ADVERTISEMENT

ಸೂಜಿ ಬಾಲದ ವೈಡಾ ಹಕ್ಕಿಗಳು

ಮಿನುಗು ಮಿಂಚು

​ಪ್ರಜಾವಾಣಿ ವಾರ್ತೆ
Published 29 ಫೆಬ್ರುವರಿ 2020, 19:30 IST
Last Updated 29 ಫೆಬ್ರುವರಿ 2020, 19:30 IST
ಸೂಜಿ ಬಾಲದ ವೈಡಾ
ಸೂಜಿ ಬಾಲದ ವೈಡಾ   

ಕೋಗಿಲೆಯು ತಾನು ಮೊಟ್ಟೆ ಇರಿಸುವುದು ಕಾಗೆಯ ಗೂಡಿನಲ್ಲಿ ಎಂಬುದು ಗೊತ್ತಿದೆ ಅಲ್ಲವೇ? ಅದೇ ರೀತಿ, ತನ್ನ ಮೊಟ್ಟೆಗಳನ್ನು ಇನ್ನೊಂದು ಜಾತಿಯ ಹಕ್ಕಿಯ ಗೂಡಿನಲ್ಲಿ ಇರಿಸುವ ಹಕ್ಕಿಯೊಂದು ಇದೆ. ಅದರ ಹೆಸರು ಸೂಜಿ ಬಾಲದ ವೈಡಾ.

ವೈಡಾ ಹಕ್ಕಿಗಳು ತಮ್ಮ ಮೊಟ್ಟೆಗಳನ್ನು ಫಿಂಚ್ ಹಕ್ಕಿಗಳ ಗೂಡಿನಲ್ಲಿ ಇರಿಸುತ್ತವೆ. ಈ ಮೊಟ್ಟೆಗಳು ಫಿಂಚ್ ಹಕ್ಕಿಗಳ ಮೊಟ್ಟೆಗಳಂತೆಯೇ ಕಾಣುತ್ತವೆ. ಹಾಗಾಗಿ, ಫಿಂಚ್ ಹಕ್ಕಿಗಳು ಅವುಗಳನ್ನು ತಮ್ಮ ಮೊಟ್ಟೆಗಳು ಎಂದು ಭಾವಿಸಿ, ಜೋಪಾನವಾಗಿ ನೋಡಿಕೊಳ್ಳುತ್ತವೆ.

ವೈಡಾ ಹಕ್ಕಿಯ ಮರಿಗಳು ಫಿಂಚ್ ಹಕ್ಕಿಯ ಮರಿಗಳಿಗಿಂತ ತೀರಾ ಭಿನ್ನವಾಗಿ ಕಾಣುತ್ತವೆ. ಆದರೂ, ವೈಡಾ ಮರಿಗಳ ಅಗಲವಾದ ಬಾಯಿ, ಫಿಂಚ್ ಹಕ್ಕಿ ಮರಿಗಳ ಬಾಯಿಯಂತೆಯೇ ಕಾಣುವುದರಿಂದ ಫಿಂಚ್ ಹಕ್ಕಿಗಳಿಗೆ ‘ಇವು ತಮ್ಮ ಮರಿಗಳಲ್ಲ’ ಎಂಬುದು ಗೊತ್ತಾಗುವುದಿಲ್ಲ. ಇದರ ಪರಿಣಾಮವಾಗಿ, ‍ಫಿಂಚ್ ಹಕ್ಕಿಗಳು ವೈಡಾ ಮರಿಗಳಿಗೂ ಆಹಾರ ತಂದುಕೊಡುತ್ತ ಇರುತ್ತವೆ.

ಸೂಜಿ ಬಾಲದ ವೈಡಾ ಹಕ್ಕಿಗಳು ಎದ್ದು ಕಾಣುವ, ಉದ್ದನೆಯ ಬಾಲ ಹೊಂದಿರುತ್ತವೆ. ಈ ಬಾಲದ ಉದ್ದ ಸರಿಸುಮಾರು 30 ಸೆಂಟಿ ಮೀಟರ್ ಇರುತ್ತದೆ. ಈ ಹಕ್ಕಿಗಳ ಮೈಬಣ್ಣ ಕಪ್ಪು–ಕಂದು. ದೇಹದ ಕೆಳಭಾಗ ಬಿಳಿ ಬಣ್ಣದ್ದಾಗಿರುತ್ತದೆ. ಕೊಕ್ಕಿನ ಬಣ್ಣ ಕೆಂಪು. ಈ ಹಕ್ಕಿಗಳು ಆಫ್ರಿಕಾ ಖಂಡದ ಹಲವು ಭಾಗಗಳಲ್ಲಿ ಕಂಡುಬರುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.