ADVERTISEMENT

ಹೊಸಪೇಟೆ: ಖಾಲಿ ಕುರ್ಚಿಗಳ ನಡುವೆ ‘ಹಂಪಿ ಉತ್ಸವ’ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 27 ಜನವರಿ 2023, 15:41 IST
Last Updated 27 ಜನವರಿ 2023, 15:41 IST
ಖಾಲಿ ಕುರ್ಚಿಗಳ ನಡುವೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉತ್ಸವ ಉದ್ಘಾಟಿಸಿದರು.
ಖಾಲಿ ಕುರ್ಚಿಗಳ ನಡುವೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉತ್ಸವ ಉದ್ಘಾಟಿಸಿದರು.    

ಹಂಪಿ (ಹೊಸಪೇಟೆ): ಖಾಲಿ ಕುರ್ಚಿಗಳ ನಡುವೆ ಮೂರು ದಿನಗಳ ‘ಹಂಪಿ ಉತ್ಸವ’ದ ಉದ್ಘಾಟನಾ ಸಮಾರಂಭ ಶುಕ್ರವಾರ ಸಂಜೆ ಇಲ್ಲಿನ ಗಾಯತ್ರಿ ಪೀಠದಲ್ಲಿ ನಡೆಯಿತು.

ವೇದಿಕೆ ಎದುರು 40 ಸಾವಿರ ಆಸನಗಳಿಗೆ ವ್ಯವಸ್ಥೆ ಮಾಡಲಾಗಿತ್ತು. ಆದರೆ, ಎರಡು ಸಾವಿರ ಜನರೂ ಇರಲಿಲ್ಲ. ಅತಿ ಗಣ್ಯರು, ಗಣ್ಯರು ಹಾಗೂ ಸಾರ್ವಜನಿಕರಿಗೆ ಹಾಕಿದ್ದ ಕುರ್ಚಿಗಳೆಲ್ಲ ಖಾಲಿ ಇದ್ದವು. ‘ಜನವೇ ಇಲ್ವಲ್ಲ’ ಎಂದು ಎಲ್ಲರೂ ಮಾತಾಡಿಕೊಳ್ಳುತ್ತಿದ್ದರು. ಸಂಜೆ 6ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯಬೇಕಿತ್ತು. ಆದರೆ, ಜನರಿಲ್ಲದ ಕಾರಣ ಒಂದು ಗಂಟೆ ವಿಳಂಬ ಮಾಡಲಾಯಿತು. ಆದರೂ ಜನ ಸುಳಿಯಲಿಲ್ಲ. ಖಾಲಿ ಕುರ್ಚಿಗಳ ನಡುವೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉತ್ಸವ ಉದ್ಘಾಟಿಸಿದರು. ಒಂದು ಗಂಟೆಯಲ್ಲಿ ವೇದಿಕೆ ಕಾರ್ಯಕ್ರಮ ಕೊನೆಗೊಂಡಿತು. ಅನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ಶುರುವಾದವು. ಆದರೂ ಜನ ಸುಳಿಯಲಿಲ್ಲ. ರಾತ್ರಿ 9ರ ನಂತರವೂ ಜನ ಬರಲಿಲ್ಲ. ಪ್ರಚಾರದ ಕೊರತೆಯೇ ಇದಕ್ಕೆ ಕಾರಣ ಎಂಬ ಆರೋಪಗಳು ಕೇಳಿ ಬಂದಿವೆ.

‘ಎರಡು ವರ್ಷಗಳ ನಂತರ ಹಂಪಿ ಉತ್ಸವ ಆಗುತ್ತಿದೆ. ಬಹಳಷ್ಟು ಜನರಲ್ಲಿ ಉತ್ಸಾಹ ಇದೆ. ಇನ್ಮೇಲೆ ಜನ ಬರುತ್ತಾರೆ. ಯಾವಾಗಲೂ ಹೀಗೆ ಆಗುತ್ತದೆ. ಮುಖ್ಯ ಊರುಗಳಿಂದ ಬಹಳ ದೂರ ಇರುವುದರಿಂದ, ದೂರದಲ್ಲೇ ವಾಹನಗಳನ್ನು ನಿಲ್ಲಿಸಿರುವುದರಿಂದ ಹೀಗಾಗಿದೆ. ನಡೆದುಕೊಂಡು ಜನ ಬರುತ್ತಿದ್ದಾರೆ. ಉತ್ಸವ ಯಶಸ್ವಿಯಾಗುತ್ತದೆ’ ಎಂದು ಬೊಮ್ಮಾಯಿ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ಇದಕ್ಕೂ ಮುನ್ನ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಉತ್ತರ ಕರ್ನಾಟಕಕ್ಕೆ ಎಂಟು ಲಕ್ಷ ಕೋಟಿ ಹೂಡಿಕೆ ಬರುವ ನಿರೀಕ್ಷೆ ಇದೆ. ಈಗಾಗಲೇ ಒಪ್ಪಂದ ಮಾಡಿಕೊಳ್ಳಲಾಗಿದೆ. ಅತಿ ಹೆಚ್ಚು ಉದ್ಯೋಗ ಸೃಷ್ಟಿಸುವ ಮೂಲಕ ಸಮಗ್ರ ಉತ್ತರ ಕರ್ನಾಟಕ ಅಭಿವೃದ್ಧಿ ಕಾಣಲಿದೆ. ನವ ಕರ್ನಾಟಕ ಅಂದರೆ ವಿಜಯನಗರ ಸಾಮ್ರಾಜ್ಯದ ಸಮೃದ್ಧ ಮೌಲ್ಯಗಳನ್ನು ಇಟ್ಟುಕೊಂಡು ಆಧುನಿಕ ಕಾಲಕ್ಕೆ ಏನು ಬೇಕೋ ಅದನ್ನು ಒದಗಿಸಿ ಅಭಿವೃದ್ಧಿಗೊಳಿಸುವುದು ಎಂದು ಹೇಳಿದರು.

ಖಾಲಿ ಕುರ್ಚಿಗಳ ನಡುವೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉತ್ಸವ ಉದ್ಘಾಟಿಸಿದರು.



ರಾಜ್ಯದಲ್ಲಿ ಎಂಟು ಸಾವಿರ ಶಾಲಾ ಕೊಠಡಿ ನಿರ್ಮಾಣ ಮಾಡಲಾಗುತ್ತಿದೆ. ಹೊಸ ಶಿಕ್ಷಣ ನೀತಿ ಒಪ್ಪಿಕೊಳ್ಳಲಾಗಿದೆ. ವಿಜ್ಞಾನ ತಂತ್ರಜ್ಞಾನಕ್ಕೆ ಮಹತ್ವ ಕೊಡಲಾಗುವುದು. ಕೌಶಲ ಅಭಿವೃದ್ಧಿಗೆ ಒತ್ತು, ಐಟಿಐಗಳನ್ನು ಮೇಲ್ದರ್ಜೆಗೇರಿಸಲಾಗುವುದು. ಐದು ಲಕ್ಷ ಯುವಕರು ಹಾಗೂ ಅಷ್ಟೇ ಸಂಖ್ಯೆಯ ಮಹಿಳೆಯರಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ಯೋಜನೆ ರೂಪಿಸಲಾಗಿದೆ. ರಾಜ್ಯದಲ್ಲಿ ಮೂಲಭೂತ ಸೌಕರ್ಯ ಹೆಚ್ಚಿಸಲು 6 ಸಾವಿರ ಕಿ.ಮೀ ರಾಷ್ಟ್ರೀಯ ಹೆದ್ದಾರಿ, 3 ಸಾವಿರ ಕಿ.ಮೀ ರಾಜ್ಯ ಹೆದ್ದಾರಿ, ಎಂಟು ಬಂದರುಗಳ ಆಧುನೀಕರಣ, ಎರಡು ಬಂದರುಗಳ ವಿಸ್ತರಣೆ, ಎಲ್ಲ ರೈಲ್ವೆ ಯೋಜನೆಗಳಿಗೆ ಚಾಲನೆ ಕೊಡಲಾಗಿದೆ. ಕೈಗಾರಿಕೀಕರಣಕ್ಕೆ ಮಹತ್ವ ಕೊಡಲಾಗಿದೆ ಎಂದು ತಿಳಿಸಿದರು.

ಮುಜರಾಯಿ ಖಾತೆ ಸಚಿವೆ ಶಶಿಕಲಾ ಅಣ್ಣಾಸಾಹೇಬ್‌ ಜೊಲ್ಲೆ, ಸಾರಿಗೆ ಸಚಿವ ಬಿ. ಶ್ರೀರಾಮುಲು, ಗಣಿ ಮತ್ತು ಭೂ ವಿಜ್ಞಾನ ಸಚಿವ ಹಾಲಪ್ಪ ಬಸಪ್ಪ ಆಚಾರ್‌, ಸಂಸದರಾದ ವೈ.ದೇವೇಂದ್ರಪ್ಪ, ಸಂಗಣ್ಣ ಕರಡಿ, ಶಾಸಕರಾದ ಎನ್‌.ವೈ. ಗೋಪಾಲಕೃಷ್ಣ, ಪರಣ್ಣ ಮುನವಳ್ಳಿ, ನಗರಸಭೆ ಅಧ್ಯಕ್ಷೆ ಸುಂಕಮ್ಮ, ಕಮಲಾಪುರ ಪುರಸಭೆ ಅಧ್ಯಕ್ಷ ಸೈಯದ್‌ ಅಮಾನುಲ್ಲಾ, ಹಂಪಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ಡಿ. ಹೇಮಗಿರಿ, ಜಿಲ್ಲಾಧಿಕಾರಿ ಟಿ. ವೆಂಕಟೇಶ್‌, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರ್ಷಲ್‌ ಭೋಯರ್‌, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಶೋಕ್‌ ಜೀರೆ, ವಿಜಯನಗರ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ತುಳಸಿ ಮದ್ದಿನೇನಿ, ಬಳ್ಳಾರಿ ವಲಯ ಪೊಲೀಸ್‌ ಮಹಾನಿರೀಕ್ಷಕ ಬಿ.ಎಸ್‌. ಲೋಕೇಶ್‌ ಕುಮಾರ ಇದ್ದರು.

‘ಕೆಲವು ಅವ್ಯವಸ್ಥೆ ಆಗುತ್ತೆ’
‘ಕೆಲವು ಅವ್ಯವಸ್ಥೆ ಆಗುತ್ತೆ. ಚೇರ್‌ ಹಾಕಿದರೂ ಜನ ಬರದಿದ್ದಕ್ಕೆ ತೊಂದರೆ ಆಗಿದೆ. ಜನ ಬರಲು ಏಕೆ ಸಾಧ್ಯವಾಗಿಲ್ಲ. ಅದಕ್ಕೆ ಕಾರಣ ಏನೆಂಬುದನ್ನು ಜಿಲ್ಲಾಡಳಿತದೊಂದಿಗೆ ಚರ್ಚಿಸಿ ಜನರಿಗೆ ತೊಂದರೆ ಆಗದ ರೀತಿಯಲ್ಲಿ ಕ್ರಮ ಜರುಗಿಸಲಾಗುವುದು. ಕೆಲವರು ವಸ್ತು ಪ್ರದರ್ಶನದಲ್ಲಿ ಇದ್ದಾರೆ. ಬರಲು ಸಮಸ್ಯೆ. ಸೊಗಸಾಗಿ, ಶಾಂತಿಯುತವಾಗಿ ಉತ್ಸವ ನಡೆಯುತ್ತದೆ ಎಂಬ ಭರವಸೆ ಇದೆ’ ಎಂದು ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌ ಹೇಳಿದರು.

ADVERTISEMENT

*
ಸಚಿವರಾದ ಆನಂದ್‌ ಸಿಂಗ್‌, ಶಶಿಕಲಾ ಅಣ್ಣಾಸಾಹೇಬ್‌ ಜೊಲ್ಲೆ ನಡುವೆ ಯಾವುದೇ ತಿಕ್ಕಾಟವಿಲ್ಲ. ಒಗ್ಗಟ್ಟಿನಿಂದ ಹಂಪಿ ಉತ್ಸವ ಸಂಘಟಿಸಿದ್ದಾರೆ. ಇಲ್ಲದನ್ನು ಸೃಷ್ಟಿಸಬೇಡಿ.
–ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.