ADVERTISEMENT

ನಿಮ್ಮ ಪ್ರಶ್ನೆಗೆ ತಜ್ಞರ ಉತ್ತರ: ಚಾರ್ಟರ್ಡ್ ಅಕೌಂಟೆಂಟ್ ಆಗುವುದು ಹೇಗೆ?

ವಿ.ಪ್ರದೀಪ್ ಕುಮಾರ್
Published 18 ಜುಲೈ 2021, 19:30 IST
Last Updated 18 ಜುಲೈ 2021, 19:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

1. ನಾನು ಬಿಬಿಎ ಪದವಿ ಓದುತ್ತಿದ್ದೇನೆ. ಚಾರ್ಟರ್ಡ್ ಅಕೌಂಟೆಂಟ್ ಆಗುವ ಇಚ್ಛೆ ಇದೆ. ಈ ವೃತ್ತಿ ಬಗ್ಗೆ ಮಾಹಿತಿ ನೀಡಿ.

ಹೆಸರು, ಊರು ತಿಳಿಸಿಲ್ಲ.

ಬಿಬಿಎ ಪರೀಕ್ಷೆಯಲ್ಲಿ ಶೇ 60 ಅಂಕಗಳನ್ನು (ಬಿಕಾಂ/ ಎಂಕಾಂ ಆಗಿದ್ದರೆ ಶೇ 55) ಗಳಿಸಿದಲ್ಲಿ ಇಂಟರ್‌ಮೀಡಿಯೆಟ್ ಕೋರ್ಸ್‌ಗೆ ನೇರವಾಗಿ ನೋಂದಾಯಿಸಿಕೊಳ್ಳಬಹುದು. ಜೊತೆಗೆ 3 ವರ್ಷದ ಆರ್ಟಿಕಲ್‌ ತರಬೇತಿಗೆ ಸೇರಬೇಕು. ಇಂಟರ್‌ಮೀಡಿಯೆಟ್ ಪಾಸಾದ ನಂತರ ಫೈನಲ್‌ಗೆ ನೋಂದಾಯಿಸಿ, ಪರೀಕ್ಷೆಯಲ್ಲಿ ಪಾಸಾಗಬೇಕು. ಫೈನಲ್ ಪರೀಕ್ಷೆಗೆ ಮುಂಚೆ ನಾಲ್ಕು ವಾರಗಳ ಐಟಿ ಮತ್ತು ಸಾಫ್ಟ್ ಸ್ಕಿಲ್ ಕೋರ್ಸ್ ಮಾಡಿರಬೇಕು. ಒಟ್ಟಾರೆ, ಸಿಎ ಕೋರ್ಸ್ ಮಾಡಲು ಕನಿಷ್ಠ 3-4 ವರ್ಷ ಬೇಕಾಗುತ್ತದೆ.

ADVERTISEMENT

ಈ ವೃತ್ತಿಯಲ್ಲಿ ಯಶಸ್ವಿಯಾಗಲು ನಿಷ್ಠೆ, ಪ್ರಾಮಾಣಿಕತೆಯ ಜೊತೆಗೆ ಸಂಖ್ಯಾ ಕೌಶಲ, ವಿಶ್ಲೇಷಣಾತ್ಮಕ ಕೌಶಲ, ಆರ್ಥಿಕ ನಿರ್ವಹಣೆ ಮತ್ತು ವ್ಯಾಪಾರೋದ್ಯಮ ಕೌಶಲಗಳನ್ನು ಬೆಳೆಸಿಕೊಳ್ಳಬೇಕು. ಚಾರ್ಟರ್ಡ್ ಅಕೌಂಟೆಂಟ್‌ಗಳಿಗೆ ಕಾರ್ಪೊರೇಟ್ ಕ್ಷೇತ್ರದಲ್ಲಿ ಹೆಚ್ಚಿನ ಬೇಡಿಕೆ ಇದೆ. ಹಲವು ವರ್ಷಗಳ ಅನುಭವದ ನಂತರ ಸ್ವತಂತ್ರವಾಗಿ ಪ್ರಾಕ್ಟೀಸ್ ಮಾಡಬಹುದು.

ಹೆಚ್ಚಿನ ವಿವರಗಳಿಗೆ ಪರಿಶೀಲಿಸಿ: https://icai.org/

2. ನನಗೆ ಕಂಪ್ಯೂಟರ್ ಪ್ರೋಗ್ರಾಮಿಂಗ್‌ನಲ್ಲಿ ಆಸಕ್ತಿಯಿದೆ. ಆದ್ದರಿಂದ ಯಾವ ಕೋರ್ಸ್ ಮಾಡುವುದು ಒಳ್ಳೆಯದು?

ಕುಶಾಲ ಕಂಬಾರ, ಬೆಳಗಾವಿ

ಕಂಪ್ಯೂಟರ್ ಪ್ರೋಗ್ರಾಮಿಂಗ್ ಕ್ಷೇತ್ರದಲ್ಲಿ ಪ್ರಮುಖವಾದ ವಲಯಗಳೆಂದರೆ ವೆಬ್ ಡೆವಲಪ್‌ಮೆಂಟ್ (ಫ್ರಂಟ್‌ಎಂಡ್ ಮತ್ತು ಬ್ಯಾಕ್‌ಎಂಡ್), ಮೊಬೈಲ್ ಡೆವಲಪ್‌ಮೆಂಟ್, ಡೇಟಾಬೇಸ್ ಮ್ಯಾನೇಜ್‌ಮೆಂಟ್, ಗೇಮ್ ಡೆವಲಪ್‌ಮೆಂಟ್, ಸಿಸ್ಟಮ್ಸ್ ಡೆವಲಪ್‌ಮೆಂಟ್, ಡೆಸ್ಕ್‌ಟಾಪ್ ಅಪ್ಲಿಕೇಷನ್ಸ್ ಇತ್ಯಾದಿ. ಹಾಗಾಗಿ, ನಿಮಗೆ ಯಾವ ವಲಯದಲ್ಲಿ ಆಸಕ್ತಿಯಿದೆ ಎಂದು ಗುರುತಿಸಿ, ಆ ವಲಯಕ್ಕೆ ಬೇಕಾದ ಪ್ರೋಗ್ರಾಮಿಂಗ್ ಕಲಿಯಬೇಕು. ಉದಾಹರಣೆಗೆ ಜಾವಾ, ಜಾವಾ ಸ್ಕ್ರಿಪ್ಟ್, ಸಿ, ಸಿ++, ಎಚ್‌ಟಿಎಮ್‌ಎಲ್, ಪೈಥಾನ್, ಸ್ವಿಫ್ಟ್, ಯೂನಿಟಿ, ಗೋ, ರಸ್ಟ್ ಇತ್ಯಾದಿ. ನಿಮಗಿರುವ ಸ್ವಾಭಾವಿಕ ಪ್ರತಿಭೆ ಮತ್ತು ಆಸಕ್ತಿಯನ್ನು ಗಮನದಲ್ಲಿಟ್ಟುಕೊಂಡು, ವೃತ್ತಿಯ ಆಯ್ಕೆಗೆ ಅನುಗುಣವಾಗಿ ಯಾವ ಕೋರ್ಸ್ ಮಾಡಬೇಕು ಎನ್ನುವುದನ್ನು ನಿರ್ಧರಿಸಬಹುದು.

3. ನಾನು ದ್ವಿತೀಯ ಪಿಯುಸಿ ಸೈನ್ಸ್ (ಪಿಸಿಎಂಇ) ಮಾಡಿದ್ದೇನೆ. ಯಾವ ಎಂಜಿನಿಯರಿಂಗ್ ಕೋರ್ಸ್ ಮಾಡಬಹುದು. ಬಿಬಿಎ ಮಾಡುವುದಾದರೆ ಯಾವ ವಿಷಯದಲ್ಲಿ ಮಾಡಬಹುದು?

ರಾಕೇಶ್, ಊರು ತಿಳಿಸಿಲ್ಲ.

ನೀವು ದ್ವಿತೀಯ ಪಿಯುಸಿಯಲ್ಲಿ ಆಯ್ಕೆ ಮಾಡಿರುವ ವಿಷಯಗಳಲ್ಲಿ ಆಸಕ್ತಿಯಿದ್ದಲ್ಲಿ ಎಂಜಿನಿಯರಿಂಗ್ ಕೋರ್ಸ್ ಅನ್ನು ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯೂನಿಕೇಷನ್ಸ್, ಕಂಪ್ಯೂಟರ್ ಸೈನ್ಸ್, ಎಲೆಕ್ಟ್ರಿಕಲ್ ಅಂಡ್ ಎಲೆಕ್ಟ್ರಾನಿಕ್ಸ್ ವಿಭಾಗಗಳಲ್ಲಿ ಮಾಡಬಹುದು. ಬಿಬಿಎ ಕೋರ್ಸ್‌ನಲ್ಲಿ ಮಾರ್ಕೆಟಿಂಗ್, ಫೈನಾನ್ಸ್, ಬ್ಯಾಂಕಿಂಗ್, ಐಟಿ, ಎಚ್‌ಆರ್ ಸೇರಿದಂತೆ ಅನೇಕ ವಿಭಾಗಗಳಿವೆ.

ಕೋರ್ಸ್ ನಿರ್ಧಾರಕ್ಕೆ ಮುಂಚೆ ನಿಮ್ಮ ವೃತ್ತಿ ಜೀವನದ ಬಗ್ಗೆ ಚಿಂತಿಸಿ, ಸ್ವಾಭಾವಿಕ ಪ್ರತಿಭೆ ಮತ್ತು ಆಸಕ್ತಿಯಿರುವ ವೃತ್ತಿಯನ್ನು ಆರಿಸುವುದು ಒಳ್ಳೆಯದು. ವೃತ್ತಿಯ ಆಯ್ಕೆಯಂತೆ ಕೋರ್ಸ್ ಆಯ್ಕೆ ಮಾಡುವುದು ಸುಲಭ.

4. ಎಂಡಿ (ಪಿಡಿಯಾಟ್ರಿಕ್ಸ್) ಮಾಡಿದ ಮೇಲೆ ವೃತ್ತಿಯ ಅವಕಾಶಗಳ ಬಗ್ಗೆ ತಿಳಿಸಿ.

ಹೆಸರು, ಊರು ತಿಳಿಸಿಲ್ಲ

ಎಂಡಿ (ಪಿಡಿಯಾಟ್ರಿಕ್ಸ್) ಬೇಡಿಕೆಯಲ್ಲಿರುವ ಕ್ಷೇತ್ರ. ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು, ನರ್ಸಿಂಗ್ ಹೋಮ್ಸ್, ಫಾರ್ಮಾ ಮತ್ತು ರಿಸರ್ಚ್ ಕಂಪನಿಗಳು, ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಗಳು ಮತ್ತು ಅನೇಕ ಸರ್ಕಾರಿ ಇಲಾಖೆಗಳಲ್ಲಿ ವೃತ್ತಿಯ ಅವಕಾಶಗಳಿವೆ.

ನಿಮ್ಮ ಪ್ರಶ್ನೆಗೆ ತಜ್ಞರ ಉತ್ತರ

ವಿದ್ಯಾರ್ಥಿಗಳೇ, ನಿಮ್ಮ ಮುಂದಿನ ಕೋರ್ಸ್‌ ಮತ್ತು ಸೂಕ್ತವಾದ ವೃತ್ತಿಯ ಆಯ್ಕೆ ಹಾಗೂ ಭವಿಷ್ಯವನ್ನು ರೂಪಿಸಿಕೊಳ್ಳುವ ಬಗ್ಗೆ ಗೊಂದಲಗಳಿವೆಯೇ? ಹಾಗಿದ್ದರೆ ನಮಗೆ ಬರೆಯಿರಿ. ನಿಮ್ಮ ಪ್ರಶ್ನೆಗಳಿಗೆ ಶಿಕ್ಷಣ ತಜ್ಞ ಮತ್ತು ವೃತ್ತಿ ಸಲಹೆಗಾರವಿ. ಪ್ರದೀಪ್ ಕುಮಾರ್ ಉತ್ತರಿಸಲಿದ್ದಾರೆ. ಪ್ರಶ್ನೆಗಳನ್ನುshikshana@prajavani.co.in ಗೆ ಕಳಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.