ADVERTISEMENT

99 ಲಿಂಗಾಯತ ಉಪ ಪಂಗಡಗಳಿಗೆ ಮೀಸಲಾತಿ ಕೊಡಿಸಲು ಚರ್ಚೆ: ಎಂ.ಬಿ. ಪಾಟೀಲ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2022, 10:59 IST
Last Updated 20 ಆಗಸ್ಟ್ 2022, 10:59 IST
ಎಂ.ಬಿ. ಪಾಟೀಲ
ಎಂ.ಬಿ. ಪಾಟೀಲ   

ಹುಬ್ಬಳ್ಳಿ: ವೀರಶೈವ, ಲಿಂಗಾಯತ ಸೇರಿದಂತೆ 99 ಉಪ ಪಂಗಡಗಳ ಜನರಿಗೆ ಮೀಸಲಾತಿ ದೊರಕಿಸಿ ಕೊಡುವ ನಿಟ್ಟಿನಲ್ಲಿ ಏನು ಮಾಡಬೇಕು ಎನ್ನುವ ಬಗ್ಗೆ ಚುನಾವಣೆಯ ನಂತರ ಚರ್ಚಿಸಲಾಗುವುದು ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ ಹೇಳಿದರು.

ನಗರದಲ್ಲಿ ಶನಿವಾರ ಸುದ್ದಿಗಾರರ ಜೊತೆ ಮಾತನಾಡಿದರು.

ಪಂಚಪೀಠಾಧಿಪತಿಗಳು, ವೀರಶೈವ ಮಠಾಧೀಶರು, ಲಿಂಗಾಯತ ಸ್ವಾಮೀಜಿಗಳು ಸೇರಿದಂತೆ ಎಲ್ಲ ಉಪ ಪಂಗಡಗಳ ಮುಖಂಡರ ಜೊತೆ ಚರ್ಚಿಸಲಾಗುವುದು ಎಂದರು.

ADVERTISEMENT

ಇದು ಬಹಳಷ್ಟು ಸೂಕ್ಷ್ಮ ವಿಚಾರ. ಸೈದ್ಧಾಂತಿಕವಾಗಿ ಸಾಕಷ್ಟು ಭಿನ್ನಾಭಿಪ್ರಾಯಗಳಿವೆ. ಆದರೂ ಚರ್ಚೆ ನಡೆಸುತ್ತೇವೆ. ಪ್ರಾಥಮಿಕ ಹಂತದಿಂದಲೇ ಚರ್ಚೆ ಕೈಗೆತ್ತಿ ಕೊಳ್ಳುತ್ತೇವೆ. ಹೀಗಾಗಿ ಸಮಯವನ್ನು ನಿಗದಿಪಡಿಸಿಲ್ಲ. ಒಂದು ವರ್ಷವಾಗಬಹುದು, ಎರಡು ವರ್ಷವಾಗಬಹುದು, ಮೂರು ವರ್ಷವಾಗಬಹುದು ಎಂದರು.

ಕಳೆದ ಬಾರಿ ಚರ್ಚೆ ಕೈಗೆತ್ತಿಕೊಂಡಾಗ ಚುನಾವಣೆ ಸಮೀಪಕ್ಕೆ ಬಂದು ಬಿಟ್ಟಿತ್ತು, ಹೀಗಾಗಿ ಚರ್ಚೆ ವಿಸ್ತೃತವಾಗಿ ನಡೆಯಲಿಲ್ಲ. ಈಗ ಚರ್ಚೆ ಕೈಗೆತ್ತಿಕೊಂಡರೆ ಸಮಯ ಸಾಕಾಗಲ್ಲ. ಹೀಗಾಗಿ ಚುನಾವಣೆ ನಂತರ ಚರ್ಚಿಸಲು ತೀರ್ಮಾನಿಸಿದ್ದೇವೆ ಎಂದು ಹೇಳಿದರು.

ನಮ್ಮ ಉದ್ದೇಶ ಮುಖ್ಯವಾಗಿ, ನಮ್ಮ ಮಕ್ಕಳಿಗೆ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಮೀಸಲಾತಿ ಕೊಡಿಸುವುದು ಹಾಗೂ ಸರ್ಕಾರಿ ಯೋಜನೆಗಳ ಪ್ರಯೋಜನ ದೊರಕಿಸಿ ಕೊಡುವುದಾಗಿದೆ ಎಂದು ಸ್ಪಷ್ಟನೆ ನೀಡಿದರು.

ಬೇಡ ಜಂಗಮರು, ವೀರಶೈವರು, ಪಂಚಮಸಾಲಿ, ಸೇರಿದಂತೆ ವಿವಿಧ ಒಳಪಂಗಡದವರು ಪ್ರತ್ಯೇಕವಾಗಿ ಮೀಸಲಾತಿ ಕೇಳುತ್ತಿರುವುದಕ್ಕೆ ಇದು ಪರಿಹಾರವಾಗ ಬಲ್ಲದು ಎಂದು ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.