ADVERTISEMENT

ಖಗೋಳ ಕೌತುಕ: ಹಗಲು ಆಕಾಶದಲ್ಲಿ ಶರದ್ವಿಷುವ ವಿದ್ಯಮಾನ ನಾಳೆ

ಭೂಮಿ-ಸೂರ್ಯನ ಬಂಧನದಿಂದ ಸಂಭವಿಸಲಿದೆ ಖಗೋಳ ಕೌತುಕ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2021, 12:53 IST
Last Updated 22 ಸೆಪ್ಟೆಂಬರ್ 2021, 12:53 IST
ಶರದ್ವಿಷುವ ವಿದ್ಯಮಾನ
ಶರದ್ವಿಷುವ ವಿದ್ಯಮಾನ   

ಉಡುಪಿ: ಖಗೋಳ ವಿದ್ಯಮಾನಗಳು ರಾತ್ರಿ ಆಕಾಶಕ್ಕೆ ಮಾತ್ರ ಸೀಮಿತವಲ್ಲ, ಕೆಲವು ವಿದ್ಯಮಾನಗಳನ್ನು ಹಗಲಿನ ಸಮಯದಲ್ಲೂ ನೋಡಿ ಆನಂದಿಸಬಹುದು. ಅಂತಹ ಒಂದು ವಿಶೇಷ ವಿದ್ಯಮಾನವೇ ಶರದ್ವಿಷುವ. ಪ್ರತಿ ವರ್ಷ ನಡೆಯುವ, ಭೂಮಿ-ಸೂರ್ಯನ ಬಂಧನದಿಂದ ಸಂಭವಿಸುವ ಈ ವಿದ್ಯಮಾನ ಇದೇ ಸೆ.23ರಂದು ಸಂಭವಿಸಲಿದೆ.

ವಿಷುವತ್ ಸಂಕ್ರಾಂತಿಯು ಒಂದು ಖಗೋಳ ವಿಶೇಷ ವಿದ್ಯಮಾನವಾಗಿದ್ದು, ಈ ದಿನ ಭೂಮಿಯ ಮೇಲೆ ಹಗಲು ಹಾಗೂ ರಾತ್ರಿಯ ಅವಧಿ ಸಮನಾಗಿರುತ್ತದೆ. ವರ್ಷಕ್ಕೆ ಎರಡು ಬಾರಿ ಮಾತ್ರ ಮಾರ್ಚ್ ಮತ್ತು ಸೆಪ್ಟೆಂಬರ್‌ನಲ್ಲಿ ಈ ವಿದ್ಯಮಾನವು ಘಟಿಸಲಿದೆ.

ವಿಷುವತ್ ಸಂಕ್ರಾಂತಿಯಂದು ಸೂರ್ಯನು ನಿಖರವಾಗಿ ಪೂರ್ವ ದಿಕ್ಕಿನಲ್ಲಿ ಉದಯಿಸಿ, ಪಶ್ಚಿಮ ದಿಕ್ಕಿನಲ್ಲಿ ಅಸ್ತವಾಗುತ್ತಾನೆ. ಈ ದಿನ ಸೂರ್ಯನ ಬೆಳಕು ಭೂಮಿಯ ಸಮಭಾಜಕ ವೃತ್ತದ ಮೇಲೆ ನೇರವಾಗಿ ಬೀಳುತ್ತದೆ. ಶರದ್ವಿಷುವ ಸಂಕ್ರಾಂತಿಯ ದಿನ ಸೂರ್ಯನು ಉತ್ತರ ದಿಕ್ಕಿನಿಂದ ದಕ್ಷಿಣ ದಿಕ್ಕಿನೆಡೆಗೆ ಚಲಿಸಲು ಪ್ರಾರಂಭಿಸುವುದರಿಂದ, ಉತ್ತರ ಗೋಳಾರ್ಧದಲ್ಲಿ ಶರತ್ ಋತು ಆರಂಭವಾಗುತ್ತದೆ.

ADVERTISEMENT

ಅಲ್ಲದೆ, ಈ ದಿನ ಸೂರ್ಯನ ಕೇಂದ್ರ ಬಿಂದುವು ದಿಗಂತದ ಮೇಲೆ 12 ಗಂಟೆ ಮತ್ತು ದಿಗಂತದ ಕೆಳಗೆ 12 ಗಂಟೆ ಇರುತ್ತದೆ. ವಿಷುವತ್ ದಿನವನ್ನು ಉಪಯೋಗಿಸಿಕೊಂಡು, ನಾವಿರುವ ಸ್ಥಳದ ಅಕ್ಷಾಂಶವನ್ನು ಕಂಡು ಹಿಡಿಯಬಹುದು. ಈ ಪ್ರಯೋಗವನ್ನು ವಿದ್ಯಾರ್ಥಿಗಳು ಸುಲಭವಾಗಿ ಮಾಡಬಹುದು. ಮೇಲಿನಿಂದ ಕೆಳಕ್ಕೆ ಸಮಾನ ಗಾತ್ರ ಹೊಂದಿರುವ ವಸ್ತುವನ್ನು ನೆಲದ ಮೇಲೆ ನೇರವಾಗಿ ಇರಿಸಿ, ಆ ವಸ್ತುವಿನ (ಉದಾ: ಮೇಣದ ಬತ್ತಿ) ಅತೀ ಸಣ್ಣ ನೆರಳಿನ ಉದ್ದವನ್ನು ಅಳೆಯುವ ಮೂಲಕ ನಮ್ಮ ನೆರಳನ್ನೂ ಅಳೆಯಬಹುದು.

ವಸ್ತು ಹಾಗೂ ಅದರ ನೆರಳಿನಿಂದ ಉಂಟಾಗುವ ಲಂಬಕೋನ ತ್ರಿಭುಜದಲ್ಲಿ, ವಸ್ತುವು ತ್ರಿಭುಜದ ಅಡಿಪಾಯ ಎಂದು ಪರಿಗಣಿಸಿದರೆ, ಅದರ ನೆರಳು ತ್ರಿಭುಜದ ಅಭಿಮುಖ ಬಾಹು ಆಗಿರುತ್ತದೆ. ಈ ಎರಡು ಬಾಹುಗಳಿಂದಾದ ಕೋನವು, ಸ್ಥಳದ ಅಕ್ಷಾಂಶವನ್ನು ನೀಡುತ್ತದೆ.

ಖಗೋಳ ಸಮಭಾಜಕವೃತ್ತವನ್ನು ಕ್ರಾಂತಿವೃತ್ತವು ಎರಡು ಬಿಂದುಗಳಲ್ಲಿ ಛೇದಿಸುತ್ತದೆ. ಈ ಬಿಂದುಗಳೇ ವಿಷುವದ್ಬಿಂದುಗಳು. ಈ ಬಿಂದುವನ್ನು ಈಶಾದಿ ಬಿಂದು ಎಂದು ಕರೆಯುತ್ತಾರೆ. ಭೂಮಿಯ ಅಕ್ಷದ ಅಪ್ರದಕ್ಷಿಣೆಯಿಂದ ಈಗ ಈ ಬಿಂದುವು ಕನ್ಯಾ ನಕ್ಷತ್ರಪುಂಜವನ್ನು ತಲುಪಿದೆ. ಸೂರ್ಯನು ಈಶಾದಿ ಬಿಂದುವನ್ನು ಸಂಕ್ರಮಿಸಿ, ಪ್ರತಿ ದಿನ ಆಕಾಶದಲ್ಲಿ ದಕ್ಷಿಣದ ಕಡೆ ಚಲಿಸುವುದನ್ನು ನೋಡಬಹುದು.

ವಿಶ್ವದಾದ್ಯಂತ ವಿಷುವತ್ ಸಂಕ್ರಾಂತಿಯನ್ನು ಸೆಪ್ಟೆಂಬರ್ ಈಕ್ವಿನಾಕ್ಸ್ ಎಂದು ಕರೆಯುತ್ತಾರೆ. ಭೂಗೋಳಾರ್ಧದ ಮೇಲ್ಭಾಗದವರು ಈ ದಿನವನ್ನು ಆಟಂನಲ್ ಈಕ್ವಿನಾಕ್ಸ್ ಎಂದು ಕರೆಯುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.