ADVERTISEMENT

ಮುಂಡಗೋಡ: ಕುಸಿದ ಅಂತರ್ಜಲ, ದೊಡ್ಡ ಮಳೆಗಾಗಿ ಮುಗಿಲಿನತ್ತ ನೋಟ

ಕೆಲವೆಡೆ ಟ್ಯಾಂಕರ್‌ನಲ್ಲಿ ನೀರು ಪೂರೈಕೆ

ಶಾಂತೇಶ ಬೆನಕನಕೊಪ್ಪ
Published 13 ಮೇ 2019, 19:46 IST
Last Updated 13 ಮೇ 2019, 19:46 IST
ಮುಂಡಗೋಡ ತಾಲ್ಲೂಕಿನ ಕೊಪ್ಪ ಗ್ರಾಮದಲ್ಲಿ ಟ್ಯಾಂಕರ್‌ ಮೂಲಕ ನೀರು ಪೂರೈಕೆ ಮಾಡುತ್ತಿರುವುದು
ಮುಂಡಗೋಡ ತಾಲ್ಲೂಕಿನ ಕೊಪ್ಪ ಗ್ರಾಮದಲ್ಲಿ ಟ್ಯಾಂಕರ್‌ ಮೂಲಕ ನೀರು ಪೂರೈಕೆ ಮಾಡುತ್ತಿರುವುದು   

ಮುಂಡಗೋಡ:ತಾಲ್ಲೂಕಿನ ಕೊಪ್ಪ ಹಾಗೂ ಹೊಸ ಸಾಲಗಾಂವ ಗ್ರಾಮದಲ್ಲಿ ಸದ್ಯ ಕುಡಿಯುವ ನೀರನ್ನು ಟ್ಯಾಂಕರ್ ಮೂಲಕ ಪೂರೈಕೆ ಮಾಡಲಾಗುತ್ತಿದೆ. ಇನ್ನೂ ಕೆಲವು ಗ್ರಾಮ ಪಂಚಾಯ್ತಿಗಳಲ್ಲಿ ಅಂತರ್ಜಲ ಕುಸಿದುಕೊಳವೆಬಾವಿಗಳು ಬತ್ತಿವೆ.

ಮೇ ತಿಂಗಳ ಮೊದಲನೇ ವಾರದಿಂದ ನೀರಿನ ಸಮಸ್ಯೆ ಕಾಣಿಸಿಕೊಂಡಿದೆ.ಒಂದೆರೆಡು ದೊಡ್ಡ ಮಳೆ ಆದರೆ ಮಾತ್ರ ಸಮಸ್ಯೆ ಬಗೆಹರಿಯಬಹುದು ಎನ್ನುವುದು ಗ್ರಾಮಸ್ಥರ ಅನಿಸಿಕೆ. ಕೆರೆಕಟ್ಟೆಗಳು ಸಹ ತಳ ಕಂಡಿದ್ದು, ಬಿರು ಬಿಸಿಲಿಗೆ ನೀರಿನ ಸಂಗ್ರಹ ಕಡಿಮೆಯಾಗುತ್ತಿದೆ. ಮುಂದಿನ ದಿನಗಳಲ್ಲಿ ಜಾನುವಾರಿಗೂ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.

ಕಾಡಿನ ಜಲಮೂಲಗಳು ಸಹ ಬತ್ತಿದ್ದು, ಅಲ್ಲಲ್ಲಿ ಅರಣ್ಯ ಇಲಾಖೆಯವರು ಕೃತಕ ತೊಟ್ಟಿಗಳನ್ನು ನಿರ್ಮಿಸಿದ್ದಾರೆ. ಅವುಗಳಲ್ಲಿ ನೀರು ತುಂಬಿ ಪ್ರಾಣಿ, ಪಕ್ಷಿಗಳ ಬಾಯಾರಿಕೆ ಇಂಗಿಸುವ ಕೆಲಸ ಮಾಡುತ್ತಿದ್ದಾರೆ.

ADVERTISEMENT

ಆಳಕ್ಕೆ ಕೊರೆದರೂ ನೀರಿಲ್ಲ

ಹೊಸದಾಗಿ ಕೊಳವೆ ಬಾವಿಗಳನ್ನು 350 ಅಡಿಗಳವರೆಗೆ ಕೊರೆದರೂ ಹನಿ ನೀರು ಸಿಗುತ್ತಿಲ್ಲ. ಸಿಕ್ಕಿದರೂ ಒಂದರಿಂದ ಒಂದೂವರೆ ಇಂಚಿನಿಷ್ಟು ಮಾತ್ರ ಬರುತ್ತಿದೆ. ನೂರಾರು ಮೀಟರ್‌ ಅಂತರದಿಂದ ಪೈಪ್‌ಲೈನ್‌ ಅಳವಡಿಸಿ, ಗ್ರಾಮಸ್ಥರಿಗೆ ನೀರು ಕೊಡಿಸುವ ಪ್ರಯತ್ನ ಮಾಡಲಾಗುತ್ತಿದೆ.

ಸಹಾಯವಾಣಿ

ಕುಡಿಯುವ ನೀರು ಹಾಗೂ ಬರಪೀಡಿತ ಪ್ರದೇಶಗಳಿಗೆ ಸಂಬಂಧಿಸಿದ ದೂರುಗಳಿಗೆ ಸ್ಪಂದಿಸಲು ಸಹಾಯವಾಣಿ ಕೇಂದ್ರ ತೆರೆಯಲಾಗಿದೆ. ಸಾರ್ವಜನಿಕರು 08301– 222 122ಕ್ಕೆ ಕರೆ ಮಾಡಬಹುದು ಎಂದು ತಹಶೀಲ್ದಾರ್‌ ಶಂಕರ ಗೌಡಿ ತಿಳಿಸಿದ್ದಾರೆ.

ನೋಡಲ್‌ ಅಧಿಕಾರಿ ನೇಮಕ

ಬರ ಪರಿಸ್ಥಿತಿ ಹಾಗೂ ಕುಡಿಯುವ ನೀರಿನ ಸಮಸ್ಯೆ ನಿಭಾಯಿಸಲು ಪ್ರತಿ ಹೋಬಳಿಗೆ ನೋಡಲ್‌ ಅಧಿಕಾರಿಯನ್ನು ನೇಮಿಸಲಾಗಿದೆ. ಮುಂಡಗೋಡ ಹೋಬಳಿಗೆ ಅಕ್ಷರದಾಸೋಹ ಅಧಿಕಾರಿ ಮಂಜುನಾಥ ಸಾಳುಂಕೆ, ಸಹಾಯಕರಾಗಿ ಚಿಗಳ್ಳಿ, ಚವಡಳ್ಳಿ, ಗುಂಜಾವತಿ, ಹುನಗುಂದ, ಇಂದೂರ, ನಂದಿಕಟ್ಟಾ, ಸಾಲಗಾಂವ, ಮೈನಳ್ಳಿ, ಬಾಚಣಕಿ ಗ್ರಾಮ ಪಂಚಾಯ್ತಿಗಳ ಅಭಿವೃದ್ಧಿ ಅಧಿಕಾರಿಗಳನ್ನು (ಪಿಡಿಒ) ನೇಮಕ ಮಾಡಲಾಗಿದೆ.

ಪಾಳಾ ಹೋಬಳಿಗೆ ಕೃಷಿ ಅಧಿಕಾರಿ ಎಂ.ಎಸ್‌.ಕುಲಕರ್ಣಿ ನೋಡಲ್‌ ಅಧಿಕಾರಿ ಆಗಿದ್ದು, ಸಹಾಯಕರಾಗಿ ಪಾಳಾ, ಕಾತೂರ, ಕೋಡಂಬಿ, ನಾಗನೂರು, ಬೆಡಸಗಾಂವ, ಮಳಗಿ, ಓರಲಗಿ ಪಿಡಿಒಗಳು ಕಾರ್ಯ ನಿರ್ವಹಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.