ADVERTISEMENT

ಜೈಪುರ: ಆಡಳಿತಾತ್ಮಕ ಪರೀಕ್ಷೆ ಪಾಸ್- ಉನ್ನತ ಹುದ್ದೆಗೇರಲಿರುವ ಕಸ ಗುಡಿಸುವ ಮಹಿಳೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 16 ಜುಲೈ 2021, 8:45 IST
Last Updated 16 ಜುಲೈ 2021, 8:45 IST
ಆಶಾ ಕಂದಾರ- ಟ್ವಿಟರ್‌ ಚಿತ್ರ
ಆಶಾ ಕಂದಾರ- ಟ್ವಿಟರ್‌ ಚಿತ್ರ   

ಜೈಪುರ: ಜೋಧ್‌ಪುರದ ಬೀದಿಗಳಲ್ಲಿ ಕಸ ಗುಡಿಸುತ್ತಿದ್ದ ಪೌರಕಾರ್ಮಿಕ ಮಹಿಳೆಯೊಬ್ಬರು ರಾಜಸ್ಥಾನದ ಆಡಳಿತಾತ್ಮಕ ಸೇವೆ(ಆರ್‌ಎಎಸ್‌) ಹುದ್ದೆಗಳಿಗೆ ನಡೆದ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.

ಆಶಾ ಕಂದಾರ ಎಂಬ ಮಹಿಳೆಯು ತಮ್ಮ ಜೀವನ ನಿರ್ವಹಣೆಗಾಗಿ ಜೋಧ್‌ಪುರದಲ್ಲಿ ಪೌರಕಾರ್ಮಿಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಅವರು 2018ರಲ್ಲಿ ನಡೆದ ಪ್ರತಿಷ್ಠಿತ ಆರ್‌ಎಎಸ್‌ ಪರೀಕ್ಷೆಗೆ ಹಾಜರಾಗಿದ್ದರು. ಕೋವಿಡ್‌ ಹಿನ್ನೆಲೆಯಲ್ಲಿ ಆರ್‌ಎಎಸ್‌ ಪರೀಕ್ಷೆಯ ಫಲಿತಾಂಶ ವಿಳಂಬವಾಗಿತ್ತು. ಎರಡು ದಿನಗಳ ಹಿಂದೆ ಫಲಿತಾಂಶ ಪ್ರಕಟವಾಗಿದ್ದು ಆಶಾ ಕಂದಾರ ಅವರು ಆರ್‌ಎಎಸ್ ಹುದ್ದೆಗೆ ಆಯ್ಕೆಯಾಗಿದ್ದಾರೆ. ಅವರಿಗೆ ಶೀಘ್ರದಲ್ಲೇ ಜಿಲ್ಲಾಧಿಕಾರಿ ಹುದ್ದೆ ದೊರೆಯಲಿದೆ ಎಂದು 'ಟೈಮ್ಸ್‌ ನೌ' ವರದಿ ಮಾಡಿದೆ.

ಎಂಟು ವರ್ಷಗಳ ಹಿಂದೆ ಪತಿಯಿಂದ ದೂರವಾಗಿರುವ ಆಶಾ ಕಂದಾರ ಅವರಿಗೆ ಇಬ್ಬರು ಮಕ್ಕಳನ್ನು ಸಾಕುವ ಜವಾಬ್ದಾರಿ ಇದೆ. ಬೇರೆ ವಿಧಿ ಇಲ್ಲದೇ ಜೋಧ್‌ಪುರ ಮಹಾನಗರ ಪಾಲಿಕೆಯಲ್ಲಿ ಪೌರಕಾರ್ಮಿಕರಾಗಿ ಕಾರ್ಯನಿರ್ವಹಿಸುತ್ತಿದ್ದರು.

ADVERTISEMENT

ಸಮಾಜದಲ್ಲಿ ತಾವು ಎದುರಿಸಿದ ತಾರತಮ್ಯವು ಅಂತಿಮವಾಗಿ ತಮ್ಮ ಆಲೋಚನೆಗಳನ್ನು ಬದಲಿಸಿಕೊಳ್ಳಲು ಪ್ರೇರಣೆಯಾಯಿತು ಎಂದು ಟೌಮ್ಸ್‌ ನೌಗೆ ನೀಡಿದ ಸಂದರ್ಶನದಲ್ಲಿ ಆಶಾ ಹೇಳಿದ್ದಾರೆ.

'ನಾನು ಐಎಎಸ್ ಅಧಿಕಾರಿಯಾಗಲು ಬಯಸಿದ್ದೆ. ಆದರೆ, ವಯಸ್ಸಿಗೆ ಸಂಬಂಧಿಸಿದ ನಿರ್ಬಂಧಗಳಿಂದಾಗಿ ಪರೀಕ್ಷೆಗಳಿಗೆ ಹಾಜರಾಗಲು ಸಾಧ್ಯವಿಲ್ಲ' ಎಂದೂ ಆಶಾ ತಿಳಿಸಿದ್ದಾರೆ.

'ಈಗ ಪಡೆದಿರುವ ಹೊಸ ಹುದ್ದೆಯ ಮೂಲಕ ಉತ್ತಮ ಸಮಾಜವನ್ನು ನಿರ್ಮಿಸಲು ಶ್ರಮಿಸುತ್ತೇನೆ. ಅಗತ್ಯವಿರುವ ಜನರಿಗೆ ನಾನು ಸಹಾಯ ಮಾಡುತ್ತೇನೆ' ಎಂದು ಆಶಾ ಕಂದಾರ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.