ADVERTISEMENT

ಉಡುಪಿ: ಮುಗಿದ ಖರೀದಿ ಸೀಸನ್‌, ವ್ಯಾಪಾರಿಗಳಿಗೆ ನಷ್ಟದ ಹೊರೆ

ಜಿಲ್ಲೆ ಅನ್‌ಲಾಕ್ ಆದರೂ ನಿರೀಕ್ಷಿತ ಮಟ್ಟದಲ್ಲಿ ನಡೆಯುತ್ತಿಲ್ಲ ವಹಿವಾಟು

ಬಾಲಚಂದ್ರ ಎಚ್.
Published 27 ಜೂನ್ 2021, 19:30 IST
Last Updated 27 ಜೂನ್ 2021, 19:30 IST
ಉಡುಪಿಯಲ್ಲಿರುವ ಬಟ್ಟೆ ಮಾರಾಟ ಅಂಗಡಿ
ಉಡುಪಿಯಲ್ಲಿರುವ ಬಟ್ಟೆ ಮಾರಾಟ ಅಂಗಡಿ   

ಉಡುಪಿ: ಕೋವಿಡ್‌ ಮೊದಲ ಅಲೆಯ ಹೊಡೆತಕ್ಕೆ ಸಿಲುಕಿ ತತ್ತರಿಸಿದ್ದ ಜಿಲ್ಲೆಯ ಆರ್ಥಿಕತೆಗೆ ಎರಡನೆ ಅಲೆಯೂ ಭಾರಿ ಪೆಟ್ಟು ಕೊಟ್ಟಿದೆ. ಸದ್ಯ ಲಾಕ್‌ಡೌನ್ ನಿರ್ಬಂಧಗಳು ಸಡಿಲಗೊಂಡರೂ ನಿರೀಕ್ಷಿತ ಮಟ್ಟದಲ್ಲಿ ವಹಿವಾಟು ನಡೆಯುತ್ತಿಲ್ಲ. ಒಂದೆಡೆ, ಬ್ಯಾಂಕ್‌ ಸಾಲದ ಹೊರೆ, ಮತ್ತೊಂದೆಡೆ ಮೂರನೇ ಅಲೆಯ ಲಾಕ್‌ಡೌನ್ ಭೀತಿ ವ್ಯಾಪಾರಿಗಳನ್ನು ಕಾಡುತ್ತಿದೆ.

ಸಮಸ್ಯೆಗೆ ಕಾರಣ ಏನು?
ಸಾಮಾನ್ಯವಾಗಿ ಏಪ್ರಿಲ್‌, ಮೇ ಹಾಗೂ ಜೂನ್‌ ತಿಂಗಳು ವ್ಯಾಪಾರಿಗಳ ಪಾಲಿಗೆ ಸುಗ್ಗಿ. ಈ ಅವಧಿಯಲ್ಲಿ ಶುಭ ಸಮಾರಂಭಗಳು, ಧಾರ್ಮಿಕ ಕಾರ್ಯಕ್ರಮಗಳು, ಹಬ್ಬಗಳು ಸಾಲುಸಾಲಾಗಿ ಇರುವ ಕಾರಣ ವ್ಯಾಪಾರ ಜೋರಾಗಿರುತ್ತದೆ. ಈ ಮೂರು ತಿಂಗಳಲ್ಲಿ ನಡೆಯುವ ವಹಿವಾಟಿನ ಆಧಾರದ ಮೇಲೆ ವರ್ಷದ ಲಾಭ–ನಷ್ಟವನ್ನು ವ್ಯಾಪಾರಿಗಳು ನಿರ್ಧರಿಸಲಾಗುತ್ತದೆ. ದುರದೃಷ್ಟವಶಾತ್ ಮೂರು ತಿಂಗಳು ವ್ಯಾಪಾರವೇ ನಡೆದಿಲ್ಲ ಎನ್ನುತ್ತಾರೆ ವ್ಯಾಪಾರಿಗಳು.

ಜಿಲ್ಲೆಯಲ್ಲಿ ಕೋವಿಡ್‌ ಸೋಂಕು ಹೆಚ್ಚಾಗಿದ್ದರಿಂದ ಏಪ್ರಿಲ್‌ನಲ್ಲಿ ಸಾರ್ವಜನಿಕರು ಖರೀದಿಗೆ ಉತ್ಸಾಹ ತೋರಲಿಲ್ಲ. ಏಪ್ರಿಲ್ ಅಂತ್ಯಕ್ಕೆ ಲಾಕ್‌ಡೌನ್ ಘೋಷಣೆಯಾಯಿತು. ಮೇನಲ್ಲಿ ವಹಿವಾಟು ಸಂಪೂರ್ಣ ಸ್ಥಬ್ಧವಾಗಿತ್ತು. ಜೂನ್‌ನಲ್ಲಿ 21 ದಿನ ಅಂಗಡಿ ಬಂದ್ ಆಗಿತ್ತು. ಈಗಷ್ಟೆ ಲಾಕ್‌ಡೌನ್ ನಿರ್ಬಂಧಗಳು ತೆರವಾಗಿವೆ. ಆದರೆ, ಖರೀದಿ ಸೀಸನ್‌ ಮುಗಿದಿರುವ ಕಾರಣ ನಿರೀಕ್ಷಿತ ವ್ಯವಹಾರ ನಡೆಯುತ್ತಿಲ್ಲ ಎಂದು ಅಳಲು ತೋಡಿಕೊಳ್ಳುತ್ತಾರೆ ವ್ಯಾಪಾರಿಗಳು.

ADVERTISEMENT

ಲಾಕ್‌ಡೌನ್‌ನಲ್ಲಿ ಅಗತ್ಯ ವಸ್ತುಗಳ ಮಾರಾಟ ಹೊರತುಪಡಿಸಿ ಎಲ್ಲ ವಾಣಿಜ್ಯ ವಹಿವಾಟಿನ ಮೇಲೆ ನಿರ್ಬಂಧ ಹೇರಿದ್ದು ಸಮಸ್ಯೆಗೆ ಕಾರಣ. ಈಗ ಅಂಗಡಿಯ ಬಾಡಿಗೆ ಕಟ್ಟಲಾಗುತ್ತಿಲ್ಲ. ಬ್ಯಾಂಕ್‌ ಸಾಲದ ಇಎಂಐ ಮರುಪಾವತಿ ಮಾಡಿಲ್ಲ. ಕೆಲಸಗಾರರಿಗೆ ವೇತನ ಕೊಡಲೂ ಕಷ್ಟವಾಗಿದೆ ಎನ್ನುತ್ತಾರೆ ಉದ್ಯಮಿ ಸದಾನಂದ ಶೆಣೈ.

ಜವಳಿ (ಬಟ್ಟೆ ಮಾರಾಟ) ಉದ್ಯಮಕ್ಕೂ ದೊಡ್ಡ ಪೆಟ್ಟುಬಿದ್ದಿದೆ. ಮದುವೆ, ಶುಭ ಸಮಾರಂಭಗಳು ಹಾಗೂ ರಂಜಾನ್‌ ಹಬ್ಬಕ್ಕೆ ಮುಂಚಿತವಾಗಿ ಲಕ್ಷಾಂತರೂ ರೂಪಾಯಿ ಮೌಲ್ಯದ ಬಟ್ಟೆಯನ್ನು ಹೊರ ರಾಜ್ಯಗಳಿಂದ ಖರೀದಿಸಿ ತರಲಾಗಿತ್ತು. ಲಾಕ್‌ಡೌನ್‌ನಿಂದ ಬಟ್ಟೆ ಅಂಗಡಿಗಳನ್ನು ಮುಚ್ಚಿದ್ದರಿಂದ ನಷ್ಟ ಅನುಭವಿಸಬೇಕಾಯಿತು. ಈಗ ಲಾಕ್‌ಡೌನ್ ಸಡಿಲಗೊಂಡರೂ ವ್ಯಾಪಾರದ ಸೀಸನ್‌ ಮುಗಿದಿದೆ. ಮಳೆಗಾಲ ಬೇರೆ ಆರಂಭವಾಗಿರುವುದರಿಂದ ಜನರು ಮನೆಬಿಟ್ಟು ಹೊರಬರುತ್ತಿಲ್ಲ ಎಂದು ಸಮಸ್ಯೆ ತೆರೆದಿಟ್ಟರು ಉಡುಪಿಯ ಟಾಪ್‌ ಸೆಲೆಕ್ಷನ್‌ ಅಂಗಡಿಯ ಮಾಲೀಕ ಜಾವಿದ್ ಖಾನ್‌.

ಈ ವರ್ಷದ ರಂಜಾನ್‌ಗೆ ತರಿಸಿಟ್ಟ ಲಕ್ಷಾಂತರ ರೂಪಾಯಿ ಮೌಲ್ಯದ ಬಟ್ಟೆ ಮಳಿಗೆಯಲ್ಲಿಯೇ ಉಳಿದಿದೆ. ಡಿಸೈನ್ ಬದಲಾಗುವ ಕಾರಣಕ್ಕೆ ಗ್ರಾಹಕರು ಖರೀದಿಸುವುದಿಲ್ಲ. ಖರೀದಿಸಿದ ಬೆಲೆಗಿಂತ ರಿಯಾಯಿತಿ ದರದಲ್ಲಿ ಮಾರಾಟ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ ಎನ್ನುತ್ತಾರೆ ಜಾವಿದ್ ಖಾನ್‌.

ಸರ್ಕಾರ ಅಗತ್ಯ ವಸ್ತುಗಳ ಮಾರಾಟಕ್ಕೆ ಅವಕಾಶ ಕೊಟ್ಟಂತೆ ಶೂ–ಚಪ್ಪಲಿ, ಬಟ್ಟೆ ಅಂಗಡಿ, ಆಭರಣ ಮಳಿಗೆ, ಎಲೆಕ್ಟ್ರಾನಿಕ್ ವಸ್ತುಗಳ ಮಾರಾಟಕ್ಕೂ ಅವಕಾಶ ಕೊಡಬೇಕಿತ್ತು. ಕನಿಷ್ಠ ವಾರಕ್ಕೆ ಮೂರು ದಿನ ಅನುಮತಿ ಕೊಟ್ಟಿದ್ದರೂ ಬಾಡಿಗೆ, ಸಿಬ್ಬಂದಿ ವೇತನ ಕೊಡಬಹುದಿತ್ತು. ಸಂಪೂರ್ಣ ನಿರ್ಬಂಧ ಹೇರಿದ್ದರಿಂದ ಭಾರಿ ನಷ್ಟವಾಗಿದೆ ಎನ್ನುತ್ತಾರೆ ವ್ಯಾಪಾರಿ ಅಬ್ದುಲ್ ಜಬ್ಬಾರ್‌.

ಚಿನ್ನಾಭರಣ ವ್ಯಾಪಾರಿಗಳ ಕಥೆಯೂ ಭಿನ್ನವಾಗಿಲ್ಲ. ಮದುವೆಯ ಸೀಸನ್‌ನಲ್ಲಿ ಲಾಕ್‌ಡೌನ್ ಬಂದಿದ್ದರಿಂದ ವ್ಯವಹಾರ ಸಂಪೂರ್ಣ ಬಂದ್ ಆಗಿತ್ತು. ಅದ್ಧೂರಿ ಮದುವೆಗಳಿಗೆ ಕಡಿವಾಣ ಹಾಕಿದ್ದರಿಂದ ಚಿನ್ನ ಖರೀದಿಗೆ ಸಾರ್ವಜನಿಕರಿಂದ ನಿರಾಸಕ್ತಿ ತೋರಿಸುತ್ತಿದ್ದಾರೆ ಎನ್ನುತ್ತಾರೆ ಆಭರಣ ವರ್ತಕರು.

ಕಳೆದ ವರ್ಷ ಕೂಡ ಏಪ್ರಿಲ್, ಮೇನಲ್ಲಿ ಲಾಕ್‌ಡೌನ್ ಜಾರಿಯಲ್ಲಿತ್ತು. ಈ ವರ್ಷವೂ ಅದೇ ಸ್ಥಿತಿ. ಮತ್ತೆ ಮೂರನೇ ಅಲೆ ಬಂದು ಲಾಕ್‌ಡೌನ್ ಜಾರಿಯಾದರೆ, ಉದ್ಯಮ ಸ್ಥಗಿತಮಾಡಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸುತ್ತಾರೆ ಉದ್ಯಮಿಗಳು.

‘ಕೈಕೊಟ್ಟ ಖರೀದಿ ಸೀಸನ್‌’
ಮಾರ್ಚ್‌, ಏಪ್ರಿಲ್‌, ಮೇನಲ್ಲಿ ಕರಾವಳಿಯಲ್ಲಿ ಭೂತ ಕೋಲ, ದೈವಾರಾಧನೆ ಸೇರಿದಂತೆ ಧಾರ್ಮಿಕ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯುತ್ತವೆ. ಸಾಲು ಸಾಲು ಗೃಹ ಪ್ರವೇಶ, ಮದುವೆ, ಶುಭ ಸಮಾರಂಭಗಳು ಇರುತ್ತವೆ. ರಂಜಾನ್ ಹಬ್ಬವೂ ಇದೇ ಅವಧಿಯಲ್ಲಿ ಬರುವುದರಿಂದ ಬಟ್ಟೆ, ಚಿನ್ನಾಭರಣ ಹಾಗೂ ಗೃಹೋಪಯೋಗಿ ವಸ್ತುಗಳ ಖರೀದಿ ಭರಾಟೆಯೂ ಜೋರಾಗಿರುತ್ತದೆ. ಲಾಕ್‌ಡೌನ್‌ನಿಂದಾಗಿ ವ್ಯಾಪಾರವೇ ಇಲ್ಲವಾಗಿದೆ.
–ರಾಘವೇಂದ್ರ, ಉದ್ಯಮಿ

*
‘ಆನ್‌ಲೈನ್‌ನಲ್ಲಿ ಮಾರಾಟಕ್ಕೆ ಅನುಮತಿ ಏಕೆ’
ಲಾಕ್‌ಡೌನ್‌ ಸಂದರ್ಭ ಆನ್‌ಲೈನ್‌ನಲ್ಲಿ ಬಟ್ಟೆ, ಗೃಹೋಪಯೋಗಿ ವಸ್ತುಗಳ ಮಾರಾಟಕ್ಕೆ ಸರ್ಕಾರ ಅವಕಾಶ ನೀಡಿತ್ತು. ಅದರಂತೆ, ಸ್ಥಳೀಯ ವ್ಯಾಪಾರಿಗಳಿಗೂ ಅನುಮತಿ ಕೊಡಬಹುದಿತ್ತು. ಕನಿಷ್ಠ ಬೆಳಿಗ್ಗೆ 9 ರಿಂದ ಮಧ್ಯಾಹ್ನ 2ರವರೆಗೆ ಅಂಗಡಿ ತೆರೆಯಲು ಅವಕಾಶ ಕೊಟ್ಟಿದ್ದರೂ ಅನುಕೂಲವಾಗುತ್ತಿತ್ತು.
–ಜಾಹಿದ್ ಖಾನ್‌, ಟಾಪ್‌ ಸೆಲೆಕ್ಷನ್ ಅಂಗಡಿ ಮಾಲೀಕ

**
ಶೇ 50ರಷ್ಟು ವ್ಯಾಪಾರ ಕುಸಿತ
ಕೋವಿಡ್‌ಗೂ ಮುಂಚಿನ ಪರಿಸ್ಥಿತಿಗೆ ಹೋಲಿಸಿದರೆ ವ್ಯಾಪಾರ ಶೇ 50ರಷ್ಟು ಕಡಿಮೆಯಾಗಿದೆ. ಮಳೆಗಾಲ ಆರಂಭವಾಗಿರುವುದರಿಂದ ಖರೀದಿಗೆ ಜನರು ಆಸಕ್ತಿ ತೋರುತ್ತಿಲ್ಲ. ಬಸ್‌ ಸಂಚಾರ ಪೂರ್ಣ ಪ್ರಮಾಣದಲ್ಲಿ ಆರಂಭವಾಗದಿರುವುದರಿಂದ ಹಳ್ಳಿಯ ಜನ ನಗರಕ್ಕೆ ಖರೀದಿಗೆ ಬರುತ್ತಿಲ್ಲ. ಜತೆಗೆ, ಖರೀದಿ ಸೀಸನ್ ಕೂಡ ಮುಗಿದಿರುವುದರಿಂದ ಈ ವರ್ಷವೂ ನಷ್ಟ ಅನುಭವಿಸಬೇಕಾಗಿದೆ.
–ಅಬ್ದುಲ್ ಜಬ್ಬಾರ್, ಶೂ, ಚಪ್ಪಲಿ ಅಂಗಡಿ ಮಾಲೀಕ

*
‘ಸೋಂಕಿನ ಭಯ ದೂರವಾಗಿಲ್ಲ’
ಸಂಜೆ 5ರವರೆಗೂ ಹೋಟೆಲ್‌ಗಳನ್ನು ತೆರೆಯಲು ಅನುಮತಿ ಇದ್ದರೂ ಸಾರ್ವಜನಿಕರು ಸೋಂಕಿನ ಭಯದಿಂದ ಹೋಟೆಲ್‌ಗಳಿಗೆ ಬರುತ್ತಿಲ್ಲ. ಮುಖ್ಯವಾಗಿ ಕುಟುಂಬ ಸಮೇತರಾಗಿ ಹೋಟೆಲ್‌ಗಳಿಗೆ ಬರುತ್ತಿದ್ದ ಗ್ರಾಹಕರ ಸಂಖ್ಯೆ ಶೇ 80ರಷ್ಟು ಕುಸಿತವಾಗಿದೆ. ಅಗತ್ಯ ವಸ್ತುಗಳ ಬೆಲೆ ಹೆಚ್ಚಳ, ವಿದ್ಯುತ್ ದರ ಹೆಚ್ಚಳ, ತೆರಿಗೆ ಹೊರೆಯಿಂದ ಹೋಟೆಲ್‌ಗಳ ನಿರ್ವಹಣೆ ಕಷ್ಟವಾಗಿದೆ. ಸರ್ಕಾರ ಹೋಟೆಲ್‌ ಕಾರ್ಮಕರಿಗೆ ಸಹಾಯಧನ ಘೋಷಸದಿರುವುದು ಖಂಡನೀಯ.
–ತಲ್ಲೂರು ಶಿವರಾಮ ಶೆಟ್ಟಿ, ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ

*
ಸಂಕಷ್ಟದಲ್ಲಿ ಚಾಲಕರು
ಕಳೆದ ಬಾರಿ ರೈಲು ಸೌಲಭ್ಯ ಇಲ್ಲದ ಕಾರಣ ಬಾಡಿಗೆಗೆ ಕಾರು ಬುಕ್ಕಿಂಗ್ ಮಾಡುತ್ತಿದ್ದರು. ಈ ಬಾರಿ ರೈಲು ಸೇವೆ ಇರುವ ಕಾರಣ ಕಾರು ಬಾಡಿಗೆ ಕೇಳುವವರು ಇಲ್ಲದಂತಾಗಿದೆ. ಪ್ರವಾಸೋದ್ಯಮ ಆರಂಭವಾಗದಿರುವುದು, ಮದುವೆ ಹಾಗೂ ಸಮಾರಂಭಗಳು ನಡೆಯದಿರುವುದು ಟ್ಯಾಕ್ಸಿ ಹಾಗೂ ಕಾರು ಚಾಲಕರಿಗೆ ಸಮಸ್ಯೆಯಾಗಿದೆ. ವಾಹನ ಖರೀದಿಗೆ ಮಾಡಿದ ತೀರಿಸಲು ಕಷ್ಟವಾಗುತ್ತಿದೆ.
–ಲೋಕೇಶ್ ಪೂಜಾರಿ, ಕಾರು ಚಾಲಕ, ಮಾಲೀಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.