ADVERTISEMENT

ಓದು: ಏಕಾಂತದಲ್ಲಿಯ ಲೋಕಾಂತ

ಪ್ರಜ್ಞಾ ಮತ್ತಿಹಳ್ಳಿ
Published 26 ಜುಲೈ 2021, 19:30 IST
Last Updated 26 ಜುಲೈ 2021, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಅ ದೃಶ್ಯ ವೈರಾಣುವಿನೊಡನೆ ಹೋರಾಡುತ್ತ ವರ್ಷದ ಮೇಲೆ ವರ್ಷ ಉರುಳುತ್ತಿದೆ. ಅನಿಯಮಿತ ಪರೀಕ್ಷೆ, ಸಾಮಿಪ್ಯರಹಿತ ಪಾಠ-ಪ್ರವಚನಗಳಿಂದ ಯುವ ಸಮುದಾಯದ ಮೇಲೆ ಅಗೋಚರ ಒತ್ತಡಗಳು ಸೃಷ್ಟಿಯಾಗಿವೆ. ದೂರಪ್ರಯಾಣ, ಉಲ್ಲಾಸದ ಪ್ರವಾಸಗಳು ಸಾಧ್ಯವಾಗುತ್ತಿಲ್ಲವಾದ್ದರಿಂದ ಅದೇ ನಾಲ್ಕು ಗೋಡೆಯ ನಡುವೆ ಬದುಕುವ ಏಕತಾನತೆಯಿಂದ ಬಿಡುಗಡೆ ಹೊಂದಬೇಕೆಂದು ಮನಸ್ಸು ಚಡಪಡಿಸುತ್ತಿದೆ. ನಾವಿರುವ ಜಾಗದಲ್ಲಿ ಇರುವಂತೆಯೇ ಬೇರೊಂದು ಪ್ರಪಂಚವನ್ನು ಪ್ರವೇಶಿಸಿ ಜೀವಿಸಲಿಕ್ಕೆ ಮನುಷ್ಯರಿಗೆ ಸಾಧ್ಯವಿದೆಯೆ? ‘ಹೌದು’ ಎನ್ನುತ್ತಿದೆ ಅಕ್ಷರ ಲೋಕದ ಹೆಬ್ಬಾಗಿಲಿನ ಮೇಲೆ ಕುಳಿತಿರುವ ಅರಗಿಳಿ.

ಪುಸ್ತಕವನ್ನು ಓದುವುದು ಎಂದರೆ ಶಬ್ದಗಳ ಮೂಲಕ ಚಿತ್ರಬಿಂಬಗಳನ್ನು ನಮ್ಮ ಮನಸ್ಸಿನಲ್ಲಿ ಮೂಡಿಸಿಕೊಳ್ಳುತ್ತ, ವಾಸನೆ, ರುಚಿ, ಸ್ಪರ್ಶಗಳ ಕ್ಷಣಗಳನ್ನು ರೂಪಿಸಿಕೊಳ್ಳುತ್ತ, ನಮ್ಮ ಇಂದ್ರಿಯಗಳು ತಮ್ಮಷ್ಟಕ್ಕೆ ಅಚ್ಚೊತ್ತಿಕೊಳ್ಳುವ ಸಂವೇದನೆಗಳನ್ನು ಮನೋಚಿತ್ರವಾಗಿಸಿಕೊಂಡು ವಾಸ್ತವದ ಅನುಭವವನ್ನೇ ಕೊಡಮಾಡುವ ಒಂದು ಪ್ರಕ್ರಿಯೆ. ಆದ್ದರಿಂದ ಕಥೆ-ಕಾದಂಬರಿ ಅಥವಾ ಮಹಾಕಾವ್ಯಗಳನ್ನು ಓದುವಾಗ ನಾವು ಆ ಪಾತ್ರಲೋಕದೊಳಗೆ ಒಂದಾಗಿ ಹೋಗಿ ಅವರ ಕಷ್ಟ-ಕಾರ್ಪಣ್ಯಗಳಿಗೆ ಕೊರಗುತ್ತ, ಅವರ ಸುಖ-ಸಂತೋಷಗಳಿಗೆ ಸಂಭ್ರಮಿಸುತ್ತ ನಮ್ಮ ನಿಜ ಬದುಕಿನ ಏಕತಾನತೆಯನ್ನು ಮೀರಿಬಿಡುತ್ತೇವೆ. ಪುಸ್ತಕದ ಒಳಗಿನ ಜಗತ್ತು ಓದುಗನನ್ನು ಎಷ್ಟರಮಟ್ಟಿಗೆ ತನ್ನೊಳಗೆ ಕರಗಿಸಿಕೊಳ್ಳುತ್ತದೆಯೆಂದರೆ ಓದಿ ಮುಗಿದ ಎಷ್ಟೋ ದಿನಗಳವರೆಗೆ ಆ ಗುಂಗಿನಿಂದ ಹೊರಗೆ ಬರುವುದು ಅಸಾಧ್ಯವಾಗುತ್ತದೆ. ಪುಸ್ತಕಗಳ ಓದು ಕೇವಲ ಕಾಲಕ್ಷೇಪ ಅಥವಾ ಮನರಂಜನೆಗಷ್ಟೇ ಕಾರಣವಾಗುವುದಿಲ್ಲ, ಮನುಷ್ಯ ಸಂಬಂಧಗಳ ವಿಶ್ಲೇಷಣೆ, ತನ್ಮೂಲಕ ಆರೋಗ್ಯಕರ ಸಮಾಜದ ನಿರ್ಮಾಣಕ್ಕೂ ಮುನ್ನುಡಿ ಬರೆಯುತ್ತದೆ. ಆದರೆ ಈ ನಿಟ್ಟಿನಲ್ಲಿ ಬಹುಮುಖ್ಯವಾದ ಅಂಶವೆಂದರೆ ನಾವು ಆಯ್ಕೆ ಮಾಡಿಕೊಳ್ಳುವ ಪುಸ್ತಕ. ಕೇವಲ ರಂಜನೆಯನ್ನೇ ಗುರಿಯಾಗಿರಿಸಿಕೊಂಡಿರುವ ಪುಸ್ತಕಗಳ ಓದಿನಿಂದ ಹೆಚ್ಚಿನ ಪರಿಣಾಮ ಪ್ರಾಪ್ತಿಯಾಗುವುದಿಲ್ಲ. ಜೀವನ ಮೌಲ್ಯಗಳೆಂಬ ರಸಗಟ್ಟಿಗಳನ್ನು ಹುದುಗಿಸಿಕೊಂಡು ರಸ-ಭಾವಗಳ ಹದಮಿಶ್ರಣದಲ್ಲಿ ಸಿದ್ಧಗೊಂಡ ಸುರಪಾಕದಂತಹ ಕೃತಿಗಳನ್ನು ಓದಿದರೆ ಮನಸ್ಸು ದೇವಗಂಗೆಯಲ್ಲಿ ಮಿಂದು ಬಂದ ಸುಖಾನುಭೂತಿಗೆ ಒಳಗಾಗುತ್ತದೆ. ಆ ಪಾತ್ರಗಳ ಜೊತೆಗೆ ಲೀನವಾಗಿ ಕಾಲ-ದೇಶದಾಚೆಗೆ ಪರ್ಯಟನ ಮಾಡಿ ನಿಜಾನಂದವನ್ನು ಗಳಿಸಿಕೊಳ್ಳುತ್ತದೆ.

ರಾಮಾಯಣ-ಮಹಾಭಾರತ ಇತ್ಯಾದಿ ಮಹಾಕಾವ್ಯಗಳು ಅಥವಾ ಕಾರಂತ-ಕುವೆಂಪು ಮುಂತಾದವರ ಕೃತಿಗಳು ಅನೇಕ ತಲೆಮಾರುಗಳ ನಂತರವೂ ಓದುಗನನ್ನು ತಲುಪಬಲ್ಲ ಅಮೃತ ಫಲ ಹೊತ್ತ ಮರಗಳಂತೆ ನಿಂತಿವೆ. ಈ ಪುಸ್ತಕಗಳು ತಮ್ಮ ರಚನೆಯ ಎಷ್ಟೋ ವರ್ಷಗಳ ಕ್ರಮಿಸುವಿಕೆಯಲ್ಲಿ ಜನಾಂಗದ ಅಭಿರುಚಿ ಬದಲಾವಣೆಯ ಪರೀಕ್ಷೆಗಳನ್ನು ಗೆದ್ದುಕೊಂಡು ವಿಜಯಿಯಾಗಿರಲು ಕಾರಣ ಅವುಗಳಲ್ಲಿನ ವಿಷಯಕ್ಕಿರುವ ಸರ್ವಕಾಲಿಕ ಪ್ರಸ್ತುತತೆ. ಪ್ರಾಚೀನ ಕಾವ್ಯಗಳನ್ನು ಬರೆಯುವಾಗ ಕವಿಗಳು ಅದನ್ನೊಂದು ಪವಿತ್ರ ಕಾರ್ಯವೆಂದು ಭಾವಿಸಿ, ಅತ್ಯಂತ ಶುದ್ಧ ಹೃದಯದಿಂದ ಭಗವದರ್ಪಣೆಯ ಗೌರವದೊಂದಿಗೆ ಬರೆದಿದ್ದಾರೆ. ಛಂದೋಬದ್ಧವಾಗಿ ರಚಿತವಾದ ಪ್ರಾಚೀನ ಗ್ರಂಥಗಳನ್ನು ಓದಿದರೆ ಕೆಲವು ವೃತ್ತದಲ್ಲಿರುವ ಸಾಲುಗಳು ಗುಡ್ಡ ಹತ್ತುವ ಅಂದರೆ ಚಾರಣದ ಅನುಭವಗಳನ್ನು, ಕೆಲವು ವೃತ್ತದಲ್ಲಿರುವ ಸಾಲು ಮಂದ ಮಾರುತದ ಸೋಂಕಿನ ಅನುಭವವನ್ನು ನೀಡುತ್ತವೆ. ರನ್ನನ ಗದಾಯುದ್ಧದ ‘ಧಪ್ಪರಿ ದಟ್ಟುಂ ಪೊಟ್ಟೆನೆ ಧೊಪ್ಪ ದೊಗಪ್ಪೆನೆ ದಿಧಿಲ್ ಬುಧಿಲ್ಲೆನೆನ ಸೊಪ್ಪು ಸವಡಪ್ಪಿನಂ’ ಎಂಬ ಪದ್ಯದ ಉದಾಹರಣೆ ನೋಡಬಹುದು. ಭೀಮ-ದುರ್ಯೋಧನರ ಗದಾಯುದ್ಧದ ವರ್ಣನೆ ಓದುವಾಗ ನಾವೇ ಹಾರಿ ನೆಗೆದು ವ್ಯಾಯಾಮ ಮಾಡಿದ ಪರಿಣಾಮ ಅನುಭವಕ್ಕೆ ಬರುತ್ತದೆ. ಕೆಲವು ಛಂದಸ್ಸಿನಲ್ಲಿ ಬರಹಗಳನ್ನು ಸ್ಪಷ್ಟ ಉಚ್ಚಾರ ಮಾಡಿ ಓದುವಾಗ ಉಸಿರಾಟದ ಏರಿಳಿತಗಳು ಪ್ರಾಣಾಯಾಮದ ಲಾಭವನ್ನೇ ನೀಡುತ್ತವೆ. ಈ ಎಲ್ಲ ಅಂಶಗಳನ್ನು ಮನಗಂಡ ನಮ್ಮ ಹಿರಿಯರು ಪ್ರಾಚೀನ ಗ್ರಂಥಗಳನ್ನು ನಿತ್ಯಪಾರಾಯಣ ಮಾಡಬೇಕೆಂದು ರೂಢಿಸಿಕೊಂಡಿದ್ದರು. ಅವುಗಳಲ್ಲಿನ ಮೌಲ್ಯಗಳು ಕ್ರಮೇಣ ಓದುಗನ ಮನದಾಳಕ್ಕಿಳಿದು ಅವನ ಸ್ವಭಾವವನ್ನು ಹದಗೊಳಿಸುತ್ತಿತ್ತು.

ADVERTISEMENT

ಮಾಸ್ತಿ, ಪು.ತಿ.ನ. ಅವರಿಂದ ಹಿಡಿದು ತೇಜಸ್ವಿಯವರ ತನಕ ಅನೇಕ ಸಾಹಿತಿಗಳು ಜನಮಾನಸಕ್ಕೆ ಉತ್ತಮ ಸಂದೇಶ ತಲುಪಿಸಿ, ಆರೋಗ್ಯಪೂರ್ಣ ಸಮಾಜವನ್ನು ಕಟ್ಟುವ ಸದಾಶಯ ಇಟ್ಟುಕೊಂಡಿದ್ದರು. ಆದ್ದರಿಂದ ಆ ಪುಸ್ತಕಗಳ ಓದನ್ನು ಒಂದು ರಸಯಾತ್ರೆಗೆ ಹೋಲಿಸಬಹುದು. ನಮ್ಮ ಹುಲುಬದುಕಿನ ಸಂಕಟಗಳನ್ನು ಎದುರಿಸುವ ತಾಕತ್ತನ್ನು ಓದು ದೊರಕಿಸಿಕೊಡುತ್ತದೆಯೆನ್ನುವುದು ಅನೇಕ ಅಧ್ಯಯನಗಳಲ್ಲೂ ದೃಢಪಟ್ಟಿದೆ. 2013ರಲ್ಲಿ ನಡೆದ ಸಂಶೋಧನೆಯೊಂದು ತಿಳಿಸಿರುವ ಪ್ರಕಾರ ಯೋಗ ಅಥವಾ ಧ್ಯಾನಗಳು ನೀಡುವಷ್ಟೇ ಪ್ರಮಾಣದ ಮಾನಸಿಕ ಪುನಶ್ಚೇತನದ ಪರಿಣಾಮವನ್ನು ಒಳ್ಳೆಯ ಓದಿನಿಂದಲೂ ಪಡೆದುಕೊಳ್ಳಬಹುದು.

ಮನೋತಜ್ಞರು ಅಭಿಪ್ರಾಯ ಪಡುವಂತೆ ಮನುಷ್ಯ ತನ್ನ ಜೀವನದ ಕುರಿತಾಗಿ ಮಾತ್ರ ಗಮನವನ್ನು ಕೇಂದ್ರೀಕರಿಸಿದಾಗ ಅವನ ಸಣ್ಣ-ಪುಟ್ಟ ಸಮಸ್ಯೆಗಳೂ ಕೂಡ ಆತನಿಗೆ ದೊಡ್ಡದಾಗಿ ಕಾಣುತ್ತವೆ. ನಾವು ಛಾಯಾಚಿತ್ರವನ್ನು ತೆಗೆಯುವಾಗ ಆ ವಸ್ತುವಿನ ಹತ್ತಿರ ಕ್ಯಾಮೆರಾವನ್ನು ತೆಗೆದುಕೊಂಡು ಹೋದರೆ ಅದು ಹೇಗೆ ಝೂಮ್ ಪರಿಣಾಮವನ್ನು ತೋರಿಸುತ್ತದೆಯೋ ಹಾಗೆಯೇ ಬದುಕಿನಲ್ಲಿಯೂ ಕೂಡ ಲಕ್ಷ್ಯದ ಕೇಂದ್ರೀಕರಿಸುವಿಕೆ ಬಹಳ ಮುಖ್ಯವಾಗುತ್ತದೆ. ಪುಸ್ತಕವನ್ನು ಓದುವಾಗ ನಮ್ಮ ಲಕ್ಷ್ಯ ಅದರಲ್ಲಿನ ಕತೆ-ಸನ್ನಿವೇಶ-ಪಾತ್ರಗಳು ಇವುಗಳ ಕುರಿತಾಗಿ ಕೇಂದ್ರೀಕೃತವಾಗುವುದರಿಂದ ಮನಸ್ಸು ತನ್ನ ಸ್ವಮರುಕದಿಂದ ಹೊರಬರುತ್ತದೆ. ದೇಶ ಸುತ್ತಿ ನೋಡಿದರೆ ಸಿಗುವ ಲಾಭವನ್ನು ಕೋಶ ಓದಿ ನೋಡಿದಾಗಲೂ ಪಡೆದುಕೊಳ್ಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.