ADVERTISEMENT

ಬ್ಯಾಂಕ್‌ ಆಫ್‌ ಇಂಡಿಯಾದಲ್ಲಿ ಪ್ರೊಬೇಷನರಿ ಆಫೀಸರ್ಸ್‌ ಹುದ್ದೆಗಳು

ಆರ್.ಕೆ ಬಾಲಚಂದ್ರ
Published 1 ಮಾರ್ಚ್ 2023, 19:45 IST
Last Updated 1 ಮಾರ್ಚ್ 2023, 19:45 IST
ಬ್ಯಾಂಕಿಂಗ್ ಪರೀಕ್ಷೆ
ಬ್ಯಾಂಕಿಂಗ್ ಪರೀಕ್ಷೆ   

ಸಾಮಾನ್ಯವಾಗಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪ್ರಿಲಿಮ್ಸ್ (ಪೂರ್ವ ಸಿದ್ಧತಾ ಪರೀಕ್ಷೆ) ಮತ್ತು ಮುಖ್ಯ ಪರೀಕ್ಷೆ, ನಂತರ ಸಂದರ್ಶನವಿರುತ್ತದೆ. ಪ್ರಿಲಿಮ್ಸ್‌ ಪಾಸು ಮಾಡಿದವರು, ಮುಖ್ಯ ಪರೀಕ್ಷೆಗೆ ಅರ್ಹರಾಗುತ್ತಾರೆ ಎಂಬ ನಿಯಮಗಳಿವೆ.

ಆದರೆ ಬ್ಯಾಂಕ್ ಆಫ್ ಇಂಡಿಯಾದ(ಬಿಒಐ) ಪ್ರೊಬೇಷನರಿ ಆಫೀಸರ‍್ಸ್‌ ಹುದ್ದೆಗಳ ನೇಮಕಾತಿ ವಿಷಯದಲ್ಲಿ ಹಾಗಿಲ್ಲ. ಇಲ್ಲಿ ಕೇವಲ ಒಂದು ಪರೀಕ್ಷೆ ಬರೆದರೆ ಸಾಕು. ಈ ಪರೀಕ್ಷೆಯೊಂದಕ್ಕೆ ತಯಾರಿನಡೆಸುತ್ತಾ, ವಿಷಯ ಗಳನ್ನು ಮನದಟ್ಟು ಮಾಡಿಕೊಂಡರೆ ಸಾಕು, ಯಶಸ್ಸು ನಿಮ್ಮದಾಗುತ್ತದೆ.

ಕಳೆದ ಸಂಚಿಕೆಯಲ್ಲಿ ಇದೇ ಬಿಒಐ, ಪ್ರೊಬೇಷನರಿ ಅಧಿಕಾರಿ ಹುದ್ದೆಗಳ ಎರಡು ಗ್ರೇಡ್‌ಗಳಿಗೆ ಅಧಿಕಾರಿಗಳನ್ನು ನೇಮಿಸಿಕೊಳ್ಳಲು ಅರ್ಜಿ ಆಹ್ವಾನಿಸಿದ್ದು, ಅರ್ಜಿ ಸಲ್ಲಿಕೆ ಪ್ರಕ್ರಿಯೆ ಸೇರಿದಂತೆ ಪ್ರಾಥಮಿಕ ವಿವರಗಳನ್ನು ಪ್ರಕಟಿಸಲಾಗಿತ್ತು.

ADVERTISEMENT

ಈ ಸಂಚಿಕೆಯಲ್ಲಿ ಅರ್ಜಿ ಸಲ್ಲಿಕೆ ನಂತರ ನೇಮಕಾತಿಗಾಗಿ ನಡೆಯುವ ಪರೀಕ್ಷೆಗಳು, ಅದರಲ್ಲಿರುವ ಪ್ರಶ್ನೆ ಪತ್ರಿಕೆಗಳು ಮತ್ತು ಅಂತಿಮವಾಗಿ ಅಭ್ಯರ್ಥಿಯನ್ನು ಆಯ್ಕೆ ಮಾಡುವ ವಿಧಾನಗಳ ಬಗ್ಗೆ ತಿಳಿಯೋಣ.

ನೇಮಕಾತಿ ಪ್ರಕ್ರಿಯೆ ಹೇಗೆ ?

ನೇಮಕಾತಿ ಮೂರು ಹಂತಗಳಲ್ಲಿ ನಡೆಯಲಿದೆ. ಆನ್‌ಲೈನ್ ಪರೀಕ್ಷೆ. ನಂತರ ಗುಂಪು ಚರ್ಚೆ (GD-Group Discussion). ಮೂರನೆಯ ಹಂತ ವೈಯಕ್ತಿಕ ಸಂದರ್ಶನ. ಆನ್‌ಲೈನ್‌ ಪರೀಕ್ಷೆಯಲ್ಲಿ ಅರ್ಹರಾದ ವರನ್ನು ಶಾರ್ಟ್‌ಲಿಸ್ಟ್ ಮಾಡಲಾಗುವುದು. ಅವರು ಪಡೆದ ಅಂಕಗಳ ಆಧಾರದ ಮೇಲೆ ಗುಂಪು ಚರ್ಚೆ ಮತ್ತು ವೈಯಕ್ತಿಕ ಸಂದರ್ಶನಕ್ಕೆ ಆಹ್ವಾನಿಸಲಾಗುವುದು.

I ಆನ್‌ಲೈನ್‌ ಪರೀಕ್ಷೆ ವಿವರ:

ಇದು ಮೂರೂವರೆ ಗಂಟೆ ಅವಧಿಯ ಪರೀಕ್ಷೆಯಾಗಿದೆ. 225 ಅಂಕಗಳಿಗೆ 157 ಪ್ರಶ್ನೆಗಳನ್ನು ಕೇಳಲಾಗುತ್ತದೆ.

ಅಭ್ಯರ್ಥಿಗಳು ಕಂಪ್ಯೂಟರ್‌ನಲ್ಲಿಯೇ ಉತ್ತರ ಬರೆಯಬೇಕು. ಎಲ್ಲ ಪ್ರಶ್ನೆ ಪತ್ರಿಕೆಗಳು ಇಂಗ್ಲಿಷ್‌ ಅಥವಾ ಹಿಂದಿ ಭಾಷೆಯಲ್ಲಿರಲಿವೆ. ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶವಿಲ್ಲ. ಇಂಗ್ಲಿಷ್ ಭಾಷೆ ಮತ್ತು ಇಂಗ್ಲಿಷ್ ವಿವರಣಾತ್ಮಕ ಪತ್ರಿಕೆಯ ಪರೀಕ್ಷೆಯು ಅರ್ಹತೆ ಸ್ವರೂಪ(Qualifying)ಹೊಂದಿರುತ್ತದೆ. ಈ ಎರಡು ಪತ್ರಿಕೆಗಳಲ್ಲಿ ಪಡೆದ ಅಂಕಗಳನ್ನು ಮೆರಿಟ್ ಪಟ್ಟಿ ಸಿದ್ದಪಡಿಸುವ ವೇಳೆ ಪರಿಗಣಿಸುವುದಿಲ್ಲ.

ಪರೀಕ್ಷೆಗಳಲ್ಲಿ ತಪ್ಪು ಉತ್ತರ ಗುರುತಿಸಿದ್ದಲ್ಲಿ, ಪ್ರತಿ ಪ್ರಶ್ನೆಗೆ ನಿಗದಿ ಪಡಿಸಿದ ಅಂಕದ 0.25 ಅಂಕವನ್ನು ಋಣಾತ್ಮಕ ಮೌಲ್ಯಮಾಪನದ ನಿಯಮದಂತೆ ಗಳಿಸಿದ ಅಂಕದಿಂದ ಕಳೆಯಲಾಗುತ್ತದೆ.

II. ಸಂದರ್ಶನ:

ಆಯ್ಕೆಯಾದ ಎಲ್ಲಾ ಅಭ್ಯರ್ಥಿಗಳ ವೈಯಕ್ತಿಕ ಸಂದರ್ಶನವನ್ನು ಬ್ಯಾಂಕ್ ನಡೆಸುತ್ತದೆ. ಸಂದರ್ಶನಕ್ಕಾಗಿ ನಿಗದಿಪಡಿಸಲಾದ ಒಟ್ಟು ಅಂಕಗಳು 60.

ಅರ್ಹತಾ ಅಂಕಗಳು: ಸಾಮಾನ್ಯ/ಇಡಬ್ಲ್ಯುಎಸ್‌ ವರ್ಗದ ಅಭ್ಯರ್ಥಿಗಳಿಗೆ ಶೇ 40 (ಕನಿಷ್ಠ 24 ಅಂಕಗಳು) ಮತ್ತು ಎಸ್‌ಸಿ/ಎಸ್‌ಟಿ/ಒಬಿಸಿ/ಅಂಗವಿಕಲ ವರ್ಗದ ಅಭ್ಯರ್ಥಿಗಳಿಗೆ ಶೇ 35 (ಕನಿಷ್ಠ 21 ಅಂಕಗಳು)

III. ಗುಂಪು ಚರ್ಚೆ (GD)

ಕೆಲವು ಆಯ್ದ ಕೇಂದ್ರಗಳಲ್ಲಿ ಆನ್‌ಲೈನ್ ಪರೀಕ್ಷೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಗುಂಪು ಚರ್ಚೆ ನಡೆಸಲಾಗುತ್ತದೆ. ಗುಂಪು ಚರ್ಚೆಗೆ ನಿಗದಿಪಡಿಸಲಾದ ಒಟ್ಟು ಅಂಕಗಳು 40. ಕನಿಷ್ಠ ಅರ್ಹತಾ ಅಂಕಗಳು ಸಾಮಾನ್ಯ/ಇಡಬ್ಲ್ಯೂಎಸ್ ವರ್ಗದ ಅಭ್ಯರ್ಥಿಗಳಿಗೆ ಶೇ 40 (ಕನಿಷ್ಠ 16 ಅಂಕಗಳು) ಮತ್ತು ಎಸ್‌ಸಿ/ಎಸ್‌ಟಿ/ಒಬಿಸಿ/ಅಂಗವಿಕಲ ವರ್ಗದ ಅಭ್ಯರ್ಥಿಗಳಿಗೆ ವರ್ಗದ ಅಭ್ಯರ್ಥಿಗಳಿಗೆ ಶೇ 35 (ಕನಿಷ್ಠ 14 ಅಂಕಗಳು).

ಅಂದ ಹಾಗೆ, ಬಿಒಐನಲ್ಲಿ ಆಫೀಸರ್‌ ಹುದ್ದೆಗೆ ನೇಮಕಗೊಳ್ಳುವ ಮುನ್ನ, ಪಿಜಿಡಿಬಿಎಫ್‌ ಕೋರ್ಸ್‌ ಪಾಸ್‌ ಮಾಡುವುದು ಕಡ್ಡಾಯ. ಆ ಕೋರ್ಸ್‌ ಸೇರಲು ₹3.5 ಲಕ್ಷ ಶುಲ್ಕ ಪಾವತಿಸಬೇಕು. ಇದಕ್ಕಾಗಿ ಬ್ಯಾಂಕ್‌ ಸಾಲ–ಸೌಲಭ್ಯ ನೀಡುತ್ತದೆ. ಕೋರ್ಸ್‌ ಪಾಸ್ ಆದ ಮೇಲೂ ಬ್ಯಾಂಕ್‌ನೊಂದಿಗೆ ಇಂತಿಷ್ಟು ವರ್ಷ ಇಲ್ಲಿಯೇ ಕೆಲಸ ಮಾಡುತ್ತೇನೆಂದು ‘ಒಪ್ಪಂದ’ ಮಾಡಿಕೊಳ್ಳಬೇಕು. ಅದು ಹೇಗೆ? – ಮುಂದಿನ ವಾರದ ಸಂಚಿಕೆಯಲ್ಲಿ ಉತ್ತರ ನಿರೀಕ್ಷಿಸಿ.

(ಲೇಖಕರು: ಬ್ಯಾಂಕಿಂಗ್ ಮತ್ತು ವ್ಯಕ್ತಿತ್ವ ವಿಕಸನ ತರಬೇತುದಾರರು ಹಾಗೂ ವೃತ್ತಿ ಮಾರ್ಗದರ್ಶಕರು, ಮಡಿಕೇರಿ)

v

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.