ADVERTISEMENT

ಕೆಮಿಕಲ್ ಎಂಜಿನಿಯರಿಂಗ್‌ ವ್ಯಾಪ್ತಿ ಅಗಾಧ- ಅವಕಾಶ ಹೇರಳ

​ಪ್ರಜಾವಾಣಿ ವಾರ್ತೆ
Published 18 ಜುಲೈ 2021, 19:30 IST
Last Updated 18 ಜುಲೈ 2021, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ವಿದ್ಯಾರ್ಥಿಯ ಭವಿಷ್ಯದ ಬೆಳವಣಿಗೆಗೆ ನೆರವು ನೀಡುವ ಕೆಲವು ವೃತ್ತಿಗಳ ಪಟ್ಟಿಯಲ್ಲಿ ಎಂಜಿನಿಯರಿಂಗ್ ಕೂಡ ಪ್ರಮುಖ ಸ್ಥಾನದಲ್ಲಿದ್ದು ಆಕಾಂಕ್ಷಿಗಳ ಗಮನ ಸೆಳೆಯುತ್ತಿರುವುದು ಗೊತ್ತೇ ಇದೆ. ನೀವು ಪ್ರಪಂಚದಲ್ಲಿ ಎಲ್ಲಿಗೇ ಹೋದರೂ ಅಲ್ಲಿ ಎಂಜಿನಿಯರ್‌ಗಳಿಗೆ ನಿರಂತರವಾಗಿ ಬೇಡಿಕೆ ಇರುವುದನ್ನು ನೋಡುತ್ತೀರಿ. ಹಾಗೆಯೇ ಇಂದು ನಾವು ಏನನ್ನು ನೋಡಿದರೂ ಅಲ್ಲಿ ಪ್ರತಿಯೊಂದಕ್ಕೂ ಎಂಜಿನಿಯರಿಂಗ್ ಮೂಲಾಧಾರವಾಗಿರುತ್ತದೆ. ಅದು ವಾಹನಗಳು ಇರಬಹುದು, ಔಷಧ, ಇಂಧನ, ತಂತ್ರಜ್ಞಾನ ಉಪಕರಣಗಳು ಅಥವಾ ಇನ್ನಾವುದೇ ಆಗಿರಲಿ, ಅಲ್ಲಿ ಎಂಜಿನಿಯರಿಂಗ್ ಇದ್ದೇ ಇರುತ್ತದೆ.

ಈ ಪೈಕಿ ಕೆಮಿಕಲ್ ಎಂಜಿನಿಯರಿಂಗ್ ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಗಮನವನ್ನು ಸೆಳೆಯುತ್ತಿದೆ ಮತ್ತು ಇದಕ್ಕೆ ವಿಪುಲ ಅವಕಾಶಗಳು ಲಭ್ಯವಾಗುತ್ತಿವೆ. ಕೆಮಿಕಲ್ ಎಂಜಿನಿಯರಿಂಗ್‌ ಬಗ್ಗೆ ವಿದ್ಯಾರ್ಥಿಗಳಲ್ಲಿ ಬೇಡಿಕೆ ಹೆಚ್ಚಾಗಿರುವುದಕ್ಕೆ ಉದ್ಯಮ ಮತ್ತು ತಂತ್ರಜ್ಞಾನದ ಏರಿಕೆ ಪ್ರಮುಖ ಕಾರಣವಾಗಿದೆ. ಕೆಮಿಕಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದವರು ಜೈವಿಕ ತಂತ್ರಜ್ಞಾನ ಮತ್ತು ಏರೋನಾಟಿಕ್ಸ್ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗ ಮಾಡಬಹುದು.

ಕೆಮಿಕಲ್ ಎಂಜಿನಿಯರಿಂಗ್‌ನ ಉದ್ದೇಶವೇನು?

ADVERTISEMENT

ತಾಂತ್ರಿಕ ಸಮಸ್ಯೆಗಳನ್ನು ಪತ್ತೆ ಮಾಡಲು ಹಾಗೂ ಪರಿಹರಿಸುವ ನಿಟ್ಟಿನಲ್ಲಿ ರಾಸಾಯನಿಕಗಳು ಮತ್ತು ಅವುಗಳ ಪ್ರಕ್ರಿಯೆಗಳ ವಿನ್ಯಾಸ, ಅಭಿವೃದ್ಧಿಯನ್ನು ಈ ವಿಭಾಗವು ಒಳಗೊಂಡಿದೆ. ಜೈವಿಕ ತಂತ್ರಜ್ಞಾನ (ಬಯೋಟೆಕ್ನಾಲಾಜಿ), ನ್ಯಾನೋ ಟೆಕ್ನಾಲಾಜಿ, ಔಷಧ ವಿಜ್ಞಾನ, ಖನಿಜಗಳ ಶುದ್ಧೀಕರಣ, ಪೆಟ್ರೋಲಿಯಂ ಸಂಸ್ಕರಣ ಮತ್ತು ಇತರ ವಿಸ್ತಾರವಾದ ವಿಷಯಗಳನ್ನು ಈ ಎಂಜಿನಿಯರಿಂಗ್ ಒಳಗೊಂಡಿರುತ್ತದೆ. ಕೆಮಿಕಲ್ ಎಂಜಿನಿಯರಿಂಗ್ ವಿಭಾಗವು ಎಂಜಿನಿಯರಿಂಗ್ ಮತ್ತು ರಸಾಯನಶಾಸ್ತ್ರದ ಜ್ಞಾನವನ್ನು ಸಂಯೋಜಿಸಿ ಕಚ್ಚಾ ವಸ್ತುಗಳನ್ನು ಮಾರುಕಟ್ಟೆ ಉತ್ಪನ್ನಗಳನ್ನಾಗಿ ಪರಿವರ್ತಿಸಲು ಅಥವಾ ರಾಸಾಯನಿಕಗಳನ್ನು ಉತ್ಪಾದನೆ ಮಾಡಲು ಮತ್ತು ಅದಕ್ಕೆ ಸಂಬಂಧಿಸಿದ ಉಪ-ಉತ್ಪನ್ನಗಳನ್ನು ಸಂಯೋಜನೆ ಮಾಡಲು ನೆರವಾಗುತ್ತದೆ.
ಈ ವಿಭಾಗದ ತಂತ್ರಜ್ಞಾನಗಳನ್ನು ಈಗ ಸಾವಯವ ಮತ್ತು ಜೈವಿಕವಲ್ಲದ ಕೈಗಾರಿಕೆಗಳಲ್ಲಿ ಬಳಸಲಾಗುತ್ತದೆ. ಹೀಗಾಗಿ ಇದು ರಾಸಾಯನಿಕ ಕಾರ್ಖಾನೆಗಳಿಗೆ ಮಾತ್ರ ಸೀಮಿತವಾಗಿಲ್ಲ. ಇದರ ಪರಿಣಾಮ ಕೆಮಿಕಲ್ ಎಂಜಿನಿಯರಿಂಗ್ ಪದವೀಧರರಿಗೆ ಹೆಚ್ಚಿನ ಬೇಡಿಕೆ ಇದೆ. ಅದರಲ್ಲೂ ವಿಶೇಷವಾಗಿ ಪೆಟ್ರೋಲಿಯಂ ಮತ್ತು ಔಷಧೀಯ ಕ್ಷೇತ್ರಗಳಲ್ಲಿ ಬೇಡಿಕೆ ಹೆಚ್ಚಿದೆ.

ಕೆಮಿಕಲ್ ಎಂಜಿನಿಯರ್‌ ಉದ್ಯೋಗವೇನು?

ಉತ್ಪನ್ನಗಳನ್ನು ವಿನ್ಯಾಸ ಮಾಡುವುದು ಮತ್ತು ಸೃಷ್ಟಿ ಮಾಡುವ ಮೂಲಕ ಹೊಸ ರಾಸಾಯನಿಕ ಪ್ರಕ್ರಿಯೆಗಳನ್ನು ಸೃಷ್ಟಿ ಮಾಡುವುದು.

ಉತ್ಪಾದನಾ ಘಟಕ ಮತ್ತು ಉಪಕರಣಗಳ ನಿರ್ಮಾಣ, ಅಳವಡಿಕೆ ಮತ್ತು ಮೇಲ್ವಿಚಾರಣೆ.

ಕೈಗಾರಿಕಾ ಘಟಕಗಳ ಕಾರ್ಯಾಚರಣೆಗಳನ್ನು ಸಂಘಟಿಸುವುದು ಮತ್ತು ನಿರ್ವಹಣೆ ಮಾಡುವುದು.

ಸುಧಾರಿತ ಮತ್ತು ವರ್ಧಿತ ಉತ್ಪಾದನಾ ಪ್ರಕ್ರಿಯೆಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ.

ಕೈಗಾರಿಕಾ ಉತ್ಪಾದನೆಗೆ ನವೀಕರಿಸಿದ ಮತ್ತು ಉನ್ನತ ದರ್ಜೆಯ ರಾಸಾಯನಿಕ ವಸ್ತುಗಳು.

ಆಹಾರ ಮತ್ತು ಕೃಷಿ ಉತ್ಪನ್ನಗಳ ಸಂಸ್ಕರಣೆ, ಸೌಂದರ್ಯವರ್ಧಕಗಳು ಹಾಗೂ ಖನಿಜ ಆಧಾರಿತ ಕೈಗಾರಿಕೆಗಳು ಇದಕ್ಕೆ ಉದಾಹರಣೆಗಳಾಗಿವೆ.

ರಾಸಾಯನಿಕ ಉದ್ಯಮದಲ್ಲಿ ಕಾರ್ಮಿಕರಿಗೆ ಸುರಕ್ಷತಾ ಮುನ್ನೆಚ್ಚರಿಕೆಗಳನ್ನು ಒದಗಿಸುವುದು.

ಕೆಮಿಕಲ್ ಎಂಜಿನಿಯರಿಂಗ್‌ನ ವ್ಯಾಪ್ತಿ

ಕೆಮಿಕಲ್ ಎಂಜಿನಿಯರಿಂಗ್ ದೊಡ್ಡ ಪ್ರಮಾಣದ ರಾಸಾಯನಿಕಗಳ ತಯಾರಿಕೆಗೆ ಸಂಬಂಧಿಸಿದ ಕ್ಷೇತ್ರವಾಗಿ ಆರಂಭವಾಯಿತು. ಕ್ರಮೇಣ ಇದಕ್ಕೆ ವ್ಯಾಪಕ ಶ್ರೇಣಿಯ ಕ್ಷೇತ್ರಗಳು ಹಾಗೂ ವ್ಯವಹಾರಗಳಲ್ಲಿ ಆ ವಿಭಾಗಕ್ಕೆ ಸಂಬಂಧಿಸಿದ ಇತರ ವಿಷಯಗಳು ಸೇರ್ಪಡೆಗೊಳ್ಳುತ್ತ ವಿಸ್ತಾರಗೊಂಡಿದೆ. ಈ ವಿಭಾಗವು ಜವಳಿ, ಪ್ಲಾಸ್ಟಿಕ್, ಆಹಾರ, ಪೆಟ್ರೋಲಿಯಂ, ಔಷಧಿಗಳು ಮತ್ತು ಇನ್ನೂ ಹೆಚ್ಚಿನ ಕ್ಷೇತ್ರಗಳು ಒಳಗೊಂಡಂತೆ ವ್ಯಾಪಕವಾದ ಕೈಗಾರಿಕೆಗಳನ್ನು ಹೊಂದಿರುವ ವಿಶಾಲವಾದ ಕ್ಷೇತ್ರವಾಗಿದೆ. ಈ ಉತ್ಪಾದನಾ ಮತ್ತು ಸೇವಾ ಕ್ಷೇತ್ರಗಳು ಉದ್ಯೋಗಿಗಳನ್ನು ದೊಡ್ಡ ಸಂಖ್ಯೆಯಲ್ಲಿ ನೇಮಕ ಮಾಡಿಕೊಳ್ಳುವುದರಿಂದ ಕೆಮಿಕಲ್‌ ಎಂಜಿನಿಯರಿಂಗ್‌ ಪದವೀಧರರಿಗೆ ಸಾಕಷ್ಟು ಅವಕಾಶಗಳಿವೆ. ಹಾಗೆಯೇ ವಿದೇಶಗಳಲ್ಲೂ ಸಾಕಷ್ಟು ವೃತ್ತಿ ಅವಕಾಶಗಳಿವೆ

(ಲೇಖಕ: ಪ್ರೊಫೆಸರ್ ಮತ್ತು ಚೇರ್‌ಪರ್ಸನ್, ಕೆಮಿಕಲ್ ಎಂಜಿನಿಯರಿಂಗ್, ಅಮೃತಾ ಸ್ಕೂಲ್ ಆಫ್ ಎಂಜಿನಿಯರಿಂಗ್)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.