ADVERTISEMENT

ಶಂಕರ ಬೆಳ್ಳುಬ್ಬಿ ಸಂದರ್ಶನ: 'ಪರೀಕ್ಷೆ ತಯಾರಿಗೆ ವರ್ಷದ ವೇಳಾಪಟ್ಟಿಯೂ ಇರಲಿ'

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 14 ಜುಲೈ 2021, 19:39 IST
Last Updated 14 ಜುಲೈ 2021, 19:39 IST
ಶಂಕರ ಬೆಳ್ಳುಬ್ಬಿ
ಶಂಕರ ಬೆಳ್ಳುಬ್ಬಿ   

ವಿಜಯಪುರದ, ಬಸವನ ಬಾಗೇವಾಡಿ ತಾಲ್ಲೂಕಿನ ಹಳ್ಳದಗೆಣ್ಣೂರು ಗ್ರಾಮದವರಾದ ಶಂಕರ ಬೆಳ್ಳುಬ್ಬಿ, ಕೆಪಿಎಸ್‌ಸಿ ಪರೀಕ್ಷೆಯಲ್ಲಿ 2014ರ ಬ್ಯಾಚ್‌ನಲ್ಲಿ ಆಯ್ಕೆ ಆದ ಅಧಿಕಾರಿ. ಅವರು ಪ್ರಸ್ತುತ ಬಾಗಲಕೋಟೆಯಲ್ಲಿ ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಸಹಾಯಕ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರಾಥಮಿಕ ಶಾಲಾ ಶಿಕ್ಷಕರಾಗಿ ವೃತ್ತಿಜೀವನ ಆರಂಭಿಸಿದ ಅವರು ಉನ್ನತ ಅಧಿಕಾರಿಯಾಗಿದ್ದು, ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತಮ್ಮ ಯಶಸ್ಸಿನ ಅನುಭವವನ್ನು ಇಲ್ಲಿ ಬಿಚ್ಚಿಟ್ಟಿದ್ದಾರೆ.

**

ಶೈಕ್ಷಣಿಕ ಜೀವನ ಹೇಗಿತ್ತು?
ಪ್ರಾಥಮಿಕ ಶಿಕ್ಷಣ ಹಳ್ಳದ ಗೆಣ್ಣೂರ, ಪ್ರೌಢ ಶಿಕ್ಷಣ ರೋಣಿಹಾಳ, ಪಿಯುಸಿ ವಿಜಯಪುರ, ಡಿ.ಇಡಿ ಹುನಗುಂದ, ಪದವಿ ಕರ್ನಾಟಕ ವಿಶ್ವವಿದ್ಯಾಲಯ, ಸ್ನಾತಕೋತ್ತರ ಪದವಿ ಕುವೆಂಪು ವಿಶ್ವವಿದ್ಯಾಲಯ.

ADVERTISEMENT

ಕೌಟುಂಬಿಕ ಹಿನ್ನೆಲೆ ಏನು?
ವಾಸಿಸಲು ಮನೆ ಇಲ್ಲದೇ, ಹೊಲದಲ್ಲಿ ಗುಡಿಸಲು ಕಟ್ಟಿಕೊಂಡು, ಚಿಕ್ಕ ಚಹಾದ ಅಂಗಡಿ ಇಟ್ಟುಕೊಂಡಿದ್ದ ತಂದೆ, ಕೂಲಿ ಕೆಲಸ ಮಾಡುತ್ತಿದ್ದ ತಾಯಿಯ ಮಗ ನಾನು. ಮನೆ ನಿರ್ವಹಣೆಗೆ ನೆರವಾಗಲು ಮನೆಗಳಿಗೆ ಪತ್ರಿಕೆ ಹಾಕುತ್ತಿದ್ದೆ, ಅಂಗಡಿಗಳಲ್ಲಿ ಕೆಲಸ ಮಾಡುತ್ತಿದ್ದೆ. ಬಾಲ್ಯದಿಂದಲೇ ಓದುವ ಹುಚ್ಚು. ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ಸಾಧನೆ ಮಾಡಿದ ನಂತರ ಸಂಬಂಧಿಕರ ನೆರವಿನಿಂದ ಪಿಯುಸಿ, ಡಿ.ಇಡಿ ಓದಿ ಶಿಕ್ಷಕ ಹುದ್ದೆ ಗಿಟ್ಟಿಸಿಕೊಂಡೆ. ನಂತರ, ಸ್ಪರ್ಧಾತ್ಮಕ ಪರೀಕ್ಷೆಗಳತ್ತ ಗಮನಹರಿಸಿ. ಮೊದಲ ಪ್ರಯತ್ನದಲ್ಲಿಯೇ ಕೆಎಎಸ್‌ ಪಾಸಾದೆ.

ಸ್ಪರ್ಧಾತ್ಮಕ ಪರೀಕ್ಷೆಗಳತ್ತ ಒಲವು ಬೆಳೆದಿದ್ದು ಹೇಗೆ?
ಬಡತನವೇ ನನಗೆ ಉನ್ನತ ಹುದ್ದೆ ಗಿಟ್ಟಿಸಲು ಪ್ರೇರಕವಾಗಿದೆ. ಬಡ ಪ್ರತಿಭೆಗಳಿಗೆ ನೆರವಾಗಲೆಂದೇ ಅಧ್ಯಯನ ಮಾಡಿದ್ದರ ಫಲವಾಗಿ ಇಂದು ಉನ್ನತ ಹುದ್ದೆಯಲ್ಲಿದ್ದೇನೆ. ಮೊದಲಿನಿಂದಲೂ ದಿನಪತ್ರಿಕೆ, ಸ್ಪರ್ಧಾತ್ಮಕ ಪತ್ರಿಕೆಗಳನ್ನು ಓದುವ ಹುಚ್ಚಿತ್ತು. 2007 ರಲ್ಲಿ ಎಸ್‌.ಎಂ.ಎಸ್‌ ಮೂಲಕ ಪ್ರಚಲಿತ ವಿದ್ಯಮಾನ ಹಾಗೂ ಸಾಮಾನ್ಯ ಜ್ಞಾನದ ವಿಷಯಗಳನ್ನು ಸ್ನೇಹಿತರೊಂದಿಗೆ ಹಂಚಿಕೊಳ್ಳುತ್ತಿದ್ದೆ. ಸ್ನೇಹಿತರು ಇದನ್ನು ಮುಂದುವರಿಸುವಂತೆ, ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವಂತೆ ಸಲಹೆ ನೀಡಿದರು. ಇದುವೇ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಆಸಕ್ತಿ ಮೂಡಿಸಿತು.

ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ಹೇಗಿತ್ತು?
ಎಸ್‌.ಎಂ.ಎಸ್‌ ಮತ್ತು ಟ್ವಿಟರ್‌ ಮೂಲಕ ಇತರರೊಂದಿಗೆ ಜ್ಞಾನ ಹಂಚಿಕೊಳ್ಳುತ್ತ ನಾನೂ ಅದನ್ನು ಮನನ ಮಾಡಿಕೊಳ್ಳುತ್ತಿದ್ದೆ. ಇದರಿಂದ ಕೆಎಎಸ್‌ ಪೂರ್ವಭಾವಿ ಪರೀಕ್ಷೆ ಪಾಸಾಗಲು ಸಾಧ್ಯವಾಯಿತು. ಮುಖ್ಯ ಪರೀಕ್ಷೆ ತಯಾರಿಗೆಂದು ಸಮಾನ ಮನಸ್ಕ ಸ್ನೇಹಿತರೊಡನೆ ಗುಂಪು ಅಧ್ಯಯನ ಮಾಡಿದೆ. ನಿತ್ಯ 30 ರಿಂದ 50 ಪುಟಗಳಷ್ಟು ಪ್ರಬಂಧಗಳನ್ನು ಬರೆದು ರೂಢಿಸಿಕೊಂಡೆ. ನನ್ನದೇ ಆದ ನೋಟ್ಸ್‌ ಸಿದ್ಧಪಡಿಸಿಕೊಂಡು ಅದನ್ನೇ ಮತ್ತೆ ಮತ್ತೆ ಓದುತ್ತಿದ್ದೆ. ಇದರೊಟ್ಟಿಗೆ ವಾಟ್ಸ್‌ಆ್ಯಪ್‌ನ 50 ಗುಂಪುಗಳ ಮೂಲಕವೂ ನಿತ್ಯ ಜ್ಞಾನ ಹಂಚಿಕೆ ಮುಂದುವರಿಸಿದ್ದೆ. ಇದಲ್ಲದೆ, ಪಠ್ಯಕ್ರಮಕ್ಕೆ ಅನುಗುಣವಾದ ವ್ಯವಸ್ಥಿತ ಓದು, ಹಳೆಯ ಪ್ರಶ್ನೆಪತ್ರಿಕೆಗಳ ಅವಲೋಕನ, ಸ್ಪರ್ಧಾತ್ಮಕ ತರಬೇತಿ ಕೇಂದ್ರಗಳಲ್ಲಿನ ಮಾರ್ಗದರ್ಶನ ಕೆಎಎಸ್ ಮುಖ್ಯ ಪರೀಕ್ಷೆಯಲ್ಲೂ ಯಶ ಕಾಣಲು ನೆರವಾದವು.

ಸಂದರ್ಶನದ ಅನುಭವವೇನು?
ಸಂದರ್ಶನದಲ್ಲಿ ನಮ್ಮ ವ್ಯಕ್ತಿತ್ವ ಪರೀಕ್ಷೆ ನಡೆಯುತ್ತದೆ. ಅಲ್ಲದೇ ರಾಜ್ಯ-ರಾಷ್ಟ್ರದ ಪ್ರಚಲಿತ ವಿದ್ಯಮಾನಗಳ ಕುರಿತು ಅರಿವು, ವೃತ್ತಿ ಬದ್ಧತೆ- ನೈತಿಕತೆ ಕುರಿತು ಸ್ಪಷ್ಟ ನಿಲುವು ಇರಬೇಕಾಗುತ್ತದೆ. ಇವೆಲ್ಲ ವಿಷಯಗಳು ಸೇರಿ ಒಟ್ಟಾರೆ 55 ನಿಮಿಷದ ಸಂದರ್ಶನದಲ್ಲಿ ನನಗೆ 88 ಪ್ರಶ್ನೆಗಳನ್ನು ಕೇಳಲಾಗಿತ್ತು.

ಸ್ಪರ್ಧಾರ್ಥಿಗಳಿಗೆ ನಿಮ್ಮ ಸಲಹೆ ಏನು?
ಓದು ಯೋಜನಾಬದ್ಧವಾಗಿ ಇರಬೇಕು. ಪರೀಕ್ಷೆಗೆ ವರ್ಷದ, ತಿಂಗಳ, ವಾರದ, ದಿನದ ಓದಿನ ವೇಳಾಪಟ್ಟಿ ನಿಮ್ಮಲ್ಲಿರಬೇಕು. ಅಂದು ಓದಬೇಕು ಅಂದುಕೊಂಡಿದ್ದನ್ನು ಓದಿ ಮುಗಿಸಲೇಬೇಕು. ನೆಪ ಹೇಳುವುದನ್ನು ಬಿಡಬೇಕು. ವ್ಯವಸ್ಥೆಯನ್ನು ಹಳಿಯುವ ಬದಲು, ವ್ಯವಸ್ಥೆಯನ್ನು ಬದಲಿಸುವ ಮಟ್ಟಿಗೆ ನೀವು ಓದಿಕೊಳ್ಳಬೇಕು. ನಿಮ್ಮ ಮನೆ-ಸ್ಥಿತಿ ಉತ್ತಮವಾಗಿರದಿದ್ದರೂ ಮನ-ಸ್ಥಿತಿ ಉತ್ತಮವಾಗಿರಬೇಕು.

ಕೋವಿಡ್‌ ಲಾಕ್‌ಡೌನ್‌ ಸನ್ನಿವೇಶವನ್ನು ಸ್ಪರ್ಧಾರ್ಥಿಗಳು ಧನಾತ್ಮಕವಾಗಿ ತೆಗೆದುಕೊಳ್ಳಬೇಕು. ಹೊರಗೆ ಹೋಗದ ಸನ್ನಿವೇಶವಿರುವಾಗ ನಿಮ್ಮೊಳಗೆ ನೀವು ಪ್ರವೇಶಿಸಬೇಕು. ನಿಮ್ಮ ಸಾಮರ್ಥ್ಯವೇನೆಂದು ಅರಿಯಬೇಕು. ನಿಮ್ಮ ಇತಿಮಿತಿಗಳನ್ನು ಸರಿಪಡಿಸಿಕೊಂಡು ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಸಿದ್ಧರಾಗಬೇಕು.

ಏನಿದು ‘ಎಸ್.ಆರ್.‌ ವರ್ಲ್ಡ್’?
ಆರಂಭದಲ್ಲಿ ಎಸ್‌.ಎಂ.ಎಸ್‌, ಟ್ವಿಟರ್‌, ವಾಟ್ಸ್‌ಆ್ಯಪ್‌ನ ಮೂಲಕ ಆರಂಭಿಸಿದ ಜ್ಞಾನ ಹಂಚಿಕೆಯನ್ನು ಇಂದು ‘ಎಸ್.ಆರ್.‌ ವರ್ಲ್ಡ್’ ಟೆಲಿಗ್ರಾಂ ಗ್ರೂಪ್‌ಗೆ ವಿಸ್ತರಿಸಿದ್ದೇನೆ. ಈ ಗುಂಪಿಗೆ 2.25 ಲಕ್ಷ ಫಾಲೋವರ್ಸ್‌ ಇದ್ದು, ಆ ವೇದಿಕೆಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯ ಸಿದ್ಧತೆಗೆ ಬೇಕಾದ ವಿಷಯವಸ್ತುವನ್ನು ಉಚಿತವಾಗಿ ಹಂಚಲಾಗುತ್ತದೆ. ಈ ಗ್ರೂಪ್ ಸೇರಲು https://t.me/ SRWORLDShankarBellubbiSir ಈ ಲಿಂಕ್‌ ಕ್ಲಿಕ್‌ ಮಾಡಬಹುದು. ಮಾಹಿತಿಗೆ: 9538781570.

(ಲೇಖಕರು: ನಿರ್ದೇಶಕರು, ಸ್ಲೇಟ್‌ ಸ್ಪರ್ಧಾತ್ಮಕ ಪರೀಕ್ಷೆಗಳ ಮಾರ್ಗದರ್ಶನ ಕೇಂದ್ರ, ಧಾರವಾಡ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.