ADVERTISEMENT

ಕೋವಿಡ್ ಸೋಂಕಿತನಿಗೆ ಆಶ್ರಯ ನೀಡಿದ ಆಪ್ತ ಸ್ನೇಹಿತ

ಅಶೋಕ ಸಾಲವಾಡಗಿ
Published 12 ಮೇ 2021, 16:56 IST
Last Updated 12 ಮೇ 2021, 16:56 IST
ಕೋವಿಡ್‍ನಿಂದ ಗುಣಮುಖರಾದ ಎಸ್. ಶೇಖರ (ಎಡದಿಂದ 4ನೇಯವರು) ಅವರನ್ನು ಜೆ. ಅಗಸ್ಟಿನ್ (ಎಡದಿಂದ ಮೂರನೆಯವರು) ಕಲಬುರ್ಗಿಯ ತಮ್ಮ ಮನೆಯಿಂದ ಬೀಳ್ಕೊಟ್ಟರು
ಕೋವಿಡ್‍ನಿಂದ ಗುಣಮುಖರಾದ ಎಸ್. ಶೇಖರ (ಎಡದಿಂದ 4ನೇಯವರು) ಅವರನ್ನು ಜೆ. ಅಗಸ್ಟಿನ್ (ಎಡದಿಂದ ಮೂರನೆಯವರು) ಕಲಬುರ್ಗಿಯ ತಮ್ಮ ಮನೆಯಿಂದ ಬೀಳ್ಕೊಟ್ಟರು   

ಸುರಪುರ: ಕೋವಿಡ್ ದೃಢಗೊಂಡ ಶಹಾಪುರದ ಹಿರಿಯ ವಕೀಲ ಎಸ್. ಶೇಖರ ತಡಿಬಿಡಿ ಅವರಿಗೆ ತಮ್ಮ ಅಪ್ತ ಸ್ನೇಹಿತ ಸುರಪುರದ ಹಿರಿಯ ವಕೀಲ ಜೆ.ಅಗಸ್ಟಿನ್ ಕಲಬುರ್ಗಿಯ ತಮ್ಮ ಮನೆಯಲ್ಲಿ ಆಶ್ರಯ ನೀಡಿ ದಿಟ್ಟತನ ಮೆರೆದಿದ್ದಾರೆ.

ಶೇಖರ ಅವರಿಗೆ ಅಲ್ಪ ಪ್ರಮಾಣದ ಕೊರೊನಾ ಲಕ್ಷಣಗಳಿದ್ದವು. ಅವರ ಮಗ ವೈದ್ಯ ಡಾ.ರಾಜೇಂದ್ರ ತಂದೆಯನ್ನು ಕೋವಿಡ್ ತಪಾಸಣೆಗೆ ಒಳಪಡಿಸಿದರು. ನೆಗೆಟಿವ್ ಫಲಿತಾಂಶ ಬಂತು. ಮುಂಜಾಗ್ರತೆಯಿಂದ ಕಲಬುರ್ಗಿಗೆ ಕರೆದುಕೊಂಡು ಹೋಗಿ ಸಿಟಿ ಸ್ಕ್ಯಾನ್ ಮಾಡಿಸಿದರು. ಅದರಲ್ಲಿ ಅಲ್ಪ ಪ್ರಮಾಣದ ಸೋಂಕು ಪತ್ತೆಯಾಯಿತು.

ರಾಜೇಂದ್ರ ತಮ್ಮ ತಂದೆಯನ್ನು ಕಲಬುರ್ಗಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲು ನಿರ್ಧರಿಸಿದರು. ಈ ವಿಷಯ ತಿಳಿದಿ ಜೆ.ಅಗಸ್ಟಿನ್ ಆಸ್ಪತ್ರೆಗೆ ಬೇಡ. ನಮ್ಮ ಮನೆಯಲ್ಲೇ ಇರಲಿ ಎಂದು ಮನವೊಲಿಸಿದರು.

ADVERTISEMENT

40 ವರ್ಷದಿಂದ ಒಡನಾಟ ಹೊಂದಿದ ಅಪ್ತ ಸ್ಮೇಹಿತನ ಮಾತಿಗೆ ಕಟ್ಟುಬಿದ್ದ ಶೇಖರ ಅವರ ಮನೆಯಲ್ಲಿ ಇರಲು ಸಮ್ಮತಿಸಿದರು. ಅಗಸ್ಟಿನ್ ಅವರ ಮನೆಗೆ ಬರುತ್ತಿದ್ದ ಮನೆ ಕೆಲಸದವರು ಮತ್ತು ಸಹಾಯಕ ವಕೀಲರನ್ನು ಕೆಲ ದಿನಗಳ ಮಟ್ಟಿಗೆ ಮನೆಗೆ ಬರದಿರಲು ತಿಳಿಸಿದರು.

ಆಟ್ಯಾಚ್ ಬಾತ್‍ರೂಂ ಹೊಂದಿದ ದೊಡ್ಡ ಕೋಣೆಯನ್ನು ಶೇಖರ ಅವರಿಗೆ ಬಿಟ್ಟುಕೊಟ್ಟರು. ವೈದ್ಯರ ಸಲಹೆ ಪಡೆದು ಮಗ ಡಾ. ರಾಜೇಂದ್ರ ಚಿಕಿತ್ಸೆ ಆರಂಭಿಸಿದರು. ಅಗಸ್ಟಿನ್ ಮಾಸ್ಕ್ ಧರಿಸಿ ದೂರದಿಂದ ತಮ್ಮ ಸ್ನೇಹಿತನಿಗೆ ಅತ್ಮಸ್ಥೈರ್ಯ ತುಂಬುತ್ತಿದ್ದರು. ಸ್ನೇಹಿತನ ಕಾಳಜಿಯಿಂದ ಶೇಖರ ಚಿಕಿತ್ಸೆಗೆ ಸ್ಪಂದಿಸಿ ಶೀಘ್ರವೇ ಗುಣಮುಖರಾದರು. ಸಂಪೂರ್ಣ ಗುಣಮುಖರಾಗಲಿ ಎಂದು 19 ದಿನಗಳವರೆಗೆ ತಮ್ಮ ಮನೆಯಲ್ಲೇ ಗೆಳೆಯನನ್ನು ಇರಿಸಿಕೊಂಡಿದ್ದರು. ಇದೀಗ ಸಂಪೂರ್ಣ ಗುಣಮುಖರಾಗಿರುವ ಶೇಖರ ಅವರು ತಮ್ಮ ಮನೆಗೆ ತೆರಳಿದ್ದಾರೆ.

***

ಸೋಂಕಿತರನ್ನು ಮನೆಯವರು ಆಪ್ತತೆಯಿಂದ ಕಂಡು ಧೈರ್ಯ ತುಂಬಿದರೆ ಸೋಂಕಿತರು ಬೇಗ ಗುಣಮುಖರಾಗುತ್ತಾರೆ. ನಾನು ಶೇಖರ ಅವರಿಗೆ ಮಾಡಿದ್ದು ಇದನ್ನೇ
-ಜೆ. ಅಗಸ್ಟಿನ್ ವಕೀಲ, ಸುರಪುರ

***

ಅಲ್ಪ ಪ್ರಮಾಣದ ಲಕ್ಷಣಗಳು ಇದ್ದರೂ ಹೈರಾಣಾಗಿದ್ದೆ. ಆಪ್ತ ಸ್ನೇಹಿತ ಅಗಸ್ಟಿನ್ ಅವರ ಋಣ ತೀರಿಸಲು ಸಾಧ್ಯವಿಲ್ಲ. ನಾನು ಗುಣಮುಖನಾಗಲು ಅವರೇ ಕಾರಣ
-ಎಸ್. ಶೇಖರ ತಡಿಬಿಡಿ ವಕೀಲ, ಶಹಾಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.