ADVERTISEMENT

ಎಂಕಾಂ ಮಾಡಿದವರು ಡೇಟಾ ಸೈನ್ಸ್ ಓದಬಹುದೇ?

​ಪ್ರಜಾವಾಣಿ ವಾರ್ತೆ
Published 25 ಜುಲೈ 2021, 19:45 IST
Last Updated 25 ಜುಲೈ 2021, 19:45 IST
ವಿ. ಪ್ರದೀಪ್ ಕುಮಾರ್
ವಿ. ಪ್ರದೀಪ್ ಕುಮಾರ್   

1. ನಾನು ಎಂಕಾಂ (ಫೈನಾನ್ಸ್ ಮತ್ತು ಅಕೌಂಟಿಂಗ್) ಕೊನೆಯ ವರ್ಷದಲ್ಲಿ ಓದುತ್ತಿದ್ದೇನೆ. ಫೈನಾನ್ಸ್ ವಲಯದಲ್ಲಿ ವೃತ್ತಿಜೀವನವನ್ನು ದೃಢವಾಗಿ ರೂಪಿಸಿಕೊಳ್ಳಲು ಯಾವ ಸರ್ಟಿಫಿಕೇಷನ್ ಕೋರ್ಸ್ ಮಾಡಬೇಕು. ಬ್ಯುಸಿನೆಸ್ ಅನಾಲಿಟಿಕ್ಸ್ ಮತ್ತು ಡೇಟಾ ಸೈನ್ಸ್ ಮಾಡಬಹುದು ಎಂಬ ಸಲಹೆಗಳಿವೆ. ನಿಮ್ಮ ಸಲಹೆ ಬೇಕು.

ಸುಷ್ಮಿತ, ಬೆಂಗಳೂರು

ಫೈನಾನ್ಸ್ ವಿಸ್ತಾರವಾದ ಕ್ಷೇತ್ರ. ಅಕೌಂಟಿಂಗ್, ಬ್ಯಾಂಕಿಂಗ್, ಇನ್ಶೂರೆನ್ಸ್, ಇನ್ವೆಸ್ಟ್‌ಮೆಂಟ್‌, ಕಾರ್ಪೊರೇಟ್ ಫೈನಾನ್ಸ್, ರಿಸರ್ಚ್, ರಿಸ್ಕ್ ಮ್ಯಾನೇಜ್‌ಮೆಂಟ್ ಸೇರಿದಂತೆ ಅನೇಕ ವಿಭಾಗಗಳಿವೆ. ನಿಮಗೆ ಯಾವ ವಿಭಾಗದಲ್ಲಿ ಆಸಕ್ತಿಯಿದೆ ಎನ್ನುವುದು ಮುಖ್ಯ. ಈ ಎಲ್ಲಾ ವಲಯಗಳಲ್ಲೂ ಬ್ಯುಸಿನೆಸ್ ಅನಾಲಿಟಿಕ್ಸ್ ಮತ್ತು ಡೇಟಾ ಸೈನ್ಸ್ ಕೋರ್ಸ್‌ಗಳು ಸಹಾಯವಾಗುತ್ತವೆ.

ADVERTISEMENT

2. ನಾನು ಮದುವೆಯಾಗಲಿರುವ ಹುಡುಗಿಯು ಆಂಧ್ರಪ್ರದೇಶದಲ್ಲಿ ಪಿಯುಸಿ ಮುಗಿಸಿದ್ದು ಮದುವೆಯಾದ ಬಳಿಕ ಕರ್ನಾಟಕದಲ್ಲಿ ಟೀಚರ್ಸ್ ಟ್ರೈನಿಂಗ್ ಮಾಡುವ ಇಚ್ಛೆ ಹೊಂದಿದ್ದಾಳೆ. ಅನ್ಯ ರಾಜ್ಯದ ವಿದ್ಯಾರ್ಥಿಗಳು ನಮ್ಮಲ್ಲಿ ಓದಬಹುದೇ ಹಾಗೂ ನಂತರ ಸರ್ಕಾರಿ ಕೆಲಸಕ್ಕೆ ಪ್ರಯತ್ನಿಸಬಹುದೆ? ದಯವಿಟ್ಟು ತಿಳಿಸಿ.

ಅರುಣ್, ಭದ್ರಾವತಿ

ಕರ್ನಾಟಕದಲ್ಲಿ ಡಿಎಡ್/ಬಿಎಡ್ ಕೋರ್ಸ್ ಮಾಡಿ, ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ಯಲ್ಲಿ ಉತ್ತೀರ್ಣರಾದ ನಂತರ, ಸರ್ಕಾರಿ ಕೆಲಸಕ್ಕೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ವಿವರಗಳಿಗಾಗಿ ಗಮನಿಸಿ:
http://www.schooleducation.kar.nic.in/

3. ನನ್ನ ಮಗ ಇಂಡಸ್ಟ್ರಿಯಲ್ ಎಂಜಿನಿಯರಿಂಗ್ ಮತ್ತು ಮ್ಯಾನೇಜ್‌ಮೆಂಟ್ ಮಾಡಲು ಇಚ್ಛಿಸಿದ್ದಾನೆ. ಈ ಕೋರ್ಸ್ ಮಾಡಿದ ನಂತರ ಸರ್ಕಾರಿ ಕೆಲಸ ಮಾಡಬಹುದಾ?

ಹೆಸರು, ಊರು ತಿಳಿಸಿಲ್ಲ

ಯಾವುದೇ ಕೋರ್ಸ್ ನಿರ್ಧಾರಕ್ಕೆ ಮುಂಚೆ ವೃತ್ತಿ ಜೀವನದ ಬಗ್ಗೆ ಚಿಂತಿಸಿ, ಸ್ವಾಭಾವಿಕ ಪ್ರತಿಭೆ ಮತ್ತು ಆಸಕ್ತಿಯಿರುವ ವೃತ್ತಿಯನ್ನು ಆರಿಸುವುದು ಒಳ್ಳೆಯದು. ವೃತ್ತಿಯ ಆಯ್ಕೆಯಂತೆ ಕೋರ್ಸ್/ಸ್ಟ್ರೀಮ್ ಆಯ್ಕೆ ಮಾಡುವುದು ಸುಲಭ. ಹಾಗಾಗಿ, ಇಂಡಸ್ಟ್ರಿಯಲ್ ಎಂಜಿನಿಯರಿಂಗ್ ಮತ್ತು ಮ್ಯಾನೇಜ್‌ಮೆಂಟ್ ಕೋರ್ಸ್ ಮಾಡುವ ಹಿಂದಿರುವ ಆಲೋಚನೆ, ಕಾರಣಗಳನ್ನು ವಿಮರ್ಶಿಸಿ ಹಾಗೂ ಸೇರ ಬಯಸುವ ಕಾಲೇಜಿನಲ್ಲಿ ಈ ವಿಭಾಗದ ಪ್ಲೇಸ್‌ಮೆಂಟ್ ಮಾಹಿತಿಯನ್ನೂ ಪರಿಗಣಿಸಿ. ಸರ್ಕಾರಿ ಕ್ಷೇತ್ರದಲ್ಲಿಯೂ ವೃತ್ತಿಯ ಅವಕಾಶಗಳಿರುತ್ತವೆ.

4. ಬಿಎಸ್‌ಸಿ, ಬಿಎಡ್ ಮುಗಿಸಿರುವ ನನಗೆ ಕೆಎಎಸ್ ಅಧಿಕಾರಿಯಾಗುವ ಇಚ್ಛೆಯಿದೆ. ಕೋಚಿಂಗ್ ಕ್ಲಾಸ್‌ಗೆ ಹೋಗಬೇಕಾ ಅಥವಾ ಮನೆಯಲ್ಲಿ ಓದಿದರೆ ಸಾಕೇ? ಕೆಎಎಸ್ ಬಗ್ಗೆ ಮಾಹಿತಿ ನೀಡಿ.

ಅನಿತಾ ಖಟಾವಕರ, ಗೋಕಾಕ

5. ನಾನು ಪದವಿ ಕೋರ್ಸ್ ಮಾಡುತ್ತಿದ್ದೇನೆ ಮತ್ತು ಐಎಎಸ್ ಪರೀಕ್ಷೆಯನ್ನು ಬರೆಯುವ ಗುರಿ ಇದೆ. ಮಾಹಿತಿ ನೀಡಿ.

ರಕ್ಷಿತ, ಊರು ತಿಳಿಸಿಲ್ಲ

6. ನಾನು ಪಿಯುಸಿ ಸೈನ್ಸ್ ಮಾಡಿದ್ದೇನೆ ಮತ್ತು ಐಎಎಸ್ ಮಾಡಲು ಇಚ್ಛಿಸಿದ್ದೇನೆ. ಮುಂದೆ ಎಂಜಿನಿಯರಿಂಗ್ ಕೋರ್ಸ್ ಮಾಡಬಹುದಾ?

ಹೆಸರು, ಊರು ತಿಳಿಸಿಲ್ಲ

ಕೆಎಎಸ್ ಮತ್ತು ಐಎಎಸ್ ಪರೀಕ್ಷೆಗಳಲ್ಲಿ ಸಾಮ್ಯತೆಯಿದೆ. ಈ ಎರಡೂ ಪರೀಕ್ಷೆಗಳನ್ನು ಯಾವುದೇ ಪದವಿಯ ನಂತರ ಮಾಡಬಹುದು. ಈ ಪ್ರಕ್ರಿಯೆಯಲ್ಲಿ ಮೂರು ಹಂತಗಳಿವೆ.
1. ಪೂರ್ವಭಾವಿ ಪರೀಕ್ಷೆ.
2. ಮುಖ್ಯ ಪರೀಕ್ಷೆ.
3. ಸಂದರ್ಶನ/ವ್ಯಕ್ತಿತ್ವ ಪರೀಕ್ಷೆ.
ಅಗತ್ಯವಾದ ಪುಸ್ತಕಗಳನ್ನು ಖರೀದಿಸಿ, ಖುದ್ದಾಗಿ ಅಥವಾ ಕೋಚಿಂಗ್ ಮುಖಾಂತರ ತಯಾರಿ ಮಾಡಬಹುದು. ಯೂಟ್ಯೂಬ್‌ನಲ್ಲಿ ತಯಾರಿ ಕುರಿತ ಮಾಹಿತಿಯುಳ್ಳ ಉಪಯುಕ್ತ ವಿಡಿಯೊಗಳನ್ನು ವೀಕ್ಷಿಸಿ. ಈ ಪರೀಕ್ಷೆಗಳಲ್ಲಿ ಯಶಸ್ವಿಯಾಗಲು ಸಮಗ್ರವಾದ ಮತ್ತು ಆಳವಾದ ಓದುವಿಕೆ ಇರಬೇಕು. ಜೊತೆಗೆ, ಸಾಕಷ್ಟು ಪರಿಶ್ರಮ, ದೃಢತೆ, ಗೆಲ್ಲುವ ಆಶಾಭಾವನೆ ಅತ್ಯಗತ್ಯ.

7. ನಾನು ಬಿಕಾಂ ಮಾಡಿ ಐಸಿಎಮ್‌ಎಐ ಕೋರ್ಸ್ ಮಾಡಬೇಕೆಂದುಕೊಂಡಿದ್ದೇನೆ. ಈ ಬಗ್ಗೆ ಮಾಹಿತಿ ನೀಡಿ.

ಚೈತ್ರ, ಊರು ತಿಳಿಸಿಲ್ಲ.

ನೀವು ಬಿಕಾಂ ಮಾಡಿರುವುದರಿಂದ ನೇರವಾಗಿ ಮತ್ತೆ ಇಂಟರ್‌ಮೀಡಿಯೆಟ್ ಕೋರ್ಸ್‌ಗೆ ನೋಂದಾಯಿಸಿ. ಎರಡು ಗ್ರೂಪ್‌ಗಳಿಂದ ಒಟ್ಟು 8 ಪರೀಕ್ಷೆಗಳಿರುತ್ತವೆ. ವಿದ್ಯಾರ್ಥಿಗಳಿಗೆ ಸಹಾಯವಾಗುವ ಅನೇಕ ಸಂಪನ್ಮೂಲಗಳು ಇನ್‌ಸ್ಟಿಟ್ಯೂಟ್‌ನ ವೆಬ್‌ಸೈಟ್‌ನಲ್ಲಿವೆ. ಉದಾಹರಣೆಗೆ ವಿಷಯ ಸೂಚಿಕೆ, ಪುಸ್ತಕಗಳು, ಅಣಕು ಪ್ರಶ್ನೆಪತ್ರಿಕೆಗಳು, ಕೋಚಿಂಗ್ ಸೆಂಟರ್ ವಿವರಗಳು, ಟ್ರೈನಿಂಗ್ ಮಾಹಿತಿ, ವೆಬಿನಾರ್‌ಗಳು, ವಿಡಿಯೊಗಳು ಇತ್ಯಾದಿ. ಈ ಸಂಪನ್ಮೂಲಗಳನ್ನು ವ್ಯವಸ್ಥಿತವಾಗಿ ಉಪಯೋಗಿಸಿಕೊಂಡು ಸೂಕ್ತ ಸಮಯದ ನಿರ್ವಹಣೆಯೊಂದಿಗೆ ಪರೀಕ್ಷೆಗೆ ತಯಾರಿ ಮಾಡಬಹುದು. ಹೆಚ್ಚಿನ ವಿವರಗಳಿಗೆ ಗಮನಿಸಿ:

https://icmai.in/studentswebsite

8. ನಾನು ದ್ವಿತೀಯ ಪಿಯುಸಿ (ಆರ್ಟ್ಸ್) ಇಂಗ್ಲೀಷ್ ಮಾಧ್ಯಮದಲ್ಲಿ ಮಾಡಿದ್ದೇನೆ. ಪದವಿಯಲ್ಲಿ ಯಾವ ಕೋರ್ಸ್ ಮತ್ತು ಬಿಎ ಮಾಡುವುದಾದರೆ, ಯಾವ ವಿಷಯ ತೆಗೆದುಕೊಳ್ಳಬೇಕು?

ಹೆಸರು, ಊರು ತಿಳಿಸಿಲ್ಲ

ಪಿಯುಸಿ ನಂತರ ನಿಮಗೆ ಹಲವಾರು ಕೋರ್ಸ್ ಆಯ್ಕೆಗಳಿವೆ. ಉದಾಹರಣೆಗೆ, ಬಿಎ (ಅನೇಕ ವಿಷಯಗಳಲ್ಲಿ), ಬಿಎ(ಹಾನರ್ಸ್), ಬಿಬಿಎ, ಬಿಬಿಎಂ, ಬಿಲಿಬ್, ಬಿಎಸ್‌ಡಬ್ಲ್ಯೂ, ಜರ್ನಲಿಸಮ್, ಫೈನ್ ಆರ್ಟ್ಸ್, ಕಾನೂನು, ಡಿಸೈನ್, ಸಿಎ, ಎಸಿಎಸ್, ಐಸಿಡಬ್ಲ್ಯೂ ಇತ್ಯಾದಿ ಹಾಗೂ ಅನೇಕ ಸ್ನಾತಕೋತ್ತರ ಪದವಿಯ ಇಂಟಗ್ರೇಡೆಡ್ ಕೋರ್ಸ್‌ಗಳೂ ಇವೆ. ನಿಮ್ಮ ಸ್ವಾಭಾವಿಕ ಪ್ರತಿಭೆ ಮತ್ತು ಆಸಕ್ತಿಯ ಆಧಾರದ ಮೇಲೆ ವೃತ್ತಿ ಜೀವನದ ಯೋಜನೆಯನ್ನು ರೂಪಿಸಿದರೆ, ಕೋರ್ಸ್ ಆಯ್ಕೆ ಸುಲಭವಾಗುತ್ತದೆ.

9. ಬಿಎಸ್‌ಸಿ ನಂತರ ಎಂಎಸ್‌ಸಿ (ಕೆಮಿಸ್ಟ್ರಿ) ಮಾಡಬೇಕು. ಅದರಲ್ಲಿನ ಆಯ್ಕೆಗಳು ಮತ್ತು ತಯಾರಿಯ ಬಗ್ಗೆ ತಿಳಿಸಿ.

ವೈಭವ್, ಊರು ತಿಳಿಸಿಲ್ಲ

ಎಂಎಸ್‌ಸಿ ಕೋರ್ಸ್‌ನಲ್ಲಿ ಸಾಮಾನ್ಯವಾಗಿ ಲಭ್ಯವಿರುವ ಸ್ಪೆಷಲೈಜೇಷನ್‌ಗಳೆಂದರೆ ಜನರಲ್ ಕೆಮಿಸ್ಟ್ರಿ, ಆರ್ಗಾನಿಕ್ ಕೆಮಿಸ್ಟ್ರಿ, ಅನಾಲಿಟಿಕಲ್ ಕೆಮಿಸ್ಟ್ರಿ, ಬಯೋ ಕೆಮಿಸ್ಟ್ರಿ, ಫಾರ್ಮಸ್ಯೂಟಿಕಲ್ ಕೆಮಿಸ್ಟ್ರಿ ಇತ್ಯಾದಿ. ಸಾಮಾನ್ಯವಾಗಿ ವಿಶ್ವವಿದ್ಯಾಲಯದ ನಿಯಮಾವಳಿಗಳಂತೆ ಪದವಿ ಪರೀಕ್ಷೆಯಲ್ಲಿ ಶೇ 50 ರಿಂದ ಶೇ 60 ರಷ್ಟು ಅಂಕಗಳನ್ನು ಗಳಿಸಿರಬೇಕು ಮತ್ತು ಪ್ರವೇಶ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಬೇಕು. ನೀವು ಇಚ್ಛಿಸುವ ವಿಶ್ವವಿದ್ಯಾಲಯದ ಪರೀಕ್ಷೆಯ ಮಾದರಿಯನ್ನು ಪರಿಶೀಲಿಸಿ ಅದರಂತೆ ಅಭ್ಯಾಸ ಮಾಡಬೇಕು.

10. ಬಿಎಸ್‌ಸಿ(ಫಿಸಿಯೊಥೆರಪಿ) ಪದವಿಯ ನಂತರದ ವೃತ್ತಿಯ ಅವಕಾಶಗಳೇನು?

ಪ್ರೀತಿ, ಊರು ತಿಳಿಸಿಲ್ಲ.

ಬಿಎಸ್‌ಸಿ(ಫಿಸಿಯೊಥೆರಪಿ) ಪದವಿಯ ನಂತರ ಮಲ್ಟಿ ಸ್ಪೆಶಾಲಿಟಿ ಹಾಸ್ಪಿಟಲ್ಸ್, ಕಾರ್ಪೊರೇಟ್ ಸಂಸ್ಥೆಗಳು, ರಿಸರ್ಚ್, ಲ್ಯಾಬೋರೇಟರೀಸ್, ಸ್ಪೋರ್ಟ್ಸ್ ಸೆಂಟರ್ಸ್, ಜಿಮ್ಸ್, ಆರೋಗ್ಯ ಸೇವಾ ಕೇಂದ್ರಗಳು, ಎನ್‌ಜಿಒ ಸಂಸ್ಥೆಗಳು, ಹಿರಿಯ ನಾಗರಿಕರ ಸೇವಾ ಕೇಂದ್ರಗಳು ಹೀಗೆ ಅನೇಕ ವಲಯಗಳಲ್ಲಿ ಫಿಸಿಯೊಥೆರ‍ಪಿಸ್ಟ್‌ಗಳ ಅವಶ್ಯಕತೆಯಿರುತ್ತದೆ. ಇದಲ್ಲದೆ, ಅನುಭವದ ನಂತರ ಸ್ವತಂತ್ರವಾಗಿ ಪ್ರಾಕ್ಟೀಸ್ ಮಾಡಬಹುದು ಮತ್ತು ಶಿಕ್ಷಕ ವೃತ್ತಿಯನ್ನೂ ಆರಿಸಿಕೊಳ್ಳಬಹುದು.

11. ಬಿಎಸ್‌ಸಿ (ಕಂಪ್ಯೂಟರ್ ಸೈನ್ಸ್) ನಂತರದ ವೃತ್ತಿಯ ಅವಕಾಶಗಳೇನು?

ರೋಹಿತ್ ಪ್ರಶಾಂತ್, ಊರು ತಿಳಿಸಿಲ್ಲ.

ಈ ಕ್ಷೇತ್ರದಲ್ಲಿನ ವೃತ್ತಿಗಳೆಂದರೆ ಡೇಟಾ ಸೈಂಟಿಸ್ಟ್‌, ಡೇಟಾಬೇಸ್ ಅಡ್ಮಿನಿಸ್ಟ್ರೇಟರ್, ಅಪ್ಲಿಕೇಷನ್ ಅನಾಲಿಸ್ಟ್, ವೆಬ್ ಡಿಸೈನರ್, ಟೆಕ್ನಿಕಲ್ ಸಪೋರ್ಟ್, ಸೈಬರ್ ಸೆಕ್ಯೂರಿಟಿ, ಮೊಬೈಲ್ ಆ್ಯಪ್‌ ಡೆವಲಪ್‌ಮೆಂಟ್ ಇತ್ಯಾದಿ. ಸರ್ಕಾರಿ ಮತ್ತು ಖಾಸಗಿ ಕ್ಷೇತ್ರದಲ್ಲಿ ಈ ವೃತ್ತಿಗಳನ್ನು ಅನುಸರಿಸಬಹುದು.

12. ಬಿಎಸ್‌ಸಿ (ಸಿಬಿಝೆಡ್) ಅಂತಿಮ ವರ್ಷದ ವಿದ್ಯಾರ್ಥಿಯಾಗಿದ್ದು ಅರಣ್ಯ ಇಲಾಖೆಯ ಆರ್‌ಎಫ್‌ಒ ಮತ್ತು ಡಿಆರ್‌ಎಫ್‌ಒ ಕೆಲಸಗಳಿಗೆ ಸೇರುವ ಆಸೆ ಇದೆ. ಸೂಕ್ತ ಸಲಹೆ ನೀಡಿ.

ಶಂಕರಗೌಡ ತಡಹಾಳ, ಆಳಗವಾಡಿ

ಆರ್‌ಎಫ್‌ಒ ಹುದ್ದೆಗೆ ಪದವಿ ಪರೀಕ್ಷೆಯಲ್ಲಿ ಕನಿಷ್ಠ ಶೇ 50 ಅಂಕ ಗಳಿಸಿರಬೇಕು. ಕರ್ನಾಟಕ ಅರಣ್ಯ ಇಲಾಖೆಗೆ ಅರ್ಜಿ ಸಲ್ಲಿಸಿದ ನಂತರ ಪೂರ್ವಭಾವಿ ಮತ್ತು ಮುಖ್ಯ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು. ಇದಾದ ನಂತರ ದೇಹದಾರ್ಢ್ಯತೆ, ವೈದ್ಯಕೀಯ ಮತ್ತು ದೈಹಿಕ ತಾಳ್ವಿಕೆ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಬೇಕು. ಈ ಎಲ್ಲಾ ಪರೀಕ್ಷೆಗಳ ಆಧಾರದ ಮೇಲೆ ನೇಮಕಾತಿಯಾಗುತ್ತದೆ. ಡಿಆರ್‌ಎಫ್‌ಒ ಹುದ್ದೆಗೆ ಪಿಯುಸಿ ಪರೀಕ್ಷೆಯ ನಂತರ ಅರ್ಹತೆ ಸಿಗುತ್ತದೆ. ನೇಮಕಾತಿ ಪ್ರಕ್ರಿಯೆ ಎರಡು ಹುದ್ದೆಗಳಿಗೂ ಸಮಾನವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಗಮನಿಸಿ: https://kfdrecruitment.in/

13. ನಾನು ಡಿಪ್ಲೊಮಾ ಕೋರ್ಸ್/ಎನ್‌ಐಒಎಸ್ ಕೋರ್ಸ್ ನಂತರ ಸಬ್ ಇನ್‌ಸ್ಪೆಕ್ಟರ್ ಹುದ್ದೆಗೆ ಅರ್ಜಿ ಸಲ್ಲಿಸಬಹುದೇ?

ಹೆಸರು, ಊರು ತಿಳಿಸಿಲ್ಲ.
ಎನ್‌ಐಒಎಸ್ ಕೋರ್ಸ್‌ಗಳಿಗೆ ಸರ್ಕಾರದ ಮಾನ್ಯತೆಯಿದೆ. ಸಬ್ ಇನ್‌ಸ್ಪೆಕ್ಟರ್ ಹುದ್ದೆಗೆ ಯಾವುದಾದರೂ ಪದವಿ ಅಥವಾ ತತ್ಸಮಾನ ಕೋರ್ಸ್ ಮಾಡಿರಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.