ADVERTISEMENT

ಕೆ–ಸೆಟ್‌ ನಾಳೆ: ಮೈಸೂರು ವಿ.ವಿ ಸಜ್ಜು

ರಾಜ್ಯದಲ್ಲಿ 11 ನೋಡಲ್‌ ಕೇಂದ್ರ ಸ್ಥಾಪನೆ l 84 ಸಾವಿರ ಅಭ್ಯರ್ಥಿಗಳು

​ಪ್ರಜಾವಾಣಿ ವಾರ್ತೆ
Published 23 ಜುಲೈ 2021, 20:05 IST
Last Updated 23 ಜುಲೈ 2021, 20:05 IST
ವಿಶ್ವವಿದ್ಯಾಲಯ ಲಾಂಛನ
ವಿಶ್ವವಿದ್ಯಾಲಯ ಲಾಂಛನ   

ಮೈಸೂರು: ಕರ್ನಾಟಕ ರಾಜ್ಯ ಉಪನ್ಯಾಸಕರ ಅರ್ಹತಾ ಪರೀಕ್ಷೆ ಯನ್ನು (ಕೆ–ಸೆಟ್‌) ಜುಲೈ 25ರಂದು ನಡೆಸಲು ಮೈಸೂರು ವಿಶ್ವವಿದ್ಯಾಲಯ ಸಜ್ಜಾಗಿದೆ.

ಬೆಂಗಳೂರು, ಮೈಸೂರು, ಬೆಳಗಾವಿ, ಬಳ್ಳಾರಿ, ವಿಜಯಪುರ, ದಾವಣಗೆರೆ, ಧಾರವಾಡ, ಕಲಬುರ್ಗಿ, ಮಂಗಳೂರು, ಶಿವಮೊಗ್ಗ ಮತ್ತು ತುಮಕೂರಿನಲ್ಲಿರುವ ನೋಡಲ್‌ ಕೇಂದ್ರಗಳಲ್ಲಿ 41 ವಿಷಯಗಳಲ್ಲಿ ಪರೀಕ್ಷೆ ನಡೆಯಲಿದೆ. ಒಟ್ಟು 84 ಸಾವಿರ ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.

ಕೋವಿಡ್‌ ಮಾರ್ಗಸೂಚಿ ಅನುಸಾರ ಪರೀಕ್ಷಾ ಕೇಂದ್ರಗಳಲ್ಲಿ ಸ್ಯಾನಿಟೈಸ್‌ ಮಾಡಲಾಗಿದೆ. ಪ್ರತಿ ಕೊಠಡಿಯಲ್ಲಿ 24 ಅಭ್ಯರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿದೆ. ಕೋವಿಡ್‌ ಲಸಿಕೆ ಪಡೆದಿರುವ ಸಿಬ್ಬಂದಿಯನ್ನೇ ಪರೀಕ್ಷಾ ಕಾರ್ಯಕ್ಕೆ ನಿಯೋಜಿಸಲಾಗಿದೆ.

ADVERTISEMENT

‘ಜುಲೈ 25ರಂದು ಬೆಳಿಗ್ಗೆ 9.30ರಿಂದ ಮಧ್ಯಾಹ್ನ 1ರವರೆಗೆ ಪರೀಕ್ಷೆ ನಡೆಯಲಿದೆ. ಎಲ್ಲಾ ಅಭ್ಯರ್ಥಿಗಳು ಬೆಳಿಗ್ಗೆ 8ಕ್ಕೆ ಪರೀಕ್ಷೆ ಕೇಂದ್ರದಲ್ಲಿ ಹಾಜರಿರಬೇಕು. ಜೊತೆಗೆ ಕಡ್ಡಾಯವಾಗಿ ಮಾಸ್ಕ್ ಮತ್ತು ಪ್ರವೇಶ ಪತ್ರವನ್ನು ತರಬೇಕು’ ಎಂದು ಕೆ–ಸೆಟ್‌ ಸಂಯೋಜಕ ಪ್ರೊ.ಎಚ್.ರಾಜಶೇಖರ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕೋವಿಡ್‌ ಅಥವಾ ರೋಗ ಲಕ್ಷಣಗಳು ಇರುವವರಿಗೆ ಪರೀಕ್ಷಾ ಕೇಂದ್ರಗಳಲ್ಲಿ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲಾಗಿದೆ. ಹೀಗಾಗಿ, ಅಭ್ಯರ್ಥಿಗಳು ಆತಂಕ ಪಡದೆ ಪರೀಕ್ಷೆ ಬರೆಯಬೇಕು’ ಎಂದು ಮನವಿ ಮಾಡಿದರು.

‘ಈ ಹಿಂದೆ ಕೆಲ ಅಭ್ಯರ್ಥಿಗಳು ಪ್ರವೇಶ ಪತ್ರಗಳನ್ನು ಡೌನ್‌ಲೋಡ್‌ ಮಾಡಿಕೊಂಡಿರಲಿಲ್ಲ. ಅವರಿಗೆ ಮತ್ತೆ ಡೌನ್‌ಲೋಡ್‌ಗೆ ಅವಕಾಶ ನೀಡಲಾಗಿತ್ತು. ಪ್ರವೇಶ ಪತ್ರ ಕಳೆದುಕೊಂಡವರ ಅನುಕೂಲಕ್ಕಾಗಿ ನಕಲು ಪ್ರವೇಶ ಪತ್ರ ನೀಡುವ ವ್ಯವಸ್ಥೆ ಮಾಡಲಾಗಿದೆ. ಈಗಾಗಲೇ ನೋಂದಣಿ ಮಾಡಿಕೊಂಡಿರುವ ವಿದ್ಯಾರ್ಥಿಗಳು ಹೆಸರು ಅಥವಾ ನೋಂದಣಿ ಸಂಖ್ಯೆಯನ್ನು ನೋಡಲ್‌ ಕೇಂದ್ರದಲ್ಲಿ ನೀಡಿದರೆ, ಅವರ ದಾಖಲೆ ಹಾಗೂ ಹೆಸರನ್ನು ಪರಿಶೀಲಿಸಿ ನಕಲು ಪ್ರವೇಶ ಪತ್ರ ಕೊಡಲಾಗುತ್ತದೆ’ ಎಂದು ತಿಳಿಸಿದರು.

ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಸುಪರ್ದಿಯಲ್ಲಿ ನಡೆಯುವ ಈ ಪರೀಕ್ಷೆಗೆ ಮೈಸೂರು ವಿಶ್ವವಿದ್ಯಾಲಯವು ನೋಡಲ್‌ ಏಜೆನ್ಸಿಯಾಗಿ ಕಾರ್ಯನಿರ್ವಹಿಸುತ್ತಿದೆ. ಇದುವರೆಗೆ 9 ಬಾರಿ ಪರೀಕ್ಷೆ ನಡೆಸಿದ್ದು, ಈಗ ನಡೆಯಬೇಕಿರುವುದು 10ನೆಯದ್ದು.

ಏ.11ರಂದು ನಿಗದಿಯಾಗಿದ್ದ ಕೆ–ಸೆಟ್‌ ಪರೀಕ್ಷೆಯನ್ನು ಈಗಾಗಲೇ ಎರಡು ಬಾರಿ ಮುಂದೂಡಲಾಗಿತ್ತು. ಸಾರಿಗೆ ನೌಕರರ ಮುಷ್ಕರ ಕಾರಣ 11ರಿಂದ ಏ.25ಕ್ಕೆ ಮುಂದೂಡಲಾಗಿತ್ತು. ಕೊರೊನಾ ಸೋಂಕು ನಿಯಂತ್ರಿಸಲು ಕರ್ಫ್ಯೂ ವಿಧಿಸಿದ್ದ ಕಾರಣ ಎರಡನೇ ಬಾರಿ ಮುಂದಕ್ಕೆ ಹಾಕಲಾಗಿತ್ತು.

***

ಅಭ್ಯರ್ಥಿಗಳ ಸುರಕ್ಷತೆಯೇ ನಮ್ಮ ಆದ್ಯತೆ. ಕೋವಿಡ್‌ ಮಾರ್ಗಸೂಚಿ ಪಾಲಿಸಲು ಎಲ್ಲ ಕೇಂದ್ರಗಳಿಗೆ ಸೂಚಿಸಲಾಗಿದೆ.

- ಪ್ರೊ.ಎಚ್. ರಾಜಶೇಖರ್‌, ಕೆ–ಸೆಟ್‌ ಸಂಯೋಜಕ

ಮೊದಲ ಬಾರಿಗೆ ಕೆ–ಸೆಟ್‌ ಪರೀಕ್ಷೆ ಬರೆಯುತ್ತಿದ್ದೇನೆ. ಪ್ರವೇಶಪತ್ರ ಕಳೆದುಕೊಂಡಿದ್ದೆ. ನಕಲು ಪ್ರವೇಶಪತ್ರ ಸಿಕ್ಕಿದ್ದರಿಂದ ಖುಷಿಯಾಗಿದೆ

- ಕೆ.ಎಂ. ನಾಗೇಶ್‌, ಕೆ–ಸೆಟ್‌ ಅಭ್ಯರ್ಥಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.