ADVERTISEMENT

ಮುಖ್ಯಮಂತ್ರಿ ಸಕಾರಾತ್ಮಕ ಸ್ಪಂದನೆ

ಬಬಲೇಶ್ವರ ತಾಲ್ಲೂಕಿನ ಮುಳುಗಡೆ ಜಮೀನುಗಳಿಗೆ ಏಕರೂಪ ಪರಿಹಾರ ಒದಗಿಸಲು ಮನವಿ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2021, 12:33 IST
Last Updated 21 ಸೆಪ್ಟೆಂಬರ್ 2021, 12:33 IST
ಯುಕೆಪಿ ಮೂರನೇ ಹಂತದಲ್ಲಿ ಮುಳುಗಡೆಯಾಗುವ ಬಬಲೇಶ್ವರ ತಾಲ್ಲೂಕಿನ ಎಲ್ಲ ಜಮೀನುಗಳಿಗೆ ಏಕರೂಪ ಪರಿಹಾರ ಒದಗಿಸಲು ಕೋರಿ ಶಾಸಕ ಎಂ.ಬಿ.ಪಾಟೀಲ ನೇತೃತ್ವದ ನಿಯೋಗವು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬೆಂಗಳೂರಿನಲ್ಲಿ  ಮಂಗಳವಾರ ಮನವಿ ಸಲ್ಲಿಸಿದರು. ಸಚಿವರಾದ ಗೋವಿಂದ ಕಾರಜೋಳ, ಶಶಿಕಲಾ ಜೊಲ್ಲೆ ಇದ್ದಾರೆ
ಯುಕೆಪಿ ಮೂರನೇ ಹಂತದಲ್ಲಿ ಮುಳುಗಡೆಯಾಗುವ ಬಬಲೇಶ್ವರ ತಾಲ್ಲೂಕಿನ ಎಲ್ಲ ಜಮೀನುಗಳಿಗೆ ಏಕರೂಪ ಪರಿಹಾರ ಒದಗಿಸಲು ಕೋರಿ ಶಾಸಕ ಎಂ.ಬಿ.ಪಾಟೀಲ ನೇತೃತ್ವದ ನಿಯೋಗವು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬೆಂಗಳೂರಿನಲ್ಲಿ  ಮಂಗಳವಾರ ಮನವಿ ಸಲ್ಲಿಸಿದರು. ಸಚಿವರಾದ ಗೋವಿಂದ ಕಾರಜೋಳ, ಶಶಿಕಲಾ ಜೊಲ್ಲೆ ಇದ್ದಾರೆ   

ವಿಜಯಪುರ: ಯುಕೆಪಿ ಮೂರನೇ ಹಂತದಲ್ಲಿ ಮುಳುಗಡೆಯಾಗುವ ಬಬಲೇಶ್ವರ ತಾಲ್ಲೂಕಿನ ಎಲ್ಲ ಜಮೀನುಗಳಿಗೆ ಏಕರೂಪ ಪರಿಹಾರ ಒದಗಿಸಲು ಕೋರಿ ಬೆಂಗಳೂರಿನಲ್ಲಿ ಮಂಗಳವಾರ ಭೇಟಿ ಮಾಡಿದ ರೈತರ ನಿಯೋಗಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಕಾರಾತ್ಮಕವಾಗಿ ಸ್ಪಂದನೆ ನೀಡಿದ್ದಾರೆ.

ರೈತರ ಬೇಡಿಕೆಯನ್ನು ಮುಖ್ಯಮಂತ್ರಿಗಳಿಗೆ ವಿವರಿಸಿದ ಶಾಸಕ ಎಂ.ಬಿ.ಪಾಟೀಲ, ಆಲಮಟ್ಟಿ ಆಣೆಕಟ್ಟೆಯನ್ನು 524.256 ಮೀಟರ್‌ಗೆ ಎತ್ತರಿಸಿ, ನೀರು ನಿಲ್ಲಿಸಿದಾಗ ಅಂದಾಜು 75 ಸಾವಿರ ಎಕರೆ ಪ್ರದೇಶದಷ್ಟು ಜಮೀನು ಮುಳುಗಡೆಯಾಗಲಿದೆ. ಇದರಲ್ಲಿ ಬಬಲೇಶ್ವರ ತಾಲ್ಲೂಕಿನ 14 ಗ್ರಾಮಗಳು ಮುಳುಗಡೆಯಾಗಲಿವೆ ಎಂದರು.

ಈ ಹಿಂದೆ 2015-16ರಲ್ಲಿ ಮಾರ್ಗಸೂಚಿ ಬೆಲೆಯನ್ನು ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಯ ಗ್ರಾಮಗಳಿಗೆ ನಿಗದಿಪಡಿಸಿರುತ್ತಾರೆ. ಆದರೆ, ಜಮಖಂಡಿ ಮತ್ತು ಬೀಳಗಿ ತಾಲ್ಲೂಕಿನ ಮಾರ್ಗಸೂಚಿ ಪರಿಷ್ಕರಣೆ ಮಾಡಿರುತ್ತಾರೆ. ಅದರಂತೆ, ಬಬಲೇಶ್ವರ ತಾಲ್ಲೂಕಿನ 14 ಗ್ರಾಮಗಳ ಜಮೀನುಗಳ ಮಾರ್ಗಸೂಚಿ ಪರಿಷ್ಕರಣೆ ಮಾಡಿ, ಎಲ್ಲ ರೈತರಿಗೆ ನ್ಯಾಯ ದೊರಕಿಸಲು ಕೋರಿದರು.

ADVERTISEMENT

ಈ ಹಿಂದೆ ಮುಖ್ಯಮಂತ್ರಿಗಳಾಗಿದ್ದ ಸಿದ್ದರಾಮಯ್ಯನವರ ಅವಧಿಯಲ್ಲಿ ಕಾಗೋಡು ತಿಮ್ಮಪ್ಪನವರು ಕಂದಾಯ ಸಚಿವರಾಗಿದ್ದಾಗ ನಮ್ಮ ಭಾಗದ ರೈತರ ಬೇಡಿಕೆಗೆ ಸ್ಪಂದಿಸಿ, ಏಕರೂಪ ಬೆಲೆ ನೀಡುವಂತೆ ಶಿಫಾರಸು ಮಾಡಿದ್ದರು. ಮುಂದೆ ನೀತಿ ಸಂಹಿತೆ ಜಾರಿಯಾಗಿ ಸ್ಥಗಿತಗೊಂಡಿತ್ತು. ತಾವು ಮುತುರ್ವಜಿ ವಹಿಸಿ, ಆರ್ಥಿಕ ಇಲಾಖೆ ಅನುಮೋದನೆ ಕೊಡಿಸಿ, ಎಲ್ಲ ರೈತರಿಗೂ ಏಕರೂಪ ಬೆಲೆ ಒದಗಿಸಿ, ಸೂಕ್ತ ನ್ಯಾಯ ಒದಗಿಸುವಂತೆ ವಿನಂತಿಸಿದರು.

ಈ ಸಂದರ್ಭದಲ್ಲಿ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಅವರು ಉಪಸ್ಥಿತರಿದ್ದು, ರೈತರ ಮನವಿಯನ್ನು ಆಲಿಸಿದರು.

ರಾಜ್ಯ ಬಾರ್ ಕೌನ್ಸಿಲ್ ಅಧ್ಯಕ್ಷ ರಾಜೇಂದ್ರ ದೇಸಾಯಿ, ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಶಶಿಕಾಂತಗೌಡ ಪಾಟೀಲ, ಉಪಾಧ್ಯಕ್ಷ ಎಚ್.ಆರ್.ಬಿರಾದಾರ, ಜಿ.ಪಂ ಮಾಜಿ ಅಧ್ಯಕ್ಷ ಬಸವರಾಜ ದೇಸಾಯಿ, ತಾಲ್ಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ಶ್ರೀಶೈಲ ಸುಳ್ಳದ, ಭೀಮನಗೌಡ ಪಾಟೀಲ, ರಾಮನಗೌಡ ಪಾಟೀಲ, ವೆಂಕಟೇಶ ನಿಡೋಣಿ, ಸುಭಾಸ ಪಾಟೀಲ, ಸಂಗನಗೌಡ ಪಾಟೀಲ, ಸಂಗಣ್ಣ ಹುಣಸಿಕಟ್ಟಿ, ಶಿವಾನಂದ ಕಳ್ಳಿಗುದ್ದಿ, ಹಣಮಂತ ಮುದಕರೆಡ್ಡಿ, ವೆಂಕಣ್ಣ ಬಿರಾದಾರ, ರಮೇಶ ಗಡದಾನಿ, ವಿಠ್ಠಲ ಶೇಬಾನಿ, ಸುರೇಶ ಪೂಜಾರಿ, ಗೋವಿಂದಪ್ಪ ಶಿರಬೂರ, ಮಹೇಶ ಯರಗಟ್ಟಿ, ಸುರೇಶ ಬಿರಾದಾರ, ಸುರೇಶ ಕೊಡಬಾಗಿ, ಸುನೀಲಗೌಡ ಪಾಟೀಲ, ಮಹಾದೇವ ಮಾಸರೆಡ್ಡಿ, ವಿಜಯ ಸುತಗುಂಡಿ, ವೆಂಕಪ್ಪ ಚಿಕ್ಕಗಲಗಲಿ, ಅರವಿಂದ ಗುರಡ್ಡಿ, ವಿಠ್ಠಲ ಪೋತರೆಡ್ಡಿ, ಗಿರೀಶ ಪಾಟೀಲ ಸೇರಿದಂತೆ ಚಿಕ್ಕಗಲಗಲಿ, ಜೈನಾಪುರ, ಲಿಂಗದಳ್ಳಿ, ಹಂಗರಗಿ, ಬೆಳ್ಳುಬ್ಬಿ, ಬಬಲಾದ, ದೇವರಗೆಣ್ಣೂರ, ಕಣಬೂರ, ಹೊಸೂರ, ಸುತಗುಂಡಿ, ಜಂಬಗಿ, ಶಿರಬೂರ, ಮಂಗಳೂರ, ತಾಜಪೂರ ಗ್ರಾಮದ ರೈತರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.