ADVERTISEMENT

ಕಾಂಗ್ರೆಸ್ ನತ್ತ ಮುಖಮಾಡಿದ ಚಿಂಚನಸೂರ

ಬಿಜೆಪಿ ಮಾತೃಪಕ್ಷ ಎಂದಿದ್ದ ಚಿಂಚನಸೂರ; ಖರ್ಗೆ ಕುಟುಂಬ ಸೋಲಿಸಲು ತೊಡೆ ತಟ್ಟಿದ್ದರು

ಎಂ.ಪಿ.ಚಪೆಟ್ಲಾ
Published 22 ಮಾರ್ಚ್ 2023, 5:43 IST
Last Updated 22 ಮಾರ್ಚ್ 2023, 5:43 IST
ಡಾ. ಶರಣಭೂಪಾಲರಡ್ಡಿ
ಡಾ. ಶರಣಭೂಪಾಲರಡ್ಡಿ   

ಗುರುಮಠಕಲ್: ವಿಧಾನ ಪರಿಷತ್‌ ಸದಸ್ಯ ಹಾಗೂ ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಬುರಾವ ಚಿಂಚನಸೂರ ಅವರು ಬಿಜೆಪಿ ತೊರೆದಿದ್ದು, ಕಾಂಗ್ರೆಸ್ ಸೇರ್ಪಡೆಗೆ ವೇದಿಕೆ ಸಿದ್ಧಗೊಳಿಸಿಕೊಳ್ಳುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿವೆ.

ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ರಾಜೀನಾಮೆಯನ್ನು ಸಲ್ಲಿಸಿದ್ದು, ಚಿಂಚನಸೂರ ಅವರ ರಾಜೀನಾಮೆ ಅಂಗೀಕಾರವಾಗಿದೆ. ಕಳೆದ ಲೋಕಸಭಾ ಚುನಾವಣೆಗೂ ಕೆಲ ದಿನಗಳ ಮೊದಲು ಕಾಂಗ್ರೆಸ್‌ನಿಂದ ಬಿಜೆಪಿ ಸೇರಿದ್ದ ಚಿಂಚನಸೂರ ಈಗ ವಿಧಾನಸಭಾ ಚುನಾವಣೆಗೆ ಕೆಲ ದಿನಗಳು ಬಾಕಿಯಿರುವಾಗ ಮತ್ತೆ ಬಿಜೆಪಿ ತೊರೆದಿದ್ದು, ಕಾಂಗ್ರೆಸ್‌ನತ್ತ ಮುಖ ಮಾಡಿದ್ದಾರೆ.

ಬಾಬುರಾವ ಚಿಂಚನಸೂರ ಚಿತ್ತಾಪುರ ಹಾಗೂ ಗುರುಮಠಕಲ್ ವಿಧಾನಸಭಾ ಕ್ಷೇತ್ರದಿಂದ ಒಟ್ಟು ಐದು ಬಾರಿ ಶಾಸಕರು, ಸಚಿವರು ಆಗಿದ್ದರು. 2018ರ ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದರು. 2018ರ ಆಗಸ್ಟ್‌ನಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆ ಆದರು. 2019ರ ಲೋಕಸಭಾ ಚುನಾವಣೆಯಲ್ಲಿ ಕಲಬುರಗಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆಯವರ ವಿರುದ್ಧ ‘ತೊಡೆತಟ್ಟಿ’ ಬಿಜೆಪಿಯ ಡಾ.ಉಮೇಶ ಜಾಧವ ಪರ ಪ್ರಚಾರ ಮಾಡಿದ್ದರು.

ADVERTISEMENT

2022ರ ಆಗಸ್ಟ್ ತಿಂಗಳಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ವಿಧಾನ ಪರಿಷತ್‌ಗೆ ಅವಿರೋಧ ಆಯ್ಕೆಯಾದರು. ಅವರ ಪತ್ನಿ ಅಮರೇಶ್ವರಿ ಚಿಂಚನಸೂರ ಅವರನ್ನು ಭಾರತೀಯ ಆಹಾರ ನಿಗಮದ ನಿರ್ದೇಶಕರನ್ನಾಗಿ ನಾಮನಿರ್ದೇಶನ ಮಾಡಲಾಗಿತ್ತು. ಕಳೆದ ತಿಂಗಳಲ್ಲಿ ಚಿಂಚನಸೂರ ಬಿಜೆಪಿ ತೊರೆಯಲಿದ್ದಾರೆ ಎನ್ನುವ ವದಂತಿಗಳು ಹರಿದಾಡಿದ್ದವು. ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ ಜೊತೆಗೂಡಿ ಸುದ್ದಿಗೋಷ್ಠಿ ಮಾಡಿದ್ದ ಚಿಂಚನಸೂರ ‘ಬಿಜೆಪಿ ತೊರೆಯಲ್ಲ, ಚುನಾವಣೆಯಲ್ಲಿ ಪ್ರಿಯಾಂಕ್‌ ಖರ್ಗೆಯವರನ್ನು ಸೋಲಿಸುತ್ತೇನೆ’ ಎಂದು ತೊಡೆತಟ್ಟಿದ್ದರು.

ಕಾಂಗ್ರೆಸ್‌ನಲ್ಲಿ ಅಸಮಾಧಾನ: ಮತಕ್ಷೇತ್ರದಲ್ಲಿ ಬಾಬುರಾವ ಚಿಂಚನಸೂರ ಕಾಂಗ್ರೆಸ್ ಸೇರ್ಪಡೆಯ ಕುರಿತು ಕಾಂಗ್ರೆಸ್ ಕಾರ್ಯಕರ್ತರಲ್ಲಿ ಅಸಮಾಧಾನವಿದ್ದು, ಕಳೆದ ಚುನಾವಣೆಯಲ್ಲಿ ಸೋತ ನಂತರ ಕಾಂಗ್ರೆಸ್ ತೊರೆದ ಅವರು ಪಕ್ಷದ ವಿರುದ್ಧ ಪ್ರಚಾರ ಮಾಡಿದ್ದರು. ‘ಕಾಂಗ್ರೆಸ್ ಕಾರ್ಯಕರ್ತರಿಗೆ ಬೆಂಬಲವಾಗಬೇಕಿದ್ದ ಸಮಯದಲ್ಲಿ ನಮಗೆಲ್ಲಾ ಕೈಕೊಟ್ಟು ಬಿಜೆಪಿ ಹೋದವರು’ ಮತ್ತೆ ಕಾಂಗ್ರೆಸ್ ಸೇರುತ್ತಿದ್ದಾರೆ. ಬಿಜೆಪಿಯಿಂದ ಟಿಕೆಟ್ ಸಿಗುವುದಿಲ್ಲ ಎಂದು ಖಚಿತವಾದ ಬಳಿಕ ಅಲ್ಲಿಂದ ಹೊರಬಂದು ಕಾಂಗ್ರೆಸ್ ಸೇರುತ್ತಾರಾ? ಎಂದು ಕೆಲ ಕಾರ್ಯಕರ್ತರು ಅಸಮಾಧಾನಗೊಂಡರು.

ಸೈದಾಪುರದಲ್ಲಿ ಸೇರ್ಪಡೆ?: ಮಾರ್ಚ್ 25ರಂದು ಮತಕ್ಷೇತ್ರದ ಸೈದಾಪುರ ಪಟ್ಟಣದಲ್ಲಿ ಬ್ಲಾಕ್ ಕಾಂಗ್ರೆಸ್ ಕಚೇರಿಯ ಉದ್ಘಾಟನೆ ಹಾಗೂ ಕಾಂಗ್ರೆಸ್ ಸಮಾವೇಶ ಆಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭಾಗವಹಿಸಲಿದ್ದು, ಅವರ ಸಮ್ಮುಖದಲ್ಲಿ ಚಿಂಚನಸೂರ ಕಾಂಗ್ರೆಸ್ ಸೇರುವ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗುತ್ತಿದ್ದು, ಈ ಕುರಿತು ಇಲ್ಲಿನ ಕಾಂಗ್ರೆಸ್ ಮುಖಂಡರು ‘ಯಾವುದೇ ಮಾಹಿತಿಯಿಲ್ಲ’ ಎಂದು ಹೇಳುತ್ತಾರೆ.

ವ್ಯಾಪಕವಾದ ‘ಸ್ವಾರ್ಥಿ ಚಿಂಚನಸೂರ’ ಮೆಸೇಜ್: ಬಾಬುರಾವ ಚಿಂಚನಸೂರ ರಾಜೀನಾಮೆ ನೀಡಿದ ಬೆನ್ನಲ್ಲೆ ಮತಕ್ಷೇತ್ರದಲ್ಲಿ ‘ಸ್ವಾರ್ಥಿ ಚಿಂಚನಸೂರ’ ಎನ್ನುವ ಸಂದೇಶ ಹರಿದಾಡುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೆಯಾಗುತ್ತಿದೆ.

‘ಬಿಜೆಪಿಯಲ್ಲಿ ಬಾಬುರಾವ ಚಿಂಚನಸೂರ ಅವರಿಗೆ ಪಕ್ಷದ ರಾಜ್ಯ ಉಪಾಧ್ಯಕ್ಷ, ಎಂಎಲ್ಸಿ, ನಿಗಮ ಮಂಡಳಿಯ ಅಧ್ಯಕ್ಷ ಮತ್ತು ಸಂಪುಟ ಸಭೆಯ ವಿಶೇಷ ಸ್ಥಾನ ನೀಡಿತ್ತು. ಅವರ ಪತ್ನಿಗೆ ಕೇಂದ್ರ ಆಹಾರ ನಿಗಮದ ನಿರ್ದೇಶಕರಾಗಿಸಿತ್ತು. ಮಗನಿಗೆ ಬಿಜೆಪಿ ಹಿಂದುಳಿದ ವರ್ಗಗಳ ಪ್ರಧಾನ ಕಾರ್ಯದರ್ಶಿಯಾಗಿ ಸ್ಥಾನಮಾನ ನೀಡಲಾಗಿತ್ತು. ಸೋತಿದ್ದರೂ ಚಿಂಚನಸೂರ ಅವರ ಕುಟುಂಬಕ್ಕೆ ನಿರೀಕ್ಷೆಗಿಂತಲೂ ಹೆಚ್ಚಿನ ಗೌರವ ನೀಡಿಲಾಗಿದೆ. ಬಿಜೆಪಿ ಸೇರಿದ್ದು, ತಮ್ಮ ಐಷಾರಾಮಿ ಜೀವನಕ್ಕಾಗಿ, ತಮ್ಮ ಕುಟುಂಬಕ್ಕಾಗಿ, ತಮ್ಮ ಸ್ವಾರ್ಥಕ್ಕಾಗಿ ಕಾರ್ಯಕರ್ತರನ್ನು ಚಿಂಚನಸೂರ ಬಲಿಕೊಡುತ್ತಿದ್ದಾರೆ’ ಎಂಬ ಸಂದೇಶ ಮೊಬೈಲ್‌ ಫೋನ್‌ಗಳಲ್ಲಿ ಹರಿದಾಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.