ADVERTISEMENT

ಕಾಡಿನ ಕಾವಲುಗಾರರು ಈ ಸಿದ್ದಿಗಳು

ಬೆಂಕಿಯಿಂದ ಅರಣ್ಯವನ್ನು ಸಂರಕ್ಷಿಸಿದ ಬೀದಿ ನಾಟಕ

ಸಂಧ್ಯಾ ಹೆಗಡೆ
Published 4 ಜೂನ್ 2019, 19:45 IST
Last Updated 4 ಜೂನ್ 2019, 19:45 IST
ರಾಜೇಶ್ವರಿ ಸಿದ್ದಿ ತಂಡದ ಬೀದಿ ನಾಟಕದ ದೃಶ್ಯ
ರಾಜೇಶ್ವರಿ ಸಿದ್ದಿ ತಂಡದ ಬೀದಿ ನಾಟಕದ ದೃಶ್ಯ   

ಶಿರಸಿ: ಕೆಳಾಸೆ ಗ್ರಾಮ ಅರಣ್ಯ ಸಮಿತಿಯ ವಾರ್ಷಿಕ ಸಭೆಯಲ್ಲಿ ‘ಅರಣ್ಯ ಸಂಶೋಧಕಿ’ಯಾಗಿ ವೇದಿಕೆಯೇರಿದ್ದ ರಾಜೇಶ್ವರಿ ಸಿದ್ದಿ ಅವರಿಗೆ ಕಿರು ನಾಟಕವೊಂದು ಪರಿವರ್ತನೆಯ ಪರ್ವಕ್ಕೆ ಮೆಟ್ಟಿಲಾಗಬಹುದೆಂಬ ಸಣ್ಣ ನಿರೀಕ್ಷೆ ಕೂಡ ಇರಲಿಲ್ಲ. ಮನದೊಳಗಿನ ತುಡಿತವನ್ನು ಅವರು ಕಾಡಿನ ಸಂಗಾತಿಗಳ ಎದುರು ಅರುಹಿದ್ದರು.

ಆದರೆ, ರಾಜೇಶ್ವರಿ ಸಿದ್ದಿ ಅವರ ತಂಡದ ಮೊದಲ ಪ್ರದರ್ಶನವೇ ಹಳ್ಳಿ ಹೈದರಿಂದ ಮಹಾನಗರದ ಅಧಿಕಾರಿಗಳ ಗಮನ ಸೆಳೆಯಿತು. ಪರಿಣಾಮವಾಗಿ ಯಲ್ಲಾಪುರ ಅರಣ್ಯ ವಿಭಾಗದ ಸಣ್ಣ ಮಜಿರೆಗಳಲ್ಲೂ ಈ ನಾಟಕ ಪ್ರದರ್ಶನ ಕಂಡಿದೆ. ಮೂರು ವರ್ಷಗಳಿಂದ ಬೀದಿ ನಾಟಕದ ಮೂಲಕ ಪರಿಸರ ಜಾಗೃತಿ ನಡೆಸುತ್ತ ಬಂದಿದ್ದಾರೆ ಇಡಗುಂದಿ ವಲಯದ ಸಿದ್ದಿಗಳು.

‘ನಮ್ಮ ಭಾಗದಲ್ಲಿ ಕಾಡಿಗೆ ಬೆಂಕಿ ಬಿದ್ದಾಗ ತಳಮಳವಾಗುತ್ತಿತ್ತು. ಸಮಾಜದ ಪ್ರಜೆಯಾಗಿ ಇದನ್ನು ತಡೆಯಲಿಲ್ಲವೆಂಬ ಅಪರಾಧಿ ಪ್ರಜ್ಞೆ ಕಾಡುತ್ತಿತ್ತು. ಬೀದಿ ನಾಟಕದ ಮೂಲಕ ಅರಿವು ಮೂಡಿಸಬಹುದೆಂದು ಗಾರ್ಡ್ ಎಚ್.ಸಿ.ಪ್ರಶಾಂತ್ ಅವರ ಬಳಿ ಹೇಳಿಕೊಂಡಾಗ, ನನ್ನ ಆಸೆಗೆ ನೀರೆರೆದರು. ಆಗಿನ ಆರ್‌ಎಫ್ಒ ಹಿಮವತಿ ಭಟ್ ಹಾಗೂ ಹಿರಿಯ ಅಧಿಕಾರಿಗಳು ಪ್ರೋತ್ಸಾಹ ನೀಡಿದರು. ಐವರ ತಂಡ ಕಟ್ಟಿಕೊಂಡು ಬೀದಿ ನಾಟಕ ಮಾಡುತ್ತ ಹೊರಟೆವು’ ಎನ್ನುತ್ತಾರೆ ತಂಡದ ನಾಯಕಿ ರಾಜೇಶ್ವರಿ ಸಿದ್ದಿ.

ADVERTISEMENT

’ಕಾಡಿಗೆ ಬೆಂಕಿ ಬಿದ್ದರೆ ಮರಗಳು ಬಲಿಯಾಗುತ್ತವೆ, ಪ್ರಾಣಿಗಳು ಸಾಯುತ್ತವೆ, ಪ್ರಕೃತಿಯ ನಾಶಕ್ಕೆ ನಾವು ಕಾರಣರಾಗುತ್ತೇವೆ ಎಂಬುದನ್ನು 10 ನಿಮಿಷಗಳ ಕಿರು ನಾಟಕದ ಮೂಲಕ ನಾನು, ನಾರಾಯಣ ಅಪ್ಪು ಸಿದ್ದಿ, ಕೃಷ್ಣ ಸಿದ್ದಿ, ಮೀನಾಕ್ಷಿ ಸಿದ್ದಿ, ನಾರಾಯಣ ಸಿದ್ದಿ ಅವರು ಜನರಿಗೆ ಮನದಟ್ಟು ಮಾಡಿದ್ದೆವು. ಕೆಳಾಸೆಯಲ್ಲಿ ನಾವು ಈ ನಾಟಕ ಪ್ರದರ್ಶಿಸಿದ ಮೇಲೆ ಒಮ್ಮೆಯೂ ಅರಣ್ಯಕ್ಕೆ ಬೆಂಕಿ ಬಿದ್ದಿಲ್ಲ. ಇದಕ್ಕಿಂತ ದೊಡ್ಡ ಯಶಸ್ಸು ಬೇರೇನು ಬೇಕು ?’ ಎಂದು ಸಂತೃಪ್ತ ಭಾವ ವ್ಯಕ್ತಪಡಿಸಿದರು.

‘ನಾಟಕ ತಂಡದವರ ಉತ್ಸಾಹ ಹೇಗಿತ್ತೆಂದರೆ, ರಾತ್ರಿ ಬೆಳಗಾಗುವಷ್ಟರಲ್ಲಿ ಜಿಂಕೆ, ಹುಲಿ, ಮಂಗ, ಹಾವಿನ ಮುಖವಾಡ ಸಿದ್ಧಪಡಿಸಿ, ನಾಟಕದ ಸಂಭಾಷಣೆ ಬರೆದುಕೊಟ್ಟಿದ್ದೂ ಇದೆ. ಬುಡಕಟ್ಟು ಸಮುದಾಯದವರು ತುಂಬ ಮುಗ್ಧರು. ಅವರಿಗೆ ಅವರ ತಪ್ಪನ್ನು ತಿಳಿಸಿ ಹೇಳಿದರೆ, ಖಂಡಿತ ಅವರು ತಿದ್ದಿಕೊಳ್ಳುತ್ತಾರೆ. ನಾಟಕ ತಂಡದವರು ಮಾಡಿದ್ದು ಇದೇ ಕೆಲಸವನ್ನೇ. ಈ ತಂಡಕ್ಕೆ ಈ ದೊಡ್ಡ ಅಭಿಮಾನಿ ಬಳಗವೇ ಹುಟ್ಟಿಕೊಂಡಿದೆ. ಕಾಡಿಗೆ ಬೆಂಕಿ ಬೀಳುವ ಪ್ರಕರಣ ನಿಯಂತ್ರಣಕ್ಕೆ ಬಂದಿದೆ. ಮೊದಲ ವರ್ಷವಂತೂ ಶೇ 100ರ ಫಲಿತಾಂಶ ಸಿಕ್ಕಿತ್ತು’ ಎನ್ನುತ್ತಾರೆ ಗಾರ್ಡ್ ಪ್ರಶಾಂತ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.