ADVERTISEMENT

ನೆಗೆಟಿವ್‌ ಅಂಕ ಕಡಿಮೆ ಮಾಡುವುದು ಹೇಗೆ?

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2021, 17:05 IST
Last Updated 1 ಸೆಪ್ಟೆಂಬರ್ 2021, 17:05 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಈಗಂತೂ ಹೆಚ್ಚು ಕಡಿಮೆ ಪ್ರತಿಯೊಂದು ಸ್ಪರ್ಧಾತ್ಮಕ ಪರೀಕ್ಷೆಯಲ್ಲೂ ಋಣಾತ್ಮಕ (ನೆಗೆಟಿವ್‌) ಅಂಕ ನೀಡುವುದು ಸಾಮಾನ್ಯವಾಗಿದೆ. ನೆಗೆಟಿವ್‌ ಅಂಕವೆಂದರೆ ತಪ್ಪಾದ ಉತ್ತರವನ್ನು ಗುರುತಿಸಿದರೆ ಅಂಕಗಳನ್ನು ಕಳೆಯುವ ಪ್ರಕ್ರಿಯೆ. ಹೀಗಾಗಿ ಇಂತಹ ನೆಗೆಟಿವ್‌ ಅಂಕಗಳಿಂದ ಪಾರಾಗುವುದು ಅಥವಾ ಕಡಿಮೆ ಮಾಡಿಕೊಳ್ಳುವುದು ಹೇಗೆ ಎಂಬುದು ಪ್ರತಿಯೊಬ್ಬ ಸ್ಪರ್ಧಾರ್ಥಿಯ ಎದುರಿಗಿರುವ ಪ್ರಶ್ನೆ.

ಪರೀಕ್ಷೆಯಲ್ಲಿ ಈ ನೆಗೆಟಿವ್‌ ಅಂಕಗಳನ್ನು ಕಡಿಮೆ ಮಾಡಲು ಸಾಕಷ್ಟು ಉಪಾಯಗಳಿವೆ. ಈ ಮಾರ್ಗಗಳನ್ನು ಕೇವಲ ಸ್ಪರ್ಧಾರ್ಥಿಗಳು ಮಾತ್ರವಲ್ಲ, ಶಾಲೆ– ಕಾಲೇಜು ವಿದ್ಯಾರ್ಥಿಗಳು ಮತ್ತು ಕೆಲವು ಖಾಸಗಿ ಕಂಪನಿಗಳ ನೇಮಕಾತಿ ಪರೀಕ್ಷೆಯಲ್ಲೂ ಅಭ್ಯರ್ಥಿಗಳು ಅನುಸರಿಸಬಹುದು.

ಸಾಮಾನ್ಯವಾಗಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ವೇಗವಾಗಿ ಉತ್ತರಗಳನ್ನು ಗುರುತಿಸಬೇಕಾಗುತ್ತದೆ. ಈ ಅಭ್ಯಾಸ ಮಾಡಿಕೊಳ್ಳದಿದ್ದರೆ ತಪ್ಪಾಗಿ ಗುರುತಿಸಿ ಅಂಕ ಕಳೆದುಕೊಳ್ಳಬೇಕಾಗುತ್ತದೆ. ಪ್ರತಿಯೊಂದು ತಪ್ಪು ಉತ್ತರಕ್ಕೆ 0.25 ಅಂಕ ಕಡಿತಗೊಂಡು, ನಾಲ್ಕು ಉತ್ತರಗಳು ತಪ್ಪಾದರೆ ಒಂದು ಅಂಕ ಕಳೆದುಕೊಳ್ಳಬೇಕಾಗುತ್ತದೆ.

ADVERTISEMENT

ಉತ್ತರ ಗೊತ್ತಿರದಿದ್ದರೆ ಊಹಿಸಿಕೊಂಡು ತಪ್ಪಾಗಿ ಗುರುತಿಸಲು ಹೋಗಬೇಡಿ. ಖಚಿತವಾಗಿ ನಿಮಗೆ ತಿಳಿದಿದ್ದರೆ ಮಾತ್ರ ಉತ್ತರಿಸಿ.

ಉತ್ತರವನ್ನು ಚೆನ್ನಾಗಿ ಆದರೆ ವೇಗವಾಗಿ ವಿಶ್ಲೇಷಿಸಿ. ಅದು ಸರಿ ಇದೆಯೇ ಎಂದು ಅಷ್ಟೇ ಶೀಘ್ರವಾಗಿ ಖಚಿತಪಡಿಸಿಕೊಳ್ಳಿ. ನಂತರ ಸರಿಯುತ್ತರ ಗುರುತಿಸಿ. ಇದನ್ನು ಪದೇ ಪದೇ ಅಭ್ಯಾಸ ಮಾಡುವುದರಿಂದ ಮನನ ಮಾಡಿಕೊಳ್ಳಬಹುದು.

ಯಾವ ಪ್ರಶ್ನೆಗೆ ಎಷ್ಟು ಸಮಯ ಮೀಸಲಿಡಬೇಕು ಎಂಬುದನ್ನು ಕೂಡ ಅಭ್ಯಾಸ ಮಾಡಿಕೊಂಡರೆ ಸೂಕ್ತ. ಇದರಿಂದ ನೀವು ಸಮಯ ನಿರ್ವಹಣೆಯ ಜೊತೆಗೆ ತಪ್ಪಾಗಿ ಉತ್ತರಿಸುವುದನ್ನು ತಪ್ಪಿಸಬಹುದು.

ಮಾನಸಿಕವಾಗಿ ಸಿದ್ಧರಿರಬೇಕು. ಅಂದರೆ ಪರೀಕ್ಷೆಯೆಂದು ಒತ್ತಡಕ್ಕೆ ಒಳಗಾಗದೆ ಆರಾಮವಾಗಿರುವುದನ್ನು ಧ್ಯಾನ, ಪ್ರಾಣಾಯಾಮದ ಮೂಲಕ ಮೊದಲೇ ಅಭ್ಯಾಸ ಮಾಡಿಕೊಳ್ಳಿ. ಶಾಂತಚಿತ್ತರಾಗಿ ಪರೀಕ್ಷೆಗೆ ಉತ್ತರಿಸಲು ಶುರು ಮಾಡಿದರೆ ತಪ್ಪು ಉತ್ತರ ಗುರುತಿಸಿ ಗೊಂದಲಕ್ಕೆ ಒಳಗಾಗುವುದನ್ನು ತಪ್ಪಿಸಬಹುದು. ಸರಿಯಾದ ಉತ್ತರದತ್ತ ಗಮನ ನೀಡಲು ಇದರಿಂದ ಸಾಧ್ಯ.

ಶುರುವಿನಲ್ಲಿಯೇ ವೇಗವಾಗಿ ಉತ್ತರಿಸಲು ಹೋಗಬೇಡಿ. ಇದರಿಂದ ಗಲಿಬಿಲಿಗೆ ಒಳಗಾಗುವ ಸಂಭವ ಅಧಿಕ.

ಮುಖ್ಯವಾದ ಶಬ್ದಗಳು, ಫಾರ್ಮುಲಾ ಮತ್ತು ಕೆಲವು ತಂತ್ರಗಳನ್ನು ಚೆನ್ನಾಗಿ ನೆನಪಿಟ್ಟುಕೊಳ್ಳಿ. ಇದು ಸತತ ಅಭ್ಯಾಸದಿಂದ ಮಾತ್ರ ಸಾಧ್ಯ. ಪರೀಕ್ಷೆಯಲ್ಲಿ ಇವುಗಳೆಲ್ಲ ನೆರವಿಗೆ ಬರುತ್ತವೆ. ಇದರಿಂದ ತಪ್ಪು ಮಾಡುವುದರಿಂದ ಪಾರಾಗಬಹುದು.

ಎಲ್ಲ ಪ್ರಶ್ನೆಗಳನ್ನೂ ಚೆನ್ನಾಗಿ ಓದಿದ ನಂತರ ಉತ್ತರಿಸಲು ಶುರು ಮಾಡಿ. ಪ್ರಶ್ನೆಪತ್ರಿಕೆ ಕೈಗೆ ಸಿಕ್ಕ ಕೂಡಲೇ ಉತ್ತರಿಸಲು ಗಡಿಬಿಡಿ ಮಾಡಿದರೆ ತಪ್ಪಾಗುವ ಸಾಧ್ಯತೆ ಹೆಚ್ಚು. ಹಾಗೆಯೇ ಇಡೀ ಪ್ರಶ್ನೆ ಪತ್ರಿಕೆಯಲ್ಲಿರುವ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸುವುದೂ ಸರಿಯಲ್ಲ. ಇದರಿಂದ ತಪ್ಪು ಉತ್ತರವನ್ನು ಗುರುತಿಸುತ್ತಾ ಹೋಗುತ್ತೀರಿ. ಅದರ ಬದಲು ಗೊತ್ತಿರುವ ಉತ್ತರಗಳನ್ನಷ್ಟೇ ಗುರುತಿಸಿದರೆ ಅಂಕಗಳು ಹೆಚ್ಚು ಬರುತ್ತವೆ.

ಕೊನೆಯ ಕ್ಷಣದಲ್ಲಿ ಉತ್ತರಿಸಲು ಹೋಗಬೇಡಿ. ಇದರಿಂದ ಆತುರಕ್ಕೊಳಗಾಗಿ ತಪ್ಪಾಗಿ ಉತ್ತರ ಬರೆಯಬಹುದು. ಈ ಸಮಯವನ್ನು ಈಗಾಗಲೇ ಗುರುತಿಸಿರುವ ಉತ್ತರಗಳನ್ನು ಇನ್ನೊಮ್ಮೆ ಪರಿಶೀಲಿಸಲು ಬಳಸಿ.

ಉತ್ತರಗಳನ್ನು ಕಚ್ಚಾ ಹಾಳೆಯ ಮೇಲೆ ಒಮ್ಮೆ ಬರೆದು ಸರಿಯೆಂದು ಅನಿಸಿದರೆ ಉತ್ತರ ಪತ್ರಿಕೆಯಲ್ಲಿ ಗುರುತಿಸಿ. ಸರಿಯಾದ ಉತ್ತರ ಗೊತ್ತಿರದಿದ್ದರೆ ಹೆಚ್ಚು ಚಿಂತಿಸದೆ ಮುಂದಿನ ಪ್ರಶ್ನೆಯತ್ತ ಗಮನ ಹರಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.