ADVERTISEMENT

ನಿಮ್ಮ ಪ್ರಶ್ನೆಗೆ ತಜ್ಞರ ಉತ್ತರ | ದೈಹಿಕ ಶಿಕ್ಷಣ ಕೋರ್ಸ್, ಅವಕಾಶಗಳು ಭರಪೂರ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2021, 19:30 IST
Last Updated 19 ಸೆಪ್ಟೆಂಬರ್ 2021, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಸರ್, ನಾನು ಬಿಕಾಂ ಪದವಿಯನ್ನು ಮುಗಿಸಿ ಬಿಪಿಇಡಿ ಮಾಡಲು ಬಯಸುತ್ತಿದ್ದೇನೆ. ಇದನ್ನು ಯಾವ ವಿಶ್ವವಿದ್ಯಾಲಯದಲ್ಲಿ ಮಾಡಿದರೆ ಒಳ್ಳೆಯದು; ಇದರ ಅವಕಾಶಗಳೇನು?

ಗುಡಿಯಪ್ಪರ ಲಕ್ಷ್ಮಣ ದೇವರ, ಹರಪನಹಳ್ಳಿ

ಬಿಪಿಇಡಿ ಕೋರ್ಸ್ ದೈಹಿಕ ಮತ್ತು ಮಾನಸಿಕ ಆರೋಗ್ಯ, ಮತ್ತು ಸ್ವಾಸ್ಥ್ಯಕ್ಕೆ ಸಂಬಂಧಿಸಿದ ಸವಿಸ್ತಾರವಾದ ಶಿಕ್ಷಣವನ್ನು ನೀಡಿ, ಈ ಕ್ಷೇತ್ರದಲ್ಲಿ ವೃತ್ತಿ ಜೀವನವನ್ನು ರೂಪಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ಅನುವು ಮಾಡುತ್ತದೆ. ಈ ಪದವಿಯ ನಂತರ ಶಾಲಾ ಕಾಲೇಜುಗಳು, ಜಿಮ್ ಮತ್ತು ಫಿಟ್‌ನೆಸ್ ಸಂಸ್ಥೆಗಳು, ಕ್ರೀಡೆ ಮತ್ತು ಸಂಬಂಧಿತ ಸಂಸ್ಥೆಗಳು, ಮಾಧ್ಯಮ ಸಂಸ್ಥೆಗಳು, ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು, ಎನ್‌ಜಿಒ ಸಂಸ್ಥೆಗಳು, ಇತ್ಯಾದಿ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶಗಳಿವೆ. ಆರೋಗ್ಯವಂತ ಸಮಾಜದ ನಿರ್ಮಾಣಕ್ಕೆ ದೈಹಿಕ ಶಿಕ್ಷಣ ಅತ್ಯಗತ್ಯ. ಪದವಿಯ ನಂತರ ಬಿಪಿಇಡಿ ಸಾಮಾನ್ಯವಾಗಿ ಎರಡು ವರ್ಷದ ಕೋರ್ಸ್ ಆಗಿದ್ದರೂ ಕೆಲವೆಡೆ ಒಂದು ವರ್ಷದ ಕೋರ್ಸ್ ಸಹಾ ಲಭ್ಯ. ಕೆಲವು ವಿಶ್ವವಿದ್ಯಾಲಯಗಳಲ್ಲಿ ದೈಹಿಕ ಶಿಕ್ಷಣದ ಜೊತೆಗೆ ಕ್ರೀಡಾ ವಿಜ್ಞಾನವನ್ನೂ ಸೇರಿಸಿ ಕೋರ್ಸಿನ ಮೌಲ್ಯವನ್ನು ವೃದ್ಧಿಸಲಾಗಿದೆ. ಸಾಮಾನ್ಯವಾಗಿ, ಕೋರ್ಸ್ ಪ್ರವೇಶಕ್ಕೆ ಮುನ್ನ ಅಭ್ಯರ್ಥಿಗಳ ದೈಹಿಕ ಸಾಮರ್ಥ್ಯ, ದಾರ್ಢ್ಯತೆ ಮತ್ತು ಸದೃಢತೆಯನ್ನು ಪರೀಕ್ಷಿಸಲಾಗುತ್ತದೆ. ಹಾಗಾಗಿ, ನಿಮ್ಮ ಆಸಕ್ತಿ ಮತ್ತು ವೃತ್ತಿ ಜೀವನದ ಯೋಜನೆಯ ಅನುಸಾರ ವಿಶ್ವವಿದ್ಯಾಲಯದ ಆಯ್ಕೆ ಮಾಡಬಹುದು.

ADVERTISEMENT

***

ನಾನು ಕರ್ನಾಟಕ ಚಿತ್ರ ಕಲಾ ಪರಿಷತ್ ಕಾಲೇಜಿನಲ್ಲಿ ಆರ್ಟ್ ಹಿಸ್ಟರಿ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಮಾಡುತ್ತಿದ್ದೇನೆ. ಪಿಎಚ್‌ಡಿ ಯಾವ ವಿಷಯದಲ್ಲಿ ಮಾಡಬಹುದು ಎಂದು ತಿಳಿಸಿ. ಆರ್ಟ್ ಹಿಸ್ಟರಿ ವಿಭಾಗದ ಉದ್ಯೋಗಾವಕಾಶಗಳ ಬಗ್ಗೆ ಮಾಹಿತಿ ನೀಡಿ.

ಹೆಸರು ತಿಳಿಸಿಲ್ಲ, ಬೆಂಗಳೂರು

ಪಿಎಚ್‌ಡಿ ಸಂಶೋಧನೆ ಕುರಿತು ಸಾಕಷ್ಟು ಸಂಪನ್ಮೂಲಗಳು ಇದ್ದರೂ ಸಹ ವಿಷಯವನ್ನು ನಿರ್ಧರಿಸುವುದು ಸುಲಭವಲ್ಲ. ವಿಷಯದ ಪ್ರಸ್ತುತತೆ, ವಿಷಯದ ಕುರಿತು ಸ್ವಾಭಾವಿಕವಾದ ಒಲವು ಮತ್ತು ಪ್ರೇರಣೆಯ ಜೊತೆಗೆ ಮಾರ್ಗದರ್ಶಕರ ಸಕಾರಾತ್ಮಕ ಅಭಿಪ್ರಾಯ ಮತ್ತು ಬೆಂಬಲವಿರಬೇಕು. ಹಾಗಾಗಿ, ವಿಷಯದ ಕುರಿತು ಪ್ರಾಥಮಿಕ ಸಂಶೋಧನೆ ಅಗತ್ಯ.

ಪಿಎಚ್‌ಡಿ ನಂತರ ಕಾಲೇಜು/ ವಿಶ್ವವಿದ್ಯಾಲಯಗಳಲ್ಲಿ ಶಿಕ್ಷಕ ವೃತ್ತಿ, ಸಂಶೋಧನೆ, ಆರ್ಟ್ ಡಿಸೈನರ್, ಇಂಟೀರಿಯರ್ ಡಿಸೈನರ್, ಚಿತ್ರೋದ್ಯಮ ಮತ್ತು ಮನರಂಜನಾ ಕ್ಷೇತ್ರ, ಮ್ಯೂಸಿಯಮ್ಸ್, ಸ್ವಯಂ ಉದ್ಯೋಗ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ವೃತ್ತಿ ಜೀವನವನ್ನು ರೂಪಿಸಿಕೊಳ್ಳಬಹುದು.

***

ಪದವಿಯ ನಂತರ ವೃತ್ತಿ ಜೀವನವನ್ನು ರೂಪಿಸಿಕೊಳ್ಳಲು ಸ್ಪರ್ಧಾತ್ಮಕ ಪರೀಕ್ಷೆ ಒಳ್ಳೆಯದೇ ಅಥವಾ ಕೋರ್ಸ್ ಒಳ್ಳೆಯದೇ?

ಸುಂಕ, ಬಳ್ಳಾರಿ

ನಾನು ಬಿಎಸ್‌ಸಿ ಮೊದಲ ವರ್ಷ ಓದುತ್ತಿದ್ದೇನೆ. ಪದವಿ ನಂತರ ಮುಂದೆ ಯಾವ ಪರೀಕ್ಷೆಗಳನ್ನು ಬರೆಯಬೇಕು. ಅದಕ್ಕಾಗಿ ಯಾವ ಪುಸ್ತಕಗಳನ್ನು ಓದಬೇಕು ತಿಳಿಸಿ.

ಸಿಂಧು ಮಹೇಂದ್ರಕರ್, ಊರು ತಿಳಿಸಿಲ್ಲ

ನೀವು ನೀಡಿರುವ ಮಾಹಿತಿಯ ಪ್ರಕಾರ ವೃತ್ತಿಯ ಯೋಜನೆಯನ್ನು ಮಾಡಿದ್ದೀರಾ ಎಂಬುದು ತಿಳಿಯದು. ವೃತ್ತಿಯ ಯೋಜನೆಯಿಲ್ಲದೆ ಕೋರ್ಸ್ ಆಯ್ಕೆ ಮಾಡಿದರೆ ಇಂತಹ ಗೊಂದಲಗಳು ಸ್ವಾಭಾವಿಕ. ಈಗಲೂ, ನಿಮ್ಮ ಸಾಮರ್ಥ್ಯ ಮತ್ತು ಆಸಕ್ತಿಯ ಆಧಾರದ ಮೇಲೆ ಸೂಕ್ತವಾದ ವೃತ್ತಿಯ ಯೋಜನೆಯನ್ನು ಮಾಡಿದರೆ, ವಿದ್ಯಾಭ್ಯಾಸವನ್ನು ಮುಂದುವರಿಸಬೇಕಾ ಅಥವಾ ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ವೃತ್ತಿಯನ್ನು ಅರಸಬೇಕಾ ಎನ್ನುವುದು ಅರಿವಾಗುತ್ತದೆ ಮತ್ತು ಮುಂದಿನ ಹಾದಿ ಸ್ಪಷ್ಟವಾಗುತ್ತದೆ.

***

ಈಗ ಅಂತಿಮ ವರ್ಷದ ಪದವಿ (ಬಿಎಸ್‌ಸಿ) ಓದುತ್ತಿದ್ದೇನೆ. ನನಗೆ ಯುಪಿಎಸ್‌ಸಿ ಪರೀಕ್ಷೆ ಬರೆದು ಒಳ್ಳೆಯ ಕೆಲಸಕ್ಕೆ ಹೋಗುವ ಆಸೆ. ಆದರೆ ನಾನು ಓದುತ್ತಿರುವ ಪದವಿಗೂ ಹಾಗೂ ಆಯ್ಕೆ ಮಾಡಿಕೊಂಡಿರುವ ಪರೀಕ್ಷೆಗೂ ಸಂಬಂಧವಿಲ್ಲ. ನಾನು ಏನು ಮಾಡಬೇಕು?

ವೆಂಕಟೇಶ್, ಊರು ತಿಳಿಸಿಲ್ಲ.

ಮೊದಲು ವೃತ್ತಿ ಜೀವನದ ಯೋಜನೆಯನ್ನು ಮಾಡಿ ಅದರಂತೆ ಕೋರ್ಸ್ ಆಯ್ಕೆ ಮಾಡಿಕೊಂಡಿದ್ದರೆ ಇಂತಹ ಸಮಸ್ಯೆಗಳು ಉದ್ಭವವಾಗುತ್ತಿರಲಿಲ್ಲ. ಯುಪಿಎಸ್‌ಸಿ ಪರೀಕ್ಷೆಯನ್ನು ಯಾವುದೇ ಪದವಿಯ ನಂತರ ಮಾಡಬಹುದು. ಹಾಗಾಗಿ, ನಿಮ್ಮೆಲ್ಲಾ ಚೈತನ್ಯ ಮತ್ತು ಪರಿಶ್ರಮವನ್ನು ಯುಪಿಎಸ್‌ಸಿ ಪರೀಕ್ಷೆಯ ತಯಾರಿಯತ್ತ ಕೇಂದ್ರೀಕರಿಸಿ, ಅದರಲ್ಲಿ ಯಶಸ್ಸನ್ನು ಗಳಿಸಿ. ಅಗತ್ಯವಿದ್ದರೆ, ಯುಪಿಎಸ್‌ಸಿ ಪರೀಕ್ಷೆಯ ತರಬೇತಿ ಪಡೆಯಿರಿ. ಶುಭಹಾರೈಕೆಗಳು.

***

ನಾನು ಪಿಯುಸಿಯಲ್ಲಿ ಒಂದು ಬಾರಿ ಅನುತ್ತೀರ್ಣಳಾಗಿ ಅನಂತರ ಉತ್ತೀರ್ಣಳಾದೆ. ಆದರೆ ಮನೆಯಲ್ಲಿ ಹಣಕಾಸಿನ ಸಮಸ್ಯೆ ಇರುವ ಕಾರಣ ದುಡಿಯಬೇಕಾದ ಪರಿಸ್ಥಿತಿಯಲ್ಲಿದ್ದೇನೆ. ಹಾಗಾಗಿ ನನಗೆ ಎಸ್‌ಡಿಎ ಪರೀಕ್ಷೆಯ ಬಗ್ಗೆ ಮಾಹಿತಿ ನೀಡಿ ಅಥವಾ ಬೇರೆ ಸರ್ಕಾರಿ ಹುದ್ದೆಗಳ ಬಗ್ಗೆ ಮಾಹಿತಿ ನೀಡಿ.

ಪ್ರಮೇಯ, ತುಮಕೂರು

ಕರ್ನಾಟಕ ಸರ್ಕಾರದ ಎಸ್‌ಡಿಎ ಮತ್ತು ಇನ್ನಿತರ ಹುದ್ದೆಗಳ ಸ್ಪರ್ದಾತ್ಮಕ ಪರೀಕ್ಷೆಗಳ ವಿವರಗಳಿಗಾಗಿ ಗಮನಿಸಿ:https://prepp.in/kpsc-exam

***

7. ಸರ್, ನನಗೆ ಅಪ್ಪ– ಅಮ್ಮ ಇಲ್ಲ. ನಾನೇ ಕೆಲಸ ಮಾಡಿ ಓದುತ್ತಿದ್ದೇನೆ. ಈಗ ನಾನು ಬಿಕಾಂ ಮೊದಲನೇ ವರ್ಷ. ನನಗೆ ಅಕೌಂಟ್‌ಲ್ಲಿ ಪ್ರಾಕ್ಟೀಸ್‌ಗೆ ಹೋಗಬೇಕೋ ಅಥವಾ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸಬೇಕೋ ಗೊಂದಲವಿದೆ? ನಾನು ಏನು ಮಾಡಬೇಕು ತಿಳಿಸಿ.

ಹೃತಿಕ್, ಕುಕನೂರು, ಕೊಪ್ಪಳ

ಅಕೌಂಟೆನ್ಸಿ ಕ್ಷೇತ್ರದಲ್ಲಿ ನಿಮಗೆ ಒಲವು ಮತ್ತು ಸ್ವಾಭಾವಿಕವಾದ ಪ್ರತಿಭೆಯಿದ್ದಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಕೋರ್ಸ್ ಅತ್ಯುತ್ತಮ ಆಯ್ಕೆ. ಇದು ಸರಿಹೊಂದುವುದಿಲ್ಲವೆಂದರೆ ಎಸಿಎಸ್, ಐಸಿಡಬ್ಲ್ಯು, ಎಂಕಾಂ, ಎಂಬಿಎ ಕೋರ್ಸ್‌ಗಳಲ್ಲಿ ಯಾವುದನ್ನಾದರೂ ಆಯ್ಕೆ ಮಾಡಿಕೊಳ್ಳಬಹುದು ಅಥವಾ ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ವೃತ್ತಿಯನ್ನು ಅರಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.