ADVERTISEMENT

ಶ್ರೀಗಂ‌ಧ ಕಳ್ಳರಿಗೆ ಗುಂಡೇಟು ಒಬ್ಬನಿಗೆ ಗಾಯ, 3 ಬಂಧನ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2021, 5:07 IST
Last Updated 7 ಸೆಪ್ಟೆಂಬರ್ 2021, 5:07 IST
ಶ್ರೀಗಂಧ ಮರ ಕಳ್ಳರನ್ನು ಸೆರೆ ಹಿಡಿಯುತ್ತಿರುವ ವಲಯ ಅರಣ್ಯಾಧಿಕಾರಿ ದುರ್ಗಪ್ಪ ನೇತೃತ್ವದ ತಂಡ
ಶ್ರೀಗಂಧ ಮರ ಕಳ್ಳರನ್ನು ಸೆರೆ ಹಿಡಿಯುತ್ತಿರುವ ವಲಯ ಅರಣ್ಯಾಧಿಕಾರಿ ದುರ್ಗಪ್ಪ ನೇತೃತ್ವದ ತಂಡ   

ಗುಬ್ಬಿ: ತಾಲ್ಲೂಕಿನ ಕಡಬ ಹೋಬಳಿಯ ಮಾರಶೆಟ್ಟಿಹಳ್ಳಿ ಸಮೀಪದ ಅರಗಲದೇವಿ ಗುಡ್ಡದ ಮೀಸಲು ಅರಣ್ಯ ಪ್ರದೇಶದಲ್ಲಿ ಶ್ರೀಗಂಧದ ಮರಗಳನ್ನು ಕಳವು ಮಾಡುತ್ತಿದ್ದ ತಮಿಳುನಾಡು ಮೂಲದ ಗುಂಪಿನ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ಭಾನುವಾರ ರಾತ್ರಿ ಗುಂಡಿನ ದಾಳಿ ನಡೆಸಿದ್ದು, ಆರೋಪಿಯೊಬ್ಬ ಗಾಯಗೊಂಡಿದ್ದಾನೆ.

ಮೂರ್ತಿ, ಕೃಷ್ಣ, ಮಲ್ಲಪ್ಪ ಬಂಧಿತರು. ಗಾಯಗೊಂಡಿರುವ ಆರೋಪಿ ಮೂರ್ತಿ ಎಂಬಾತನಿಗೆ ತುಮಕೂರು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಬಂಧಿತರಿಂದ 10 ಕೆ.ಜಿಯಷ್ಟು ಗಂಧದ ತುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಳೆದ ವಾರದಿಂದ ಆರೋಪಿಗಳು ಅರಣ್ಯದಲ್ಲಿಯೇ ಮೊಕ್ಕಾ ಹೂಡಿ ಅಕ್ರಮ ಚುಟುವಟಿಕೆ ನಡೆಸಿರುವ ಬಗ್ಗೆ ಶಂಕಿಸಲಾಗಿದೆ.

ಅಕ್ರಮವಾಗಿ ಶ್ರೀಗಂಧ ಮರಗಳನ್ನು ಕಡಿದು ಸಾಗಿಸುವ ಸುಳಿವು ಪಡೆದ ಗುಬ್ಬಿ ವಲಯ ಅರಣ್ಯಾಧಿಕಾರಿ ದುರ್ಗಪ್ಪ ನೇತೃತ್ವದ ತಂಡ ಈ ದಾಳಿ ನಡೆಸಿದೆ.

ADVERTISEMENT

ಕಳೆದ ವಾರದಿಂದ ಈ ತಂಡ ಶ್ರೀಗಂಧ ಮರಗಳನ್ನು ಅಕ್ರಮವಾಗಿ ಸಾಗಿಸುತ್ತಿರುವ ಬಗ್ಗೆ ಮಾಹಿತಿ ಆಧರಿಸಿ ರಾತ್ರಿಗಸ್ತು ಹೆಚ್ಚಿಸಲಾಗಿತ್ತು. ಅರಣ್ಯ ಇಲಾಖೆ ಸಿಬ್ಬಂದಿ ಭಾನುವಾರ ಸಂಜೆ ವೇಳೆ ಅರಣ್ಯದಲ್ಲಿ ಕಳ್ಳರ ಜಾಡು ಹಿಡಿದಿದ್ದಾರೆ. ದಾಳಿ ನಡೆಸಿದ ವೇಳೆ ಅರಣ್ಯ ಸಿಬ್ಬಂದಿ ಮೇಲೆ ಆರೋಪಿಯೊಬ್ಬ ಮಚ್ಚು ಬೀಸಿದ್ದಾನೆ. ಇದರಿಂದ ಅರಣ್ಯ ಕಾವಲುಗಾರರೊಬ್ಬರು ಗಾಯಗೊಂಡಿದ್ದಾರೆ. ಕೂಡಲೇ ಅಧಿಕಾರಿಗಳು ಗುಂಡು ಹಾರಿಸಿದ್ದರಿಂದ ಆರೋಪಿಯೊಬ್ಬ ಗಾಯಗೊಂಡಿದ್ದಾನೆ.

12 ರಿಂದ 15 ಜನರಿದ್ದ ಈ ತಂಡದಲ್ಲಿ ಮೂವರು ಮಾತ್ರ ಸೆರೆ ಸಿಕ್ಕಿದ್ದಾರೆ. ಉಳಿದವರು ತಪ್ಪಿಸಿಕೊಂಡಿದ್ದಾರೆ. ಅವರ ಶೋಧಕ್ಕೆ ಪೊಲೀಸ್ ಇಲಾಖೆ ಸಹಕಾರದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ವಲಯ ಅರಣ್ಯಾಧಿಕಾರಿ ದುಗ್ಗಪ್ಪ ಅವರ ನೇತೃತ್ವದಲ್ಲಿ ಅರಣ್ಯ ರಕ್ಷಕರಾದ ಅಶೋಕ್, ಕುತುಬ್ಬೀನ್, ಕೇಶವಮೂರ್ತಿ, ಸಿದ್ದಲಿಂಗಮೂರ್ತಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಗುಬ್ಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.