ADVERTISEMENT

ಪರೀಕ್ಷಾ ಯಶಸ್ಸಿಗೆ ಮೂರು ಆಯಾಮದ ಸಿದ್ಧತೆ; ಮಾನಸಾ ಇ.ಎಸ್‌ ಸಂದರ್ಶನ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2021, 19:45 IST
Last Updated 8 ಸೆಪ್ಟೆಂಬರ್ 2021, 19:45 IST
ಮಾನಸ ಇ. ಎಸ್‌.
ಮಾನಸ ಇ. ಎಸ್‌.   

ಮೂಲತಃ ಚಿತ್ರದುರ್ಗದವರಾದ ಮಾನಸಾ ಇ.ಎಸ್‌., 2014 ನೇ ಬ್ಯಾಚ್‌ನ ಕೆಎಎಸ್‌ ಅಧಿಕಾರಿ. ಅವರು ಚಳ್ಳಕೆರೆಯಲ್ಲಿ ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಉಸ್ತುವಾರಿ ಉಪವಿಭಾಗಾಧಿಕಾರಿ ಆಗಿ ಸೇವೆ ಸಲ್ಲಿಸಿದ್ದು, ಪ್ರಸ್ತುತ ಚಿತ್ರದುರ್ಗದಲ್ಲಿ ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಎಲ್‌ಜಿಎಸ್‌ಟಿಒ (ಸ್ಥಳೀಯ ಜಿಎಸ್‌ಟಿ ಅಧಿಕಾರಿ) ಆಗಿ ಸೇವೆಯಲ್ಲಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಗಳಿಸುವ ನಿಟ್ಟಿನಲ್ಲಿ ಅವರು ಇಲ್ಲಿ ಸ್ಪರ್ಧಾರ್ಥಿಗಳಿಗೆ ಮಾರ್ಗದರ್ಶನ ನೀಡಿದ್ದಾರೆ.

ಶೈಕ್ಷಣಿಕ ಜೀವನ ಹೇಗಿತ್ತು?

ನಾನು ತುಮಕೂರಿನ ಎಸ್‌ಐಟಿ (ಸಿದ್ಧಾರ್ಥ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ) ಸಂಸ್ಥೆಯಿಂದ ಮಾಹಿತಿ ತಂತ್ರಜ್ಞಾನದಲ್ಲಿ ಎಂಜಿನಿಯರಿಂಗ್‌ ಪದವಿ ಪಡೆದಿದ್ದೆ. ಎಂಜಿನಿಯರಿಂಗ್‌ ಮುಗಿಸಿದ ನಂತರ ಬೆಂಗಳೂರಿನ ಐಟಿ ಕಂಪನಿಯೊಂದರಲ್ಲಿ ಒಳ್ಳೆಯ ಆಫರ್‌ ಇತ್ತು. ಆದರೆ, ನಾನು
ಯುಪಿಎಸ್‌ಸಿ ಅಥವಾ
ಕೆಪಿಎಸ್‌ಸಿಯಲ್ಲಿ ಉನ್ನತ ಹುದ್ದೆ ಪಡೆಯಬೇಕೆಂಬ ಗುರಿಯನ್ನು ಆರಂಭದಿಂದಲೂ ಹೊಂದಿದ್ದೆ. ಹೀಗಾಗಿ, ಆ ಗುರಿಯ ಬೆನ್ನು ಹತ್ತಿದೆ. ಈ ನಡುವೆ 4 ವರ್ಷ ಯಾವುದೇ ಕೆಲಸವಿಲ್ಲದೇ ಖಾಲಿ ಕುಳಿತಿದ್ದೆ. ಏನೂ ಗಳಿಕೆ ಇರಲಿಲ್ಲ. ನನ್ನ ಸ್ನೇಹಿತರು ಕೆಲಸದಲ್ಲಿದ್ದು, ಉತ್ತಮ ಸಂಬಳ ಪಡೆಯುತ್ತಿದ್ದರು. ಆಗ ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿ ಆರಾಮ ಆಗಿರಬೇಕಿತ್ತು ಎಂದೆಲ್ಲ ಜನ ಮಾತನಾಡಿದರು. ಆದರೆ, ನಾನು ಎದೆಗುಂದಲಿಲ್ಲ.
ಯುಪಿಎಸ್‌ಸಿ, ಕೆಪಿಎಸ್‌ಸಿಗಾಗಿಯೇ ಕಾದೆ, ಪರೀಕ್ಷೆಗೆ ಸಿದ್ಧಳಾದೆ.

ADVERTISEMENT

ಸ್ಪರ್ಧಾತ್ಮಕ ಪರೀಕ್ಷೆಗಳತ್ತ ಒಲವು ಬೆಳೆದಿದ್ದು ಹೇಗೆ?

ಮನೆಯಲ್ಲಿ ಅಪ್ಪ ಹಾಗೂ ದೊಡ್ಡಪ್ಪ ಇಬ್ಬರೂ ಕೆಎಎಸ್ ಅಧಿಕಾರಿಗಳಾಗಿದ್ದರು. ಬಾಲ್ಯದಿಂದಲೂ ಅವರನ್ನು ನೋಡಿಕೊಂಡು ಬೆಳೆದಿದ್ದೆ. ಮನೆಯಲ್ಲಿ ಅಧ್ಯಯನಕ್ಕೆ ಪೂರಕ ಅವಕಾಶ ಹಾಗೂ ಸಂಪೂರ್ಣ ಬೆಂಬಲವಿತ್ತು. ಹಾಗಾಗಿ, ಸಹಜವಾಗಿಯೇ ನಾಗರಿಕ ಸೇವೆಗಳತ್ತ ನನ್ನ ಒಲವು ಬೆಳೆದಿತ್ತು. ಅದನ್ನೇ ನಾನು ನನ್ನ ಗುರಿಯಾಗಿ ಪರಿವರ್ತಿಸಿಕೊಂಡೆ.

ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಸಿದ್ಧತೆ ಹೇಗಿತ್ತು?

ನಾನು ಸ್ಪರ್ಧಾತ್ಮಕ ಪರೀಕ್ಷೆಗಳ ಪೂರ್ವಭಾವಿ ತರಬೇತಿಗಾಗಿ ದೆಹಲಿಯ ವಾಜಿರಾಂ ಇನ್‌ಸ್ಟಿಟ್ಯೂಟ್‌ನಲ್ಲಿ ತರಬೇತಿಗೆ ಸೇರಿದ್ದೆ. ಅಲ್ಲಿ ಪಡೆದ ತರಬೇತಿ ನನಗೆ ಯೋಜಿತ ಪೂರ್ವಸಿದ್ಧತೆಗೆ ಅನುವು ಮಾಡಿಕೊಟ್ಟಿತು. ನಾನು ದಿನಕ್ಕೆ ಕನಿಷ್ಠ 10 ಗಂಟೆ ತಪ್ಪದೇ ಅಧ್ಯಯನ ಮಾಡುತ್ತಿದ್ದೆ. ಬೆಂಗಳೂರಿನ ಸಾರ್ವಜನಿಕ ಲೈಬ್ರರಿಯೊಂದರಲ್ಲಿ ಕುಳಿತು ಗಂಟೆಗಟ್ಟಲೇ ಓದುತ್ತಿದ್ದೆ. ಪ್ರಚಲಿತ ವಿದ್ಯಮಾನಗಳ ಕುರಿತು ಪ್ರತಿನಿತ್ಯ ನೋಟ್ಸ್‌ ಮಾಡಿಕೊಳ್ಳುತ್ತಿದ್ದೆ. ಇನ್ನಿತರ ವಿಷಯಗಳನ್ನು ಓದುವಾಗಲೂ ಕೀ ಪಾಯಿಂಟ್ಸ್‌ ಬರೆದಿಟ್ಟುಕೊಂಡು ಅವುಗಳನ್ನು ಮೇಲಿಂದ ಮೇಲೆ ಉಜ್ಜಳನೆ ಮಾಡುತ್ತಿದ್ದೆ. ಮಾದರಿ ಪರೀಕ್ಷೆಗಳನ್ನು ತಪ್ಪದೇ ಎದುರಿಸುತ್ತಿದ್ದೆ. ಇಷ್ಟಾದರೂ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಕೇವಲ ಒಂದು ಅಂಕದಿಂದ ಸಂದರ್ಶನದಿಂದ ವಂಚಿತಳಾಗಿದ್ದೆ. 2011 ರಲ್ಲಿ ಕೆಎಎಸ್‌ ಪ್ರಿಲಿಮ್ಸ್‌ ಪಾಸಾದರೂ ಮೇನ್ಸ್‌ ಪಾಸಾಗಲು ಸಾಧ್ಯವಾಗಲಿಲ್ಲ.

ಸ್ಪರ್ಧಾರ್ಥಿಗಳಿಗೆ ನಿಮ್ಮ ಸಲಹೆ ಏನು?

ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶ ಸಾಧಿಸಿ, ಅಧಿಕಾರಿ ಆಗಬೇಕು ಎಂಬ ಗುರಿಯನ್ನು ಹೊಂದಿದ ದಿನದಿಂದಲೇ ನಿಮ್ಮ ಸಿದ್ಧತೆ ಸಮಗ್ರವಾಗಿರಬೇಕು. ಅಂದರೆ, ಪ್ರಿಲಿಮ್ಸ್‌, ಮೇನ್ಸ್‌, ಸಂದರ್ಶನ ಈ ಮೂರೂ ಆಯಾಮಗಳಲ್ಲಿ ನೀವು ಸಿದ್ಧರಾಗಬೇಕು. ಈ ಮೂರು ಆಯಾಮಗಳ ಸಿದ್ಧತೆ ಇದ್ದರೆ ಮಾತ್ರ ನಿಮಗೆ ಶೀಘ್ರವೇ ಯಶಸ್ಸು ಲಭಿಸಲು ಸಾಧ್ಯ. ಸಿದ್ಧತೆಯ ಹಂತದಲ್ಲಿ ಓದಿನ ಜೊತೆ ಬರವಣಿಗೆಗೂ ಆದ್ಯತೆ ನೀಡಬೇಕು. ಮಾದರಿ ಪರೀಕ್ಷೆಗಳ ಮೂಲಕ ನಿಮ್ಮ ಬರವಣಿಗೆಯ ವೇಗ, ಸಮಗ್ರತೆ, ನಿರ್ದಿಷ್ಟತೆಗಳನ್ನು ಖಚಿತಪಡಿಸಿಕೊಳ್ಳಬೇಕು. ನಮ್ಮದೇ ನೋಟ್ಸ್‌ ಮಾಡಿಕೊಂಡರೆ ಮೈಂಡ್‌ ಮ್ಯಾಪಿಂಗ್‌ಗೆ ಅನುಕೂಲವಾಗುತ್ತದೆ. ಅಧ್ಯಯನ ಸಂಬಂಧಿತ ಸಂಶಯಗಳನ್ನು ಸ್ನೇಹಿತರು, ತಜ್ಞರ ಜೊತೆ ಚರ್ಚಿಸಿ ಪರಿಹರಿಸಿಕೊಳ್ಳುವುದು ಒಳಿತು.

ಮಹಿಳಾ ಸ್ಪರ್ಧಾರ್ಥಿಗಳಿಗೆ ನಿಮ್ಮ ಕಿವಿಮಾತು?

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಮಹಿಳೆಯರಿಗೆ ಕುಟುಂಬದ ಬೆಂಬಲ ದೊರೆತದ್ದೇ ಆದರೆ, ಬಹುತೇಕರು ಖಂಡಿತವಾಗಿ ಯಶಸ್ಸು ಸಾಧಿಸುತ್ತಾರೆ. ತಂದೆ, ತಾಯಿ, ಪತಿ ಈ ನಿಟ್ಟಿನಲ್ಲಿ ಸೂಕ್ತ ಬೆಂಬಲ ನೀಡಬೇಕು. ‘ನೀನೇನು ಮಾಡಬಲ್ಲೆ?’ ಎನ್ನುವುದಕ್ಕಿಂತ ‘ನೀನು ಸಾಧನೆ ಮಾಡೇ ಮಾಡುತ್ತಿಯಾ’ ಎಂಬ ಮಾತುಗಳನ್ನು ಹೇಳಿದರೆ, ಖಂಡಿತ ಮಹಿಳೆ ಕುಟುಂಬ ನಿರ್ವಹಣೆಯ ಜೊತೆ ಅಂದುಕೊಂಡ ಗುರಿ ಸಾಧಿಸುವುದು ಸುಲಭ. ಈ ಬೆಂಬಲ ಕೆಲಸಕ್ಕೆ ಸೇರಿದ ನಂತರ ಕೂಡ ಮುಂದುವರಿಯಬೇಕು. ಮಹಿಳೆ ಉನ್ನತ ಸಾಧನೆ ಮಾಡಲು ಆಕೆಯ ಜೊತೆಗೆ ಆಕೆಯ ಕುಟುಂಬಸ್ಥರೂ ಕೆಲ ತ್ಯಾಗಗಳನ್ನು ಮಾಡಲೇಬೇಕು. ನಾನೂ ಕೆಎಎಸ್‌ ಅಧಿಕಾರಿಯಾದದ್ದು ಮದುವೆಯಾದ ನಂತರವೇ.

(ಲೇಖಕ: ನಿರ್ದೇಶಕರು, ಸ್ಲೇಟ್‌ ಸ್ಪರ್ಧಾತ್ಮಕ ಪರೀಕ್ಷೆಗಳ ಮಾರ್ಗದರ್ಶನ ಕೇಂದ್ರ, ಧಾರವಾಡ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.