ADVERTISEMENT

ಹೊಸಪೇಟೆ: ಮುಳುಗುತ್ತಿದ್ದ 22 ವರ್ಷದ ಯುವಕನ ರಕ್ಷಿಸಿದ ಶಿಕ್ಷಕ ಮಧುಸೂದನ್‌

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2021, 15:02 IST
Last Updated 22 ಸೆಪ್ಟೆಂಬರ್ 2021, 15:02 IST
ಮುಳುಗುತ್ತಿದ್ದ ಯುವಕನನ್ನು ಶಿಕ್ಷಕ ಮಧುಸೂದನ್‌
ಮುಳುಗುತ್ತಿದ್ದ ಯುವಕನನ್ನು ಶಿಕ್ಷಕ ಮಧುಸೂದನ್‌   

ಹೊಸಪೇಟೆ (ವಿಜಯನಗರ): ಇಲ್ಲಿನ ರೈಲು ನಿಲ್ದಾಣ ಬಳಿಯ ತುಂಗಭದ್ರಾ ಜಲಾಶಯದ ಕೆಳಮಟ್ಟದ ಕಾಲುವೆಯಲ್ಲಿ (ಎಲ್‌ಎಲ್‌ಸಿ) ನೀರಿನಲ್ಲಿ ಮುಳುಗುತ್ತಿದ್ದ ಯುವಕನನ್ನು ಶಿಕ್ಷಕ ಮಧುಸೂದನ್‌ ಬುಧವಾರ ರಕ್ಷಿಸಿದ್ದಾರೆ.

ಕೊಪ್ಪಳ ಜಿಲ್ಲೆ ಕುಷ್ಟಗಿಯ ಯಮನೂರಪ್ಪ (22) ಬದುಕುಳಿದ ಯುವಕ. ಜೀವನದಲ್ಲಿ ಜಿಗುಪ್ಸೆಗೊಂಡ ಯಮನೂರಪ್ಪ ಆತ್ಮಹತ್ಯೆ ಮಾಡಿಕೊಳ್ಳಲು ತುಂಗಭದ್ರಾ ಕಾಲುವೆಗೆ ಜಿಗಿದಿದ್ದಾನೆ. ಈ ವೇಳೆ ಶಾಲೆಯಿಂದ ಮನೆಗೆ ಹಿಂತಿರುಗುತ್ತಿದ್ದ ಆಶ್ರಯ ಕಾಲೊನಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಮಧುಸೂದನ್‌ ಅವರು, ಅದನ್ನು ಗಮನಿಸಿ ಕಾಲುವೆಗೆ ಇಳಿದು ಯುವಕನನ್ನು ರಕ್ಷಿಸಿ ಮೇಲೆ ಕರೆ ತಂದಿದ್ದಾರೆ.

ಬಳಿಕ ಯುವಕನನ್ನು ಗ್ರಾಮೀಣ ಪೊಲೀಸ್‌ ಠಾಣೆಗೆ ಕರೆದೊಯ್ದಿದ್ದಾರೆ. ಪೊಲೀಸ್‌ ಇನ್‌ಸ್ಪೆಕ್ಟರ್‌ ಶ್ರೀನಿವಾಸ್‌ ಮೇಟಿ ಅವರು, ಯಮನೂರಪ್ಪ ಅವರ ಸಂಬಂಧಿಕರನ್ನು ಠಾಣೆಗೆ ಕರೆಸಿ, ಅವರಿಗೆ ಒಪ್ಪಿಸಿದ್ದಾರೆ.

ADVERTISEMENT

‘ಯುವಕ ಕಾಲುವೆಗೆ ಜಿಗಿದಾಗ ಚಾಲಕರಿಬ್ಬರು ಅವರ ವಾಹನಗಳನ್ನು ತೊಳೆಯುತ್ತಿದ್ದರು. ಅವರಿಬ್ಬರಿಗೆ ಈಜು ಗೊತ್ತಿರಲಿಲ್ಲ. ಬೇರೆಯವರ ಸಹಾಯಕ್ಕಾಗಿ ಕಿರುಚಾಡುತ್ತಿದ್ದರು. ಅಲ್ಲಿಂದಲೇ ಹಾದು ಹೋಗುತ್ತಿದ್ದ ನಾನು ತಕ್ಷಣವೇ ಕಾಲುವೆಗೆ ಇಳಿದು ಯಮನೂರಪ್ಪನನ್ನು ರಕ್ಷಿಸಿ ಮೇಲೆ ಕರೆತಂದೆ’ ಎಂದು ಮಧುಸೂದನ್‌ ತಿಳಿಸಿದ್ದಾರೆ.

‘ಯಮನೂರಪ್ಪ ಬೆಳಿಗ್ಗೆ ರೈಲಿನಡಿ ಪ್ರಾಣ ಕೊಡಲು ನಿರ್ಧರಿಸಿದ್ದ. ಆದರೆ, ಸುಮಾರು ಗಂಟೆಗಳ ಕಾಲ ಯಾವುದೇ ರೈಲುಗಳು ಬರಲಿಲ್ಲವಂತೆ. ಅದಕ್ಕಾಗಿ ಕಾಲುವೆಗೆ ಜಿಗಿದು ಪ್ರಾಣ ತ್ಯಜಿಸಲು ಮುಂದಾಗಿದ್ದ ಎಂಬ ಸಂಗತಿಯನ್ನು ಸ್ವತಃ ಆತನೇ ತಿಳಿಸಿದ್ದಾನೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.