ADVERTISEMENT

ಜನಪದ ದೇಶೀಯ ಕಲೆಗಳ ಕಾರ್ಯಾಗಾರ ಮಾರ್ಚ್‌ 31ರಿಂದ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2023, 15:15 IST
Last Updated 28 ಮಾರ್ಚ್ 2023, 15:15 IST
ಕಾರ್ಯಾಗಾರದಲ್ಲಿ ತಯಾರಿಸಲಾಗುವ ಜಗನ್ನಾಥ ಪಟಚಿತ್ರ
ಕಾರ್ಯಾಗಾರದಲ್ಲಿ ತಯಾರಿಸಲಾಗುವ ಜಗನ್ನಾಥ ಪಟಚಿತ್ರ   

ಉಡುಪಿ: ಭಾವನಾ ಫೌಂಡೇಶನ್ ಹಾವಂಜೆ ಹಾಗೂ ಭಾಸ ಗ್ಯಾಲರಿ ಮತ್ತು ಸ್ಟುಡಿಯೋ ವತಿಯಿಂದ ‘ಜನಪದ’ ದೇಶೀಯ ಕಲೆಗಳ ಎರಡು ಮತ್ತು ಮೂರನೇ ಸರಣಿ ಕಾರ್ಯಾಗಾರ ಮಾರ್ಚ್ 31ರಿಂದ ಏ.2ರವರೆಗೆ ಬಡುಗಪೇಟೆಯ 10.03.28 ನಿವಾಸದಲ್ಲಿ ನಡೆಯಲಿದೆ.

ಗ್ರಾಮೀಣ ಭಾಗಗಳಲ್ಲಿ ಕಲೆಯ ಬಗೆಗಿನ ಆಸಕ್ತಿ ಬೆಳೆಸುತ್ತಿರುವ ಭಾವನಾ ಕಲಾಶಾಲೆಯು ವಿಂಶತಿ ಸಂಭ್ರಮದಲ್ಲಿ ಕಾರ್ಯಾಗಾರ ಆಯೋಜಿಸಿದೆ. ದೇಶದ ತುಂಬೆಲ್ಲ ಹರಡಿಕೊಂಡಿರುವ ವಿಧದ ಕಲಾಪ್ರಕಾರಗಳನ್ನು ಉಡುಪಿಗೆ ಪರಿಚಯಿಸುವ ಹಾಗೂ ಕಲಾಸಕ್ತರಿಗೆ ಕಲಿಸಿಕೊಡುವ, ಕಲಾಪ್ರದರ್ಶನ ಆಯೋಜಿಸುವ ಮೂಲಕ ಅಳಿವಿನಂಚಿನಲ್ಲಿರುವ ದೇಶೀಯ ಕಲೆಗಳ ಉಳಿವಿಗೆ ಶ್ರಮಿಸುತ್ತಿದೆ.

ಈ ಸರಣಿ ಕಾರ್ಯಾಗಾರವನ್ನು ವೆಂಟನಾ ಫೌಂಡೇಶನ್‍ನ ಟ್ರಸ್ಟಿ ಕೆ.ರವೀಂದ್ರ ಉದ್ಘಾಟಿಸಲಿದ್ದು, ಅತಿಥಿಗಳಾಗಿ ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಾಫಿಕಲ್ ಆರ್ಟ್ಸ್ ಮತ್ತು ಸೈನ್ಸ್‌ ಮುಖ್ಯಸ್ಥ ಪ್ರೊ.ವರದೇಶ ಹಿರೇಗಂಗೆ, ಇಂಟ್ಯಾಕ್ ಮಂಗಳೂರು ವಿಭಾಗದ ಸಂಚಾಲಕ ಸುಭಾಶ್‍ಚಂದ್ರ ಬಸು ಹಾಗೂ ಭಾವನಾ ಪೌಂಡೇಶನ್‍ನ ನಿರ್ದೇಶಕ ಯಕ್ಷಗುರು ಹಾವಂಜೆ ಮಂಜುನಾಥಯ್ಯ ಉಪಸ್ಥಿತರಿರುತ್ತಾರೆ.

ADVERTISEMENT

ಮಾರ್ಚ್ 31 ಹಾಗೂ ಏ.1 ರಂದು ಬಟ್ಟೆ, ಪೇಪರ್‌ನಿಂದ ರಚಿಸಲ್ಪಡುವ ಪಟಚಿತ್ರ ಹಾಗೂ ಏ.2ರಂದು ತಾಳೆಯೋಲೆಯ ಮೇಲೆ ಗೀರಿ ರೇಖಿಸಲ್ಪಡುವ ತಾಳ ಪಟಚಿತ್ರ ರಚಿಸುವ ಕಾರ್ಯಾಗಾರ ನಡೆಯಲಿದ್ದು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಒಡಿಶಾದ ಗೀತಾಂಜಲಿ ದಾಸ್‍ ನಡೆಸಿಕೊಡಲಿದ್ದಾರೆ.

ಪಟಚಿತ್ರಗಳ ಪಾರಂಪರಿಕ ರಚನಾಕ್ರಮ, ತಾಂತ್ರಿಕತೆಗಳನ್ನು ಕಲಿಸಿಕೊಡಲಿದ್ದಾರೆ. ನಿತ್ಯ ಸಂಜೆ 4ರಿಂದ 7ರ ವರೆಗೆ ಕಲಾಕೃತಿಗಳ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ. ವೆಂಟನಾ ಫೌಂಡೇಶನ್, ಮಾಹೆ ವಿಶ್ವವಿದ್ಯಾಲಯ, ಸಂಸ್ಕೃತಿ ವಿಶ್ವ ಪ್ರತಿಷ್ಠಾನ, ಇಂಟ್ಯಾಕ್ ಮಂಗಳೂರು, ಆರ್ಟಿಸ್ಟ್ ಫೋರಂ ಸಹಭಾಗಿತ್ವದಲ್ಲಿ ಕಾರ್ಯಕ್ರಮ ಸಂಯೋಜಿಸಲಾಗುತ್ತಿದೆ ಎಂದು ಕಾರ್ಯಾಗಾರದ ಸಂಯೋಜಕ ಡಾ. ಜನಾರ್ದನ ಹಾವಂಜೆ (9845650544) ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.