ADVERTISEMENT

ಪ್ರಶ್ನೋತ್ತರ: ಗಣಿತ ಪದವೀಧರರಿಗೆ ಬೇಡಿಕೆಯಿದೆ

​ಪ್ರಜಾವಾಣಿ ವಾರ್ತೆ
Published 31 ಜುಲೈ 2022, 19:30 IST
Last Updated 31 ಜುಲೈ 2022, 19:30 IST
 ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

1. ನನ್ನ ಮಗಳು ಮೊದಲ ವರ್ಷದ ಪಿಯುಸಿ (ಪಿಸಿಎಂಬಿ) ಓದುತ್ತಿದ್ದು, ದ್ವಿತೀಯ ಪಿಯುಸಿ ನಂತರ, ಯಾವ ಕೋರ್ಸ್ ಓದಿದರೆ ಯಾವ ನೌಕರಿ ಪಡೆಯಬಹುದು ಎಂಬ ಮಾಹಿತಿಯನ್ನು ದಯಮಾಡಿ ತಿಳಿಸಿ ಕೊಡಿ.

-ಸತೀಶ, ದಾವಣಗೆರೆ.

ವಿದ್ಯಾರ್ಥಿಗಳ ಆಸಕ್ತಿ, ಅಭಿರುಚಿ ಮತ್ತು ಸ್ವಾಭಾವಿಕ ಪ್ರತಿಭೆಯಂತೆ ವೃತ್ತಿಯೋಜನೆಯನ್ನು ಮಾಡಿ ಅದಕ್ಕೆ ಅನುಗುಣವಾಗಿ ಕೋರ್ಸ್ ಆಯ್ಕೆ ಮಾಡಬೇಕು.

ADVERTISEMENT

ಹೆಚ್ಚಿನ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ:
https://www.youtube.com/c/EducationalExpertManagementCareerConsultant

2. ನಾನು ಪಿಯುಸಿ (ವಿಜ್ಞಾನ) ಮಾಡಿದ್ದೇನೆ. ಐಎಎಸ್ ಆಫೀಸರ್ ಆಗಬೇಕೆಂಬ ಹಂಬಲವಿದೆ. ಪದವಿಯಲ್ಲಿ ಕಲಾ ವಿಭಾಗ ತೆಗೆದುಕೊಂಡರೆ ಹೆಚ್ಚಿನ ಅಂಕ ಪಡೆದು, ರ‍್ಯಾಂಕ್ ಪಡೆಯಲು ಸಾಧ್ಯವಾಗುತ್ತದೆ ಎಂದುಕೊಡಿದ್ದೇನೆ. ಆದರೆ, ಕಡಿಮೆ ಉದ್ಯೋಗಾವಕಾಶದ ಕಾರಣ, ಮನೆಯವರು ಕಲಾ ವಿಭಾಗ ತೆಗೆದುಕೊಳ್ಳಲು ಬಿಡುತ್ತಿಲ್ಲ. ಸಲಹೆ ಕೊಡಿ ಸರ್.

-ಇರ್ಫಾನ್, ಊರು ತಿಳಿಸಿಲ್ಲ.

ಯುಪಿಎಸ್‌ಸಿ ಕಠಿಣವಾದ ಮೂರು ಹಂತದ ಪರೀಕ್ಷೆ. ಈ ಪರೀಕ್ಷೆಯಲ್ಲಿ ನಿಮ್ಮ ಆಸಕ್ತಿಯ ಅನುಸಾರ, ಯಾವ ಐಚ್ಛಿಕ ವಿಷಯವನ್ನು
ತೆಗೆದುಕೊಳ್ಳಬೇಕೆಂದು ಈಗಲೇ ನಿರ್ಧರಿಸಿದರೆ, ಪದವಿ ಹಂತದಲ್ಲಿ ಯಾವ ವಿಭಾಗ ತೆಗೆದುಕೊಳ್ಳಬಹುದೆಂದು ನಿರ್ಧರಿಸಬಹುದು. ವಿಜ್ಞಾನ ವಿಭಾಗದಲ್ಲೇ ಮುಂದುವರೆದರೆ, ಯುಪಿಎಸ್‌ಸಿ ಜೊತೆಗೆ ಇನ್ನಿತರ ಅವಕಾಶಗಳನ್ನೂ ಅನ್ವೇಷಿಸಬಹುದು. ಹಾಗೂ, ಕಲಾ ವಿಭಾಗದಲ್ಲಿ ಕಡಿಮೆ ಉದ್ಯೋಗಾವಕಾಶಗಳಿವೆ ಎನ್ನುವುದು ತಪ್ಪು ಅಭಿಪ್ರಾಯ.

3. ನಾನು ಬಿ.ಎಸ್ಸಿ (ಪಿಸಿಎಂಸಿ) ಮಾಡಿದ್ದೇನೆ. ಈಗ ಎಂ.ಎಸ್ಸಿ (ಭೂಗೋಳಶಾಸ್ತ್ರ) ಮಾಡಬೇಕು ಅಂದುಕೊಂಡಿದ್ದೇನೆ. ಇದರಿಂದ ಅನುಕೂಲ ಆಗಬಹುದೇ? ಈ ನಿರ್ಧಾರ ಸರಿಯೇ?

ಸುಮನಾ ಎಂ, ಬೆಂಗಳೂರು ಗ್ರಾಮಾಂತರ.

ಸಾಮಾನ್ಯವಾಗಿ, ನಿಮ್ಮ ಆಸಕ್ತಿ, ಅಭಿರುಚಿ ಮತ್ತು ಸ್ವಾಭಾವಿಕ ಪ್ರತಿಭೆಯಂತೆ ವೃತ್ತಿಯೋಜನೆಯನ್ನು ಮಾಡಿ, ಅದಕ್ಕೆ ಅನುಗುಣವಾಗಿ ಕೋರ್ಸ್ ಆಯ್ಕೆ ಮಾಡಬೇಕು. ವೃತ್ತಿಯೋಜನೆಯನ್ನು ಮಾಡದೆ ಕೋರ್ಸ್ ಆಯ್ಕೆ ಮಾಡಿದರೆ, ಇಂತಹ ಗೊಂದಲಗಳಿಂದ, ಮುಂದಿನ ಬದುಕಿನ ಬಗ್ಗೆ ಆತಂಕಗಳು ಮೂಡುವುದು ಸಹಜ. ಈಗಲೂ, ಕಾಲ ಮಿಂಚಿಲ್ಲ; ನಿಮ್ಮ ಭವಿಷ್ಯದ ಕನಸಿನಂತೆ, ವೃತ್ತಿ ಯೋಜನೆಯನ್ನು ಮಾಡಿ, ಅದರಂತೆ ಮುಂದಿನ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಸೂಕ್ತ. ಹೆಚ್ಚಿನ
ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ:https://www.youtube.com/watch?v=MHnPg_sp6E0


4. ನಾನು ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಅನುತ್ತೀರ್ಣನಾಗಿದ್ದೇನೆ. ಪೂರಕ ಪರೀಕ್ಷೆ ಬರೆದ ನಂತರ, ಏನು ಮಾಡಬಹುದು ತಿಳಿಸಿ ಸರ್.

-ಶೋಯಿಬ್, ಬಿರಾದಾರ್.

ಪರೀಕ್ಷೆಯ ನಿರಾಶೆಯನ್ನು ಒಂದು ಸಣ್ಣ ಹಿನ್ನಡೆಯಂತೆ ಭಾವಿಸಿ. ಮುಖ್ಯವಾಗಿ,ಪರೀಕ್ಷೆಯಲ್ಲಿನ ವಿಫಲತೆಯ ಕಾರಣಗಳನ್ನು ಮೌಲ್ಯಮಾಪನ ಮಾಡಿ, ಮುಂದೆ ಹೀಗಾಗದಂತೆ ಸರಿಪಡಿಸುವ ಕ್ರಮಗಳನ್ನು ತೆಗೆದುಕೊಳ್ಳಿ. ಪೂರಕ ಪರೀಕ್ಷೆಯ ನಂತರ, ಜೀವನದ ಕನಸುಗಳು ಮತ್ತು ನಿಮ್ಮ ಸಾಮರ್ಥ್ಯವನ್ನು ಗಮನದಲ್ಲಿಟ್ಟುಕೊಂಡು, ಸೂಕ್ತವಾದ ವೃತಿಯೋಜನೆಯನ್ನು ಮಾಡಿ, ಅದರಂತೆ ಮುಂದಿನ ಕೋರ್ಸ್ ಆಯ್ಕೆಗಳಿರಲಿ. ಜೀವನದ ಪಾಠಶಾಲೆಯಲ್ಲಿ ಯಶಸ್ಸು ನಿಮ್ಮದಾಗಲಿ.

5. ಸರ್, ನಾನು ಬಿ.ಎಸ್ಸಿ (ಪಿಸಿಎಂ) ಮುಗಿಸಿ, ಕೆಎಎಸ್‌ಗೆ ತಯಾರಿ ನಡೆಸಿದ್ದೇನೆ. ಆದರೆ, ಆದರೆ ಈ ಸಲ ಎಂ.ಎಸ್ಸಿ (ಗಣಿತ) ಮಾಡಬೇಕು ಎಂದುಕೊAಡಿದ್ದೇನೆ. ಕೆಎಎಸ್ ತಯಾರಿ ಮುಂದುವರಿಸಲೇ ಅಥವಾ ಎಂ.ಎಸ್ಸಿ ಮಾಡಲೇ ಗೊತ್ತಾಗುತ್ತಿಲ್ಲ. ಎಂ.ಎಸ್ಸಿ (ಗಣಿತ)ದಲ್ಲಿ ಮುಂದುವರಿದರೆ ಉದ್ಯೋಗಾವಕಾಶಗಳು ಹೇಗಿವೆ ತಿಳಿಸಿ.

-ಆನಂದ ಕೆಕ್ಕಾರ್, ಊರು ತಿಳಿಸಿಲ್ಲ.

ಎಂ.ಎಸ್ಸಿ (ಗಣಿತ) ಪದವೀಧರರಿಗೆ ಬೇಡಿಕೆಯಿದ್ದು, ಸಾಕಷ್ಟು ಉದ್ಯೋಗಾವಕಾಶಗಳಿವೆ. ಖಾಸಗಿ ಕ್ಷೇತ್ರದ ಐಟಿ, ರಿಸರ್ಚ್ ಸಂಸ್ಥೆಗಳಲ್ಲಿ,
ವೃತ್ತಿಯ ಅವಕಾಶಗಳಿವೆ. ಇದಲ್ಲದೆ, ಕೆಎಎಸ್/ಐಎಎಸ್ ಮಾಡಿ ಸರ್ಕಾರಿ ವಲಯದ ಉನ್ನತ ಹುದ್ದೆಗಳನ್ನು ಪಡೆದುಕೊಳ್ಳಬಹುದು. ಎಂ.ಎಸ್ಸಿ ನಂತರ, ಡಾಕ್ಟರೇಟ್ ಮಾಡಿದರೆ ಶಿಕ್ಷಕ ವೃತ್ತಿಯ ಆಕರ್ಷಕ ಅವಕಾಶಗಳಿವೆ. ಹಾಗಾಗಿ, ಎಂ.ಎಸ್ಸಿ ಜೊತೆಗೆ ಕೆಎಎಸ್ ಪರೀಕ್ಷೆಗೆ ತಯಾರಿಯನ್ನೂ ಮಾಡಬಹುದೇ ಎಂದು ಪರಿಶೀಲಿಸಿ.

6. ಸಂಖ್ಯಾಶಾಸ್ತçದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. ಇಂಟೀರಿಯರ್ ಡಿಸೈನ್ ಕೋರ್ಸ್ ಮಾಡಲು ಮನಸ್ಸು ಮಾಡಿದ್ದೇನೆ. ಯಾವ ಕಾಲೇಜು ಸೂಕ್ತ ಎಂದು ಹೇಳಬಹುದೇ?

-ದರ್ಶಿನಿ, ಊರು ತಿಳಿಸಿಲ್ಲ.

ಸಂಖ್ಯಾಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯ ನಂತರ, ನೀವು ಬೇರೊಂದು ವಿಭಾಗದ ಕೋರ್ಸ್ ಮಾಡಲು ಬಲವಾದ ಕಾರಣಗಳಿರಬೇಕು. ಹಾಗಾಗಿ, ನಿಮ್ಮ ನಿರ್ಧಾರ ಸರಿಯೇ ಎಂದು ಮತ್ತೊಮ್ಮೆ ಅವಲೋಕಿಸಿ. ಉತ್ತಮ ಕಾಲೇಜು ಆಯ್ಕೆ ಪ್ರಕ್ರಿಯೆ ಕುರಿತ ಮಾರ್ಗದರ್ಶನಕ್ಕಾಗಿ, ಈ ವಿಡಿಯೊ ವೀಕ್ಷಿಸಿ:https://www.youtube.com/watch?v=DmaXk-MuoOI


7. ನಾನು ದ್ವಿತೀಯ ಪಿಯುಸಿ ನಂತರ, ಹಿಂದಿ ಪ್ರಚಾರ ಸಮಿತಿ ನಡೆಸುವ ಹಿಂದಿ ಪದವಿ ಪರೀಕ್ಷೆಯಲ್ಲಿ ಉತ್ತೀರ್ಣನಾಗಿದ್ದೇನೆ. ಇದನ್ನು ಪದವಿ ಎಂದು ಪರಿಗಣಿಸಬಹುದೇ? ಪದವಿ ಬೇಕೆಂದು ಕರೆಯುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಸಾಧ್ಯವೆ?

-ವಿ. ಆರ್. ನಾಯಕ, ಕೊಪ್ಪಳ.

ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದ ಪದವಿ ಕೋರ್ಸ್‌ಗೆ ವಿಶ್ವವಿದ್ಯಾಲಯ ಅನುದಾನ ಆಯೋಗದ (ಯುಜಿಸಿ) ಮಾನ್ಯತೆಯನ್ನು ಕಳೆದ ವರ್ಷ ನೀಡಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಗಮನಿಸಿ: https://www.news18.com/news/education-career/ugc-approves-degrees-conferred-by- dakshina-bharat-hindi-prachar-sabha-4060058.html

8. ನಾನು ಬಿ.ಎಸ್ಸಿ (ಪಿಸಿಎಂ) ಪದವಿಯನ್ನು 2014ರಲ್ಲಿ ಪಡೆದಿದ್ದೆ. ಆರ್ಥಿಕ ಕಾರಣಗಳಿಂದಾಗಿ, ಟೈರ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದೇನೆ. ಕಲಿತ ವಿಷಯಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಹಾಗಾಗಿ ಮ್ಯಾನೇಜರ್‌ನಿಂದ ನಿತ್ಯ ಬೈಗುಳ ತಿನ್ನುವಂತಾಗಿದೆ. ಈಗಾಗಲೇ ನನ್ನ ವಯಸ್ಸು 33. ಮುಂದಿನ ಭವಿಷ್ಯದ ಬಗ್ಗೆ ಚಿಂತೆಯಾಗಿದೆ ಸರ್. ಏನು ಮಾಡಬೇಕು ಹೇಳಿ.

-ವಿ.ಶ್ರೀನಿವಾಸ್, ಊರು ತಿಳಿಸಿಲ್ಲ.

ವೃತ್ತಿಯಲ್ಲಿ ಯಶಸ್ಸನ್ನು ಗಳಿಸಲು ವೃತ್ತಿ ಸಂಬಂಧಿತ ಜ್ಞಾನ ಮತ್ತು ಕೌಶಲಗಳ ಜೊತೆಗೆ, ಸಕಾರಾತ್ಮಕ ಆಲೋಚನೆ, ನಿಷ್ಠೆ, ಪ್ರಾಮಾಣಿಕತೆ, ಸ್ವಯಂಪ್ರೇರಣೆ ಮತ್ತು ಆತ್ಮವಿಶ್ವಾಸವಿರಬೇಕು. ಆಗಲೇ, ನಿಮ್ಮ ಕಾರ್ಯಕ್ಷಮತೆ ನಿರೀಕ್ಷೆಯಂತಿರುತ್ತದೆ. ಆದರೆ, ನಿಮ್ಮ ಕಾರ್ಯಕ್ಷಮತೆಯಲ್ಲಿ ಕುಂದುಕೊರತೆಗಳಿದ್ದರೆ ಅಥವಾ ಮೇಲಧಿಕಾರಿಗಳು ಅತೃಪ್ತರಾಗಿದ್ದರೆ, ಮುಕ್ತವಾಗಿ ಚರ್ಚಿಸಬೇಕು ಅಥವಾ ಸ್ವಯಂ-ಮೌಲ್ಯಮಾಪನ ಮಾಡಿಕೊಂಡು ಕಾರಣಗಳನ್ನೂ, ಪರಿಹಾರಗಳನ್ನೂ ಕಂಡುಕೊಳ್ಳಬೇಕು. ಈ ಪ್ರಕ್ರಿಯೆ ಕಷ್ಟವೆನಿಸಿದರೆ, ಸಂಕೋಚವಿಲ್ಲದೆ ಈ ಅಂಕಣದ ಮೂಲಕ ನಮ್ಮನ್ನು ಸಂಪರ್ಕಿಸಿ.

9. ಇದೇ ವರ್ಷ ಬ್ಯಾಂಕ್ ಕೆಲಸದಿಂದ ನಿವೃತ್ತಿಯಾಗಿದ್ದೇನೆ. 2018ರಲ್ಲಿ ದೂರ ಶಿಕ್ಷಣದ ಮೂಲಕ ಮೂರು ವರ್ಷಗಳ ಕಾಲ ಬಿ.ಎಸ್ಸಿ (ಮನಃಶಾಸ್ತ್ರ) ಪದವಿಯನ್ನು ಮಾಡಿ, ಈಗ ಎಂ.ಎಸ್ಸಿ (ಮನಃಶಾಸ್ತ್ರ) ಮಾಡುತ್ತಿದ್ದು, 3ನೇ ಸೆಮಿಸ್ಟರ್ ಮುಗಿದಿದೆ. ಈ ವಯಸ್ಸಿನಲ್ಲಿ ನನಗೆ ಮನಃಶಾಸ್ತ್ರಜ್ಞನಾಗಿ ಕೆಲಸ ಸಿಗುವುದು ಸಾಧ್ಯವೇ?

-ಸದಾನಂದ ಪ್ರಭು, ಊರು ತಿಳಿಸಿಲ್ಲ.

ಬ್ಯಾಂಕಿಂಗ್ ಕ್ಷೇತ್ರದಲ್ಲಿ ನಿಮಗೆ ಅಪಾರವಾದ ಅನುಭವವಿದೆ. ಹಾಗಾಗಿ, ಈ ಅನುಭವದ ಜೊತೆಗೆ, ಮನಃಶಾಸ್ತ್ರದ ಜ್ಞಾನ ಮತ್ತು ಸಂಬಂಧಿತ ಕೌಶಲಗಳಾದ ವಿಶ್ಲೇಷಾತ್ಮಕ ಕೌಶಲ, ಸಮಸ್ಯೆಯನ್ನು ಬಗೆಹರಿಸುವ ಕೌಶಲ, ಸಂವಹನ, ಅನುಭೂತಿ, ಅಂತರ್-ವೈಯಕ್ತಿಕ ನೈಪುಣ್ಯ ಇತ್ಯಾದಿಗಳನ್ನು ಬೆಳೆಸಿಕೊಂಡು, ಬ್ಯಾಂಕಿಂಗ್ ಕ್ಷೇತ್ರದಲ್ಲಿ ಪೂರ್ಣಾವಧಿ/ಅರೆಕಾಲಿಕ ಕೆಲಸಗಳನ್ನು ಅರೆಸಬಹುದು. ಹೆಚ್ಚಿನ ಮಾರ್ಗದರ್ಶನ ಅಗತ್ಯವೆನಿಸಿದರೆ, ಈ ಅಂಕಣದ ಮೂಲಕ ನಮ್ಮನ್ನು ಸಂಪರ್ಕಿಸಿ.

10. ದ್ವಿತೀಯ ಪಿಯುಸಿ (ಪಿಸಿಎಂಎಸ್) ಮುಗಿಸಿ, ಫಾಮರ್ಸಿಯಲ್ಲಿ ಡಿಪ್ಲೊಮಾ ಮಾಡುತ್ತಿದ್ದೇನೆ. ಮುಂದೆ, ಯಾವ ಕೋರ್ಸ್ ಮಾಡಿದರೆ ಸೂಕ್ತ? ಎರಡು ವರ್ಷದ ಕೋರ್ಸ್‌ಗೆ ಸಲಹೆ ಕೊಡಿ ಸರ್. ಡಿಪ್ಲೊಮಾ ನಂತರ, ನಾಲ್ಕು ವರ್ಷದ ಬಿ.ಫಾರ್ಮಾ ಕೋರ್ಸ್ನ ಎರಡನೇ ವರ್ಷಕ್ಕೆ (ಲ್ಯಾಟರಲ್ ಎಂಟ್ರಿ) ಸೇರಬಹುದು. ಅಥವಾ, ನಿಮಗಿಷ್ಟವಿರುವ ವೃತ್ತಿ ಸಂಬಂಧಿತ ಕೌಶಲಾಭಿವೃದ್ಧಿಗೆ, ಅರೆಕಾಲಿಕ ಕೋರ್ಸ್‌ ಮಾಡಿ, ಸರ್ಕಾರಿ/ಖಾಸಗಿ ಕ್ಷೇತ್ರದಲ್ಲಿ ವೃತ್ತಿಯನ್ನು ಅರಸಬಹುದು

11. ಬಿ.ಎಸ್ಸಿ (ಸಿಬಿಝೆಡ್) ಮಾಡುತ್ತಿದ್ದು, ಮುಂದೆ ರಸಾಯನ ಶಾಸ್ತ್ರದಲ್ಲಿ ಎಂ.ಎಸ್ಸಿ ಮಾಡಬೇಕೆಂದಿದ್ದೇನೆ. ಸದ್ಯಕ್ಕೆ ಜಾಮ್ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದೇನೆ. ಜಾಮ್ ಪರೀಕ್ಷೆ ಕುರಿತು ಹೆಚ್ಚಿನ ಮಾಹಿತಿ ಬೇಕು. ಇದಕ್ಕೆ
ತರಬೇತಿ ಬೇಕಾಗುತ್ತದೆಯೇ ತಿಳಿಸಿ. ಅನಿತಾ, ಕೊಪ್ಪಳ.

ಜಾಯಿಂಟ್ ಅಡ್ಮಿಷನ್ ಟೆಸ್ಟ್ ಫಾರ್ ಮಾಸ್ಟರ್ಸ್ (ಜಾಮ್) ಮುಖಾಂತರ ಇಂಡಿಯನ್ ಇನ್‌ಸ್ಟಿಟ್ಯೂಟ್ ಅಫ್ ಟೆಕ್ನಾಲಜಿ (ಐಐಟಿ), ಇಂಡಿಯನ್ ಇನ್‌ಸ್ಟಿಟ್ಯೂಟ್ ಅಫ್ ಸೈನ್ಸ್ ( ಐಐಎಸ್ಸಿ) ಮುಂತಾದ ದೇಶದ ಪ್ರತಿಷ್ಟಿತ ವಿಶ್ವವಿದ್ಯಾಲಯಗಳಲ್ಲಿ ವಿಜ್ಞಾನ ವಿಭಾಗದ
ಸ್ನಾತಕೋತ್ತರ ಕೋರ್ಸ್‌ಗಳಿಗೆ ಪ್ರವೇಶವನ್ನು ಪಡೆಯಬಹುದು. ಕಠಿಣವಾದ ಈ ಪರೀಕ್ಷೆಗೆ ಏಕಾಗ್ರತೆ, ಸಮಯದ ನಿರ್ವಹಣೆ, ಪರಿಶ್ರಮದ ಜೊತೆಗೆ ವಿಷಯವಾರು ತಂತ್ರಗಾರಿಕೆಯೂ ಅಗತ್ಯವಾಗುತ್ತದೆ. ಇದನ್ನು ನಿಭಾಯಿಸಲು ಕಷ್ಟವೆನಿಸಿದರೆ, ತರಬೇತಿಯನ್ನು ಪಡೆದುಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಗಮನಿಸಿ:https://www.collegedekho.com/exam/iit-jam/how-to-
prepare

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.