ADVERTISEMENT

ಶಾಲಾರಂಭ: ಮಾನಸಿಕ ಸಿದ್ಧತೆಯೂ ಇರಲಿ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2021, 21:15 IST
Last Updated 22 ಆಗಸ್ಟ್ 2021, 21:15 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

‘ರಜಾ ಮಜಾ’ ಎಂಬ ಆಸೆಯು ಮಕ್ಕಳಲ್ಲಿ ಸಾಮಾನ್ಯ. ಆದರೆ ಈಗ ಸುದೀರ್ಘ 20 ತಿಂಗಳುಗಳ ಕಾಲ ರಜಾದ ಮಜಾವನ್ನು ಪಡೆದ ಪುಟಾಣಿಗಳಿಗೆ ‘ರಜೆ’ ಯು ‘ಸಜೆ’ ಎಂಬಂತಾಗಿದೆ. 6ನೇ ತರಗತಿ ಮೇಲ್ಪಟ್ಟ ಮಕ್ಕಳು ಈ ನಡುವೆ ಶಾಲೆಗೆ ಹೋದರೂ, ಅದು ಕೇವಲ ಮೂರು ತಿಂಗಳು ಮಾತ್ರ. ಕೋವಿಡ್‌ ಸಂಕಟದಿಂದ ಮನೆಯಲ್ಲಿಯೇ ಕುಳಿತ ಮಕ್ಕಳಿಗೆ, ಮಕ್ಕಳ ಪೋಷಕರಿಗೆ ಈಗ ಶಾಲಾರಂಭದ ಗಳಿಗೆಯು ಬರುತ್ತಿರುವುದು ಒಂದು ನವೋಲ್ಲಾಸವೇ ಸರಿ. ಕೆಲವರಲ್ಲಿ ಕೊರೊನಾ ಭಯವಿರುವುದು ಸಹಜ. ಆದರೂ ಶಾಲೆಗೆ ಹೋಗಬೇಕು ಎಂಬ ಆಶಯವನ್ನು ಹೊಂದಿದ ವಿದ್ಯಾರ್ಥಿಗಳಿಗೆ ಶಾಲಾರಂಭದ ಸುದ್ದಿಯು ಹೊಸ ಹುರುಪನ್ನು ನೀಡಿದೆ. ಶಾಲಾರಂಭಕ್ಕೆ ಒಂದಿನಿತು ಮಾನಸಿಕ ಸಿದ್ಧತೆಯ ಜೊತೆಗೆ ಆರೋಗ್ಯ ಕಾಳಜಿಯ ಸಿದ್ಧತೆಯೂ ಅತ್ಯಗತ್ಯ.

ಮನಸ್ಸು ಸನ್ನದ್ಧವಾಗಲಿ: ಸುದೀರ್ಘ ಅವಧಿಯನ್ನು ಮನೆಯಲ್ಲಿ, ಕುಟುಂಬದ ವಾತಾವರಣದಲ್ಲಿ ಕಳೆದ ಮನಸ್ಸನ್ನು ಶಾಲಾ ವಾತಾವರಣಕ್ಕೆ ಅಣಿಗೊಳಿಸಬೇಕಿದೆ. ನಿಗದಿತ ಸಮಯದ ಪಾಠ, ಶಿಕ್ಷಕರ ಮುಖಾಮುಖಿ ಪಾಠಗಳಿಗೆ ಮನಸ್ಸು ಕ್ರಿಯಾಶೀಲವಾಗಿ ತೆರೆದುಕೊಳ್ಳಬೇಕಿದೆ. ಭೌತಿಕ ತರಗತಿಯಲ್ಲಿ ಆರೋಗ್ಯ ಕಾಳಜಿಯೂ ಅನಿವಾರ್ಯವಾದುದರಿಂದ ಸ್ನೇಹಿತರೊಂದಿಗೆ ಹಾಗೂ ಶಿಕ್ಷಕರೊಂದಿಗೆ ದೈಹಿಕವಾಗಿ ಅಂತರವನ್ನು ಕಾಪಾಡಿಕೊಂಡು, ಕಲಿಕೆಯಲ್ಲಿ ತೊಡಗಲು ಮಾನಸಿಕವಾಗಿ ತಯಾರಿ ಮಾಡಿಕೊಳ್ಳಬೇಕಿದೆ. ಸ್ನೇಹಿತರ ಜೊತೆ ಹರಟೆ ಹೊಡೆಯುವುದು, ಕಲಿಕಾ ವಿಷಯಗಳನ್ನು ಚರ್ಚಿಸುವುದು ಇವೆಲ್ಲವೂ ವಿದ್ಯಾರ್ಥಿ ಜೀವನದ ಅವಿಭಾಜ್ಯ ಅಂಗಗಳೇ ಆದರೂ, ಎಂದಿನಂತೆ ಅತಿ ಹತ್ತಿರದಲ್ಲಿ ಕುಳಿತು ಮಾತನಾಡುವುದು, ತಮಾಷೆಯಾಗಿ ಬೆರೆಯುವುದು ಎಲ್ಲವೂ ಕಷ್ಟ. ಈ ನಿಟ್ಟಿನಲ್ಲಿ ಆರೋಗ್ಯ ಕಾಳಜಿಯೊಂದಿಗೆ ಕಲಿಕೆಯ ಪ್ರಾಧಾನ್ಯತೆಗೆ ಮನವು ಅಣಿಗೊಳ್ಳಬೇಕಿದೆ.

ದೈನಂದಿನ ಚಟುವಟಿಕೆಗಳು ಚುರುಕಾಗಲಿ: ಮನೆಯಲ್ಲೇ ಇರುವಾಗ ದೈನಂದಿನ ಚಟುವಟಿಕೆಗಳಾದ ಮುಂಜಾನೆ ಏಳುವುದು, ಸ್ನಾನ, ತಿಂಡಿ ಇವೆಲ್ಲವೂ ಆಮೆ ವೇಗದಲ್ಲಿ ನಡೆಯುತ್ತಿದ್ದವು. ಶಾಲಾ ಕೆಲಸಗಳಾದ ನೋಟ್ಸ್, ಹೋಮ್ ವರ್ಕ್, ಪ್ರಾಜೆಕ್ಟ್ ವರ್ಕ್‌ಗಳೆಲ್ಲವನ್ನೂ ಯಶಸ್ವಿಯಾಗಿ ಮಾಡಲು ಬೆಳಿಗ್ಗೆ ಬೇಗನೇ ಏಳುವ ಅಭ್ಯಾಸವನ್ನು ರೂಢಿಸಿಕೊಳ್ಳಲೇಬೇಕಾದ ಅಗತ್ಯವಿದೆ. ಬೆಳಗಿನ ಎಲ್ಲಾ ಕೆಲಸಗಳನ್ನು ಮುಗಿಸಿಕೊಂಡು, ನಿಗದಿತ ಸಮಯಕ್ಕೆ ಶಾಲೆಯಲ್ಲಿ ಇರುವ ಅಭ್ಯಾಸಕ್ಕೆ ಮತ್ತೆ ಮರುಚಾಲನೆ ನೀಡಬೇಕಿದೆ.

ADVERTISEMENT

ಸ್ವಚ್ಛತೆಗೆ ಗಮನ: ಕೋವಿಡ್‌ ಮಧ್ಯೆ ಶಾಲೆಗೆ ತೆರಳಬೇಕಾದುದರಿಂದ ಸ್ವಚ್ಛತೆಯೆಡೆಗೆ ಹೆಚ್ಚಿನ ಗಮನವನ್ನು ನೀಡಬೇಕಿದೆ. ಪ್ರತಿದಿನ ಶಾಲೆಯಿಂದ ಬಂದ ಕೂಡಲೇ ಧರಿಸಿದ ಉಡುಪುಗಳನ್ನು ಬದಲಿಸುವುದು, ಶುಭ್ರ ಉಡುಪನ್ನು ಧರಿಸುವುದು, ಮಾಸ್ಕ್‌ಗಳನ್ನು ಪ್ರತಿದಿನ ತೊಳೆದು ಉಪಯೋಗಿಸುವುದು ಬಹಳ ಉತ್ತಮ. ಶಾಲೆಯಲ್ಲಿನ ಪ್ರತಿ ತರಗತಿಯ ಅವಧಿಯ ನಂತರ ಆಗಾಗ ಸ್ಯಾನಿಟೈಜರ್ ಬಳಕೆ ಮಾಡುವುದು ಆರೋಗ್ಯದ ದೃಷ್ಟಿಯಿಂದ ಒಳಿತು. ಶಾಲಾ ಬ್ಯಾಗ್‌ನಲ್ಲಿ ಒಂದು ಸ್ಯಾನಿಟೈಜರ್‌ ಬಾಟಲ್ ಮತ್ತು ಒಂದು ಮಾಸ್ಕ್ ಅನ್ನು ಸದಾ ಇಟ್ಟುಕೊಳ್ಳುವುದು ಅಗತ್ಯ. ಧರಿಸಿದ ಮಾಸ್ಕ್ ಒಮ್ಮೊಮ್ಮೆ ಕಿತ್ತು ಹೋದರೆ ಅಥವಾ ಕೆಳಗೆ ಬಿದ್ದರೆ ಅವುಗಳ ಮರುಬಳಕೆ ಕಷ್ಟ. ಆದ್ದರಿಂದ ಒಂದು ಮಾಸ್ಕ್ ಧರಿಸಿದರೂ ಇನ್ನೊಂದು ಮಾಸ್ಕ್ ಅನ್ನು ಬ್ಯಾಗ್‌ನಲ್ಲಿ ಇಟ್ಟುಕೊಳ್ಳುವುದನ್ನು ಮರೆಯಬಾರದು.

ಪುಸ್ತಕಗಳನ್ನು ಜೋಡಿಸಿಕೊಳ್ಳೋಣ: ಈ ಶೈಕ್ಷಣಿಕ ವರ್ಷದಲ್ಲಿ ಶಾಲಾ ಪಠ್ಯಪುಸ್ತಕಗಳ ಮುದ್ರಣವೂ ವಿಳಂಬವಾಗುತ್ತಿದೆ. ಸಮಯಕ್ಕೆ ಸರಿಯಾಗಿ ಪಠ್ಯಪುಸ್ತಕ ಸಿಗಲಿಲ್ಲವೆಂದು ಕಲಿಕೆಯಲ್ಲಿ ಹಿಂದೆ ಉಳಿಯಬಾರದು. ಹಿಂದಿನ ವರ್ಷದ ವಿದ್ಯಾರ್ಥಿಗಳು ಬಳಸಿದ ಪುಸ್ತಕಗಳ ಸಂಗ್ರಹವಿರುತ್ತದೆ. ಆ ಪುಸ್ತಕಗಳನ್ನು ‘ಶಾಲಾ ಬುಕ್ ಬ್ಯಾಂಕ್’ನಲ್ಲಿ ಪಡೆದು, ಓದುವುದು ಉತ್ತಮ. ಅವು ಲಭ್ಯವಾಗಿಲ್ಲವಾದರೆ ಕರ್ನಾಟಕ ಪಠ್ಯಪುಸ್ತಕ ಸಂಘದktbs.kar.nic.inವೆಬ್‌ಸೈಟ್‌ನಲ್ಲಿ ಎಲ್ಲಾ ತರಗತಿಗಳ ಪಠ್ಯಪುಸ್ತಕಗಳ ಸಾಫ್ಟ್‌ಕಾಪಿ ಲಭ್ಯವಿರುತ್ತದೆ. ಅವುಗಳನ್ನು ಡೌನ್‌ಲೋಡ್ ಮಾಡಿಕೊಂಡು, ಝೆರಾಕ್ಸ್ ಮಾಡಿ ಬಳಸಬಹುದಾಗಿದೆ.

ಕೆಲವು ಅಭ್ಯಾಸಗಳಿಂದ ದೂರವಿರೋಣ: ರಜಾ ಅವಧಿಯಲ್ಲಿ ಟೈಂಪಾಸ್‌ಗೆಂದು ಒಂದಿಷ್ಟು ಅಭ್ಯಾಸಗಳು ಮೈಗೂಡಿರುತ್ತವೆ. ಪದೇಪದೇ ಕುರುಕಲು ತಿಂಡಿ ತಿನ್ನುವುದು, ಹೆಚ್ಚು ಮೊಬೈಲ್ ಗೇಮ್ ಆಡುವುದು, ಸದಾ ಟಿ.ವಿ ನೋಡುವುದು ಸಾಮಾನ್ಯವಾಗಿಬಿಟ್ಟಿತ್ತು. ಶಾಲಾ ಕಲಿಕೆಯ ಚಟುವಟಿಕೆಗಳಿಗೆ ಗಮನ ಕೊಡುವಾಗ ಟಿವಿ ಮೊಬೈಲ್ ಗಳನ್ನು ಹಿತಮಿತವಾಗಿ ನೋಡುವುದು ಒಳ್ಳೆಯದು. ಕಲಿಕೆಗೆ ಪೂರಕವಾಗಿ ಗ್ರಂಥಾಲಯದಲ್ಲಿನ ಪುಸ್ತಕ ಓದುವುದು ಒಂದು ಉತ್ತಮ ಹವ್ಯಾಸವಾಗಬಲ್ಲದು.

ಉತ್ಸಾಹವಿರಲಿ: ಬಹಳ ದಿನಗಳ ವಿರಾಮದ ನಂತರ ಶಾಲೆಯು ಆರಂಭವಾಗುತ್ತಿರುವುದರಿಂದ ಹೊಸತನ್ನು ಕಲಿಯುವ ಉತ್ಸಾಹವಿರಲಿ. ಕೋವಿಡ್‌ ಭಯವಿಲ್ಲದೇ, ಎಚ್ಚರ ವಹಿಸಿ ಶಾಲಾ ಪರಿಸರಕ್ಕೆ ಹೊಂದಿಕೊಳ್ಳುವ ಆತ್ಮವಿಶ್ವಾಸವಿರಲಿ. ಆನ್‌ಲೈನ್ ಕಲಿಕೆಗಿಂತ ಮುಖಾಮುಖಿ ಕಲಿಕೆಯು ಹೆಚ್ಚು ಫಲಪ್ರದವಾಗುವುದರಿಂದ ಭವಿಷ್ಯದ ಕಲಿಕಾ ಪಯಣವು ಸುಗಮವಾಗಿ ಸಾಗಲು ಈ ಪರಿಸ್ಥಿತಿಗೆ ಹೊಂದಿಕೊಳ್ಳಲೇಬೇಕಾದ ಅವಶ್ಯಕತೆಗೆ ಅಣಿಯಾಗೋಣ.

ಕಲಿಕಾ ಕೊರತೆಯನ್ನು ಸರಿದೂಗಿಸೋಣ: ಆನ್‌ಲೈನ್ ಪಾಠದಲ್ಲಿ ಹಲವು ಅಂಶಗಳು ಅರ್ಥವಾಗದೆ, ಕಲಿಕೆಯಲ್ಲಿ ಹಿನ್ನಡೆ ಉಂಟಾಗಿರಬಹುದು. ಕಷ್ಟವೆನಿಸಿದ ವಿಷಯಾಂಶಗಳನ್ನು ಶಿಕ್ಷಕರೊಂದಿಗೆ ಚರ್ಚಿಸಿ, ತಿಳಿದುಕೊಳ್ಳುವುದರಲ್ಲಿ ಹಿಂದೇಟು ಹಾಕಬಾರದು. ಸರ್ಕಾರಿ ಶಾಲೆಗಳಲ್ಲಿ ಈಗಾಗಲೇ ಸೇತುಬಂಧದ ಕಲಿಕೆಗೆ ನೀಡಿರುವ ಅಭ್ಯಾಸ ಹಾಳೆಗಳನ್ನು ಮತ್ತೊಮ್ಮೆ ಮನನ ಮಾಡಿಕೊಂಡರೆ ತರಗತಿಯ ಪಾಠಗಳು ಸುಲಭವೆನಿಸುತ್ತವೆ. ಹಿಂದಿನ ತರಗತಿಯಲ್ಲಿ ಬಿಟ್ಟಿರುವ ಕೆಲವು ವಿಷಯಾಂಶಗಳು ಮುಂದಿನ ತರಗತಿಯಲ್ಲಿ ಕಲಿಕೆಗೆ ಪೂರಕವಾಗಿ ಬಂದಾಗ ಅವುಗಳನ್ನು ಸರಿಯಾಗಿ ಅರ್ಥ ಮಾಡಿಕೊಂಡು ಮುಂದೆ ಸಾಗುವ ಪ್ರಯತ್ನ ಮಾಡಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.