ADVERTISEMENT

ಅಣಕು ಪರೀಕ್ಷೆಯ ಅನುಕೂಲಗಳು

ಆರ್.ಕೆ.ಬಾಲಚಂದ್ರ
Published 17 ಆಗಸ್ಟ್ 2022, 23:30 IST
Last Updated 17 ಆಗಸ್ಟ್ 2022, 23:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುವ ಮುನ್ನ ಅಭ್ಯರ್ಥಿಗಳು ಅಣಕು ಪರೀಕ್ಷೆಗಳನ್ನು ಎದುರಿಸಬೇಕು.ಇದರಿಂದ ಆತ್ಮವಿಶ್ವಾಸದೊಂದಿಗೆ ನೈಜ ಪರೀಕ್ಷೆ ಬರೆಯಲು ಅನುಕೂಲವಾಗುತ್ತದೆ.

ಬ್ಯಾಂಕ್ ಸಿಬ್ಬಂದಿ ನೇಮಕಾತಿ ಸಂಸ್ಥೆಯ (ಐಬಿಪಿಎಸ್‌) ಬ್ಯಾಂಕಿಂಗ್‌ ನೇಮಕಾತಿ ಪರೀಕ್ಷೆ ಸೇರಿದಂತೆ ಅನೇಕ ಸ್ಪರ್ಧಾತ್ಮಕ ಪರೀಕ್ಷೆಗಳು ಆನ್‌ಲೈನ್‌ನಲ್ಲಿಯೇ ನಡೆಯುತ್ತವೆ. ಹಾಗಾಗಿ ಈ ಪರೀಕ್ಷೆ ಎದುರಿಸಲು ಒಂದಿಷ್ಟು ತಯಾರಿ ಅಗತ್ಯವಾಗಿದೆ. ಈ ತಯಾರಿಯ ಮೊದಲ ಹೆಜ್ಜೆ ಹಾಗೂ ಸುಲಭದ ಮಾರ್ಗವೆಂದರೆ ಅಣಕು ಪರೀಕ್ಷೆ(ಮಾಕ್ ಟೆಸ್ಟ್) ಬರೆಯುವುದು.

ಅಣಕು ಪರೀಕ್ಷೆ ಏಕೆ ?

ADVERTISEMENT

ಅಣಕು ಪರೀಕ್ಷೆಯು ಬಹುತೇಕ ನೈಜ ಪರೀಕ್ಷೆ ರೀತಿಯಲ್ಲೇ ಇರುತ್ತದೆ. ಆದ್ದರಿಂದ, ನೈಜ ಪರೀಕ್ಷೆಯ ಪರಿಕಲ್ಪನೆ ಪಡೆಯುವುದಕ್ಕಾಗಿ ಅಣಕು ಪರೀಕ್ಷೆ ಬರೆಯುವುದು ಅಗತ್ಯ. ಅಷ್ಟೇ ಅಲ್ಲ,ಋಣಾತ್ಮಕ ಮೌಲ್ಯಮಾಪನದೊಂದಿಗೆ(Negative Valuation) ಪರೀಕ್ಷೆಯ ವಾತಾವರಣದಲ್ಲಿ ಅಣಕು ಪರೀಕ್ಷೆ ಬರೆದಾಗ ಮಾತ್ರ ಅಭ್ಯರ್ಥಿಗಳು ನಿಜವಾದ ಪರೀಕ್ಷಾ ಹಾಲ್‌ನಲ್ಲಿ ತಮ್ಮ ಸಾಮರ್ಥ್ಯವನ್ನು ಸುಧಾರಿಸಲು ಸಾಧ್ಯವಾಗುತ್ತದೆ. ಆಗಾಗ ಈ ಅಣಕು ಪರೀಕ್ಷೆಗಳನ್ನು ತೆಗೆದುಕೊಳ್ಳುತ್ತಿದ್ದರೆ ಆನ್‌ಲೈನ್‌ ಪರೀಕ್ಷೆ ಬರೆಯುವ ಆತಂಕವೂ ದೂರವಾಗಬಹುದು. ಜತೆಗೆ ಅಭ್ಯರ್ಥಿಗಳು ತಮ್ಮ ಸಾಮರ್ಥ್ಯವನ್ನು ಪರೀಕ್ಷೆಗಿಂತ ಮೊದಲೇ ತಿಳಿದುಕೊಳ್ಳಲೂಬಹುದು.

ಪರೀಕ್ಷೆ ಹೇಗೆ ಅನುಕೂಲ

ಕಳೆದ ಸಾಲಿನ ಪರೀಕ್ಷೆಯಲ್ಲಿ ಯಾವ ಯಾವ ಅಧ್ಯಾಯಗಳಿಗೆ ಸಂಬಂಧಿಸಿದಂತೆ ಪ್ರಶ್ನೆಗಳನ್ನು ಕೇಳಲಾಗಿದೆಯೋ ಅದೆಲ್ಲ, ಈ ಅಣಕು ಪರೀಕ್ಷೆಗಳಿಂದ ತಿಳಿದುಕೊಳ್ಳಬಹುದು. ಆ ಪ್ರಶ್ನೆಗಳನ್ನು ಕ್ರೋಡೀಕರಿಸಿ ಅಂತಹುದೇ ಮಾದರಿಯಲ್ಲಿ ನಡೆಯುವ ಅಣಕು ಪರೀಕ್ಷೆ ಮೂಲಕ ಹೊಸ ರೀತಿಯ ಪ್ರಶ್ನೆಗಳನ್ನು ತಿಳಿದುಕೊಳ್ಳಬಹುದು. ಇದರಿಂದ ಹೆಚ್ಚು ಆತ್ಮ ವಿಶ್ವಾಸದಿಂದ ಪರೀಕ್ಷೆ ಎದುರಿಸಲು ಅಭ್ಯರ್ಥಿಗಳಿಗೆ ಅನುಕೂಲವಾಗಲಿದೆ.

ಆಪ್ಟಿಟ್ಯೂಡ್, ಬೌದ್ಧಿಕ ಸಾಮರ್ಥ್ಯ(ಮೆಂಟಲ್ ಎಬಿಲಿಟಿ), ರೀಸನಿಂಗ್ ನಂತಹ ಕಷ್ಟಕರ ವಿಷಯಗಳ ಪ್ರಶ್ನೆಗಳನ್ನು ಬಿಡಿಸುವುದು ಹೇಗೆಂಬುದೂ ಇದರಿಂದ ಗೊತ್ತಾಗಲಿದೆ. ಪರೀಕ್ಷೆಗಳಲ್ಲಿ ಸಮಯ ನಿರ್ವಹಣೆಗೆ ಅನುಕೂಲವಾಗಲಿದೆ. ವರ್ಷದಿಂದ ವರ್ಷಕ್ಕೆ ಬದಲಾದ ಅಧ್ಯಾಯಗಳ ಸೂಕ್ತ ಮಾಹಿತಿಯೂ ಲಭ್ಯವಾಗುತ್ತದೆ. ಆಸಕ್ತಿಯ ಅಧ್ಯಾಯಕ್ಕೆ ಹೆಚ್ಚು ಸಮಯ ಮೀಸಲಿಡಲು ಸಾಧ್ಯವಾಗುತ್ತದೆ.

ಎಚ್ಚರಿಕೆ ಅಗತ್ಯ

ಬಹುತೇಕ ನೇಮಕಾತಿ ಪರೀಕ್ಷೆಗಳೂ ಆನ್‌ಲೈನಲ್ಲಿಯೇ ನಡೆಯುತ್ತಿವೆ. ಕೆಲವು ನೇಮಕಾತಿ ಸಂಸ್ಥೆಗಳು ತಮ್ಮ ಜಾಲ ತಾಣದಲ್ಲೇ ಅಣಕು ಪರೀಕ್ಷೆಗಳನ್ನು ನೀಡುತ್ತಿವೆ. ಇಂಥ ಪರೀಕ್ಷೆಯ ವಿಡಿಯೊ ಕೂಡ ಲಭ್ಯವಿರುತ್ತದೆ.‌ ಹಾಗಿದ್ದಾಗ ಮೊದಲು ವಿಡಿಯೊ ನೋಡಿ ಪ್ರಶ್ನೆಗಳನ್ನು ಬಿಡಿಸುವ ಅಭ್ಯಾಸ ಮಾಡಿ. ಕಾರಣ ಪ್ರತಿಯೊಂದು ಪ್ರಶ್ನೆ ಬಿಡಿಸಲು ಶಾರ್ಟ್ ಕಟ್ ವಿಧಾನವನ್ನು ವಿವರಿಸಿರುತ್ತಾರೆ. ಇದರಿಂದ ಸಹಜವಾಗಿ ಸಮಯದ ಉಳಿತಾಯ ಜೊತೆಗೆ ಪರೀಕ್ಷಾರ್ಥಿಗಳಿಗೆ ‘ತಾನು ಪ್ರಶ್ನೆಗಳನ್ನು ಬಿಡಿಸಬಲ್ಲೆ’ ಎಂಬ ವಿಶ್ವಾಸವೂ ಮೂಡುತ್ತದೆ.

ಉದಾಹರಣೆಗೆ: ‘ಕ್ಲಿಯರ್ ಐಎಎಸ್’ ಪರೀಕ್ಷೆಯ ಮೂಲಕ ಯುಪಿಎಸ್‌ಸಿ ಪ್ರಿಲಿಮ್ಸ್ ಆನ್‌ಲೈನ್ ಅಣಕು ಪರೀಕ್ಷೆಗಳನ್ನು ಉಚಿತವಾಗಿ ಪ್ರಯತ್ನಿಸಿ ನೋಡಿ. ಇದು ಕಲಿಕೆಯ ಜೊತೆಯಲ್ಲಿ ಪರೀಕ್ಷೆ ಎದುರಿಸಲು ಸಂಯೋಜಿಸಿರುವ ಒಂದು ಹೊಸ ನವೀನ ವೇದಿಕೆಯಾಗಿದೆ. ನೀವು ಎಷ್ಟು ವೇಗವಾಗಿ ಕಲಿಯಬಹುದು ಎಂಬುದನ್ನು ಕಂಡು ನಿಮಗೆ ಆಶ್ಚರ್ಯವಾಗುತ್ತದೆ!

ಇವೆಲ್ಲ ಗೊತ್ತಿರಲಿ

ಈ ರೀತಿಯ ಆನ್‌ಲೈನ್‌ ಪರೀಕ್ಷೆಗಳನ್ನು ನಡೆಸುವ ನೂರಾರು ಜಾಲತಾಣಗಳಿವೆ. ಆದರೆ ಎಲ್ಲ ಜಾಲತಾಣಗಳೂ ಸರಿಯಾಗಿ ಅಣಕು ಪರೀಕ್ಷೆ ನಡೆಸುತ್ತವೆ ಎಂದೇನೂ ಇಲ್ಲ. ಕೆಲವು ಅಭ್ಯರ್ಥಿಗಳ ದಿಕ್ಕು ತಪ್ಪಿಸುವ ಕೆಲಸವನ್ನೂ ಮಾಡುತ್ತಿವೆ. ಈ ಬಗ್ಗೆ ಅಭ್ಯರ್ಥಿಗಳು ಎಚ್ಚರ ವಹಿಸಬೇಕು. ಜಾಲತಾಣದ ವಿಶ್ವಾಸಾರ್ಹತೆ ಪರೀಕ್ಷಿಸಿದ ನಂತರವೇ ಪರೀಕ್ಷೆಗಳನ್ನು ತೆಗೆದುಕೊಳ್ಳುವುದು ಒಳ್ಳೆಯದು.

ಕೆಲವು ಜಾಲತಾಣಗಳು ಉಚಿತ ಅಣಕು ಪರೀಕ್ಷೆ ನಡೆಸಿದರೆ, ಇನ್ನು ಕೆಲವು ನೆಪಮಾತ್ರಕ್ಕೆ ಉಚಿತವಾಗಿ ಕಾರ್ಯನಿರ್ವಹಿಸಿ, ನಂತರ ಹಣ ನೀಡಿ ಹೆಚ್ಚಿನ ಸೌಲಭ್ಯ ಪಡೆಯವಂತೆ ಆಫರ್ ನೀಡುತ್ತವೆ. ಈ ಬಗ್ಗೆ ಎಚ್ಚರವಿರಲಿ. ಇಂಥ ‘ಉಚಿತ ಸೇವೆ ’ ಯ ಜಾಲತಾಣಗಳು ಇ-ಮೇಲ್ ಮಾಹಿತಿ, ಮೊಬೈಲ್ ನಂಬರ್ ಮತ್ತಿತರ ವಿವರಗಳನ್ನು ಕೇಳುತ್ತವೆ. ನಿಮಗೆ ಕಿರಿಕಿರಿ ಉಂಟುಮಾಡದಿರುವ ಮಾಹಿತಿಯನ್ನೇ ಒದಗಿಸಿ. ಸ್ಪರ್ಧಾತ್ಮಕ ಪರೀಕ್ಷೆಯ ಮಾಹಿತಿ ನೀಡಬೇಡಿ‌. ಇದಕ್ಕಾಗಿಯೇ ಪ್ರತ್ಯೇಕ ಇ-ಮೇಲ್ ವಿಳಾಸ ಹೊಂದಿದ್ದರೆ ಒಳ್ಳೆಯದು. ಯಾವುದೇ ತಂತ್ರಾಂಶ (ಸಾಫ್ಟ್‌ವೇರ್‌) ಪಡೆಯಲು ತಿಳಿಸಿದರೆ, ಅದು ಅಗತ್ಯವೇ ಎಂದು ಯೋಚಿಸಿ ಮುಂದುವರಿಯಿರಿ.

(ಮುಂದಿನ ವಾರ: ಅಣಕು ಪರೀಕ್ಷೆಯ ಜಾಲತಾಣಗಳ ಪಟ್ಟಿ)

(ಲೇಖಕರು: ಬ್ಯಾಂಕಿಂಗ್ ತರಬೇತುದಾರರು ಹಾಗೂ ವ್ಯಕ್ತಿತ್ವ ವಿಕಸನ ತರಬೇತುದಾರರು ಮತ್ತು ವೃತ್ತಿ ಮಾರ್ಗದರ್ಶಕರು.ಮಡಿಕೇರಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.