ADVERTISEMENT

ಶಿಕ್ಷಣ ಪ್ರಶ್ನೋತ್ತರ: ಸಿಎ ಕೋರ್ಸ್‌ ಕಲಿಯುವುದು ಹೇಗೆ?

ಪ್ರದೀಪ್ ಕುಮಾರ್ ವಿ.
Published 19 ಮಾರ್ಚ್ 2023, 13:12 IST
Last Updated 19 ಮಾರ್ಚ್ 2023, 13:12 IST
ಪ್ರದೀಪ್ ಕುಮಾರ್ ವಿ.
ಪ್ರದೀಪ್ ಕುಮಾರ್ ವಿ.   

1. ನಾನು 3ನೇ ಸೆಮಿಸ್ಟರ್ ಬಿಕಾಂ ಮಾಡುತ್ತಿದ್ದೇನೆ. ಮುಂದೆ, ಚಾರ್ಟೆಡ್‌ ಅಕೌಂಟೆಂಟ್‌(ಸಿಎ) ಆಗಬೇಕೆಂದುಕೊಂಡಿದ್ದೇನೆ. ದಯವಿಟ್ಟು ಅಧ್ಯಯನ ಸಾಮಗ್ರಿ, ಕೋಚಿಂಗ್ ಕೇಂದ್ರಗಳು, ಪರೀಕ್ಷೆ ಇತ್ಯಾದಿಗಳ ಬಗ್ಗೆ ತಿಳಿಸಿ.

ಹೆಸರು, ಊರು ತಿಳಿಸಿಲ್ಲ.

ಬಿಕಾಂ ಪದವಿಯಲ್ಲಿ ಶೇ 55 ಅಂಕಗಳನ್ನು ಪಡೆದರೆ, ಸಿಎ– ಇಂಟರ್‌ಮೀಡಿಯಟ್ ಕೋರ್ಸ್‌ಗೆ ನೇರವಾಗಿ ನೋಂದಾಯಿಸಿಕೊಳ್ಳಬಹುದು. ಜೊತೆಗೆ, 3 ವರ್ಷದ ಆರ್ಟಿಕಲ್ಡ್‌ ತರಬೇತಿ ಪಡೆಯಲು, ಚಾರ್ಟರ್ಡ್ ಅಕೌಂಟೆಂಟ್ ಸಂಸ್ಥೆಗಳನ್ನು ಸೇರಬೇಕು. ಇಂಟರ್‌ಮೀಡಿಯೆಟ್ ನಂತರ ಫೈನಲ್‌ಗೆ ನೋಂದಾಯಿಸಿ, ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು. ಫೈನಲ್ ಪರೀಕ್ಷೆಗೆ ಮುಂಚೆ ನಾಲ್ಕು ವಾರಗಳ ಐಟಿ ಮತ್ತು ಸಾಫ್ಟ್‌ಸ್ಕಿಲ್ ಕೋರ್ಸ್ ಮಾಡಿರಬೇಕು. ಪರಿಶ್ರಮ, ಬದ್ಧತೆ, ಆತ್ಮವಿಶ್ವಾಸ ಮತ್ತು ಸಮಯದ ನಿರ್ವಹಣೆಯಿಂದ ಸಿಎ ಕೋರ್ಸ್ ಮಾಡಬಹುದು; ಕೋಚಿಂಗ್ ಕಡ್ಡಾಯವಲ್ಲ. ಮೇಲಾಗಿ, ಚಾರ್ಟರ್ಡ್ ಅಕೌಂಟೆಂಟ್ ಇನ್‌ಸ್ಟಿಟ್ಯೂಟ್‌ವತಿಯಿಂದ ನೀಡುವ ಕೋಚಿಂಗ್ ಮತ್ತು ಮಾರ್ಗದರ್ಶನದ ಸೌಲಭ್ಯವನ್ನು ನೀವು ಉಪಯೋಗಿಸಬಹುದು. ಒಟ್ಟಾರೆ, ಬಿಕಾಂ ನಂತರ ಸಿಎ ಕೋರ್ಸ್ ಮಾಡಲು ಕನಿಷ್ಠ 3-4 ವರ್ಷ ಬೇಕಾಗುತ್ತದೆ. ಹೆಚ್ಚಿನ ಮಾರ್ಗದರ್ಶನಕ್ಕಾಗಿ ಈ ವಿಡಿಯೋಗಳನ್ನು ವೀಕ್ಷಿಸಿ: https://icai.org/ , https://www.youtube.com/watch?v=RyNVWuRVjbA

ADVERTISEMENT

2. ನಾನು 2020 ರಲ್ಲಿ ಬಿ.ಎಸ್ಸಿ ಪದವಿ ಪೂರ್ಣಗೊಳಿಸಿದೆ. ಎರಡು ವರ್ಷಗಳಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದೇನೆ. ಈಗ ದೂರಶಿಕ್ಷಣದ ಮೂಲಕ ನವೀಕರಿಸಬಹುದಾದ ಇಂಧನ ಮತ್ತು ಪರಿಸರ ವಿಜ್ಞಾನ (ರಿನೀವಬಲ್ ಎನರ್ಜಿ ಮತ್ತು ಎನ್ವಿರಾನ್‌ಮೆಂಟಲ್ ಸೈನ್ಸ್) ವಿಷಯದಲ್ಡಿ ಎಂ.ಎಸ್ಸಿ ಮಾಡಬೇಕೆಂಬ ಬಯಕೆ ಇದೆ. ಭವಿಷ್ಯದಲ್ಲಿ ಈ ಕ್ಷೇತ್ರಕ್ಕೆ ಉತ್ತಮ ಉದ್ಯೋಗಾವಕಾಶಗಳಿವೆಯೇ? ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಅಥವಾ ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯಗಳಲ್ಲಿ, ಯಾವುದು ಉತ್ತಮ ಎಂದು ಸೂಚಿಸಿ?

ಹೆಸರು, ಊರು ತಿಳಿಸಿಲ್ಲ.

ನವೀಕರಿಸಬಹುದಾದ ಇಂಧನ ಮತ್ತು ಪರಿಸರ ವಿಜ್ಞಾನ, ಅಭಿವೃದ್ಧಿಯ ಮುಂಚೂಣಿಯಲ್ಲಿರುವ ಕ್ಷೇತ್ರ. ನಮ್ಮ ಅಭಿಪ್ರಾಯದಂತೆ, ಈ ಕ್ಷೇತ್ರದಲ್ಲಿ ಪರಿಣತಿ ಹೊಂದಿರುವ ಮಾನವ ಸಂಪನ್ಮೂಲಗಳು, ಬೇಡಿಕೆಗಿಂತ ಕಡಿಮೆಯಿದೆ. ಎಂ.ಎಸ್ಸಿ ನಂತರ ಜಲವಿದ್ಯುತ್, ಸೌರಶಕ್ತಿ, ಜಿಯೋಥರ್ಮಲ್, ಪವನಶಕ್ತಿ ಉದ್ಯಮಗಳು, ವಿದ್ಯುತ್‌ಚಾಲಿತ ವಾಹನಗಳು, ತ್ಯಾಜ್ಯ ವಸ್ತುಗಳ ಮರುಬಳಕೆ ಉದ್ಯಮಗಳು, ಪರಿಸರ ಪ್ರವಾಸೋದ್ಯಮ ಮುಂತಾದ ಕ್ಷೇತ್ರಗಳಲ್ಲಿ ವೃತ್ತಿಜೀವನವನ್ನು ರೂಪಿಸಿಕೊಳ್ಳಬಹುದು. ನೀವು ಕೇಳಿರುವ ಎರಡೂ ವಿಶ್ವವಿದ್ಯಾಲಯಗಳು ಪ್ರತಿಷ್ಠಿತ ಸಂಸ್ಥೆಗಳು; ಹಾಗಾಗಿ, ಅಂತಿಮ ಆಯ್ಕೆ ನಿಮ್ಮದು.

3. ’ರಾಷ್ಟ್ರಿಯ ಶಿಕ್ಷಣ ನೀತಿ -2020’(NEP) ಪ್ರಕಾರ ನಾಲ್ಕು ವರ್ಷದ ಪದವಿ ಮುಗಿಸಿದರೆ ನಮಗೆ ಆಗುವ ಉಪಯೋಗಗಳೇನು? ಮುಂದಿನ ಅವಕಾಶಗಳು ಹೇಗಿವೆ?

ನಾಗರಾಜ, ವಿಜಯನಗರ.

ರಾಷ್ಟ್ರಿಯ ಶಿಕ್ಷಣ ನೀತಿ -2020 ಪ್ರಕಾರ, ನಾಲ್ಕು ವರ್ಷದ ಪದವಿ ಕೋರ್ಸ್‌ಗಳು ಈಗ ಅನುಷ್ಠಾನಗೊಳ್ಳುತ್ತಿದೆ. ಅದರಂತೆ, ಈ ಬದಲಾವಣೆಗಳನ್ನು ಗಮನಿಸಿ:

• ವಿದ್ಯಾರ್ಥಿಗಳ ಆಸಕ್ತಿ, ಅಭಿರುಚಿಯಂತೆ ಬಹು-ಶಿಸ್ತೀಯ (ಮಲ್ಟಿ-ಡಿಸಿಪ್ಲಿನರಿ) ವಿಷಯಗಳನ್ನು ಪದವಿ ಕೋರ್ಸಿನಲ್ಲಿ ಆಯ್ಕೆ ಮಾಡಿ ಕೊಳ್ಳಬಹುದು. ಉದಾಹರಣೆಗೆ, ವಿಜ್ಞಾನದ ವಿದ್ಯಾರ್ಥಿಗಳು ವಾಣಿಜ್ಯ/ಕಲಾ ವಿಭಾಗದ ವಿಷಯಗಳನ್ನು ಅಧ್ಯಯನ ಮಾಡಬಹುದು.

• ವಿದ್ಯಾರ್ಥಿಗಳ ಅನುಕೂಲಕ್ಕೆ ತಕ್ಕಂತೆ, ಬಹುಹಂತದ ಪ್ರವೇಶ ಮತ್ತು ನಿರ್ಗಮನದ ಅವಕಾಶವಿದೆ. ಹಾಗಾಗಿ, ಮೊದಲ ವರ್ಷದ ನಂತರ ನಿರ್ಗಮಿಸಿದರೆ ಸರ್ಟಿಫಿಕೆಟ್ ಮತ್ತು ಎರಡು ವರ್ಷದ ನಂತರ ನಿರ್ಗಮಿಸಿದರೆ ಡಿಪ್ಲೊಮಾ ನೀಡಲಾಗುತ್ತದೆ.

• ಈಗಿರುವಂತೆ, ಮೂರು ವರ್ಷದ ನಂತರ ಪದವಿಯನ್ನು ಪಡೆದು ಉನ್ನತ ಶಿಕ್ಷಣವನ್ನು ಮುಂದುವರೆಸಬಹುದು ಅಥವಾ ಉದ್ಯೋಗಾವಕಾಶಗಳನ್ನು ಅರಸಬಹುದು.

• ನಾಲ್ಕನೇ ವರ್ಷದಲ್ಲಿ ವಿಷಯ ಸಂಬಂಧಿತ ಸಂಶೋಧನೆಯನ್ನು ಮಾಡಿದ ನಂತರ ಪದವಿ (ಸಂಶೋಧನೆ) ನೀಡಲಾಗುತ್ತದೆ. ಈ ಪದವಿಯ ನಂತರ ನೇರವಾಗಿ ಪಿ.ಎಚ್‌ಡಿ ಮಾಡಲು ಅರ್ಹತೆ ಸಿಗುತ್ತದೆ.

ಹೆಚ್ಚಿನ ಮಾಹಿತಿಗಾಗಿ ಗಮನಿಸಿ: https://www.education.gov.in/sites/upload_files/mhrd/files/NEP_Final_English_0.pdf

4. ನಾನು ಈಗ ಪ್ರಾಥಮಿಕ ಶಾಲಾ ಶಿಕ್ಷಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಕುವೆಂಪು ವಿಶ್ವವಿದ್ಯಾಲಯದ ದೂರ ಶಿಕ್ಷಣದಲ್ಲಿ ಎಂ.ಎ (ಶಿಕ್ಷಣ) ಪದವಿ ಮುಗಿಸಿದ್ದೇನೆ. ಈ ಪದವಿಯಿಂದ ಮುಂದೆ ಸಿಗಬಹುದಾದ ಹುದ್ದೆಗಳು, ಅವಕಾಶಗಳ ಬಗ್ಗೆ ತಿಳಿಸಬೇಕಾಗಿ ವಿನಂತಿ.

ಹರ್ಷವರ್ಧನ, ಮಾನ್ವಿ.

ವ್ಯಾಪಕವಾದ ಶಿಕ್ಷಣ ವಲಯದಲ್ಲಿ ವೈವಿಧ್ಯಮಯ ಜವಾಬ್ದಾರಿಗಳನ್ನು ನಿರ್ವಹಿಸಲು ಎಂ.ಎ (ಶಿಕ್ಷಣ) ಪದವಿ, ಅಭ್ಯರ್ಥಿಗಳನ್ನು ಸಜ್ಜು ಮಾಡುತ್ತದೆ. ಉದಾಹರಣೆಗೆ, ಕಲಿಕೆ, ಅಧ್ಯಯನ ಮತ್ತು ಬೋಧನೆ, ಪಠ್ಯಕ್ರಮ ಅಭಿವೃದ್ಧಿ, ಶಿಕ್ಷಕರ ಶಿಕ್ಷಣ, ಶಾಲಾಕಾಲೇಜು ನಿರ್ವಹಣೆ, ಶಿಕ್ಷಣ ನೀತಿ ಮತ್ತು ಅನುಷ್ಠಾನ, ಮೌಲ್ಯ ಮಾಪನ ಇತ್ಯಾದಿ. ಆಯಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತಜ್ಞತೆ ಮತ್ತು ವೃತ್ತಿಪರ ಕೌಶಲಗಳನ್ನು ಗಳಿಸಿ, ವೃತ್ತಿ ಜೀವನವನ್ನು ರೂಪಿಸಿಕೊಳ್ಳಬಹುದು.

5. ನಾನು ಬಿಕಾಂ ಪದವಿ ಮುಗಿಸಿದ್ದು, ಅನಿವಾರ್ಯ ಕಾರಣಗಳಿಂದ ವಿದ್ಯಾಭ್ಯಾಸ ಮುಂದುವರಿಸಲು ಆಗಲಿಲ್ಲ, ಈಗ, ಬೇರೆ ಕೆಲಸ ಮಾಡುತ್ತಿದ್ದೇನೆ. ಸಹಾಯಕ ಪ್ರಾಧ್ಯಾಪಕ ಹುದ್ದೆ ಪಡೆಯಬೇಕಾದರೆ ಮುಂದೇನು ಮಾಡಬೇಕು?

ಹೆಸರು, ಊರು ತಿಳಿಸಿಲ್ಲ.

ಸಾಮಾನ್ಯವಾಗಿ, ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಸಂಬಂಧಪಟ್ಟ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಕನಿಷ್ಠ ಶೇ 55 ಅಂಕ ಗಳೊಂದಿಗೆ ಪಡೆದಿರಬೇಕು ಹಾಗೂ ರಾಷ್ಟ್ರೀಯ / ರಾಜ್ಯ ಮಟ್ಟದ ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಪಿ.ಎಚ್‌ಡಿ ಪದವಿಯನ್ನು ಗಳಿಸಿರುವ ಅಭ್ಯರ್ಥಿಗಳಿಗೆ ಅರ್ಹತಾ ಪರೀಕ್ಷೆಯಿಂದ ವಿನಾಯಿತಿ ದೊರಕುತ್ತದೆ. ಈ ಶೈಕ್ಷಣಿಕ ಅರ್ಹತೆಯ ನಂತರ ಸಹಾಯಕ ಪ್ರಾಧ್ಯಾಪಕ ಹುದ್ದೆಯ ನೇಮಕಾತಿಗೆ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಭಾಗವಹಿಸಬೇಕು. ಹೆಚ್ಚಿನ ಮಾಹಿತಿಗಾಗಿ ಗಮನಿಸಿ: https://cetonline.karnataka.gov.in/kea/gfgc2021

6. ನಾನು ಬಿಕಾಂ ಮುಗಿಸಿದ್ದು ಜರ್ನಲಿಸಂ ಮಾಡಬೇಕೆಂದಿರುವೆ. ಇದಕ್ಕೆ ಸರ್ಕಾರಿ ಕಾಲೇಜುಗಳು ಇವೆಯೇ? ಕೋರ್ಸ್ ಅವಧಿ ಎಷ್ಟು? ಸರ್ಕಾರಿ ಸೌಲಭ್ಯ ಪಡೆದು ಈ ಮಾಡಲು ಸಾದ್ಯವೇ?

ಹೆಸರು, ಊರು ತಿಳಿಸಿಲ್ಲ.

ಬಿ.ಕಾಂ ಪದವಿ ನಂತರ ಎರಡು ವರ್ಷದ ಎಂ.ಎ(ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ) ಸ್ನಾತಕೋತ್ತರ ಪದವಿಯನ್ನು ಸರ್ಕಾರಿ/ಖಾಸಗಿ ಕಾಲೇಜು/ವಿಶ್ವವಿದ್ಯಾಲಯಗಳಲ್ಲಿ ಮಾಡಬಹುದು. ಕೇಂದ್ರ ಸರ್ಕಾರ ಮತ್ತು ಕರ್ನಾಟಕ ಸರ್ಕಾರದ ವಿವಿಧ ಕಾರ್ಯಕ್ರಮಗಳ ಅಡಿಯಲ್ಲಿ ವಿಧ್ಯಾರ್ಥಿ ವೇತನಗಳು ಮತ್ತು ಸ್ಕಾಲರ್‌ಷಿಪ್ ಸೌಲಭ್ಯಗಳಿವೆ. ಇದರ ಜೊತೆಗೆ ವಿದ್ಯಾಸಂಸ್ಥೆಗಳು, ಖಾಸಗಿ ಕಂಪನಿಗಳು, ಟ್ರಸ್ಟ್‌ಗಳು ಈ ನಿಟ್ಟಿನಲ್ಲಿ ಅನೇಕ ಸ್ಕಾಲರ್‌ಷಿಪ್ ಸೌಲಭ್ಯಗಳನ್ನು ನೀಡುತ್ತಿವೆ. ಹೆಚ್ಚಿನ ವಿವರಗಳಿಗಾಗಿ ಗಮನಿಸಿ: https://www.shiksha.com/mass-communication-media/journalism/colleges/colleges-karnataka, https://www.buddy4study.com/article/karnataka-scholarships

ಶೈಕ್ಷಣಿಕ ಸಾಲವನ್ನು ಆಕರ್ಷಕ ಬಡ್ಡಿ ದರ ಮತ್ತು ವಿದ್ಯಾರ್ಥಿ ಸ್ನೇಹಿ ನಿಯಮಗಳೊಂದಿಗೆ ದೇಶದಲ್ಲಿರುವ ಎಲ್ಲಾ ಬ್ಯಾಂಕ್‌ಗಳು ನೀಡುತ್ತವೆ. ಕೇಂದ್ರ ಹಣಕಾಸು ಸಚಿವಾಲಯ, ಉನ್ನತ ಶಿಕ್ಷಣ ಇಲಾಖೆ ಮತ್ತು ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಷನ್ ಮಾರ್ಗದರ್ಶನದಲ್ಲಿ ಈ ಸಾಲಗಳನ್ನು ಪಡೆಯಲು ವಿದ್ಯಾಲಕ್ಷ್ಮಿ ಜಾಲತಾಣವನ್ನು ಅಭಿವೃದ್ಧಿಪಡಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಗಮನಿಸಿ: https://www.vidyalakshmi.co.in/Students/

7. ನಾನು ಬಿಎ ಮುಗಿಸಿದ್ದೇನೆ. ಬಿ.ಇಡಿ ಮಾಡುವ ಆಸೆಯಿದೆ. ಆದರೆ, ಹಣದ ಅವಶ್ಯಕತೆ ಹೆಚ್ಚಿರುವ ಕಾರಣ ಮಾಡಲು ಆಗುತ್ತಿಲ್ಲ. ಮುಂದೆ ಅನುಕೂಲವಾದಾಗ ಮಾಡಬಹುದೇ?

ಸಿದ್ದು ಶಿರ್ಮಾ, ಕಲಬುರ್ಗಿ.

ಬಿ.ಇಡಿ ಕೋರ್ಸ್‌ ಅನ್ನು ಸರ್ಕಾರಿ ಕಾಲೇಜುಗಳಲ್ಲಿಯೂ ಮಾಡಬಹುದು. ಈಗಿರುವ ನಿಯಮಗಳಂತೆ ಬಿ.ಇಡಿ ಪದವಿಯ ನಂತರ, ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ನೇಮಕಾತಿಗೆ 40 ವರ್ಷಗಳ ಗರಿಷ್ಠ ವಯೋಮಿತಿ ಇರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.