ADVERTISEMENT

ಬಸ್ರೂರಿನಲ್ಲಿ ಶಿಲಾಯುಗದ ಬೃಹತ್ ನಿಲ್ಸಕಲ್‌ ಪತ್ತೆ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2021, 16:41 IST
Last Updated 20 ಸೆಪ್ಟೆಂಬರ್ 2021, 16:41 IST
ಕುಂದಾಪುರ ತಾಲ್ಲೂಕಿನ ಬಸ್ರೂರಿನಲ್ಲಿ ಶಿಲಾಯುಗ ಕಾಲದ ಬೃಹತ್ ನಿಲ್ಸಕಲ್‌ ಪತ್ತೆಯಾಗಿದೆ
ಕುಂದಾಪುರ ತಾಲ್ಲೂಕಿನ ಬಸ್ರೂರಿನಲ್ಲಿ ಶಿಲಾಯುಗ ಕಾಲದ ಬೃಹತ್ ನಿಲ್ಸಕಲ್‌ ಪತ್ತೆಯಾಗಿದೆ   

ಕುಂದಾಪುರ (ಉಡುಪಿ ಜಿಲ್ಲೆ): ತಾಲ್ಲೂಕಿನ ಬಸ್ರೂರಿನಲ್ಲಿ ಶಿಲಾಯುಗ ಕಾಲದ ಬೃಹತ್ ನಿಲ್ಸಕಲ್‌ ಪತ್ತೆಯಾಗಿದೆ ಎಂದು ಶಿರ್ವದ ಮುಲ್ಕಿ ಸುಂದರ್ ರಾಮ್ ಶೆಟ್ಟಿ ಕಾಲೇಜಿನ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಶಾಸ್ತ್ರ ವಿಭಾಗದ ಪ್ರೊ. ಟಿ. ಮುರುಗೇಶಿ ತಿಳಿಸಿದ್ದಾರೆ.

ಜಿಲ್ಲೆಯ ಸುಭಾಷ್ ನಗರ, ಅಡ್ಕದಕಟ್ಟೆ ಮತ್ತು ಕೊಲ್ಲೂರುಗಳಲ್ಲಿ ಈಗಾಗಲೇ ನಿಲ್ಸಕಲ್‌ಗಳು ಪತ್ತೆಯಾಗಿದ್ದು, ಬಸ್ರೂರಿನ ನಿಲ್ಸಕಲ್‌ ವಿಶಿಷ್ಟ ವಿನ್ಯಾಸದಿಂದಾಗಿ ಕಣ್ಮನ ಸೆಳೆಯುತ್ತಿದೆ. ಗರ್ಭಿಣಿ ಸ್ತ್ರೀಯ ದೇಹದ ಬಾಗು-ಬಳುಕುಗಳಂತೆ ಈ ನಿಲ್ಸಕಲ್‌ ವಿನ್ಯಾಸಗೊಂಡಿದೆ. ಕರಾವಳಿಯ ನಿಲ್ಸಕಲ್‌ಗಳನ್ನು ಗರ್ಭಿಣಿ ಕಲ್ಲುಗಳೆಂದೇ ಕರೆಯಲಾಗಿದೆ.

ನಿಲ್ಸಕಲ್‌ ಎಂದರೆ ?:

ADVERTISEMENT

ಭೂಮಿಯ ಮೇಲೆ ಲಂಭವಾಗಿ, ಸ್ವಲ್ಪ ವಾಲಿದಂತೆ ನಿಂತು ಬೃಹತ್ ಶಿಲಾಯುಗದ ಸಮಾಧಿಯ ಮೇಲೆ ಅಥವಾ ಸಮಾಧಿ ಸಮೀಪದಲ್ಲಿ ಮೃತರ ಸ್ಮರಣಾರ್ಥವಾಗಿ ನಿಲ್ಲಿಸಲಾದ ಒರಟಾದ ಬೃಹತ್ ಶಿಲೆಗಳನ್ನು ನಿಲ್ಸಕಲ್ಲು, ನಿಂತಿಕಲ್ಲು, ಗರ್ಭಿಣಿಕಲ್ಲು, ಆನೆಕಲ್ಲು, ರಕ್ಕಸಕಲ್ಲು ಹೆಸರುಗಳಿಂದ ಕರೆಯಲಾಗುತ್ತದೆ. ದಕ್ಷಿಣ ಭಾರತದೆಲ್ಲೆಡೆ ಇಂತಹ ಕಲ್ಲುಗಳು ಕಂಡುಬರುತ್ತವೆ.

ಬಸ್ರೂರಿನ ನಿಲ್ಸಕಲ್‌

ಬಸ್ಸೂರಿನ ನಿಲ್ಸಕಲ್‌ ಏಳು ಅಡಿ ಎತ್ತರವಿದ್ದು, ವಾಯವ್ಯ ದಿಕ್ಕಿಗೆ ಮುಖಮಾಡಿ ನಿಂತಿದೆ. ಪೂರ್ವಕ್ಕೆ ಸ್ವಲ್ಪ ವಾಲಿದಂತೆ ನಿಲ್ಲಿಸಲ್ಪಟ್ಟಿದೆ. ಬಸ್ರೂರನ್ನು ಶಾಸನಗಳಲ್ಲಿ ಬಸುರೆ ಪಟ್ಟಣ, ಬಸುರೆ ನಗರ, ಬಸ್ರೂರು, ವಸುಪುರ ಎಂದು ಕರೆಯಲಾಗಿದೆ. ಕನ್ನಡ ಭಾಷೆಯಲ್ಲಿ ಬಸಿರು, ಬಸುರೆ ಎಂದರೆ ಗರ್ಭಿಣಿ ಎಂದೇ ಅರ್ಥವಿದೆ. ವಸುಪುರ ಎಂಬ ಸಂಸ್ಕೃತ ಪದದಲ್ಲಿನ ವಸು ಎಂಬ ಅರ್ಥವೂ ಭೂಮಿ ಎಂದೇ ಅರ್ಥ. ಬಸ್ರೂರಿನ ನಿಲ್ಸಕಲ್‌ಗೂ ಹೆಣ್ಣಿಗೂ ನಿಕಟ ಸಂಬಂಧವಿದೆ.

ಬಸ್ರೂರಿನ ಪ್ರಾಚೀನತೆಯನ್ನು ಕನಿಷ್ಠ ಕ್ರಿ.ಪೂ. 1000 ವರ್ಷಗಳ ಪ್ರಾಚೀನತೆಗೆ ಸಂಶೋಧನೆ ತೆಗೆದುಕೊಂಡು ಹೋಗುತ್ತದೆ. ಈ ನಿಲ್ಸಕಲ್‌ ಬಸ್ರೂರಿನ ವೆಂಕಟರಮಣ ದೇವಾಲಯ ಮತ್ತು ಕೋಟೆ ಆಂಜನೇಯ ದೇವಾಲಯಗಳ ನಡುವಿನಲ್ಲಿದೆ. ಕಲ್ಲಿನ ಬಗ್ಗೆ ಮುರುಳೀಧರ ಹೆಗಡೆ ಗಮನ ಸೆಳೆದರೆ, ಅಧ್ಯಯನದಲ್ಲಿ ಬಸ್ರೂರಿನ ಪ್ರದೀಪ್ ಸಹಕರಿಸಿದ್ದಾರೆ. ವಿದ್ಯಾರ್ಥಿಗಳಾದ ಶ್ರೇಯಸ್, ನಾಗರಾಜ್, ಗೌತಮ್, ಚಂದ್ರು ಮತ್ತು ಕಾರ್ತಿಕ್ ಹಾಗೂ ವೆಂಕಟರಮಣ ದೇವಾಲಯದ ಆಡಳಿತ ಮಂಡಳಿಯವರು ಸಹಕಾರು ನೀಡಿದ್ದಾರೆ ಎಂದು ಪ್ರೊ.ಟಿ.ಮುರುಗೇಶಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.