ADVERTISEMENT

ಗೋಕರ್ಣ ದೇಗುಲ ಪ್ರಸಾದ ವಿತರಣೆ: 27ರವರೆಗೆ ಯಥಾಸ್ಥಿತಿಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2021, 16:06 IST
Last Updated 20 ಸೆಪ್ಟೆಂಬರ್ 2021, 16:06 IST
ಗೋಕರ್ಣ ಮಹಾಬಲೇಶ್ವರ ದೇಗುಲದಲ್ಲಿ ಉಪ ವಿಭಾಗಾಧಿಕಾರಿ ನೇತೃತ್ವದಲ್ಲಿ ಸೋಮವಾರ ನಡೆದ ಸಭೆಗೆ ಪೊಲೀಸರು ಭದ್ರತೆ ಒದಗಿಸಿದ್ದರು
ಗೋಕರ್ಣ ಮಹಾಬಲೇಶ್ವರ ದೇಗುಲದಲ್ಲಿ ಉಪ ವಿಭಾಗಾಧಿಕಾರಿ ನೇತೃತ್ವದಲ್ಲಿ ಸೋಮವಾರ ನಡೆದ ಸಭೆಗೆ ಪೊಲೀಸರು ಭದ್ರತೆ ಒದಗಿಸಿದ್ದರು   

ಗೋಕರ್ಣ: ಇಲ್ಲಿನ ಮಹಾಬಲೇಶ್ವರ ಮಂದಿರದ ಗರ್ಭಗುಡಿಯಲ್ಲಿರುವ ಆತ್ಮಲಿಂಗ ಪೀಠದಲ್ಲಿ ಆಸೀನರಾಗುವ ಮತ್ತು ನಂದಿಗೃಹದಲ್ಲಿನ ಪ್ರಸಾದ ವಿತರಣೆ ವಿಚಾರದಲ್ಲಿ ಸೆ.27ರವರೆಗೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಉಪ ವಿಭಾಗಾಧಿಕಾರಿ ಸೂಚಿಸಿದ್ದಾರೆ.

ಈ ವಿಚಾರವಾಗಿ ಉಪಾಧಿವಂತರ ಎರಡು ಬಣಗಳ ನಡುವೆ ಚರ್ಚೆಗಳು ಶುರುವಾಗಿದ್ದವು. ಈ ಸಂಬಂಧ ದೇವಸ್ಥಾನದ ಉಸ್ತುವಾರಿ ಸಮಿತಿ ಕಾರ್ಯದರ್ಶಿಯೂ ಆಗಿರುವ ಉಪ ವಿಭಾಗಾಧಿಕಾರಿ ರಾಹುಲ ಪಾಂಡೆ ಸೋಮವಾರ ಉಭಯ ಬಣಗಳ ಪ್ರತ್ಯೇಕ ಸಭೆ ನಡೆಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಜಿಲ್ಲೆಯ ಎಲ್ಲ ದೇಗುಲಗಳಲ್ಲಿ ಭಕ್ತರಿಗೆ ಸೇವಾಕಾರ್ಯಗಳನ್ನು ಹಮ್ಮಿಕೊಳ್ಳಲು ಜಿಲ್ಲಾಧಿಕಾರಿ ಅನುಮತಿ ನೀಡಿದ್ದಾರೆ. ಆದರೆ, ಗೋಕರ್ಣ ಮಹಾಬಲೇಶ್ವರ ದೇವಸ್ಥಾನದಲ್ಲಿ ಎರಡು ಬಣಗಳ ನಡುವಿನ ವಿವಾದದ ಕಾರಣ ಭಕ್ತರಿಗೆ ಅವಕಾಶ ಸಿಕ್ಕಿಲ್ಲ’ ಎಂದರು.

ADVERTISEMENT

‘ದೇಗುಲ ನಿರ್ವಹಣಾ ಸಮಿತಿ ಅಧ್ಯಕ್ಷ ನ್ಯಾಯಮೂರ್ತಿ ಬಿ.ಎನ್. ಶ್ರೀಕೃಷ್ಣ ಅವರ ಅಧ್ಯಕ್ಷತೆಯಲ್ಲಿಸೆ.27ರಂದು ಸಮಿತಿಯ ಸಭೆ ನಡೆಯಲಿದೆ. ಎರಡು ಬಣಗಳ ನಡುವಿನ ವಿವಾದ, ಭಕ್ತರಿಗೆ ಪೂಜೆ ಹಾಗೂ ಸೇವೆಗೆ ವ್ಯವಸ್ಥೆ ವಿಷಯವನ್ನು ಸಭೆಯಲ್ಲಿ ಮಂಡಿಸಲಾಗುವುದು. ಸಭೆಯ ನಿರ್ಣಯದಂತೆ ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುವುದು. ಅಲ್ಲಿಯವರೆಗೆ ದೇವರ ದರ್ಶನಕ್ಕೆ ಬರುವ ಭಕ್ತರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಲು ತಿಳಿಸಲಾಗಿದೆ. ಸೆ.19ರಂದು ಮಾಡಲಾದ ಆದೇಶದ ಪ್ರಕಾರ ಭಕ್ತರು ದೇವರ ದರ್ಶನ ಮತ್ತು ಸ್ಥಳೀಯರು ವೈಯಕ್ತಿಕ ಪೂಜೆ ಸಲ್ಲಿಸಬಹುದು’ ಎಂದು ತಿಳಿಸಿದರು.

ಪಿ.ಎಸ್‍.ಐ ನವೀನ ನಾಯ್ಕ ನೇತೃತ್ವದಲ್ಲಿ ಪೊಲೀಸರು ಭದ್ರತೆ ಒದಗಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.