ADVERTISEMENT

ಭಾರತೀಯರು ಮೋದಿ ಮಾತು ಕೇಳಬೇಕು, ಜೀವನ ಶೈಲಿ ಅನುಸರಿಸಬೇಕು: ಸು.ರಾಮಣ್ಣ

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಪ್ರಚಾರಕ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2021, 13:18 IST
Last Updated 19 ಸೆಪ್ಟೆಂಬರ್ 2021, 13:18 IST
ಸು.ರಾಮಣ್ಣ
ಸು.ರಾಮಣ್ಣ    

ಹೊಸಪೇಟೆ(ವಿಜಯನಗರ): ‘ಇಡೀ ಪ್ರಪಂಚ ಪ್ರಧಾನಿ ನರೇಂದ್ರ ಮೋದಿ ಅವರ ಮಾತನ್ನು ಕೇಳುತ್ತಿದೆ. ಅದೇ ರೀತಿ ಭಾರತೀಯರು ಅವರ ಮಾತು ಕೇಳಬೇಕು. ಅವರ ಕಾರ್ಯವೈಖರಿಯಂತೆ ನಮ್ಮ ಜೀವನ ಶೈಲಿ ಅನುಸರಿಸಬೇಕು’ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಪ್ರಚಾರಕ ಸು.ರಾಮಣ್ಣ ಹೇಳಿದರು.

ನಗರದ ಸಾಯಿ ಲೀಲಾ ಮಂದಿರದಲ್ಲಿ ಭಾನುವಾರ ರಾಷ್ಟ್ರೀಯ ಸ್ವಯಂ ಸೇವಕ ಸಂಘದಿಂದ (ಆರ್‌ಎಸ್‌ಎಸ್‌) ಏರ್ಪಡಿಸಿದ್ದ ‘ಕುಟುಂಬ ಪ್ರಬೋಧನ ಮಿಲನ’ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಪ್ರಪಂಚ ಮೋದಿಯವರ ಮಾತನ್ನು ಕೇಳುತ್ತಿದೆ. ಭಾರತೀಯರಾದ ನಾವೆಲ್ಲರೂ ಕೇಳಬೇಕು. ದಿನಕ್ಕೆ 16 ಗಂಟೆಗಳ ಕಾಲ ಕೆಲಸ ಮಾಡುವ ಜೊತೆಗೆ ಪ್ರಾಣಾಯಾಮ ಮಾಡುತ್ತಾರೆ. ರಾಕ್ಷಸಿ ಪೀಡಿತ, ಸೋಮಾರಿತನ, ಆಲಸ್ಯದಿಂದ ನಿರ್ಮೂಲನೆ ಹೊಂದಲು ದಿನಕ್ಕೆ ಐದು ನಿಮಿಷವಾದರೂ ಎಲ್ಲರೂ ಪ್ರಾಣಾಯಾಮ ಮಾಡಬೇಕು’ ಎಂದು ತಿಳಿಸಿದರು.

‘ಪ್ರತಿಯೊಬ್ಬರ ಮನೆಯಲ್ಲಿ ಆರೋಗ್ಯ, ನೆಮ್ಮದಿ ನೆಲೆಸಿದಾಗ ನಿಜವಾದ ಮನೆಯೆನಿಸಿಕೊಳ್ಳುತ್ತದೆ. ಓಂಕಾರ ಪಠಣದಿಂದ ರೋಗ ನಿರೋಧಕ ಶಕ್ತಿ ಹೆಚ್ಚುವುದರ ಜೊತೆಗೆ ಅರವತ್ತರ ಅರಳು ಮರಳನ್ನು ಗೆದ್ದು ಮರಳಿ ಅರಳಬಹುದು’ ಎಂದು ಹೇಳಿದರು.

‘ಮನೆಯ ನಿರ್ವಹಣೆ, ರೀತಿ-ನೀತಿ ಪರಂಪರೆಯನ್ನು ತಲೆತಲಾಂತರದಿಂದ ಹಿರಿಯರ ಮಾರ್ಗದರ್ಶನದಿಂದ ಕಲಿತು ಬಂದಿದ್ದೇವೆ. ಪಶ್ಚಿಮ ರಾಷ್ಟ್ರಗಳ ಪ್ರಭಾವದಿಂದ ಸನಾತನ ಕುಟುಂಬ ಆಚರಣೆ ಕುಸಿತ ಕಾಣುತ್ತಿದೆ. ನಮ್ಮ ಪರಂಪರೆಯನ್ನು ಮರೆಯಾಗದಂತೆ ನೋಡಿಕೊಳ್ಳಬೇಕು. ಭಾರತಾಂಬೆಯ ಮಕ್ಕಳಾದ ನಾವು ಒಂದೇ ಎಂಬ ಭಾವನೆಯನ್ನು ಹೊಂದಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.