ADVERTISEMENT

ಚರಂಡಿ ನೀರು: ಬಗೆಹರಿಯದ ಸಮಸ್ಯೆ

ವನದುರ್ಗ: ಚರಂಡಿ ನಿರ್ಮಾಣಕ್ಕೆ ಸ್ಥಳೀಯರ ವಿರೋಧ; ಸಾಂಕ್ರಾಮಿಕ ರೋಗ ಭೀತಿ

ಟಿ.ನಾಗೇಂದ್ರ
Published 21 ಸೆಪ್ಟೆಂಬರ್ 2021, 4:39 IST
Last Updated 21 ಸೆಪ್ಟೆಂಬರ್ 2021, 4:39 IST
ಶಹಾಪುರ ತಾಲ್ಲೂಕಿನ ವನದುರ್ಗ ಗ್ರಾಮದಲ್ಲಿ ಚರಂಡಿ ವ್ಯವಸ್ಥೆ ಇಲ್ಲದೆ ಸಂಗ್ರಹವಾದ ಕೊಳಚೆ ನೀರು
ಶಹಾಪುರ ತಾಲ್ಲೂಕಿನ ವನದುರ್ಗ ಗ್ರಾಮದಲ್ಲಿ ಚರಂಡಿ ವ್ಯವಸ್ಥೆ ಇಲ್ಲದೆ ಸಂಗ್ರಹವಾದ ಕೊಳಚೆ ನೀರು   

ವನದುರ್ಗ (ಶಹಾಪುರ): ಗ್ರಾಮದ ಬಡಾವಣೆಯ ನಿವಾಸಿಗರ ಅಸಹಕಾರದಿಂದ ಚರಂಡಿ ನಿರ್ಮಾಣ ಕಾಮಗಾರಿಗೆ ತೀವ್ರ ಹಿನ್ನಡೆಯಾಗಿದ್ದು, ಗ್ರಾಮ ಪಂಚಾಯಿತಿ ಆಡಳಿತಕ್ಕೆ ಸವಾಲಿನ ಜತೆಯಲ್ಲಿ ತಲೆನೋವಾಗಿ ಪರಿಣಮಿಸಿದೆ.

ಗ್ರಾಮದ ವಾರ್ಡ್ ಸಂಖ್ಯೆ 1ರಿಂದ 4ನೇ ಬಡಾವಣೆಯಲ್ಲಿ ರಸ್ತೆಯನ್ನು ಅತಿಕ್ರಮಿಸಿಕೊಂಡು, ರಸ್ತೆ ಮೇಲೆಯೇ ಮನೆಯ ನೀರು ಹರಿಬಿಡಲಾಗುತ್ತಿದೆ. ನಿರ್ಮಿಸಿದ ಚರಂಡಿಯಲ್ಲಿ ತ್ಯಾಜ್ಯ ವಸ್ತು ಸುರಿಯಲಾಗಿದೆ. ಇದರಿಂದ ಕೊಳಚೆ ನೀರು ಸರಾಗವಾಗಿ ಸಾಗದೆ ರಸ್ತೆ ಮೇಲೆ ಹರಿಯುತ್ತಿದೆ. ಚರಂಡಿಯ ನೀರು ಮನೆಯ ಮುಂದೆ ಬಾರದಿರಲಿ ಎಂದು ಮುಚ್ಚಿ ಹಾಕಲಾಗಿದೆ. ತಗ್ಗು ಪ್ರದೇಶದಲ್ಲಿ ನೀರು ನಿಂತು ದುರ್ವಾಸನೆ ಬೀರುತ್ತಿದೆ.

ನಿವಾಸಿಗರ ಅಸಹಕಾರದಿಂದ ಸಮಸ್ಯೆ ಉಲ್ಬಣಿಸಿದೆ. ಇದರಿಂದ ಗ್ರಾಮದಲ್ಲಿ ಸಾಮಾನ್ಯವಾಗಿ ಚಿಕೂನ್ ಗುನ್ಯಾ, ಡೆಂಗಿ, ಟೈಫಾಯಿಡ್‌ನಂತಹ ಹಲವು ರೋಗಗಳು ಕಾಣಿಸಿಕೊಂಡಿದ್ದು, ಜನರು ಆತಂಕಕ್ಕೆ ಒಳಗಾಗಿದ್ದಾರೆ ಎನ್ನುತ್ತಾರೆ ಗ್ರಾಮದ ನಿವಾಸಿಯೊಬ್ಬರು.

ADVERTISEMENT

ಗ್ರಾಮವು ಸುಮಾರು 8 ಸಾವಿರ ಜನಸಂಖ್ಯೆ ಹೊಂದಿದೆ. ಪ್ರಾಥಮಿಕ ಉರ್ದು, ಪ್ರೌಢಶಾಲೆ ಸೇರಿ ಐದು ಶಾಲೆಗಳಿವೆ. ಸುಮಾರು ಒಂದು ಸಾವಿರ ಮಕ್ಕಳು ಅಭ್ಯಾಸ ಮಾಡುತ್ತಿದ್ದಾರೆ. ಕನ್ಯಾ ಪ್ರೌಢಶಾಲೆಯಲ್ಲಿ ಸಿಬ್ಬಂದಿ ಕೊರತೆ ಇದೆ. ಕೇವಲ 2 ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಎರಡು ವಸತಿ ನಿಲಯಗಳಿವೆ. ಅಲ್ಲದೆ ಮಕ್ಕಳಿಗೆ ಆಟದ ಮೈದಾನದ ಅವಶ್ಯಕತೆ ಇದೆ ಎನ್ನುತ್ತಾರೆ ಗ್ರಾಮ ನಿವಾಸಿಗರು.

ಸ್ವತಃ ಶಾಸಕ ಶರಣಬಸಪ್ಪ ದರ್ಶನಾಪುರ ಅವರು ಗ್ರಾಮದಲ್ಲಿ ಸಾರ್ವಜನಿಕ ಸಭೆ ನಡೆಸಿದ್ದರು. ‘ನಮ್ಮ ಮನೆಯ ಮುಂದೆ ಚರಂಡಿ ನಿರ್ಮಾಣ ಬೇಡ ಎಂದಾದರೆ ನಿಮ್ಮ ಮನೆಯ ನೀರು ಎಲ್ಲಿಗೆ ಕಳುಹಿಸಬೇಕು. ಕೊಳವೆ ಮಾರ್ಗ ಹಾಕಿಸಿಕೊಂಡು ಮುಂದೆ ಸಾಗಿಸಿ. ಇಲ್ಲವೇ ಇಂಗು ಗುಂಡಿ ತೋಡಿಸಿಕೊಳ್ಳಿ. ಅಭಿವೃದ್ಧಿ ಕೆಲಸಕ್ಕೆ ಜನರು ಸಹಕಾರ ನೀಡಿದರೆ ಮಾತ್ರ ಗ್ರಾಮಾಭಿವೃದ್ಧಿ ಹೊಂದಲು ಸಾಧ್ಯ. ಇನ್ನೂ ಹೆಚ್ಚಿನ ಅನುದಾನ ಬೇಕಾದರೆ ಹೇಳಿ ನಾನು ಕೊಡಲು ಸಿದ್ಧ. ಮೊದಲು ಸ್ವಚ್ಛತೆ ಹಾಗೂ ಆರೋಗ್ಯದ ಕಡೆ ಗಮನಹರಿಸಿ’ ಎಂಬ ಸಲಹೆ ನೀಡಿದ್ದರು.

‘ಗ್ರಾಮದಲ್ಲಿ ವಿದ್ಯುತ್ ಸಮಸ್ಯೆ ಹಲವು ವರ್ಷದಿಂದ ಕಾಡುತ್ತಲಿದೆ. ಸಕಾಲದಲ್ಲಿ ವಿದ್ಯುತ್ ಪೂರೈಕೆ ಕಾಣದೆ ಸಂಕಷ್ಟ ಎದುರಿಸುವಂತೆ ಆಗಿದೆ. ರಾತ್ರಿ ಸಮಯದಲ್ಲಿ ಸೊಳ್ಳೆಗಳ ಕಾಟ ವಿಪರೀತವಾಗಿದೆ. ವಿದ್ಯುತ್ ಸಮಸ್ಯೆಯಿಂದ ಕೃಷಿ ಚಟುವಟಿಕೆಗಳಿಗೆ ಹಿನ್ನಡೆಯಾಗಿದೆ. ಪ್ರತ್ಯೇಕವಾದ 110 ಕೆ.ವಿ ವಿದ್ಯುತ್ ಪ್ರಸರಣ ಕೇಂದ್ರ ಸ್ಥಾಪಿಸಿದರೆ ಅನುಕೂಲವಾಗುತ್ತದೆ’ ಎನ್ನುತ್ತಾರೆ ಗ್ರಾಮದ ಮುಖಂಡ ಯಲ್ಲಯ್ಯ ನಾಯಕ ವನದುರ್ಗ.

ಗ್ರಾಮದಲ್ಲಿ ಸಮನ್ವಯದ ಕೊರತೆ ಇದೆ. ಎಲ್ಲರೂ ಕೂಡಿ ಕೊಂಡು ಸಾರ್ವಜನಿಕ ಸಮಸ್ಯೆ ಬಗೆಹರಿಸಬೇಕಾಗಿದೆ. ಸರ್ಕಾರದ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.