ADVERTISEMENT

ಸರ್ಕಾರಿ ಶಾಲಾ ಕೋಣೆ ನೆಲಸಮ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2021, 4:55 IST
Last Updated 22 ಸೆಪ್ಟೆಂಬರ್ 2021, 4:55 IST
ಗುರುಮಠಕಲ್ ತಾಲ್ಲೂಕಿನ ಪುಟಪಾಕ ತಾಂಡಾದಲ್ಲಿ ನೆಲಸಮವಾದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಡುಗೆಕೋಣೆ
ಗುರುಮಠಕಲ್ ತಾಲ್ಲೂಕಿನ ಪುಟಪಾಕ ತಾಂಡಾದಲ್ಲಿ ನೆಲಸಮವಾದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಡುಗೆಕೋಣೆ   

ಗುರುಮಠಕಲ್: ತಾಲ್ಲೂಕಿನ ಪುಟಪಾಕ ತಾಂಡಾದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಿಸಿಯೂಟದ ಅಡುಗೆ ಕೋಣೆಯನ್ನು ಕೆಡವಲಾಗಿದೆ.

ಸರ್ಕಾರಿ ಮಾಲೀಕತ್ವದ ಯಾವುದೇ ಕಟ್ಟಡದ ದುರಸ್ತಿ, ಮರುನಿರ್ಮಾಣಕ್ಕೆ ಸಂಬಂಧಿತ ಇಲಾಖೆಯ ತಾಂತ್ರಿಕ ಸಿಬ್ಬಂದಿ ಪರಿಶೀಲಿಸಿ, ಅನುಮತಿ ನೀಡಬೇಕು. ಆದರೆ ಈ ಶಾಲೆಯ ಅಡುಗೆ ಕೋಣೆಯನ್ನು ನಿಯಮ ಉಲ್ಲಂಘಿಸಿ ಧ್ವಂಸಗೊಳಿಸಲಾಗಿದೆ ಎಂಬ ಆರೋಪವಿದೆ.

ಜಿಲ್ಲಾ ಪಂಚಾಯಿತಿಯ ತಾಂತ್ರಿಕ ಸಿಬ್ಬಂದಿ ಪರಿಶೀಲಿಸಿ, ‘ಕಟ್ಟಡ ಸದೃಢವಾಗಿದೆ. ಸಧ್ಯಕ್ಕೆ ದುರಸ್ತಿಯ ಅವಶ್ಯಕತೆಯಿಲ್ಲ’ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಆದರೆ, ಎಸ್‌ಡಿಎಂಸಿ ಮಾಜಿ ಅಧ್ಯಕ್ಷ ಕಿಶನ ರಾಠೋಡ್ ಅವರು ಕಾನೂನು ಬಾಹಿರವಾಗಿ ಕಟ್ಟಡ ಧ್ವಂಸಗೊಳಿಸಿದ್ದಾರೆ. ಅವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ಸಂಜೀವ ಕುಮಾರ ಅಲೆಗಾರ ಆರೋಪಿಸಿದ್ದಾರೆ.

ADVERTISEMENT

ಜಿಲ್ಲಾ ಪಂಚಾಯಿತಿಯಿಂದ ಅಡುಗೆ ಕೋಣೆ ನಿರ್ಮಾಣಕ್ಕೆ ₹4.46 ಲಕ್ಷ ಅನುದಾನ ಬಿಡುಗಡೆಯಾಗಿತ್ತು. ಆ ವೇಳೆಗೆ ಕಿಶನ್ ಅವರ ಅವಧಿಯೂ ಮುಗಿದಿತ್ತು. ಕೋವಿಡ್ ಕಾರಣದಿಂದ ಶಾಲಾ ಮುಚ್ಚಿದ್ದರಿಂದ ಎಸ್‌ಡಿಎಂಸಿ ಮರು ರಚನೆ ಮಾಡಲಾಗಿಲ್ಲ.

ಅನುದಾನ ನೂತನ ಸಮಿತಿಯ ಕೈ ಸೇರುವುದನ್ನು ತಪ್ಪಿಸಲು ಸಮಿತಿ ರಚನೆಗೂ ಮೊದಲೇ ಅನುದಾನ ಬಳಕೆಗೆ ಈ ರೀತಿ ಮಾಡಲಾಗಿದೆ. ತಮ್ಮ ಸ್ವಾರ್ಥಕ್ಕಾಗಿ ಸಾರ್ವಜನಿಕ ಹಣ ಮತ್ತು ಆಸ್ತಿಯನ್ನು ನಾಶ ಮಾಡಿದ್ದಾರೆ ಎಂದು ಕರ್ನಾಟಕ ಗರುಡ ಸಂಸ್ಥೆಯ ಅಧ್ಯಕ್ಷ ರಮೇಶ ದೂರಿದ್ದಾರೆ.

ಸಂಬಂಧಪಟ್ಟ ಮೇಲಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳಿಗೆ ಪತ್ರದ ಮೂಲಕ ಮಾಹಿತಿ ನೀಡಲಾಗಿದೆ ಎಂದು ಶಾಲೆಯ ಮುಖ್ಯಶಿಕ್ಷಕಿ ಸುನಂದಾ ಅವರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.