ADVERTISEMENT

ಭೂಮಿ ಯೋಜನೆ: ಜಿಲ್ಲೆಗೆ 3ನೇ ಸ್ಥಾನ

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್. ಮಾಹಿತಿ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2021, 4:41 IST
Last Updated 21 ಸೆಪ್ಟೆಂಬರ್ 2021, 4:41 IST
ಡಾ.ರಾಗಪ್ರಿಯಾ
ಡಾ.ರಾಗಪ್ರಿಯಾ   

ಯಾದಗಿರಿ: ಭೂಮಿ ಯೋಜನೆಯಡಿಯಲ್ಲಿ ಸ್ವೀಕೃತವಾದ ಅರ್ಜಿಗಳ ವಿಲೇವಾರಿಯಲ್ಲಿಜಿಲ್ಲೆಯು ರಾಜ್ಯದಲ್ಲಿ ಮೂರನೇ ಸ್ಥಾನ ಪಡೆದಿದೆ. ಪ್ರಸಕ್ತ ವರ್ಷದ ಅಗಸ್ಟ್ ತಿಂಗಳಲ್ಲಿ ಸ್ವೀಕೃತವಾದ ಅರ್ಜಿಗಳಲ್ಲಿ 5,351 ಅರ್ಜಿಗಳನ್ನು ವಿಲೇವಾರಿ ಮಾಡಿ 2.35 ಸಿಗ್ಮಾ ಮೌಲ್ಯಾಂಕ ಪಡೆಯುವ ಮೂಲಕ ವಿಲೇವಾರಿ ಸೂಚ್ಯಾಂಕವು 1.9 ಆಗಿರುವುದಾಗಿ ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್ ಅವರು ತಿಳಿಸಿದರು.

ನಗರದ ಜಿಲ್ಲಾಧಿಕಾರಿಗಳ ಕಾರ್ಯಾಲಯದಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭೂಮಿ ತಂತ್ರಾಂಶದಲ್ಲಿ ಸಲ್ಲಿಕೆಯಾಗಿದ್ದ ಜೆ-ಫಾರ್ಮ್, ಖಾತಾ ಬದಲಾವಣೆ, ಹಕ್ಕು ಮತ್ತು ಋಣ, ನ್ಯಾಯಾಲಯ ಆದೇಶಗಳು, ಭೂಪರಿವರ್ತನೆ, ಪೋಡಿ ಸೇರಿದಂತೆ ಇತರೆ ಅರ್ಜಿಗಳು ಸಂಬಂಧಿತ ಅಧಿಕಾರಿಗಳು ಹಾಗೂ ಸಿಬ್ಬಂದಿ ಅವಧಿಯಲ್ಲಿ ವಿಲೇವಾರಿ ಮಾಡಿದ್ದಾರೆ ಎಂದು ಅವರು ಹೇಳಿದರು.

ಯೋಜನೆಯಲ್ಲಿ ಸವಾಲು ವಿಧಾನದಲ್ಲಿ ಶ್ರೇಣಿ ಪಡೆಯುವ ಜಿಲ್ಲೆಗಳಿಗೆ ಹೆಚ್ಚುವರಿಯಾಗಿ ₹3 ಕೋಟಿ ಅನುದಾನ ನೀಡಲಾಗುತ್ತದೆ. ಅದಕ್ಕೆ ನಮ್ಮ ಜಿಲ್ಲೆಯು ಅರ್ಹವಾಗಿದ್ದು, ಹೆಚ್ಚುವರಿ ಅನುದಾನಕ್ಕಾಗಿ ಪ್ರಸ್ತಾವನೆ ರೂಪಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ADVERTISEMENT

ಸೆ.17 ರಂದು ಕೋವಿಡ್ ಲಸಿಕಾ ಮೇಳದಲ್ಲಿ 45,000 ಡೋಸ್ ವಿತರಣೆಯ ಗುರಿಯಲ್ಲಿ 41,941 ಡೋಸ್ ವಿತರಿಸುವ ಮೂಲಕ ಜಿಲ್ಲೆ ಶೇ 91 ರಷ್ಟು ಗುರಿ ತಲುಪಿದೆ. ಕಂದಾಯ, ಆರೋಗ್ಯ, ಪಂಚಾಯತ್ ರಾಜ್, ಪೊಲೀಸ್, ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಿಬ್ಬಂದಿಯಿಂದ ಹಾಗೂ ಗ್ರಾಮೀಣ ಮಟ್ಟದಲ್ಲಿನ ಅಂಗನವಾಡಿ, ಆಶಾ, ಗ್ರಾಮ ಲೆಕ್ಕಾಧಿಕಾರಿಗಳು, ಪಿಡಿಒ ಹಾಗೂ ಶಿಕ್ಷಕರನ್ನು ಲಸಿಕಾ ಅಭಿಯಾನಕ್ಕೆ ನೇಮಕ ಮಾಡಲಾಗಿತ್ತು ಎಂದರು.

ಜಿಲ್ಲೆಯ ಆರೋಗ್ಯ ಕೇಂದ್ರಗಳಾದ ಕಕ್ಕೇರಾ, ಕಲ್ಲದೇವನಹಳ್ಳಿ, ಕೆಂಭಾವಿ, ಕೋಡೆಕಲ್, ಪೇಠ ಅಮ್ಮಾಪುರ, ರಾಜನಕೋಳೂರು, ಸುರಪುರ ನಗರ ಆರೋಗ್ಯ ಕೇಂದ್ರ, ಬಳಿಚಕ್ರ, ಗಾಜರಕೋಟ, ಹೊನಗೇರಾ, ಮಲ್ಹಾರ, ಗುರಮಠಕಲ್, ಸಗರ, ಶಹಾಪುರ ನಗರ ಆರೋಗ್ಯ ಕೇಂದ್ರಗಳಲ್ಲಿ 1000 ಕ್ಕಿಂತಲೂ ಹೆಚ್ಚು ಲಸಿಕಾಕರಣ ಗುರಿ ಸಾಧಿಸಲಾಗಿದೆ ಎಂದರು.

ಪ್ರಸ್ತುತ ಸಾಲಿನಲ್ಲಿ ಕೃಷ್ಣಾ ನದಿ ಪ್ರವಾಹದಿಂದಾಗಿ ಶಹಾಪುರ, ವಡಗೇರಾ, ಸುರಪುರ ಹಾಗೂ ಹುಣಸಗಿ ತಾಲ್ಲೂಕುಗಳ ವ್ಯಾಪ್ತಿಯ ಒಟ್ಟು 2191.68 ಹೆಕ್ಟೆರ್ ಬೆಳೆಹಾನಿಯಾಗಿದೆ. ಶಹಾಪುರ, ಸುರಪುರ ತಾಲ್ಲೂಕುಗಳಲ್ಲಿ 5.29 ಹೆಕ್ಟೆರ್ ತೋಟಗಾರಿಕಾ ಬೆಳೆ ನಷ್ಟ, ವಿದ್ಯುತ್ ಮೂಲ ಸೌಕರ್ಯಗಳ ಅಂದಾಜು ₹49.215 ಲಕ್ಷ ಹಾನಿ, ಜೂನ್ ತಿಂಗಳಿಂದ ಸುರಿದ ಅತಿವೃಷಿಯಿಂದ 98 ಹೆಕ್ಟರ್ ಬೆಳೆ ಹಾನಿ, 9 ಹೆಕ್ಟೆರ್ ತೋಟಗಾರಿಕಾ ಬೆಳೆ ಹಾನಿ, ಜಿಲ್ಲೆಯಲ್ಲಿ ಒಟ್ಟು 366 ಮನೆಗಳಿಗೆ ಹಾನಿ ಹಾಗೂ ಲೋಕೋಪಯೋಗಿ ಇಲಾಖೆಯ 222.27 ಕಿ.ಮೀ ರಸ್ತೆ, 17 ಸರ್ಕಾರಿ ಪ್ರಾಥಮಿಕ ಶಾಲಾ ಕಟ್ಟಡಗಳ ಅಂದಾಜು ₹114 ಲಕ್ಷ ಹಾನಿಯಾಗಿದೆ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಶಂಕರಗೌಡ ಸೋಮನಾಳ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.