ADVERTISEMENT

ಕಾಂಗ್ರೆಸ್ ಮುಕ್ತ ಕರ್ನಾಟಕಕ್ಕೆ ಪಣ: ನಳಿನ್ ಕುಮಾರ್

ವಿಜಯ ಸಂಕಲ್ಪ ಯಾತ್ರೆಯಲ್ಲಿ ನಳಿನ್ ಕುಮಾರ್ ಕಟೀಲ್ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2023, 15:52 IST
Last Updated 20 ಮಾರ್ಚ್ 2023, 15:52 IST
ವಿಜಯ ಸಂಕಲ್ಪ ಯಾತ್ರೆಯ ರೋಡ್ ಶೋದಲ್ಲಿ ನಳೀಕುಮಾರ ಕಟೀಲ ಭಾಗವಹಿಸಿದ ದೃಶ್ಯ
ವಿಜಯ ಸಂಕಲ್ಪ ಯಾತ್ರೆಯ ರೋಡ್ ಶೋದಲ್ಲಿ ನಳೀಕುಮಾರ ಕಟೀಲ ಭಾಗವಹಿಸಿದ ದೃಶ್ಯ   

ಭಟ್ಕಳ: ‘ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮುಕ್ತ ಕರ್ನಾಟಕಕ್ಕೆ ಬಿಜೆಪಿ ಪಣತೊಟ್ಟಿದ್ದು, ಕಾರ್ಯಕರ್ತರು ಪಕ್ಷದ ಗೆಲುವಿಗೆ ಅವಿರತ ಶ್ರಮಿಸಬೇಕು’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕರೆ ನೀಡಿದರು.

ಪಟ್ಟಣದಲ್ಲಿ ಸೋಮವಾರ ನಡೆದ ವಿಜಯ ಸಂಕಲ್ಪ ಯಾತ್ರೆಯ ರೋಡ್ ಶೋನಲ್ಲಿ ಭಾಗವಹಿಸಿ ಮಾತನಾಡಿದ ಅವರು, ‘ಉತ್ತರ ಕನ್ನಡ ಜಿಲ್ಲೆಗೆ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆ ಮಂಜೂರು ಮಾಡಲಾಗಿದೆ. 60 ವರ್ಷ ಅಧಿಕಾರ ಮಾಡಿದ ಕಾಂಗ್ರೆಸ್ ಅಂದು ಮಹಿಳೆಯರಿಗೆ, ಜನಸಾಮಾನ್ಯರಿಗೆ ಏನೂ ಮಾಡಿಲ್ಲ. ಆದರೆ ಇಂದು ಸೋಲುವ ಭೀತಿಯಲ್ಲಿ ಗ್ಯಾರಂಟಿ ಕಾರ್ಡ್‌ ನೀಡುತ್ತಿದೆ’ ಎಂದು ವ್ಯಂಗ್ಯವಾಡಿದರು.

‘ಭಟ್ಕಳ ಶಾಸಕ ಸುನೀಲ ಸಾವಿರಾರು ಕೋಟಿ ಅನುದಾನ ತಂದು ಕ್ಷೇತ್ರದ ಅಭಿವೃದ್ಧಿ ಮಾಡಿದ್ದಾರೆ. ಬಿಜೆಪಿ ರಾಜ್ಯದಲ್ಲಿ ಪುನಃ ಅಧಿಕಾರಕ್ಕೆ ಬರಲಿದೆ. ಭಟ್ಕಳದ ಜನತೆ ಈ ಬಾರಿ ಪುನಃ ಬಿಜೆಪಿಗೆ ಮತ ನೀಡಿ ಆರಿಸಿ ತರಬೇಕು’ ಎಂದು ಕರೆ ನೀಡಿದರು.

ADVERTISEMENT

ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ‘ಭಟ್ಕಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಒಂದು ಗಲಭೆಯೂ ನಡೆದಿಲ್ಲ. ಕುಡಿಯುವ ನೀರು ಸೇರಿದಂತೆ ಕ್ಷೇತ್ರದ ಅಭಿವೃದ್ಧಿಗಾಗಿ ಸಾವಿರಾರು ಕೋಟಿ ಅನುದಾನ ತಂದಿದ್ದಾರೆ. ಕ್ಷೇತ್ರದ ನಾಮಧಾರಿಗಳ ಬೇಡಿಕೆಯಂತೆ ನಾರಾಯಣಗುರು ನಿಗಮ ಮಂಡಳಿ ರಚಿಸಲಾಗಿದೆ’ ಎಂದರು.

ಭಟ್ಕಳ ಶಾಸಕ ಸುನೀಲ ನಾಯ್ಕ, ರಾಜ್ಯ ಪಶ್ಚಿಮಘಟ್ಟ ಕಾರ್ಯಪಡೆ ಅಧ್ಯಕ್ಷ ಗೋವಿಂದ ನಾಯ್ಕ ಮಾತನಾಡಿದರು. ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ವೆಂಕಟೇಶ ನಾಯಕ, ವಿಜಯ ಸಂಕಲ್ಪ ಯಾತ್ರೆಯ ರಾಜ್ಯ ಸಂಚಾಲಕ ಮಲ್ಲಿಕಾರ್ಜುನ ಬಾಳೆಕಾಯಿ, ಪ್ರಮುಖರಾದ ಎನ್.ಎಸ್. ಹೆಗಡೆ, ಪ್ರಸನ್ನ ಕೆರೆಕೈ, ಚಂದ್ರ ಎಸಳೆ, ಗುರುಪ್ರಸಾದ ಹೆಗಡೆ, ಶಿವಾನಿ ಶಾಂತರಾಂ, ರಾಜೇಂದ್ರ ನಾಯ್ಕ, ವಿನೋದ ನಾಯ್ಕ ಇದ್ದರು.

ಸಂಚಾರ ದಟ್ಟಣೆ: ವಿದ್ಯಾರ್ಥಿಗಳ ಪರದಾಟ

ಭಟ್ಕಳ: ಪಟ್ಟಣದ ಮೂಡಭಟ್ಕಳ ಸರ್ಕಲ್‌ನಿಂದ ಶಂಸುದ್ದೀನ್ ಸರ್ಕಲ್‌ ವರೆಗೆ ನಡೆದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಮಧ್ಯಾಹ್ನ 12.30ಕ್ಕೆ ಶಂಸುದ್ದೀನ್ ಸರ್ಕಲ್‌ ತಲುಪಿದ ನಂತರ ಒಂದು ಘಂಟೆಯ ಕಾಲ ಸರ್ಕಲ್ ಬಂದ್ ಮಾಡಿ ರಸ್ತೆಯ ಮಧ್ಯದಲ್ಲಿಯೇ ರಾಜ್ಯ ಬಿಜೆಪಿ ಘಟಕ ಅಧ್ಯಕ್ಷ ನಳೀನ್‌ಕುಮಾರ ಕಟೀಲ್‌ ಭಾಷಣ ಆರಂಭಿಸಿದರು.

ಇದರಿಂದ ಒಂದು ಘಂಟೆಯ ಕಾಲ ಸಂಚಾರ ದಟ್ಟಣೆ ಉಂಟಾಗಿ ಸವಾರರು ಪರದಾಡುವಂತಾಯಿತು. ಪರೀಕ್ಷೆ ಸಮಯವಾಗಿದ್ದರಿಂದ ಮಧ್ಯಾಹ್ನ ಶಾಲೆ ಬಿಟ್ಟ ನಂತರ ವಿದ್ಯಾರ್ಥಿಗಳು ರಸ್ತೆ ದಾಟಿ ಹೋಗಲು ಪರದಾಡುವಂತಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.