ADVERTISEMENT

ಒತ್ತಡದ ನಡುವೆಯೂ ಮೈ, ಮನ ನಿರಾಳ

ಯೋಗ, ಧ್ಯಾನ, ಪ್ರಾಣಾಯಾಮ, ದೇವರ ಪೂಜೆ ಇವು ಅನಂತಕುಮಾರ್ ಹೆಗಡೆ ಅವರ ನಿತ್ಯದ ಕರ್ಮಾನುಷ್ಠಾನ

ಸಂಧ್ಯಾ ಹೆಗಡೆ
Published 19 ಏಪ್ರಿಲ್ 2019, 19:45 IST
Last Updated 19 ಏಪ್ರಿಲ್ 2019, 19:45 IST
ರೋಡ್ ಶೋದಲ್ಲಿ ಕೈಮುಗಿದ ಮತಯಾಚಿಸಿದ ಬಿಜೆಪಿ ಅಭ್ಯರ್ಥಿ ಅನಂತಕುಮಾರ್ ಹೆಗಡೆ
ರೋಡ್ ಶೋದಲ್ಲಿ ಕೈಮುಗಿದ ಮತಯಾಚಿಸಿದ ಬಿಜೆಪಿ ಅಭ್ಯರ್ಥಿ ಅನಂತಕುಮಾರ್ ಹೆಗಡೆ   

ಶಿರಸಿ: ಬಿಡುವಿಲ್ಲದ ತಿರುಗಾಟ, ಪ್ರಚಾರ ಸಭೆ, ಫೋನ್ ಕಾಲ್‌ಗಳು, ವಿಶ್ರಾಂತಿಗೆ ಸಮಯವಿಲ್ಲದಿದ್ದರೂ ಒಂದು ತಾಸು ಯೋಗ, ವ್ಯಾಯಾಮ, ಧ್ಯಾನ, ಕರಾಟೆ ತಾಲೀಮಿನ ಮುನ್ನುಡಿಯೊಂದಿಗೆ ನಿತ್ಯ ಹೊಸ ಬೆಳಗು– ಇದು ಅನಂತಕುಮಾರ್ ಹೆಗಡೆ ದಿನಚರಿ.

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅನಂತಕುಮಾರ್ ಅವರು ಒಂದು ತಿಂಗಳಿನಿಂದ ಪ್ರತಿದಿನವನ್ನೂ ಪ್ರಚಾರಕ್ಕಾಗಿ ಮೀಸಲಿಡುತ್ತಿದ್ದಾರೆ. ನಿತ್ಯವೂ ಒಂದೊಂದು ತಾಲ್ಲೂಕಿನ ಬಹಿರಂಗ ಸಭೆಯಲ್ಲಿ ಭಾಗವಹಿಸುತ್ತಾರೆ.

ಕಿತ್ತೂರು, ಖಾನಾಪುರ, ಕರಾವಳಿಯ ತಾಲ್ಲೂಕುಗಳಲ್ಲಿ ಪ್ರಚಾರ ಸಭೆಗಳಿದ್ದರೆ ಅವರು ಬೆಳಿಗ್ಗೆ 6ರಿಂದ 7 ಗಂಟೆಯೊಳಗೆ ಮನೆಯಿಂದ ಹೊರಡುತ್ತಾರೆ. ‘ಸಾಹೇಬ್ರು ಎಷ್ಟೇ ಬೇಗ ಹೊರಡುವುದಾದರೂ, ನಿತ್ಯದ ಅನುಷ್ಠಾನ ಮುಗಿಸಿಯೇ ಮನೆಯಿಂದ ಹೊರಬೀಳುವುದು. ರಾತ್ರಿ 2 ಗಂಟೆಗೆ ಮಲಗಿದರೂ ಬೆಳಿಗ್ಗೆ 6 ಗಂಟೆಗೆ ಎದ್ದು ಬಿಡುತ್ತಾರೆ. ದೂರ ಹೋಗುವುದಿದ್ದರೆ ಇನ್ನೂ ಬೇಗ ಎದ್ದು, ಯೋಗ, ವ್ಯಾಯಾಮ, ಧ್ಯಾನ ಮಾಡಿ, ದೇವರ ಪೂಜೆ ಮುಗಿಸಿದ ಮೇಲೆಯೇ ಅವರ ಮುಂದಿನ ಕಾರ್ಯಚಟುವಟಿಕೆ’ ಎನ್ನುತ್ತಾರೆ ಆಪ್ತ ಸಹಾಯಕ ಸುರೇಶ ಶೆಟ್ಟಿ.

ADVERTISEMENT

ಶುಕ್ರವಾರ ಎಂದಿನಂತೆ ಬೆಳಗಿನ ನಿತ್ಯವಿಧಿ ಮುಗಿಸಿದ ಮೇಲೆ ಮನೆಗೆ ಬಂದಿದ್ದ ಕಾರ್ಯಕರ್ತರೊಂದಿಗೆ ಕೆಲ ಹೊತ್ತು ಚುನಾವಣೆ ಪ್ರಚಾರದ ಕುರಿತು ಸಮಾಲೋಚಿಸಿದರು. ಅಷ್ಟರಲ್ಲಿ ಅನೇಕಾರು ದೂರವಾಣಿ ಕರೆಗಳು ಬಂದವು. ಅವುಗಳಲ್ಲಿ ಕೆಲವನ್ನು ಸ್ವೀಕರಿಸಿದರು, ಇನ್ನು ಕೆಲವರ ಬಳಿ ಸಹಾಯಕರು ಮಾತನಾಡಿದರು. 9 ಗಂಟೆಗೆ ತಿಂಡಿ ತಿಂದು, ಕಾರ್ಯಕರ್ತರ ಜೊತೆ ಎರಡನೇ ಸುತ್ತಿನ ಮಾತುಕತೆ ನಡೆಸಿದರು.

ನಗರದಲ್ಲಿ ಹಮ್ಮಿಕೊಂಡಿದ್ದ ರೋಡ್ ಶೋದಲ್ಲಿ ಭಾಗವಹಿಸಲು ಅಣಿಯಾಗಿ ಕುಳಿತಿದ್ದ ಅವರು, ಸ್ಟಾರ್ ಪ್ರಚಾರಕಿ ಮಾಳವಿಕಾ ಅವಿನಾಶ್ ಅವರ ಬರುವಿಕೆಗಾಗಿ ಕಾದರು. 11.20ರ ಸುಮಾರಿಗೆ ಮಾರಿಕಾಂಬಾ ದೇವಾಲಯದ ಬಳಿ ಬಂದು, ಅಲ್ಲಿ ಕಾಯುತ್ತಿದ್ದ ಕಾರ್ಯಕರ್ತರೆಡೆಗೆ ಮುಗುಳ್ನಗೆ ಬೀರಿದರು. ದೇವಾಲಯಕ್ಕೆ ಬಂದಿದ್ದ ಭಕ್ತರ ಕಡೆಗೆ ತಿರುಗಿ ಕೈಮುಗಿದರು. ದೇವಿಯ ದರ್ಶನ, ಮಂಗಳಾರತಿ ಪಡೆದು ಹೊರಬಂದ ಅವರನ್ನು ಮಾಧ್ಯಮದವರು ತಡೆದು ನಿಲ್ಲಿಸಿದರು.

ಪ್ರಶ್ನೆಗಳಿಗೆ ಚುಟುಕಾಗಿ ಉತ್ತರಿಸಿ, ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ, ಕಾರ್ಯಕರ್ತರ ಜತೆ ಹೆಜ್ಜೆ ಹಾಕುತ್ತ ರಸ್ತೆ ಅಕ್ಕಪಕ್ಕದಲ್ಲಿದ್ದ ಜನರ ಬಳಿ ಮತಯಾಚಿಸಿದರು. ಹಳೇ ಬಸ್‌ನಿಲ್ದಾಣ ವೃತ್ತದವರೆಗೂ ಕಾಲ್ನಡಿಗೆಯ ರೋಡ್ ಶೋ ನಡೆಸಿದರು. ಅಲ್ಲಿ ಮಾಳವಿಕಾ ಅವಿನಾಶ್ ಅವರನ್ನು ಬರಮಾಡಿಕೊಂಡರು.

ಕೆಲವೇ ನಿಮಿಷಗಳಲ್ಲಿ ಅಲ್ಲಿಂದ ನಿರ್ಗಮಿಸಿದ ಅವರು, ಮನೆಯಲ್ಲಿ ಕಾರ್ಯಕರ್ತರ ಅನೌಪಚಾರಿಕ ಸಭೆ ನಡೆಸಿದರು. ಮನೆಯಲ್ಲಿಯೇ ಊಟ ಮಾಡಿ, 4 ಗಂಟೆಗೆ ಯಲ್ಲಾಪುರಕ್ಕೆ ತೆರಳಿದರು. ಅಲ್ಲಿ ಆಂಜನೇಯ ದೇವಾಲಯಕ್ಕೆ ಭೇಟಿ ನೀಡಿ, ನಂತರ ರೋಡ್ ಶೋದಲ್ಲಿ ಭಾಗವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.