ADVERTISEMENT

ಕಲಿಯುವ ಆಸೆಗೆ ಬರೆ ಎಳೆದ ಬಡತನ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2021, 4:21 IST
Last Updated 29 ಆಗಸ್ಟ್ 2021, 4:21 IST
ವಾಡಿ ಸಮೀಪದ ಬಳವಡ್ಗಿ ಗ್ರಾಮದ ವಿದ್ಯಾರ್ಥಿನಿ ಶಿಲ್ಪಾ ಭಾಗೋಡಿ ತನ್ನ ತಾಯಿಯೊಂದಿಗೆ
ವಾಡಿ ಸಮೀಪದ ಬಳವಡ್ಗಿ ಗ್ರಾಮದ ವಿದ್ಯಾರ್ಥಿನಿ ಶಿಲ್ಪಾ ಭಾಗೋಡಿ ತನ್ನ ತಾಯಿಯೊಂದಿಗೆ   

ವಾಡಿ: ಹೆಚ್ಚಿನ ಶಿಕ್ಷಣ ಪಡೆದು ಉನ್ನತ ಹುದ್ದೆ ಸಂಪಾದಿಸಬೇಕು ಎನ್ನುವ ಪ್ರತಿಭಾನ್ವಿತ ವಿದ್ಯಾರ್ಥಿನಿಯ ಕನಸಿಗೆ ಬಡತನ ಸವಾಲೊಡ್ಡಿದೆ. ಕಾಲೇಜು ತೊರೆದು ದುಡಿಮೆಗೆ ಮೊರೆ ಹೋಗಲು ಯೋಚಿಸುತ್ತಿದ್ದಾಳೆ.

ಬಳವಡ್ಗಿ ಗ್ರಾಮದ 20 ವರ್ಷದ ಶಿಲ್ಪಾ ಭೀಮರಾಯ ಭಾಗೋಡಿ ಎಂಬ ವಿದ್ಯಾರ್ಥಿನಿಯ ನರ್ಸಿಂಗ್ ಕಲಿಯುವ ಆಸೆಗೆ ಬಡತನ ಅಡ್ಡಿಯಾಗಿದೆ. ಉನ್ನತ ವ್ಯಾಸಂಗ ಮಾಡಿ ಕುಟುಂಬಕ್ಕೆ ಆಸರೆಯಾಗಬೇಕು ಎಂಬ ಕನಸಿಗೆ ಬಡತನ ಬರೆ ಎಳೆಯುತ್ತಿದೆ. ಚಿಕ್ಕ ವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಂಡ ಬಾಲಕಿ ತೀವ್ರ ಬಡತನದ ನಡುವೆ ಕಷ್ಟಪಟ್ಟು ಹತ್ತನೆ ತರಗತಿಯಲ್ಲಿ ಪ್ರಥಮ ಶ್ರೇಣಿಯಲ್ಲಿ ಪಾಸಾಗಿದ್ದಾಳೆ. ಸಂಕಷ್ಟದ ನಡುವೆಯೂ ಬಿಕಾಂ ಎರಡನೇ ವರ್ಷ ಓದುತ್ತಿದ್ದಾಳೆ. ವೃದ್ಧ ತಾಯಿ ಜತೆ ಇರುವ ವಿದ್ಯಾರ್ಥಿನಿಗೆ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿರುವ ಅಕ್ಕಂದಿರೇ ಆಸರೆಯಾಗಿದ್ದಾರೆ.

ಮೂರು ವರ್ಷದ ನರ್ಸಿಂಗ್ ಮುಗಿಸಿ ಕುಟುಂಬಕ್ಕೆ ಆಸರೆಯಾಗುವ ಆಸೆ ಹೊಂದಿದ್ದಾಳೆ. ಹಣ ಇಲ್ಲದ ಕಾರಣ ಕಲಿಕೆ ಬಿಟ್ಟು ಕೂಲಿಗೆ ತೆರಳಲು ಸನ್ನದ್ಧಳಾಗಿದ್ದಾಳೆ. ಬೆಂಗಳೂರಿನಲ್ಲಿ ಕೂಲಿ ಕೆಲಸ ಮಾಡಿ ದುಡ್ಡು ಹೊಂದಿಸಿಕೊಂಡು ಮುಂದಿನ ವರ್ಷದಿಂದ ತನ್ನ ನೆಚ್ಚಿನ ಕೋರ್ಸ್ ಸೇರಲು ಯೋಚಿಸಿದ್ದಾಳೆ.

ADVERTISEMENT

ಹತ್ತನೇ ತರಗತಿ ನಂತರ 'ನರ್ಸಿಂಗ್ ಸೇರಿದರೆ ಸ್ವಲ್ಪ ಮಟ್ಟಿಗೆ ಅನುಕೂಲವಾಗಬಹುದು ಎಂದು ಹೇಳುತ್ತಿದ್ದಾರೆ, ನನ್ನ ತಾಯಿ ಆಸೆ ಸಹ ಇದೆ. ಮೂರು ವರ್ಷದ ಕೋರ್ಸ್ ಇದ್ದು, ಖಾಸಗಿಯಾಗಿ ಓದಲು ಪ್ರತಿ ವರ್ಷ 25 ಸಾವಿರ ಬೇಕು. ಬೆಂಗಳೂರಿಗೆ ಹೋಗಿ ದುಡಿದು ಮುಂದಿನ ವರ್ಷದಿಂದ ಅಭ್ಯಾಸ ಮಾಡುವೆ. ಒಂದು ವರ್ಷ ನಷ್ಟವಾದರೂ ಸರಿ ಅಭ್ಯಾಸ ಮಾಡುತ್ತೇನೆ.' ಎನ್ನುತ್ತಾಳೆ ಶಿಲ್ಪಾ ಭಾಗೋಡಿ.

ತನ್ನ ನೆಚ್ಚಿನ ನರ್ಸಿಂಗ್ ಅಭ್ಯಾಸಕ್ಕೆ ಸೇರಲು ವಿದ್ಯಾರ್ಥಿನಿ ಶಿಲ್ಪಾಗೆ ದಾನಿಗಳ ಸಹಾಯ ಹಾಗೂ ಸಹಕಾರದ ಅವಶ್ಯಕತೆಯಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.