ADVERTISEMENT

ಕೃತಕ ಬುದ್ಧಿಮತ್ತೆ ಬಳಸಿ ರೆಸ್ಯೂಮೆ ತಯಾರಿಸುವುದು ಹೇಗೆ?

ಮನಸ್ವಿ
Published 5 ಸೆಪ್ಟೆಂಬರ್ 2021, 19:30 IST
Last Updated 5 ಸೆಪ್ಟೆಂಬರ್ 2021, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಪದವಿ ವಿದ್ಯಾಭ್ಯಾಸ ಮುಗಿದ ತಕ್ಷಣ ಕೆಲವರು ಉನ್ನತ ಶಿಕ್ಷಣದತ್ತ ಸಾಗಿದರೆ ಇನ್ನೂ ಹಲವರು ಉದ್ಯೋಗ ಹುಡುಕುವಲ್ಲಿ ನಿರತರಾಗಿರುತ್ತಾರೆ. ಉದ್ಯೋಗ ಹುಡುಕಲು ಚಿಂತನೆ ನಡೆಸುವವರು ಮೊದಲು ಗಮನ ಹರಿಸಬೇಕಾದದ್ದು ರೆಸ್ಯೂಮೆ ಬಗ್ಗೆ. ರೆಸ್ಯೂಮೆ ಎಂಬುದು ಉದ್ಯೋಗಕ್ಕೆ ಮೊದಲ ಮೆಟ್ಟಿಲು ಕೂಡ ಹೌದು. ಹಿಂದೆಲ್ಲಾ ರೆಸ್ಯೂಮೆಯನ್ನು ಕೈಯಲ್ಲಿ ಬರೆದು ತಯಾರಿಸುತ್ತಿದ್ದರು. ಆಮೇಲೆ ರೆಸ್ಯೂಮೆ ಸ್ವರೂಪವನ್ನು ಟೈಪ್‌ ಮಾಡಿ ಪ್ರಿಂಟ್ ತೆಗೆಯುವ ಅಥವಾ ರೆಸ್ಯೂಮೆಯನ್ನು ಮೇಲ್‌ ಮಾಡುವ ‍‍ಪ‍ರಿಪಾಠವಿತ್ತು. ಆದರೆ ಈಗ ಕಾಲ ಬದಲಾಗಿದೆ. ಈಗ ಆರ್ಟಿಫಿಶಿಯಲ್ ಇಂಟಿಲಿಜೆನ್ಸ್ (ಕೃತಕ ಬುದ್ಧಿಮತ್ತೆ) ಆಧರಿಸಿದ ರೆಸ್ಯೂಮೆಗಳಿಗೆ ಒತ್ತು ನೀಡುತ್ತಿವೆ ಕಂಪನಿಗಳು. ಇತ್ತೀಚೆಗೆ ಕಂಪನಿಗಳು ಸಂದರ್ಶನ ಹಾಗೂ ನೇಮಕಾತಿ ಪ್ರಕ್ರಿಯೆಯನ್ನು ಸುವ್ಯವಸ್ಥಿತಗೊಳಿಸಲು ಕೃತಕ ಬುದ್ಧಿಮತ್ತೆ (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್‌) ವಿಧಾನವನ್ನು ಹೆಚ್ಚು ಅವಲಂಬಿಸಿವೆ.

ಐಟಿ ಕಂಪನಿಗಳಲ್ಲಿ ಉದ್ಯೋಗಕ್ಕೆ ಸೇರಲು ಬಯಸುವವರು ಎಐ ಆಧಾರಿತ ರೆಸ್ಯೂಮೆಯ ಮೇಲೆ ಹೆಚ್ಚು ಗಮನ ಹರಿಸಬೇಕು. ರೆಸ್ಯೂಮೆ ಆಯ್ಕೆಯಾದರಷ್ಟೇ ಮುಂದಿನ ಹಂತದ ನೇಮಕಾತಿ ಪ್ರಕ್ರಿಯೆಗಳಿಗೆ ಆಯ್ಕೆ ಆಗಲು ಸಾಧ್ಯ. ಆ ಕಾರಣಕ್ಕೆ ಕಂಪನಿಗಳು ಎಐ ರೆಸ್ಯೂಮೆ ಸ್ಕ್ರೀನಿಂಗ್ ಟೂಲ್‌ಗಳ ಮೇಲೆ ಹೆಚ್ಚು ಗಮನ ಹರಿಸುತ್ತವೆ. ಮೊದಲೆಲ್ಲಾ ರೆಸ್ಯೂಮೆಗಳನ್ನು ಮಾನವ ಸಂಪನ್ಮೂಲ ವಿಭಾಗದವರು ಓದಿ ಆಯ್ಕೆ ಮಾಡುವ ಪ್ರಕ್ರಿಯೆ ಇತ್ತು. ಆದರೆ ಈಗ ರೆಸ್ಯೂಮೆಗಳನ್ನು ಸ್ಕ್ಯಾನ್ ಮಾಡುವ ಮೂಲಕ ಅದರಲ್ಲಿ ಇರುವ ಅಂಶಗಳನ್ನು ಪರಿಶೀಲನೆ ಮಾಡಲಾಗುತ್ತದೆ. ಹಲವು ಕಂಪನಿಗಳಲ್ಲಿ ಸ್ವಯಂಚಾಲಿತ ಫಿಲ್ಟರ್‌ಗಳು ಜಾರಿಯಲ್ಲಿವೆ. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ ಈಗ ಹೆಚ್ಚು ಪ್ರಚಲಿತದಲ್ಲಿರುವ ಕಾರಣ ರೆಸ್ಯೂಮೆಯಲ್ಲಿ ಕೃತಕ ಬುದ್ಧಿಮತ್ತೆಯನ್ನು ಸೇರಿಸುವುದು ಅವಶ್ಯವಾಗಿದೆ.

ಕೃತಕ ಬುದ್ಧಿಮತ್ತೆ ಆಧರಿತ ರೆಸ್ಯೂಮೆ ಎಂದರೆ ಉದ್ಯೋಗಕ್ಕೆ ಸೇರ ಬಯಸುವ ಅಭ್ಯರ್ಥಿಗಳು ಕಂಪನಿ ವೆಬ್‌ಸೈಟ್‌ಗೆ ಭೇಟಿ ನೀಡಿ ಅಲ್ಲಿನ ಉದ್ಯೋಗ ಪೋರ್ಟಲ್‌ನಲ್ಲಿ ಕೇಳಿರುವ ವಿವರಗಳನ್ನು ಭರ್ತಿ ಮಾಡಬೇಕು. ಅದರಲ್ಲಿ ವೈಯಕ್ತಿಕ ವಿವರ, ವಿದ್ಯಾಭ್ಯಾಸ, ಅನುಭವ ಮುಂತಾದ ಎಲ್ಲಾ ವಿವರಗಳನ್ನು ತುಂಬಿಸಲು ಕಾಲಂಗಳಿರುತ್ತವೆ. ಕೊನೆಯಲ್ಲಿ ರೆಸ್ಯೂಮೆಯನ್ನು ಅಪ್‌ಲೋಡ್‌ ಮಾಡುವ ಅವಕಾಶ ಇರುತ್ತದೆ.

ADVERTISEMENT

ಹೀಗಿರಲಿ ರೆಸ್ಯೂಮೆ:ರೆಸ್ಯೂಮೆಯಲ್ಲಿ ವಿವಿಧ ವಿನ್ಯಾಸ, ಬಣ್ಣ ಸಂಯೋಜನೆ ಹಾಗೂ ವಿವರವಾದ ಮಾಹಿತಿ ನೀಡುವ ಬದಲು ಸರಳ ಹಾಗೂ ನೇರವಾದ ಮಾಹಿತಿ ಇರುವಂತೆ ತಯಾರಿಸಬೇಕು. ಮೊದಲು ಅತಿ ನೀರಸವಾದ ರೆಸ್ಯೂಮೆಯನ್ನು ರಚಿಸಲಾಗುತ್ತಿತ್ತು. ಆದರೆ ಈಗ ಚಿಕ್ಕದಾಗಿ, ಆಕರ್ಷಕವಾಗಿ ತಯಾರಿಸಿದ ರೆಸ್ಯೂಮೆಗಳು ಸಂದರ್ಶಕರ ಗಮನ ಸೆಳೆಯುತ್ತವೆ.

ರೆಸ್ಯೂಮೆಯಲ್ಲಿ ವಿವರಗಳನ್ನು ಸೇರಿಸಲು ಸಣ್ಣದಾಗಿ, ವಿವರಣಾತ್ಮಕ ವಾಕ್ಯಗಳನ್ನು ಬಳಸಿ.

ನಿಮ್ಮ ಕೌಶಲಗಳನ್ನು ಸ್ಪಷ್ಟವಾಗಿ ನಮೂದಿಸಿ.

ನಿಮ್ಮ ಕಲಿಕೆಯ ವಿವರ, ಅದಕ್ಕೆ ಸಂಬಂಧಿಸಿದ ಸರ್ಟಿಫಿಕೇಟ್‌ಗಳು ಹಾಗೂ ನಿಮ್ಮ ಅನುಭವಗಳ ಕುರಿತು ವಿವರವಾಗಿ ತಿಳಿಸಿ.

ರೆಸ್ಯೂಮೆಯನ್ನು ಅಲ್ಗಾರಿದಮ್‌ ನಿರ್ಧರಿಸುವುದರಿಂದ ನಮ್ಮ ಕೌಶಲಗಳನ್ನು ಅದೇ ನಿರ್ಧರಿಸಿ ರೆಸ್ಯೂಮೆಗೆ ಅಂಕವನ್ನು ನೀಡುತ್ತದೆ. ಶೇ 90 ರಿಂದ 100 ಅಂಕಗಳಿಸಿದ ರೆಸ್ಯೂಮೆ ಕಂಪನಿಗೆ ಸೂಕ್ತವಾಗಿದೆ ಎಂದು ಅರ್ಥ.

ರೆಸ್ಯೂಮೆಯ ಬಹು ಆವೃತ್ತಿಯನ್ನು ರಚಿಸಿ

ಕೃತಕ ಬುದ್ಧಿಮತ್ತೆಗಾಗಿ ರೆಸ್ಯೂಮೆಯನ್ನು ಒಮ್ಮೆ ಸುವ್ಯವಸ್ಥಿತಗೊಳಿಸಿದ್ದರೆ ಇದು ಅಲ್ಗಾರಿದಮ್ ಆಧಾರದ ಮೇಲೆ ರಚಿಸಲಾಗಿರುತ್ತದೆ. ಹಾಗಾಗಿ ಮಾನವ ಸಂಪನ್ಮೂಲ ವ್ಯಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ಇನ್ನೊಂದು ಆವೃತ್ತಿಯ ರೆಸ್ಯೂಮೆಯನ್ನು ಕೂಡ ತಯಾರಿಸಿ ಇರಿಸಿಕೊಳ್ಳಿ.

ಎಐ ಮೂಲಕ ಮರುಪರೀಕ್ಷೆ ನಡೆಸಿ

ಜಾಬ್‌ ಸೈಟ್‌ಗಳಲ್ಲಿ ಕೃತಕ ಬುದ್ಧಿಮತ್ತೆ ಅಥವಾ ಎಐ ಮೂಲಕ ಕೆಲಸಕ್ಕೆ ಅರ್ಜಿ ಸಲ್ಲಿಸಿದ್ದರೆ ಅದನ್ನು ಇನ್ನೊಮ್ಮೆ ಪರಿಶೀಲಿಸಿ ಅಪ್‌ಲೋಡ್ ಮಾಡಿ. ಕೃತಕ ಬುದ್ಧಿಮತ್ತೆ ವಿಧಾನದ ಮೂಲಕ ಅರ್ಜಿ ಸಲ್ಲಿಸಿದ್ದರೆ ನಿಮ್ಮ ರೆಸ್ಯೂಮೆ ಹಾಗೂ ವಿವರಕ್ಕೆ ಸಂಬಂಧಿಸಿ ಅಂಕಗಳನ್ನು ಕೂಡ ಅದು ನೀಡಿರು ತ್ತದೆ. ಇದು ಎಟಿಎಸ್ ಅನ್ನು ಉತ್ತಮಗೊಳಿಸಲು ನಿಮಗೆ ಸಹಾಯ ಮಾಡುತ್ತದೆ. ಅಲ್ಗಾರಿದಮ್ ಬಳಕೆದಾರರಿಗೆ ವರ್ಗಾಯಿಸಬಹುದಾದ ಕೌಶಲಗಳನ್ನು ಗುರುತಿಸಲು ಸಹಾಯ ಮಾಡುತ್ತದೆ. ಒಂದು ವೇಳೆ ನಿಮ್ಮ ಕೌಶಲ ಉದ್ಯೋಗದಾತರಿಗೆ ಹೊಂದಾಣಿಕೆಯಾಗದೇ ಇದ್ದರೆ ಇದು ನಿಮಗೆ ಅಪ್‌ಲೋಡ್ ಮಾಡುವ ಹಂತದಲ್ಲಿ ತಿಳಿಸುತ್ತದೆ.

ಪ್ರಯತ್ನದಿಂದ ಪರಿಪೂರ್ಣತೆ

ಕೃತಕ ಬುದ್ಧಿಮತ್ತೆ ರೆಸ್ಯೂಮೆಗೆ ಮಾತ್ರವಲ್ಲ, ಸಂದರ್ಶನ ತಯಾರಿಯಲ್ಲೂ ನಮಗೆ ಸಹಾಯ ಮಾಡುತ್ತದೆ. ವರ್ಚುವಲ್‌ ಸಂದರ್ಶನ ಮಾಡುವ ಕಂಪನಿಗಳಲ್ಲಿ ಕೃತಕ ಬುದ್ಧಿಮತ್ತೆಯನ್ನು ಬಳಸಿಕೊಳ್ಳಲಾಗುತ್ತದೆ. ಹಾಗಾಗಿ ಸಂದರ್ಶನ ತಯಾರಿಯಲ್ಲೂ ಈ ವಿಧಾನವನ್ನು ಅನುಸರಿಸಿ.‌

ರೆಸ್ಯೂಮೆಯಲ್ಲಿ ಸೇರಿಸಬಹುದಾದ ಕೃತಕ ಬುದ್ಧಿಮತ್ತೆ ಕೌಶಲಗಳ ವಿಧಗಳು ಹೀಗಿವೆ

  • ಅಪ್ಲೈಡ್ ಮ್ಯಾಥಮ್ಯಾಟಿಕ್ಸ್‌: ಪ್ರೊಬೆಬಲಿಟಿ ಹಾಗೂ ಸ್ಟ್ಯಾಟಿಸ್ಟಿಕ್ಸ್‌
  • ಪ್ರೋಗ್ರಾಮಿಂಗ್ ಲ್ಯಾಂಗ್ವೇಜ್‌: ಸಿ++, ಜಾವಾ, ಪೈಥಾನ್
  • ಯೂನಿಕ್ಸ್ ಟೂಲ್‌ಸೆಟ್ ಕೌಶಲಗಳು
  • ರೋಬೊಟಿಕ್ಸ್‌
  • ಕಂಪ್ಯೂಟರ್ ವಿಷನ್‌
  • ಮಷೀನ್ ಲರ್ನಿಂಗ್‌: ಅಲ್ಗಾರಿದಮ್‌ ಹಾಗೂ ಲ್ರೈಬ್ರರೀಸ್‌
  • ಡೇಟಾ ಸೈನ್ಸ್
  • ಡೈನಾಮಿಕ್ ಪ್ರೋಗ್ರಾಮಿಂಗ್‌
  • ಕ್ರಿಟಿಕಲ್ ಥಿಕಿಂಗ್‌
  • ಕ್ರಿಯೇಟಿವಿಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.