ADVERTISEMENT

ಕಾರವಾರ: ‘ಟೈಗರ್ ಶಾರ್ಕ್’ ಕಳೇಬರ ಪತ್ತೆ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2021, 13:55 IST
Last Updated 21 ಸೆಪ್ಟೆಂಬರ್ 2021, 13:55 IST
ಕಾರವಾರ ತಾಲ್ಲೂಕಿನ ಮಾಜಾಳಿಯ ಕಡಲತೀರದಲ್ಲಿ ಮಂಗಳವಾರ ಕಂಡುಬಂದ ‘ಟೈಗರ್ ಶಾರ್ಕ್’ ಕಳೇಬರ
ಕಾರವಾರ ತಾಲ್ಲೂಕಿನ ಮಾಜಾಳಿಯ ಕಡಲತೀರದಲ್ಲಿ ಮಂಗಳವಾರ ಕಂಡುಬಂದ ‘ಟೈಗರ್ ಶಾರ್ಕ್’ ಕಳೇಬರ   

ಕಾರವಾರ: ತಾಲ್ಲೂಕಿನ ಮಾಜಾಳಿ ಕಡಲತೀರದಲ್ಲಿ ಮಂಗಳವಾರ ‘ಟೈಗರ್ ಶಾರ್ಕ್’ ಹೆಣ್ಣು ಮೀನಿನ ಕಳೇಬರ ಕಂಡುಬಂದಿದೆ. ಇದು ಸುಮಾರು ಒಂದೂವರೆ ಮೀಟರ್ ಉದ್ದವಿತ್ತು.

ವಿಶ್ವದಾದ್ಯಂತ ಆಳಸಮುದ್ರದಲ್ಲಿ ಕಂಡುಬರುವ ಪ್ರಭೇದ ಇದಾಗಿದ್ದು, ಹುಲಿಯ ಚರ್ಮದಲ್ಲಿರುವಂಥ ಪಟ್ಟೆಗಳನ್ನು ಹೊಂದಿದೆ. ಇದೇ ಕಾರಣಕ್ಕೆ ‘ಟೈಗರ್ ಶಾರ್ಕ್’ ಎಂಬ ಹೆಸರು ಬಂದಿದೆ. ಶಾರ್ಕ್‌ಗಳ ಪೈಕಿ ನಾಲ್ಕನೇ ಅತಿ ದೊಡ್ಡದು ಎಂದು ಗುರುತಿಸಲಾಗಿದೆ. ಸುಮಾರು 40 ವರ್ಷಗಳ ಜೀವಿತಾವಧಿ ಹೊಂದಿದ್ದು, ಐದು ಮೀಟರ್‌ಗಳಷ್ಟು ಉದ್ದ ಬೆಳೆಯುತ್ತವೆ. 300ರಿಂದ 600 ಕೆ.ಜಿ.ಗಳಷ್ಟು ತೂಕವಿರುತ್ತವೆ ಎಂದು ಕಾರವಾರದ ಕಡಲಜೀವ ವಿಜ್ಞಾನ ಅಧ್ಯಯನ ಕೇಂದ್ರದ ಸಹಾಯಕ ಪ್ರಾಧ್ಯಾಪಕ ಡಾ.ಶಿವಕುಮಾರ ಹರಗಿ ಮಾಹಿತಿ ನೀಡಿದರು.

‘ಟೈಗರ್ ಶಾರ್ಕ್‌ಗಳ ಹಲ್ಲುಗಳುಬಲಿಷ್ಠವಾಗಿದ್ದು, ಬಹಳ ಆಕ್ರಮಣಕಾರಿ ಸ್ವಭಾವ ಹೊಂದಿರುತ್ತವೆ. ತಿಮಿಂಗಿಲಗಳು, ಇತರ ಶಾರ್ಕ್‌ಗಳು, ಮಣಕಿ, ಬೊಂಡಾಸ್ ಮೀನುಗಳು, ಆಮೆಗಳು, ಮನುಷ್ಯರ ಮೇಲೂ ದಾಳಿ ಮಾಡುತ್ತವೆ. ನಮ್ಮ ದೇಶದಲ್ಲಿ ಇವುಗಳನ್ನು ಆಹಾರಕ್ಕಾಗಿ ಬಳಸುವುದಿಲ್ಲ’ ಎಂದು ತಿಳಿಸಿದರು.

ADVERTISEMENT

ಪರಿಸರ ಸಂರಕ್ಷಣೆಯ ಅಂತರರಾಷ್ಟ್ರೀಯ ಒಕ್ಕೂಟವು (ಐ.ಯು.ಸಿ.ಎನ್) ಈ ಶಾರ್ಕ್‌ಗಳನ್ನು ಅಳಿವಿನ ಅಂಚಿನಲ್ಲಿದೆ ಎಂದು ಗುರುತಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.