ADVERTISEMENT

ಸಿದ್ದರಾಮಯ್ಯನವರಿಗೆ ಹೇಳಿಕೆ ಜೀರ್ಣಿಸಿಕೊಳ್ಳುವ ಶಕ್ತಿ ಇರಬೇಕು: ಸುನಿಲ್ ಕುಮಾರ್

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2022, 13:39 IST
Last Updated 19 ಆಗಸ್ಟ್ 2022, 13:39 IST
   

ಉಡುಪಿ: ಹೇಳಿಕೆಗಳನ್ನು ಕೊಡುವ ಸಿದ್ದರಾಮಯ್ಯನವರಿಗೆ ಪ್ರತಿಭಟನೆಯನ್ನು ಸಹಿಸಿಕೊಳ್ಳುವ ಶಕ್ತಿಯೂ ಇರಬೇಕು. ಬೇಕಾಬಿಟ್ಟಿ ಹೇಳಿಕೆ ನೀಡಿ ಜೀರ್ಣಿಸಿಕೊಳ್ಳುತ್ತೇನೆ ಎಂಬ ಕಾಲ ಹೊರಟು ಹೋಗಿದೆ ಎಂದು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನಿಲ್ ಕುಮಾರ್ ಹೇಳಿದರು.

ಶುಕ್ರವಾರ ಮಣಿಪಾಲದಲ್ಲಿ ಮಾತನಾಡಿ, ಸಿದ್ದರಾಮಯ್ಯ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗಳು ಹೇಳಿಕೊಟ್ಟು ಮಾಡಿಸುತ್ತಿರುವುದಲ್ಲ; ಜನರ ಮನಸ್ಸಿನಲ್ಲಿರುವ ಭಾವನೆ ಸ್ಫೋಟಗೊಂಡು ನಡೆಯುತ್ತಿವೆ. ಸಾವರ್ಕರ್ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದರೆ ಯುವ ಸಮುದಾಯ ಸಹಿಸಿಕೊಳ್ಳುವುದಿಲ್ಲ ಎಂದರು.

ಸಿದ್ದರಾಮಯ್ಯಗೆ ಹಣೆ ಮೇಲೆ ಕುಂಕುಮ ಇಟ್ಟವರನ್ನು ಕಂಡರೆ ಆಗುವುದಿಲ್ಲ. ಮುಸ್ಲಿಮರ ಪ್ರದೇಶಗಳಲ್ಲಿ ಸಾವರ್ಕರ್ ಭಾವಚಿತ್ರ ಯಾಕೆ ಹಾಕಬೇಕು ಎಂದು ಕೇಳುತ್ತಾರೆ. ಅರ್ಧಂಬರ್ಧ ಇತಿಹಾಸ ತಿಳಿದುಕೊಂಡು ಸಾವರ್ಕರ್ ಬಗ್ಗೆ ಲಘುವಾಗಿ ಮಾತನಾಡುತ್ತಾರೆ ಎಂದು ಸುನಿಲ್ ಕುಮಾರ್ ವಾಗ್ದಾಳಿ ನಡೆಸಿದರು.

ADVERTISEMENT

ಸಮಾಜವಾದಿ ಎಂದು ಕರೆಸಿಕೊಂಡು ಲಕ್ಷಾಂತರ ಜನರನ್ನು ಸೇರಿಸಿ ಹುಟ್ಟುಹಬ್ಬ ಮಾಡಿಕೊಳ್ಳುತ್ತಾರೆ. ಸಾವರ್ಕರ್ ಬಗ್ಗೆ ತಿಳಿಯಬೇಕಾದರೆ ಪುರುಸೊತ್ತು ಮಾಡಿಕೊಂಡು ಅಂಡಮಾನ್ ಜೈಲಿಗೆ ಭೇಟಿನೀಡಲಿ ಎಂದು ಸಲಹೆ ನೀಡಿದರು.

ಸಾವರ್ಕರ್ ದೇಶದ ರಾಷ್ಟ್ರೀಯತೆಯ ಪ್ರತೀಕವಾಗಿದ್ದು ರಾಜ್ಯದೆಲ್ಲೆಡೆ ಅವರ ಕುರಿತಾಗಿ ಕಾರ್ಯಕ್ರಮಗಳು ನಡೆಯಲಿವೆ. ಬ್ಯಾನರ್‌ಗಳು, ಫ್ಲೆಕ್ಸ್‌ಗಳು, ಪುತ್ಥಳಿಗಳು, ರಸ್ತೆಗಳು ನಿರ್ಮಾಣವಾಗಲಿವೆ. ಸಿದ್ದರಾಮಯ್ಯಗೆ ಹಿಂದೂ ಕಾರ್ಯಕರ್ತರಿಂದ ಜೀವ ಬೆದರಿಕೆ ಇದ್ದರೆ ದೂರು ಕೊಡಲಿ; ಸರ್ಕಾರ ಅಗತ್ಯ ಭದ್ರತೆ ನೀಡಲಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.