ADVERTISEMENT

ವಿಟಿಯು: ಆಫ್‌ಲೈನ್‌ನಲ್ಲಿ ಪರೀಕ್ಷೆ ಜುಲೈ 26ರಿಂದ

ವಿಟಿಯು ಕುಲಪತಿ ಪ್ರೊ.ಕರಿಸಿದ್ದಪ‍್ಪ ಮಾಹಿತಿ

​ಪ್ರಜಾವಾಣಿ ವಾರ್ತೆ
Published 19 ಜುಲೈ 2021, 14:21 IST
Last Updated 19 ಜುಲೈ 2021, 14:21 IST

ಬೆಳಗಾವಿ: ‘ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ(ವಿಟಿಯು)ದಿಂದ ಪದವಿ ಹಾಗೂ ಸ್ನಾತಕೋತ್ತರ ಪದವಿ ಕೋರ್ಸ್‌ಗಳ ಅಂತಿಮ ಸೆಮಿಸ್ಟರ್‌ ಪರೀಕ್ಷೆಗಳನ್ನು ಜುಲೈ 26ರಿಂದ ಆಫ್‌ಲೈನ್‌ನಲ್ಲಿ ಆರಂಭಿಸಲಾಗುವುದು’ ಎಂದು ಕುಲಪತಿ ಪ್ರೊ.ಕರಿಸಿದ್ದಪ್ಪ ತಿಳಿಸಿದರು.

‘ಯುಜಿಸಿ ಮಾರ್ಗದರ್ಶನದಂತೆ ಬಿ.ಇ, ಬಿ.ಟೆಕ್., ಬಿ.ಪ್ಲಾನ್ 8ನೇ ಹಾಗೂ ಆರ್ಕಿಟೆಕ್ಚರ್‌ನ 10ನೇ ಸೆಮಿಸ್ಟರ್ ಮತ್ತು ಎಂ.ಟೆಕ್., ಎಂ.ಆರ್ಕ್‌, ಎಂ.ಬಿ.ಎ. ಹಾಗೂ ಎಂ.ಸಿ.ಎ. ಅಂತಿಮ ಸೆಮಿಸ್ಟರ್ ಪರೀಕ್ಷೆಗಳನ್ನು ನಡೆಸಲಾಗುವುದು. ಪ್ರಶ್ನೆಪತ್ರಿಕೆಯು ಓಪನ್ ಚಾಯ್ಸ್ ಮಾದರಿಯಲ್ಲಿರಲಿದೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾಹಿತಿ ನೀಡಿದರು.

‘ಕೋವಿಡ್ 2ನೇ ಅಲೆಯ ಕಾರಣದಿಂದಾಗಿ, ಬಿ.‌ಇ., ಬಿ.ಟೆಕ್., ಬಿ.ಪ್ಲಾನ್ ಪದವಿಗಳ ಪ್ರಥಮ ಸೆಮೆಸ್ಟರ್ ಹಾಗೂ ಎಂಬಿಎ, ಎಂಸಿಎ, ಎಂ.ಟೆಕ್‌., ಎಂ.ಆರ್ಕ್‌ ಸ್ನಾತಕೋತ್ತರ ಪದವಿಗಳಲ್ಲಿ ಬಾಕಿ ಇರುವ ವಿಷಯಗಳಿಗೆ ಜುಲೈ 27ರಿಂದ ಪರೀಕ್ಷೆ ಇರುತ್ತದೆ. ಪ್ರಶ್ನೆಪತ್ರಿಕೆಯ ರಚನೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ’ ಎಂದು ಹೇಳಿದರು.

ADVERTISEMENT

‘ಎಲ್ಲ ಪರೀಕ್ಷೆಗಳನ್ನೂ ಕೋವಿಡ್-19ರ ಮಾರ್ಗಸೂಚಿ ಪ್ರಕಾರ ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸಿ ನಡೆಸುವಂತೆ ಸಂಸ್ಥೆಗಳಿಗೆ ನಿರ್ದೇಶನ ನೀಡಲಾಗಿದೆ’ ಎಂದು ತಿಳಿಸಿದರು.

‘ಬಿ.ಇ., ಬಿ.ಟೆಕ್. ಬಿ.ಪ್ಲಾನ್ 2, 4 ಹಾಗೂ 6ನೇ ಸೆಮಿಸ್ಟರ್‌ಗಳ ಮತ್ತು ಎಂಬಿಎ, ಎಂ.ಆರ್ಕ್‌ ಹಾಗೂ ಎಂ.ಟೆಕ್. 2ನೇ ಸೆಮಿಸ್ಟರ್, ಎಂಸಿಎ ಮತ್ತು ಪಾರ್ಟ್ ಟೈಮ್ ಎಂ.ಟೆಕ್‌ 2ನೇ ಹಾಗೂ 4ನೇ ಸೆಮಿಸ್ಟರ್‌ಗಳ ಫಲಿತಾಂಶವನ್ನು ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ನೀಡಲಾಗುವುದು. ಹಿಂದಿನ ಸೆಮಿಸ್ಟರ್‌ಗಳಲ್ಲಿ ಗಳಿಸಿದ್ದು ಹಾಗೂ ಆಂತರಿಕ ಅಂಕಗಳನ್ನು ಆಧರಿಸಿ ಫಲಿತಾಂಶ ನೀಡಲಾಗುವುದು’ ಎಂದು ಸ್ಪಷ್ಟಪಡಿಸಿದರು. ‘ಇದು ಆಯಾ ಸೆಮಿಸ್ಟರ್‌ಗಳಲ್ಲಿ ಓದುತ್ತಿರುವ ರೆಗ್ಯುಲರ್ ವಿದ್ಯಾರ್ಥಿಗಳಿಗೆ ಮಾತ್ರ ಅನ್ವಯವಾಗಲಿದೆ. ಬ್ಯಾಕ್‌ಲಾಗ್ ವಿಷಯಗಳಿಗೆ ಅನ್ವಯಿಸುವುದಿಲ್ಲ. ಬ್ಯಾಕ್‌ಲಾಗ್ ವಿಷಯಗಳಿದ್ದರೆ ಅವುಗಳನ್ನು ಆಫ್‌ಲೈನ್ ಮೋಡ್‌ನಲ್ಲೇ ಬರೆಯಬೇಕು. ಆದರೆ, ಪ್ರಶ್ನೆಪತ್ರಿಕೆಯು ಓಪನ್ ಚಾಯ್ಸ್ ಮಾದರಿಯದಾಗಿರುತ್ತದೆ’ ಎಂದರು.

‘ಸರ್ಕಾರದ ಆದೇಶದ ಅನ್ವಯ ತರಗತಿಗಳನ್ನು ನಡೆಸಲಾಗುವುದು. ಬಾಕಿ ಉಳಿದ ಈ ಸೆಮಿಸ್ಟರ್ ಅವಧಿಗೆ ಆನ್‌ಲೈನ್‌ ಹಾಗೂ ಆಫ್‌ಲೈನ್ ಎರಡೂ ವಿಧಾನಗಳನ್ನು ಒಳಗೊಂಡಂತೆ ಪ್ರತ್ಯೇಕ ವೇಳಾಪಟ್ಟಿಯನ್ನು ಶೀಘ್ರವೇ ಪ್ರಕಟಿಸಲಾಗುವುದು’ ಎಂದು ತಿಳಿಸಿದರು.

‘ವಿಟಿಯು ಅಧೀನದಲ್ಲಿರುವ ಕಾಲೇಜುಗಳ ಸಿಬ್ಬಂದಿಯಲ್ಲಿ ಈವರೆಗೆ ಶೇ 88.88ರಷ್ಟು ಹಾಗೂ ವಿದ್ಯಾರ್ಥಿಗಳಲ್ಲಿ ಶೇ 72.83ರಷ್ಟು ವಿದ್ಯಾರ್ಥಿಗಳು ಕೋವಿಡ್ ಲಸಿಕೆ ಪಡೆದಿದ್ದಾರೆ. ಲಸಿಕಾರಣ ಮುಂದುವರಿದಿದೆ’ ಎಂದರು.

ಮೌಲ್ಯಮಾಪನ ಕುಲಸಚಿವ ಪ್ರೊ.ರಂಗಸ್ವಾಮಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.