ADVERTISEMENT

ಹಿಂದಿ ದಿನ ಆಚರಣೆಗೆ ವ್ಯಾಪಕ ವಿರೋಧ

ಜಿಲ್ಲಾಧಿಕಾರಿಗೆ ಜಯ ಕರ್ನಾಟಕ ಸಂಘಟನೆಯಿಂದ ಮನವಿ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2021, 7:01 IST
Last Updated 14 ಸೆಪ್ಟೆಂಬರ್ 2021, 7:01 IST
ತುಮಕೂರಿನಲ್ಲಿ ಜಿಲ್ಲಾಧಿಕಾರಿ ವೈ.ಎಸ್‌. ಪಾಟೀಲ ಅವರಿಗೆ ಜಯ ಕರ್ನಾಟಕ ಸಂಘಟನೆಯ ಕಾರ್ಯಕರ್ತರು ಮನವಿ ಸಲ್ಲಿಸಿದರು
ತುಮಕೂರಿನಲ್ಲಿ ಜಿಲ್ಲಾಧಿಕಾರಿ ವೈ.ಎಸ್‌. ಪಾಟೀಲ ಅವರಿಗೆ ಜಯ ಕರ್ನಾಟಕ ಸಂಘಟನೆಯ ಕಾರ್ಯಕರ್ತರು ಮನವಿ ಸಲ್ಲಿಸಿದರು   

ತುಮಕೂರು: ಕೇಂದ್ರ ಸರ್ಕಾರ ಸೆ. 14ರಂದು ಹಿಂದಿ ದಿನವಾಗಿ ಆಚರಿಸಲು ರಾಜ್ಯ ಸರ್ಕಾರಗಳ ಮೇಲೆ ಒತ್ತಡ ಹೇರುತ್ತಿರುವುದಕ್ಕೆ ಜಯ ಕರ್ನಾಟಕ ಸಂಘಟನೆ ವಿರೋಧಿಸಿದೆ.

ಸಂಘಟನೆ ಪದಾಧಿಕಾರಿಗಳು ಸೋಮವಾರ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅವರಿಗೆ ಮನವಿ ಸಲ್ಲಿಸಿದರು. ಒಕ್ಕೂಟ ಸರ್ಕಾರವು ಹಿಂದಿ ಹೇರುವ ಮೂಲಕ ದಕ್ಷಿಣ ಭಾರತದ ದ್ರಾವಿಡ ಭಾಷೆಗಳ ಮೇಲೆ ಗದಾಪ್ರಹಾರ ನಡೆಸಲು ಹೊರಟಿದೆ. ಇದಕ್ಕೆ ರಾಜ್ಯ ಸರ್ಕಾರ ಅವಕಾಶ ಮಾಡಿಕೊಡಬಾರದು. ಹಿಂದಿ ದಿವಸ ಆಚರಣೆ ಕಡ್ಡಾಯ ಮಾಡಿರುವುದನ್ನು ರದ್ದುಪಡಿಸುವಂತೆ ಆಗ್ರಹಿಸಿದರು.

ಸಂವಿಧಾನದ ಪ್ರಕಾರ ಭಾರತಕ್ಕೆ ಯಾವುದೇ ರಾಷ್ಟ್ರೀಯ ಭಾಷೆ ಇಲ್ಲ. ಕಲಂ 344(1)ರ ಪ್ರಕಾರ ದೇಶದ 22 ಭಾಷೆಗಳಿಗೆ ರಾಷ್ಟ್ರೀಯ ಸ್ಥಾನಮಾನ ದೊರೆತಿದೆ. ಇದರಲ್ಲಿ ಹಿಂದಿ, ಕನ್ನಡ ಸೇರಿದಂತೆ ಬಹುತೇಕ ಪ್ರಾದೇಶಿಕ ಭಾಷೆಗಳಿವೆ. ಅಲ್ಲದೆ ಕಲಂ 344(1) ಮತ್ತು 351ರಲ್ಲಿ ರಾಷ್ಟ್ರೀಯ ಮಾನ್ಯತೆ ಪಡೆದ 22 ಭಾಷೆಗಳಲ್ಲಿ ಕನ್ನಡವೇ ಅತ್ಯಂತ ಉತ್ಕೃಷ್ಟ ಭಾಷೆ ಎಂದು ಉಲ್ಲೇಖಿಸಲಾಗಿದೆ. ಕಲಂ 350ಎ ಪ್ರಕಾರ ಪ್ರತಿ ರಾಜ್ಯ ಸರ್ಕಾರವೂ ತನ್ನ ಆಡಳಿತ ಭಾಷೆಯಾಗಿ ಮಾತೃಭಾಷೆಯನ್ನೇ ಬಳಸಬೇಕು. ಶಿಕ್ಷಣವನ್ನು ಮಾತೃಭಾಷೆಯಲ್ಲೇ ನೀಡಿ, ಪ್ರೋತ್ಸಾಹಿಸುವಂತೆ ಉಲ್ಲೇಖಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ನಿಯಮ ಮೀರಿ ಕೇಂದ್ರ ಸರ್ಕಾರಸುತ್ತೋಲೆ ಹೊರಡಿಸಿದೆ. ಹಿಂದಿ ಭಾಷೆಗೆ ಉತ್ತೇಜನ, ಒತ್ತು ನೀಡಲು ಹಿಂದಿ ದಿವಸ ಆಚರಿಸಲು ಒತ್ತಡ ಹೇರುತ್ತಿರುವುದು ಸರಿಯಲ್ಲ. ಇದು ರಾಜ್ಯಗಳ ಸಾರ್ವಭೌಮತೆಯನ್ನು ಪ್ರಶ್ನೆ ಮಾಡುವಂತಹ ಪ್ರಕ್ರಿಯೆಯಾಗಿದೆ ಎಂದು ಆರೋಪಿಸಿದರು.

ಕೇಂದ್ರ ಸರ್ಕಾರ ತನ್ನ ಸರ್ವಾಧಿಕಾರಿ ಧೋರಣೆಯ ಮೂಲಕಹಿಂದಿ ಭಾಷೆ ಹೇರಲು ಹೊರಟಿದ್ದು, ಮುಂದಿನ ದಿನಗಳಲ್ಲಿ ಆಂತರಿಕ ಕಲಹ, ಅಶಾಂತಿಗೆ ಕಾರಣವಾಗಲಿದೆ. ಹಿಂದಿ ದಿವಸ ಆಚರಣೆಗೆ ಮುಂದಾದರೆ ಹೋರಾಟ ನಡೆಸಲಾಗುವುದು ಎಂದು ಸಂಘಟನೆ ಜಿಲ್ಲಾ ಘಟಕದ ಅಧ್ಯಕ್ಷ ಅರುಣ್‍ ಕುಮಾರ್ ತಿಳಿಸಿದ್ದಾರೆ.

ಸಂಘಟನೆ ಮುಖಂಡರಾದ ದಿವ್ಯಾ, ಹರೀಶ್, ಸುನೀಲ್, ರಘು ದೀಕ್ಷಿತ್, ಸೋಮಶೇಖರಗೌಡ, ಪ್ರತಾಪ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.