅವರು ಬಳಕೆ ಮಾಡಿಕೊಂಡರೆ, 2020ರ ಸಾಲಿನ ಅನುದಾನವನ್ನು ಬಿ.ಸತ್ಯನಾರಾಯಣ ಹಾಗೂ ರಾಜೇಶ್ ಗೌಡ ಅವರು ಬಳಕೆ ಮಾಡಿಕೊಂಡಿದ್ದಾರೆ.

ಶಾಸಕ ಬಿ.ಸತ್ಯನಾರಾಯಣ ಅವರು 2018ರಲ್ಲಿ 59 ಕಾಮಗಾರಿಗಳಿಗೆ ₹2 ಕೋಟಿ ಬಳಕೆ ಮಾಡಿದ್ದಾರೆ. 2019ರಲ್ಲಿ 79 ಕಾಮಗಾರಿಗಳಿಗೆ ₹ 2 ಕೋಟಿ ಬಳಕೆ ಮಾಡಿಕೊಳ್ಳುವ ಮೂಲಕ ಶಾಸಕರ ಸ್ಥಳೀಯ ಪ್ರದೇಶ ಅಭಿವೃದ್ಧಿ ಅನುದಾನವನ್ನು ಶೇ 100ರಷ್ಟು ಬಳಕೆಯಾಗಿದೆ.

ADVERTISEMENT

ಶಾಸಕರಾಗಿದ್ದ ಬಿ.ಸತ್ಯನಾರಾಯಣ ಅವರು ರಸ್ತೆ, ಚರಂಡಿ, ಸಮುದಾಯ ಭವನ, ಕುಡಿಯುವ ನೀರಿನ ಕಾಮಗಾರಿಗಳಿಗೆ ಆದ್ಯತೆ ನೀಡಿದ್ದರು. ದೇವಸ್ಥಾನಗಳ ಅಭಿವೃದ್ಧಿಗೆ ಮುಜರಾಯಿ ಇಲಾಖೆಯಿಂದ ವಿಶೇಷ ಅನುದಾನ ತರುವ ಮೂಲಕ ಅಭಿವೃದ್ಧಿ ಕೈಗೊಂಡಿದ್ದ ಕಾರಣ ಶಾಸಕರ ನಿಧಿಯಿಂದ ದೇವಾಲಯಗಳಿಗೆ ಅನುದಾನ ನೀಡಿರಲಿಲ್ಲ.

ಶಾಸಕ ರಾಜೇಶ್ ಗೌಡ ಅವರು ತಮ್ಮ 10 ತಿಂಗಳ ಅಧಿಕಾರಾವಧಿಯಲ್ಲಿ 2020ನೇ ಸಾಲಿನಲ್ಲಿ ಉಜ್ಜನಕುಂಟೆ ಗ್ರಾಮದಲ್ಲಿ ₹5 ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆ ಹಾಗೂ ₹5 ಲಕ್ಷ ವೆಚ್ಚದಲ್ಲಿ ಸಿಸಿ ಚರಂಡಿ ನಿರ್ಮಾಣ ಮಾಡಿದ್ದಾರೆ.

ಕ್ಷೇತ್ರದ ವಿವಿಧ ಕಡೆ ₹15 ಲಕ್ಷ ವೆಚ್ಚದಲ್ಲಿ ಸಾರ್ವಜನಿಕ ಪ್ರದೇಶದಲ್ಲಿ ಜನರು ಕುಳಿತುಕೊಳ್ಳಲು ಅನುಕೂಲವಾಗುವಂತೆ ಸಿಮೆಂಟ್ ಬೆಂಚ್‌ ಆಳವಡಿಕೆ, ಅಂಗವಿಕಲರಿಗೆ ₹5 ಲಕ್ಷ ವೆಚ್ಚದಲ್ಲಿ ತ್ರಿಚಕ್ರ ಮೋಟರ್ ವಾಹನ, ₹2 ಲಕ್ಷ ವೆಚ್ಚದಲ್ಲಿ ಸೈಕಲ್, ನಿರುದ್ಯೋಗಿ ಮಹಿಳೆಯರ ಸಬಲೀಕರಣಕ್ಕಾಗಿ ₹2 ಲಕ್ಷ ವೆಚ್ಚದಲ್ಲಿ ಹೊಲಿಗೆ ಯಂತ್ರ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ. ಉಳಿದಂತೆ ರಸ್ತೆ ಹಾಗೂ ದೇವಾಲಯಗಳ ಜೀರ್ಣೋದ್ಧಾರಕ್ಕೆ ಅನುದಾನ ಮೀಸಲಿರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.