ADVERTISEMENT

ಇ–ಮೇಲ್‌ ದಿವಾಳಿ: ಏನಿದು?

​ಪ್ರಜಾವಾಣಿ ವಾರ್ತೆ
Published 11 ಜನವರಿ 2020, 19:30 IST
Last Updated 11 ಜನವರಿ 2020, 19:30 IST
ಆಬಿದ್ ಸುರ್ತಿ
ಆಬಿದ್ ಸುರ್ತಿ   

ಹಣಕಾಸಿನ ವಿಚಾರದಲ್ಲಿ ದಿವಾಳಿ ಆಗುವ ಬಗ್ಗೆ ನೀವು ಕೇಳಿರುತ್ತೀರಿ. ಆದರೆ, ಇ–ಮೇಲ್‌ ದಿವಾಳಿ ಎಂಬ ಮಾತು ಕೇಳಿದ್ದೀರಾ?! ನಿರ್ದಿಷ್ಟ ದಿನಾಂಕದವರೆಗೆ ತನಗೆ ಬಂದಿರುವ ಎಲ್ಲ ಇ–ಮೇಲ್‌ಗಳನ್ನು ಡಿಲೀಟ್‌ ಮಾಡಲು (ಅಳಿಸಿಹಾಕಲು) ವ್ಯಕ್ತಿಯೊಬ್ಬ ತೀರ್ಮಾನಿಸಿದರೆ ಆ ಸ್ಥಿತಿಯನ್ನು ‘ಇ–ಮೇಲ್‌ ದಿವಾಳಿ’ ಎನ್ನಲಾಗುತ್ತದೆ. ವ್ಯಕ್ತಿಯ ಇ–ಮೇಲ್‌ ಖಾತೆಗೆ ಸಾವಿರಾರು ಸಂಖ್ಯೆಯಲ್ಲಿ ಇ–ಮೇಲ್‌ಗಳು ಬಂದು, ಅವುಗಳಿಗೆಲ್ಲ ಸಕಾಲದಲ್ಲಿ ಉತ್ತರ ನೀಡಲು ಆ ವ್ಯಕ್ತಿ ವಿಫಲನಾಗಿದ್ದರೆ ತಾನು ‘ಇ–ಮೇಲ್‌ ದಿವಾಳಿ’ ಎಂದು ಘೋಷಿಸಿಕೊಳ್ಳುವುದು ವ್ಯಕ್ತಿಗೆ ಅನಿವಾರ್ಯ ಆಗಬಹುದು.

ದೊಡ್ಡ ಸ್ಥಾನಗಳಲ್ಲಿ ಇರುವ ವ್ಯಕ್ತಿಗಳಿಗೆ ಅಥವಾ ಸೆಲೆಬ್ರಿಟಿಗಳಿಗೆ ಪ್ರತಿದಿನವೂ ಸಹಸ್ರಾರು ಇ–ಮೇಲ್‌ಗಳು ಬರುವ ಕಾರಣದಿಂದಾಗಿ, ಅವರಿಗೆ ಎಲ್ಲ ಇ–ಮೇಲ್‌ಗಳಿಗೆ ಉತ್ತರ ನೀಡಲು ಆಗದಿರಬಹುದು. ಅಲ್ಲದೆ, ವ್ಯಕ್ತಿಯೊಬ್ಬ ದೀರ್ಘ ಅವಧಿಗೆ ಅನಾರೋಗ್ಯಕ್ಕೆ ತುತ್ತಾಗಿದ್ದರೆ ಅಥವಾ ದೂರದ ಊರಿಗೆ ರಜೆ ಕಳೆಯಲು ಹೋಗಿದ್ದರೆ ಕೂಡ ಎಲ್ಲವಕ್ಕೂ ಉತ್ತರ ನೀಡಲು ಸಾಧ್ಯವಾಗದಿರಬಹುದು.

ಇ–ಮೇಲ್‌ ದಿವಾಳಿತನ ಘೋಷಿಸುವ ವ್ಯಕ್ತಿಯು ತನಗೆ ಇ–ಮೇಲ್‌ ಕಳುಹಿಸಿದ ಎಲ್ಲರಿಗೂ ಒಂದು ಮೇಲ್‌ ಕಳುಹಿಸಿ, ತಾನು ಎಲ್ಲ ಮೇಲ್‌ಗಳನ್ನೂ ಅಳಿಸಿಹಾಕುತ್ತಿರುವುದಾಗಿ ತಿಳಿಸುತ್ತಾನೆ. ತನ್ನಿಂದ ಪ್ರತಿಕ್ರಿಯೆ ಬಯಸುವವರು ತನಗೆ ಹೊಸದಾಗಿ ಮೇಲ್ ಮಾಡಬೇಕು ಎಂದೂ ಆತ ತಿಳಿಸುತ್ತಾನೆ.

ADVERTISEMENT

‘ಇ–ಮೇಲ್ ದಿವಾಳಿ’ ಪದವನ್ನು ಹಾರ್ವರ್ಡ್‌ ವಿಶ್ವವಿದ್ಯಾಲಯದ ಪ್ರೊಫೆಸರ್‌ ಹಾಗೂ ರಾಜಕೀಯ ಕಾರ್ಯಕರ್ತ ಲಾರೆನ್ಸ್‌ ಲೆಸ್ಸಿಗ್‌ 2004ರಲ್ಲಿ ಮೊದಲ ಬಾರಿಗೆ ಬಳಸಿದರು. ಅವರಿಗೆ ಕೂಡ, ಎಲ್ಲ ಇ–ಮೇಲ್‌ಗಳನ್ನು ಓದಿ, ಅವುಗಳಿಗೆ ಪ್ರತಿಕ್ರಿಯೆ ನೀಡಲು ಸಾಧ್ಯವಾಗಿರಲಿಲ್ಲ.

ಆಬಿದ್ ಸುರ್ತಿಯ ಹನಿ ಹನಿ ಕಹಾನಿ

ನೀರಿನ ಹನಿ ಹನಿಗಳು ಸೇರಿ ಸಮುದ್ರ ಸೃಷ್ಟಿಯಾಗಿದೆ ಎಂಬ ಮಾತನ್ನು ಆಬಿದ್ ಸುರ್ತಿ ಅವರಿಗಿಂತ ಹೆಚ್ಚು ಚೆನ್ನಾಗಿ ಅರ್ಥ ಮಾಡಿಕೊಂಡವರು ಯಾರೂ ಇಲ್ಲ ಅನಿಸುತ್ತದೆ. ಎಂಬತ್ತಕ್ಕಿಂತ ಹೆಚ್ಚು ಸಂವತ್ಸರಗಳನ್ನು ಕಂಡಿರುವ ಈ ಅಜ್ಜ, ನೀರಿನ ಹನಿ ಹನಿಯನ್ನೂ ಉಳಿಸುವ ದೊಡ್ಡ ಸವಾಲನ್ನು ತನ್ನ ಮೈಮೇಲೆ ಎಳೆದುಕೊಂಡಿದ್ದಾನೆ.

ಒಬ್ಬ ಪ್ಲಂಬರ್ ಹಾಗೂ ಒಬ್ಬ ಸಹಾಯಕನನ್ನು ಇಟ್ಟುಕೊಂಡು ಆಬಿದ್ ಅವರು ಮುಂಬೈನ ಹೊರವಲಯದ ಮನೆಗಳಿಗೆ ಭೇಟಿ ನೀಡುತ್ತಾರೆ. ಅಲ್ಲಿ ಅವರು ಸೋರಿಕೆಯಾಗುತ್ತಿರುವ ನಲ್ಲಿಗಳನ್ನು ಉಚಿತವಾಗಿ ಸರಿ ಮಾಡಿಕೊಡುತ್ತಾರೆ. ಆಬಿದ್ ಅವರು 2007ರಲ್ಲಿ ಆರಂಭಿಸಿದ ‘ದಿ ಡ್ರಾಪ್‌ ಡೆಡ್‌ ಫೌಂಡೇಷನ್‌’ ಇದುವರೆಗೆ ಎರಡು ಸಾವಿರ ಮನೆಗಳಲ್ಲಿ ನಲ್ಲಿಗಳನ್ನು ಸರಿ ಮಾಡಿಕೊಟ್ಟಿದೆ. ಇದರಿಂದ ಕೋಟ್ಯಂತರ ಲೀಟರ್‌ ನೀರು ಉಳಿತಾಯವಾಗಿದೆ.

ಆಬಿದ್ ಅವರು ಒಮ್ಮೆ ತಮ್ಮ ಸ್ನೇಹಿತನ ಮನೆಗೆ ಭೇಟಿ ನೀಡಿದ್ದಾಗ, ಅಲ್ಲಿ ನಲ್ಲಿಯಿಂದ ನೀರು ಸೋರುತ್ತಿರುವುದು ಕಂಡಿತು. ಆಗ ಅವರಿಗೆ ನಲ್ಲಿಗಳನ್ನು ಸರಿಪಡಿಸಿ ನೀರು ಉಳಿತಾಯ ಮಾಡುವ ಆಲೋಚನೆ ಮೂಡಿತು. ಚಿಕ್ಕ ವಯಸ್ಸಿನಲ್ಲಿದ್ದಾಗ ಒಂದೊಂದು ಬಕೆಟ್ ನೀರಿಗೂ ಕಷ್ಟಪಡುತ್ತಿದ್ದ ಆಬಿದ್ ಅವರಿಗೆ ನೀರಿಗಿಂತ ಹೆಚ್ಚಿನ ಮೌಲ್ಯ ಹೊಂದಿರುವ ವಸ್ತು ಇನ್ಯಾವುದೂ ಇರಲಿಲ್ಲ.

ಆಬಿದ್ ಅವರು ಚಿತ್ರ ಕಲಾವಿದ, ಲೇಖಕ ಹಾಗೂ ಕಾರ್ಟೂನಿಸ್ಟ್‌. ಅವರು ಹತ್ತು ಹಲವು ಕಾಮಿಕ್ಸ್‌ ಪಾತ್ರಗಳನ್ನು ರಚಿಸಿದ್ದಾರೆ. 80 ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಇವುಗಳಲ್ಲಿ ಕಾದಂಬರಿಗಳು, ಕಥಾಸಂಕಲನಗಳು, ಮಕ್ಕಳ ಪುಸ್ತಕಗಳು ಹಾಗೂ ನಾಟಕಗಳು ಸೇರಿವೆ. ಅವರು ಬರೆದ ‘ತೀಸರಿ ಆಂಖ್‌’ ಕಥೆಗೆ 1993ರಲ್ಲಿ ರಾಷ್ಟ್ರಪ್ರಶಸ್ತಿ ಲಭಿಸಿದೆ. ಇವರ ಜೀವನದ ಕುರಿತು ಒಂದು ಸಾಕ್ಷ್ಯಚಿತ್ರ ಕೂಡ ಸಿದ್ಧವಾಗಿದೆ.

ಬಾಲವಿಲ್ಲದ ಪ್ರಾಣಿಗೆ ಬೇಡಿಕೆ!

ಹಲವು ಜಾತಿಯ ಮಂಗಗಳಿಗೆ, ಚಿಂಪಾಂಜಿಗಳಿಗೆ, ಒರಾಂಗುಟನ್‌ಗಳಿಗೆ ಬಾಲ ಇಲ್ಲ. ಅವುಗಳಿಗೆ ಇರುವ ಉದ್ದನೆಯ ಕೈಗಳು ಒಂದು ಮರದಿಂದ ಇನ್ನೊಂದು ಮರಕ್ಕೆ ನೆಗೆಯಲು ನೆರವಾಗುತ್ತವೆ. ಅದೇ ರೀತಿ, ಬೆಕ್ಕಿನಂತೆ ಇರುವ ಲೋರಿಸ್ ಎನ್ನುವ ಪ್ರಾಣಿಗೂ ಬಾಲ ಇಲ್ಲ. ತ್ರಿಕೋನಾಕಾರದ ಮುಖ ಇರುವ ಈ ಸಸ್ತನಿ ತನ್ನ ಚೂಪಾದ ಪಂಜನ್ನು ಬಳಸಿ ಮರ ಏರುತ್ತದೆ.

ಬಾಲ ಇಲ್ಲದ ಪ್ರಾಣಿಗಳು ವಿಶ್ವದ ಹಲವೆಡೆ ಜನರಿಗೆ ಬಹಳ ಇಷ್ಟವಾಗುತ್ತವೆ. ಬಾಲ ಇಲ್ಲದ ಮ್ಯಾಂಕ್ಸ್‌ ಬೆಕ್ಕುಗಳನ್ನು ಮನೆಯಲ್ಲಿ ಸಾಕುವುದು ಹಲವು ದೇಶಗಳಲ್ಲಿ ಒಂದು ಫ್ಯಾಷನ್! ಆ ಬೆಕ್ಕುಗಳ ಬೆಲೆ ಸಾವಿರಾರು ಡಾಲರ್‌ ಇರುತ್ತದೆಯಂತೆ.

ವೈ–ಫೈ ಬೂಸ್ಟರ್

ನೀವು ಆನ್‌ಲೈನ್‌ನಲ್ಲಿ ನಿಮ್ಮಿಷ್ಟದ ಒಂದು ಸಿನಿಮಾ ನೋಡುತ್ತಿರುತ್ತೀರಿ ಎಂದು ಭಾವಿಸಿ. ನೀವು ಹೊಂದಿರುವ ಇಂಟರ್ನೆಟ್‌ ಸಂಪರ್ಕದ ವೇಗ ಸಾಕಾಗದೆ ಆ ಸಿನಿಮಾ ವೀಕ್ಷಣೆ ನಡುನಡುವೆ ಅಷ್ಟಿಷ್ಟು ಕ್ಷಣಗಳವರೆಗೆ ನಿಲ್ಲುತ್ತಿದ್ದರೆ ಕಿರಿಕಿರಿ ಅನಿಸುವುದಿಲ್ಲವೇ? ಹೀಗೆ ಆಗಲು ನಿಮಗೆ ವೈ–ಫೈ ಸಿಗ್ನಲ್‌ ಸರಿಯಾಗಿ ಸಿಗದಿರುವುದೂ ಕಾರಣ ಆಗಿರಬಹುದೇ?

ನಿಮ್ಮ ಇಷ್ಟದ ಸಿನಿಮಾ ಅಥವಾ ಕಾರ್ಯಕ್ರಮಗಳು ಸರಿಯಾಗಿ ಸ್ಟ್ರೀಂ ಆಗುವಂತೆ ಮಾಡಲು ವೈ–ಫೈ ಸಿಗ್ನಲ್‌ ಹೆಚ್ಚಿಸುವ ಬೂಸ್ಟರ್‌ ಬಳಸುವುದು ಉತ್ತಮ. ಇದೊಂದು ಚಿಕ್ಕ ಸಾಧನ. ಇದು ವೈ–ಫೈ ಸಿಗ್ನಲ್‌ ಹುಡುಕಿ, ಅದರ ವ್ಯಾಪ್ತಿಯನ್ನು ಹೆಚ್ಚಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.