ADVERTISEMENT

ಕ್ವಾಂಟಿಟೇಟಿವ್‌ ಆಪ್ಟಿಟ್ಯೂಡ್‌ ಲೆಕ್ಕ ಈಗ ಬಹು ಸುಲಭ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2021, 20:15 IST
Last Updated 11 ಆಗಸ್ಟ್ 2021, 20:15 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬ್ಯಾಂಕ್‌ ಅಥವಾ ಎಲ್‌ಐಸಿ ಪರೀಕ್ಷೆಗೆ ಕೂರುವ ಸ್ಪರ್ಧಾರ್ಥಿಗಳಿಗೆ ಲೆಕ್ಕ ಮಾಡುವ ವೇಗ ತುಂಬಾ ಮುಖ್ಯ. ಅದರಲ್ಲೂ ಕ್ವಾಂಟಿಟೇಟಿವ್‌ ಆಪ್ಟಿಟ್ಯೂಡ್‌ ಪರೀಕ್ಷೆಯಲ್ಲಿ ವೇಗವಾಗಿ ಲೆಕ್ಕ ಮಾಡುವ ಚಾಕಚಕ್ಯತೆ ಇದ್ದರೆ ಹೆಚ್ಚು ಅಂಕ ಗಳಿಸಬಹುದು. ಏಕೆಂದರೆ ಬ್ಯಾಂಕ್‌ ಪರೀಕ್ಷೆಯಲ್ಲಿ ಅಂದರೆ ಪ್ರೊಬೇಷನರಿ ಆಫೀಸರ್‌, ಕ್ಲರ್ಕ್‌, ಸ್ಪೆಷಲ್‌ ಆಫೀಸರ್‌ ಪರೀಕ್ಷೆಯಲ್ಲಿ ಕ್ವಾಂಟಿಟೇಟಿವ್‌ ಆಪ್ಟಿಟ್ಯೂಡ್‌ ಪರೀಕ್ಷೆಯೇ ಪ್ರಮುಖ ಪಾತ್ರ ವಹಿಸುತ್ತದೆ. ವೇಗವಾಗಿ ಲೆಕ್ಕ ಹಾಕುವ ಸಾಮರ್ಥ್ಯ ಕೇವಲ ಸಮಯವನ್ನು ಉಳಿಸುವುದು ಮಾತ್ರವಲ್ಲ, ಉಳಿದವರಿಗೆ ತೀವ್ರ ಪೈಪೋಟಿ ನೀಡಲೂ ಸಹ ಉಪಯೋಗವಾಗುತ್ತದೆ.

ಲೆಕ್ಕ ಮಾಡುವ ವೇಗವನ್ನು ವೇದಿಕ್‌ ಗಣಿತದ ಮೂಲಕ ಸುಧಾರಿಸಿಕೊಳ್ಳಬಹುದು. ಆದರೆ ಈ ವೇದಿಕ್‌ ಗಣಿತದಲ್ಲಿ ಪರಿಣತಿ ಸಾಧಿಸುವುದು ಸ್ವಲ್ಪ ಕಷ್ಟ ಹಾಗೂ ಸಾಕಷ್ಟು ಸಮಯ ತಗಲುತ್ತದೆ. ಸಾಮಾನ್ಯವಾಗಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಲೆಕ್ಕ ಹಾಕಬೇಕಾದ ಸಂಖ್ಯೆ 2–3 ಡಿಜಿಟ್‌ ಹೊಂದಿದ್ದು, ಸಾಮಾನ್ಯವಾದ ಕ್ರಮ ಅನುಸರಿಸಿದರೆ ಸಾಕು. ಹೀಗಾಗಿ ವೇದಿಕ್‌ ಗಣಿತ ಬರದಿದ್ದರೂ ಅಡ್ಡಿಯಿಲ್ಲ. ಕೆಲವು ಸುಲಭವಾದ ಕ್ರಮಗಳು ಈ ರೀತಿ ಇವೆ.

ಮೂಲಭೂತ ಲೆಕ್ಕಾಚಾರ: ನೀವು ಶೂನ್ಯದಿಂದ ಕಲಿಯಲು ಆರಂಭಿಸಿದರೆ ಪರೀಕ್ಷೆಗೆ ಬೇಕಾದ ಎಲ್ಲವನ್ನೂ ಕಲಿತುಕೊಂಡಂತಾಗುತ್ತದೆ. ಹೀಗಾಗಿ ತಾತ್ಕಾಲಿಕವಾದ ಕ್ರಮಕ್ಕಿಂತ ಮೂಲಭೂತ ಹಂತಗಳನ್ನು ಕಲಿಯಬೇಕಾಗುತ್ತದೆ. ಜೊತೆಗೆ ಪ್ರತಿಯೊಂದನ್ನೂ ಪುನರಾವರ್ತನೆ ಮಾಡಬೇಕು. ಹೀಗಾಗಿ ನಿಮ್ಮ ಶಾಲಾ ದಿನಗಳಲ್ಲಿ ಕಲಿತ ಗಣಿತವನ್ನು ನೆನಪಿಗೆ ತಂದುಕೊಂಡು 30ರವರೆಗಿನ ಟೇಬಲ್‌ ಅನ್ನು ಕಲಿತುಕೊಳ್ಳಿ.

ADVERTISEMENT

ಈ ಟೇಬಲ್‌ ಅನ್ನು ಕಲಿತುಕೊಳ್ಳುವುದು ಕೆಲವರಿಗೆ ಬೇಸರದ ಕೆಲಸ. ಆದರೆ ಇದರ ಹಿಂದಿನ ತಂತ್ರವನ್ನು ಅರ್ಥ ಮಾಡಿಕೊಂಡರೆ ಬಹಳ ಸುಲಭ. ಉತ್ತಮವಾದ ವಿಧಾನವೆಂದರೆ ಇದರ ಪುನರಾವರ್ತನೆ. ಮೊದಲು 20x20 ಚೌಕಗಳುಳ್ಳ ಟೇಬಲ್‌ ಮಾಡಿಕೊಂಡು 1ರಿಂದ 20ರವರೆಗೆ ಗುಣಾಕಾರದಿಂದ ಬಂದ ಗುಣಲಬ್ಧವನ್ನು ಬರೆದುಕೊಳ್ಳಿ. ಇದನ್ನು ಸಂಪೂರ್ಣವಾಗಿ ತುಂಬಿದ ನಂತರ ಎಷ್ಟು ಸಮಯ ಹಿಡಿಯಿತು ಎಂದು ನೆನಪಿಟ್ಟುಕೊಳ್ಳಿ. 10 ನಿಮಿಷಕ್ಕಿಂತ ಕಡಿಮೆ ಅವಧಿಯಲ್ಲಿ ಭರ್ತಿ ಮಾಡುವುದನ್ನು ಕಲಿತರೆ ಕ್ರಮೇಣ ಅಭ್ಯಾಸ ಮಾಡಿ ಮಾಡಿ ಇನ್ನೂ ಕಡಿಮೆ ಸಮಯದಲ್ಲಿ ಇದನ್ನು ಮಾಡಬಹುದು. 10–15 ಸಲ ಮಾಡಿದ ನಂತರ ಇದನ್ನು ಐದು ನಿಮಿಷಕ್ಕಿಂತ ಕಡಿಮೆ ಸಮಯದಲ್ಲಿ ಮಾಡುವುದರಲ್ಲಿ ಯಶಸ್ವಿಯಾಗಬಹುದು. ಇದರಿಂದ ಐಬಿಪಿಎಸ್‌ ಪರೀಕ್ಷೆಯಲ್ಲಿ ಲೆಕ್ಕಗಳನ್ನು ನೀವು ಸುಲಭವಾಗಿ ಬಿಡಿಸಲು ಸಾಧ್ಯ.
ಇದೇ ರೀತಿ 30ರವರೆಗಿನ ವರ್ಗ ಹಾಗೂ ಘನಗಳಿಗೂ ಕೂಡ ನೀವು ಅಭ್ಯಾಸ ಮಾಡಬಹುದು. ಕಲಿಕೆಯ ಸುಲಭ ವಿಧಾನವೆಂದರೆ ಪುನರಾವರ್ತನೆ. ಒಂದು ಎಕ್ಸೆಲ್‌ ಶೀಟ್‌ನಲ್ಲಿ ಬಾಕ್ಸ್‌ ಹಾಕಿ ಅದರ ಪ್ರಿಂಟ್‌ಔಟ್‌ ತೆಗೆದುಕೊಂಡು ತುಂಬುತ್ತ ಹೋಗಬಹುದು.

ಹಾಗೆಯೇ 15ರವರೆಗಿನ ಭಾಗಾಂಶ ಅಥವಾ ಫ್ರ್ಯಾಕ್ಷನ್‌ ಹಾಗೂ ಅದರ ಶೇಕಡಾವಾರನ್ನು ಕಲಿತುಕೊಳ್ಳಿ. ಕ್ವಾಂಟಿಟೇಟಿವ್‌ ಆಪ್ಟಿಟ್ಯೂಡ್‌ನಲ್ಲಿ ಶೇಕಡಾವಾರು, ಲಾಭಾಂಶ, ನಷ್ಟ, ಸರಾಸರಿ ಮೊದಲಾದ ಎಲ್ಲಾ ವಿಷಯಗಳಲ್ಲೂ ಈ ಫ್ರ್ಯಾಕ್ಷನ್‌ ಬಳಕೆಯಾಗುತ್ತದೆ. ಉದಾಹರಣೆಗೆ ಶೇ 50 ಅಂದರೆ 1/2, 0.5, ಶೇ 12.5 ಅಂದರೆ 1/8, 0.125. ಅನುಪಾತ ಹಾಗೂ ಶೇಕಡಾವಾರು ಕುರಿತ ನಿಮ್ಮ ಶಾಲಾ ಗಣಿತದ ಪಾಠವನ್ನು ಮತ್ತೊಮ್ಮೆ ಓದಿಕೊಂಡು ಮನನ ಮಾಡಿ. ಕಂಠಪಾಠ ಮಾಡಿದರೂ ಆದೀತು. ನೀವು ಗಣಿತದಲ್ಲಿ ನಿಧಾನವಾಗಿ ಲೆಕ್ಕ ಹಾಕುತ್ತ ಕೂತರೆ ಅಥವಾ ಭಾಗಾಂಶ ಗೊತ್ತಿರದಿದ್ದರೆ ಅಂಕಿ–ಅಂಶ ವಿಶ್ಲೇಷಣೆ (ಡೇಟಾ ಇಂಟರ್‌ಪ್ರಿಟೇಶನ್‌) ಕುರಿತ ಪ್ರಶ್ನೆಗಳಿಗೆ ಬೇಗ ಉತ್ತರಿಸುವುದು ಕಷ್ಟ. ಹೀಗಾಗಿ ವರ್ಗ, ಘನ, ವರ್ಗಮೂಲ, ಭಾಗಾಂಶದ ಬಗ್ಗೆ ನಿಮ್ಮ ಜ್ಞಾನವನ್ನು ಸುಧಾರಿಸಿಕೊಳ್ಳುವುದು ಮುಖ್ಯ.

ಹಾಗೆಯೇ ಎಲ್ಲ ಲೆಕ್ಕಗಳನ್ನೂ ಮನಸ್ಸಿನಲ್ಲೇ ಮಾಡಿಕೊಂಡು ನಂತರ ಕಷ್ಟವೆನಿಸಿದರೆ ಪೇಪರ್‌ ಮತ್ತು ಪೆನ್‌ ಬಳಸಿ ಮಾಡಿ. ಮೇಲೆ ತಿಳಿಸಿದ ಅಭ್ಯಾಸವನ್ನು 15–20 ದಿನಗಳ ಕಾಲ ಮಾಡಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.