ADVERTISEMENT

ಹಳೆ ವೈಷಮ್ಯ; ಕೊಲೆಗೆ ಸುಪಾರಿ

ಜಿ.ಪಂ. ಸದಸ್ಯ ಮರಿಲಿಂಗಪ್ಪ ಕರ್ನಾಳ ಕೊಲೆ ಯತ್ನ ಪ್ರಕರಣ, ಐವರ ಬಂಧನ: ಎಸ್ಪಿ

​ಪ್ರಜಾವಾಣಿ ವಾರ್ತೆ
Published 4 ಜುಲೈ 2020, 16:34 IST
Last Updated 4 ಜುಲೈ 2020, 16:34 IST
ಯಾದಗಿರಿ ಜಿಲ್ಲಾ ಪಂಚಾಯಿತಿ ವಿರೋಧ ಪಕ್ಷದ ನಾಯಕ ಮರಿಲಿಂಗಪ್ಪ ಕರ್ನಾಳ ಅವರ ಕೊಲೆಗೆ ಸುಪಾರಿ ನೀಡಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ
ಯಾದಗಿರಿ ಜಿಲ್ಲಾ ಪಂಚಾಯಿತಿ ವಿರೋಧ ಪಕ್ಷದ ನಾಯಕ ಮರಿಲಿಂಗಪ್ಪ ಕರ್ನಾಳ ಅವರ ಕೊಲೆಗೆ ಸುಪಾರಿ ನೀಡಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ   

ಯಾದಗಿರಿ: ಜಿಲ್ಲಾ ಪಂಚಾಯಿತಿ ಸದಸ್ಯ ಹಾಗೂ ವಿರೋಧ ಪಕ್ಷದ ನಾಯಕ ಮರಿಲಿಂಗಪ್ಪ ಕರ್ನಾಳ ಅವರ ಮೇಲೆ ಜೂನ್ 24ರಂದು ನಡೆದಿದ್ದ ಕೊಲೆ ಯತ್ನಕ್ಕೆ ಸಂಬಂಧಿಸಿದಂತೆ ಸುಪಾರಿ ನೀಡಿದ್ದ ಐವರು ಆರೋಪಿಗಳನ್ನು ಪೊಲೀಸರು ಶನಿವಾರ ಬಂಧಿಸಿದ್ದು,ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.ಹಳೆ ವೈಷಮ್ಯದಿಂದ ಕೊಲೆಗೆ ಸಂಚು ಹೂಡಲಾಗಿತ್ತು ಎಂಬುದು ಬಯಲಾಗಿದೆ.

ಹೊನ್ನಪ್ಪ ಮಾನಶಪ್ಪ ದೇಸಾಯಿ, ಗುರುರಾಜ ಗಂಗಣ್ಣ ನ್ಯಾಮಲಿ, ದೇವರಾಜ ಗುರುಣ್ಣ ನ್ಯಾಮಲಿ, ತಿರುಪತಿ ಗಂಗಣ್ಣ ನ್ಯಾಮಲಿ, ಆಂಜನೇಯ ಬಂಧಿತ ಆರೋಪಿಗಳು. ಇವರಲ್ಲಿಗುರುರಾಜ ಗಂಗಣ್ಣ ನ್ಯಾಮಲಿ ಎನ್ನುವವರಿಗೆ ಮರಿಲಿಂಗಪ್ಪ ಕರ್ನಾಳ ಅವರ ಮೇಲೆ ದ್ವೇಷ ಇತ್ತು. ಹೀಗಾಗಿ ಸ್ನೇಹಿತರ ಜೊತೆ ಸೇರಿ ಕೊಲೆಗೆ ಸಂಚು ರೂಪಿಸಿದ್ದರು. ಬಂಧಿತರುಒಂದೇ ಊರಿನವರು.ಪ್ರಾಥಮಿಕ ಮಾಹಿತಿಯಂತೆ ಸುಪಾರಿ ಪಡೆದಿದ್ದ 4 ಜನ ಗಾಡಿಯಲ್ಲಿ ಬಂದಿದ್ದಾರೆ. ಐವರು ಆರೋಪಿಗಳು ಸುಪಾರಿ ನೀಡಿ ನಗರದಲ್ಲಿ ತಿರುಗಾಡುತ್ತಿದ್ದರು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಋಷಿಕೇಶ ಭಗವಾನ್‌ ಸೋನವಣೆ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಟಾಟಾ ಸುಮೋ ಕಾರಿನಲ್ಲಿ ಬಂದಿದ್ದ ನಾಲ್ವರು ಆರೋಪಿಗಳು, ಮರಿಲಿಂಗಪ್ಪ ಚಲನವಲಗಳ ಮೇಲೆ ನಾಲ್ಕಾರು ದಿನಗಳಿಂದ ಕಣ್ಣಿಟ್ಟು ಜೂನ್ 24ರಂದು ಬೆಳಿಗ್ಗೆ 9 ಗಂಟೆ ಸುಮಾರಿಗೆ ಮಾರಾಕಾಸ್ತ್ರಗಳಿಂದ ಕೊಲೆಗೆ ಯತ್ನಿಸಿದ್ದಾರೆ.ಆದರೆ, ಜನರನ್ನು ನೋಡಿ ಅಲ್ಲಿಂದ ಪರಾರಿಯಾಗಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಕರ್ನಾಳ ಅವರನ್ನು ಜಿಲ್ಲಾಸ್ಪತ್ರೆಗೆ ಸೇರಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಕಲಬುರ್ಗಿಗೆ ಕಳಿಸಲಾಗಿತ್ತು ಎಂದು ಮಾಹಿತಿ ನೀಡಿದರು.

ADVERTISEMENT

ಕೊಲೆಗೆ ಸುಪಾರಿ: ಸುರಪುರ ತಾಲ್ಲೂಕಿನ ಕರ್ನಾಳ ಗ್ರಾಮದಲ್ಲಿ ಶಿವರಾತ್ರಿ ಜಾತ್ರೆ ವೇಳೆ ಗಲಾಟೆ ನಡೆದಿತ್ತು. ಆ ವೈಷಮ್ಯವೇಕೊಲೆಗೆ ಸುಪಾರಿ ಕೊಡುವಷ್ಟು ದ್ವೇಷ ಬೆಳೆದಿತ್ತು. ದಕ್ಷಿಣ ಕರ್ನಾಟಕದ ನಾಲ್ವರು ಸುಪಾರಿ ತೆಗೆದುಕೊಂಡಿದ್ದರು. ಅವರಲ್ಲಿ ಒಬ್ಬರ ಬಗ್ಗೆ ಮಾಹಿತಿ ಲಭಿಸಿದ್ದು, ಆರೋಪಿಯನ್ನು ಬಂಧಿಸಿದರೆ ಮತ್ತಷ್ಟು ಮಾಹಿತಿ ಹೊರ ಬರಲಿದೆ ಎಂದು ತಿಳಿಸಿದರು.

ಹಲವು ಆಯಾಮಗಳಲ್ಲಿ ಪರಿಶೀಲನೆ: ಕೊಲೆ ಯತ್ನಕ್ಕೆ ಸಂಬಂಧಿಸಿದಂತೆ ಈಗಾಗಲೇ 20 ಜನರನ್ನು ವಿಚಾರಣೆ ನಡೆಸಲಾಗಿದೆ. ರಾಯಚೂರು,‌ ಕಲಬುರ್ಗಿ, ಸುರಪುರ, ಯಾದಗಿರಿ ಜನರನ್ನು ವಿಚಾರಿಸಲಾಗಿದೆ. ಗಾಯಾಳು ಆಸ್ಪತ್ರೆಯಲ್ಲಿರುವುದರಿಂದ ಹೆಚ್ಚಿನ ಮಾಹಿತಿ ಪಡೆಯಲು ಆಗುತ್ತಿಲ್ಲ. ಈಗ ಚೇತರಿಕೆ ಕಾಣುತ್ತಿದ್ದು, ಪೂರ್ಣ ಗುಣಮುಖರಾದ ನಂತರ ತನಿಖೆಗೆ ಸಹಕಾರಿಯಾಗಲಿದೆ.ಸುರಪುರದಲ್ಲಿ ಜೀವ ಭಯವಿದ್ದ ಕಾರಣಕರ್ನಾಳ ಅವರು ಕಳೆದ ನಾಲ್ಕು ವರ್ಷಗಳಿಂದ ಯಾದಗಿರಿ ನಗರದಲ್ಲಿ ವಾಸಿಸುತ್ತಿದ್ದರು ಎಂದರು.

ಜೀವ ಭಯದಿಂದ ಕೊಲೆಗೆ ಸುಪಾರಿ ನೀಡಿದ್ದೇವೆ ಎಂದು ಆರೋಪಿಗಳು ತಪ್ಪೊಪ್ಪಿಕೊಂಡಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ. ಮರಿಲಿಂಗಪ್ಪ ಅವರ ವಿರುದ್ಧವೂ ಪ್ರಕರಣಗಳು ಇವೆಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.