ADVERTISEMENT

3ಡಿ ಮುದ್ರಣ ತಂತ್ರಜ್ಞಾನ: ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಸುಸಂಧಿ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2019, 19:30 IST
Last Updated 17 ಸೆಪ್ಟೆಂಬರ್ 2019, 19:30 IST
   

ಕಂಪ್ಯೂಟರ್‌ ನೆರವಿನಿಂದ ಪ್ರಿಂಟರ್‌ ಮೂಲಕ ಸಿಂಚನಗೊಂಡ ಶಾಯಿ ಬಿಂದುಗಳು ಚಿತ್ರ ಅಥವಾ ಪತ್ರವನ್ನು ಹಾಳೆಯ ಮೇಲೆ ಮೂಡಿಸುವ ಹಾಗೆ, ಪ್ಲಾಸ್ಟಿಕ್‌ ಅಥವಾ ಲೋಹದ ಬಿಂದುಗಳನ್ನು ಸಿಂಚನ ಮಾಡಿ ಒಂದೊಂದೇ ಪದರದಂತೆ ಮೂರು ಆಯಾಮಗಳಲ್ಲಿ ನಿರ್ದಿಷ್ಟ ಆಕಾರ ಹಾಗೂ ವಿನ್ಯಾಸಗಳಲ್ಲಿ ಬಿಡಿಭಾಗಗಳನ್ನು ರೂಪಿಸುವ ಕಲೆಯೇ ಈ 3ಡಿ ತಂತ್ರಜ್ಞಾನ.

ಉತ್ಪಾದನೆ, ಕೈಗಾರಿಕಾ ವಿನ್ಯಾಸ, ಆಭರಣ, ಪಾದರಕ್ಷೆಗಳು, ವಾಸ್ತುಶಿಲ್ಪ, ಎಂಜಿನಿಯರಿಂಗ್ ಮತ್ತು ನಿರ್ಮಾಣ, ಆಟೊಮೋಟಿವ್, ಏರೋಸ್ಪೇಸ್, ದಂತ ಮತ್ತು ವೈದ್ಯಕೀಯ ಕೈಗಾರಿಕೆಗಳು, ಶಿಕ್ಷಣ, ಭೌಗೋಳಿಕ ಮಾಹಿತಿ ವ್ಯವಸ್ಥೆಗಳು, ಸಿವಿಲ್ ಎಂಜಿನಿಯರಿಂಗ್ ಮತ್ತು ಇತರ ಹಲವು ಕ್ಷೇತ್ರಗಳಲ್ಲಿ 3ಡಿ ಮುದ್ರಣವು ಉಪಯುಕ್ತವಾಗಿದ್ದು, ಬಹು ವೇಗವಾಗಿ ಬೆಳೆಯುತ್ತಿರುವ ಕ್ಷೇತ್ರವಾಗಿದೆ.

3ಡಿ ಮುದ್ರಣದ ವಿಧಾನ

ADVERTISEMENT

3ಡಿ ಮುದ್ರಣದ ಉಪಯೋಗಗಳು ಹೆಚ್ಚಾಗುತ್ತಿವೆ ಮತ್ತು ಇತ್ತೀಚಿನ ದಿನಗಳಲ್ಲಿ ವಿಶ್ವಮಟ್ಟದಲ್ಲಿ ಬಹಳ ಅದ್ಭುತ ತಂತ್ರಜ್ಞಾನವೆಂದು ಸಾಬೀತಾಗಿದೆ. ಉತ್ಪಾದನೆಯಲ್ಲಿ ಪ್ರಮುಖ ತಾಂತ್ರಿಕ ಪ್ರಗತಿ ಎಂದೇ ಬಣ್ಣಿಸಲಾಗುತ್ತಿದ್ದು, ಆಧುನಿಕ ಉದ್ಯಮದ ಒಂದು ಭಾಗವಾಗಿ ಗುರುತಿಸಲ್ಪಟ್ಟಿದೆ.

ಈ ರೀತಿಯ ಮುದ್ರಣವು ಸಾಂಪ್ರದಾಯಕ ವಿಧಾನಕ್ಕಿಂತ ಹೆಚ್ಚಿನ ಪ್ರಯೋಜನಗಳನ್ನು ಹೊಂದಿದ್ದು, ಈ ಸಂದರ್ಭದಲ್ಲಿ ಅತ್ಯಂತ ಅವಶ್ಯಕ ಕೂಡ ಹೌದು. ಸಾಮಾನ್ಯವಾಗಿ ಫ್ಯೂಸ್ಡ್ ಡಿಪಾಸಿಷನ್ ಮಾಡೆಲಿಂಗ್‌ನಲ್ಲಿ (FDM) ಘಟಕವನ್ನು ಪದರ ಶೇಖರಣೆಯ ಮೂಲಕ ಮೂಲಮಾದರಿ ಮತ್ತು ಪದರದ ಪರಿಕಲ್ಪನೆಯನ್ನು ಬಳಸಿ ತಯಾರಿಸಲಾಗುತ್ತದೆ, ಇದನ್ನು ಮಾಡೆಲಿಂಗ್ ಸಾಫ್ಟ್‌ವೇರ್ ಬಳಸಿ ತಯಾರಿಸಿದ ಸ್ಟೀರಿಯೊಲಿಥೊಗ್ರಫಿ (STL) ಫೈಲ್ ಫಾರ್ಮ್ಯಾಟ್ ಮೂಲಕ ಯಂತ್ರದ ಸಾಫ್ಟ್‌ವೇರ್‌ಗೆ ಡೇಟಾವನ್ನು ಕಳುಹಿಸಿ ಮಾಡಲಾಗುತ್ತದೆ. (CAD). ಇದು ರ‍್ಯಾಪಿಡ್ ಪ್ರೊಟೊಟೈಪಿಂಗ್ ವಿಧಾನಗಳ ಒಂದು ಭಾಗವಾಗಿದ್ದು, ಇದು ಸಂಯೋಜನೀಯ (ಆಡಿಟಿವ್) ಉತ್ಪಾದನೆಯ ಪರಿಕಲ್ಪನೆಯನ್ನು ಬಳಸುತ್ತದೆ. ನಿರ್ದಿಷ್ಟ ವಿನ್ಯಾಸದ ಪ್ರಕಾರ ಅಂತಿಮ ರೂಪವನ್ನು ಪಡೆಯಲು ಪದರದಿಂದ ದ್ರವ ವಸ್ತುವನ್ನು ಶೇಖರಿಸಿಡುತ್ತದೆ.

ಇಂದಿನ ಮೆಕ್ಯಾನಿಕಲ್‌ ಎಂಜಿನಿಯರಿಂಗ್ ಜಗತ್ತಿನಲ್ಲಿ 3ಡಿ ಮುದ್ರಣದ ವಿವಿಧ ರೂಪಗಳು ದೈನಂದಿನ ಜೀವನದಲ್ಲಿ ಬಳಸುವ ಸರಳ ರಚನೆಗಳಿಂದ ಹಿಡಿದು ಏರೋಸ್ಪೇಸ್ ಅಪ್ಲಿಕೇಶನ್‌ಗಳಲ್ಲಿನ ಸಂಕೀರ್ಣ ಘಟಕಗಳವರೆಗೂ ವಿವಿಧ ಘಟಕಗಳ ಸಂಶೋಧನೆ ಮತ್ತು ಅಭಿವೃದ್ಧಿಗೆ ಬಹಳ ಉಪಯುಕ್ತವಾಗಿವೆ.

ವಿವಿಧ ಕ್ಷೇತ್ರದಲ್ಲಿ ಪ್ರಯೋಜನಗಳು

3ಡಿ ಮುದ್ರಣದಿಂದ ಸರಳವಾದ, ಆದರೆ ಅತ್ಯಂತ ನಿಖರವಾದ ಹಲವು ಪ್ರಯೋಜನಗಳಿವೆ. ಇದು ಪರಿಕಲ್ಪನಾ ಘಟಕಗಳನ್ನು ತಯಾರಿಸಲು ಹೆಚ್ಚು ವ್ಯಾಪಕವಾಗಿ ಬಳಸಲ್ಪಡುತ್ತದೆ.

ಇದು ಎಂಜಿನಿಯರಿಂಗ್‌ಗೆ ಮಾತ್ರ ಸೀಮಿತವಾಗಿರದೆ ಪ್ರಸ್ತುತ ಉದ್ಯಮದಲ್ಲಿ ಹೆಚ್ಚು ವ್ಯಾಪಕವಾಗಿ ಬಳಸಲಾಗುವ ಆಡಿಟಿವ್‌ ಉತ್ಪಾದನಾ ಪ್ರಕ್ರಿಯೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಳಕೆಯಾಗುತ್ತಿದೆ.

3ಡಿ ಪ್ರಿಂಟಿಂಗ್‌ ಬಹು ವಿಭಾಗಗಳಲ್ಲಿ
ವೇಗವಾಗಿ ಬೆಳೆಯುತ್ತಿರುವ ಕ್ಷೇತ್ರವಾಗಿದ್ದು, ಅವುಗಳಲ್ಲಿ ಕೆಲವೆಂದರೆ ಮೆಕ್ಯಾನಿಕಲ್, ಮೆಡಿಕಲ್, ಸಿವಿಲ್ ಮತ್ತು ಎಲೆಕ್ಟ್ರಿಕಲ್.

ಈ ಮುದ್ರಣವು ಅನೇಕ ದಾಖಲೆಗಳನ್ನು ಮುರಿದಿದೆ. ಉದಾಹರಣೆಗೆ ಮಾರ್ಸ್ ರೋವರ್‌ನಲ್ಲಿ ಕೂಡ ಬಳಕೆಯಾಗಿದ್ದು, ಬಾಹ್ಯಾಕಾಶದಲ್ಲಿನ ಸಾಧನೆಗೆ ಪ್ರಮುಖ ಕಾರಣಗಳಲ್ಲಿ ಒಂದು ಎನ್ನಬಹುದು.

ಏರೋಸ್ಪೇಸ್ ಉದ್ಯಮದಲ್ಲಿನ ಅಪ್ಲಿಕೇಶನ್‌ಗಳನ್ನು ತೆಗೆದುಕೊಂಡರೆ ಏರ್‌ಲೈನ್ ಇಲೆಕ್ಟ್ರಿಕಲ್ ಜನರೇಟರ್‌ನ ವಿನ್ಯಾಸ, ಏರೋಸ್ಪೇಸ್ ಇನ್‌ಲೈನ್ ಇಲೆಕ್ಟ್ರಿಕಲ್ ಜನರೇಟರ್‌ಗಳನ್ನು ತಯಾರಿಸುವಲ್ಲಿ, ದೊಡ್ಡ ಜೆಟ್‌ಲೈನರ್‌ಗಾಗಿ ಇಂಟಿಗ್ರೇಟೆಡ್ ಡ್ರೈವ್ ಜನರೇಟರ್‌ನ ವಿನ್ಯಾಸವನ್ನು ಪರಿಶೀಲಿಸಲು ನಿರ್ಧರಿಸುವಲ್ಲಿ ಇದರ ಪಾತ್ರ ಮುಖ್ಯವಾದುದು.

ವಾಹನ ಉದ್ಯಮದಲ್ಲಿ: ಆಟೊಮೋಟಿವ್ ಘಟಕಗಳು ಹಾನಿಗೊಳಗಾಗಿದ್ದರೆ ಅಥವಾ ದೋಷಯುಕ್ತವಾಗಿದ್ದರೆ ಅಂತಹ ಘಟಕಗಳು ವ್ಯರ್ಥವಾಗುತ್ತವೆ. ಇಂತಹ ಸಂಧರ್ಭದಲ್ಲಿ 3ಡಿ ಮುದ್ರಣದಂತಹ ತಂತ್ರಜ್ಞಾನಗಳನ್ನು ಬಳಸಿ ಬಿಡಿಭಾಗಗಳು ಮತ್ತು ಘಟಕಗಳ ಕೊರತೆಯನ್ನು ನೀಗಿಸಬಹುದು.

ಬಯೋಮೆಡಿಕಲ್ ಉದ್ಯಮದಲ್ಲಿ ಪ್ರಾಸ್ಥೆಟಿಕ್ಸ್, ಸ್ಟ್ರೆಚರ್ಸ್ ಮತ್ತು ಮುರಿದ ಅಂಗಾಂಗಗಳಿಗೆ ಎರಕ ಹೊಯ್ದಂತಹ ಕೃತಕ ಬಿಡಿಭಾಗಗಳನ್ನು ತಯಾರಿಸಲಾಗುತ್ತಿದೆ. ಅವುಗಳಲ್ಲಿ ಕೆಲವನ್ನು ಕಸ್ಟಮೈಸ್ ಕೂಡ ಮಾಡಬಹುದು.

ತರಬೇತಾದ ಎಂಜಿನಿಯರ್‌ಗಳ ಕೊರತೆ

ಈ ಮುದ್ರಣವು ಉದ್ಯಮ ಕ್ಷೇತ್ರಕ್ಕೆ ದೊಡ್ಡ ಪ್ರಮಾಣದಲ್ಲಿ ಪ್ರವೇಶಿಸಿದೆ. ಆದರೆ ಯಂತ್ರಗಳನ್ನು ವಿನ್ಯಾಸಗೊಳಿಸಲು ಮತ್ತು ನಿರ್ವಹಿಸಲು ಇದರಲ್ಲಿ ತರಬೇತಾದ ಸಾಕಷ್ಟು ಉದ್ಯೋಗಿಗಳು ಇಲ್ಲ. ಉತ್ಪಾದನಾ ಕಂಪನಿಗಳು ಉದ್ಯೋಗಕ್ಕೆ ಸೇರಿದ ಎಂಜಿನಿಯರ್‌ಗಳಿಗೆ ತರಬೇತಿ ನೀಡಲು ಸಮಯ ಮತ್ತು ಹಣವನ್ನು ಹೂಡಿಕೆ ಮಾಡಬೇಕಾದ ಪರಿಸ್ಥಿತಿ ಇದೆ. ಪರಿಣತ ತಯಾರಕರು ಹೊಸ ತಂತ್ರಜ್ಞಾನವನ್ನು ಕಲಿಯಲು ಹಿಂದೇಟು ಹಾಕುತ್ತಿರುವುದರಿಂದ ಇದು ಒಂದು ಸವಾಲು ಎನ್ನಬಹುದು. ಅಮೆರಿಕದಲ್ಲಿ ಮೆಸಚೂಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಜಾರ್ಜಿಯಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಂತಹ ಕೆಲವು ವಿಶ್ವವಿದ್ಯಾಲಯಗಳು 3D ಪ್ರಿಂಟಿಂಗ್ ಲ್ಯಾಬ್‌ಗಳನ್ನು ಪ್ರಾರಂಭಿಸುವ ಮೂಲಕ ಎಂಜಿನಿಯರಿಂಗ್ ವಿದ್ಯಾರ್ಥಿಗಳನ್ನು ಸಿದ್ಧಪಡಿಸುತ್ತಿವೆ.

ಕರ್ನಾಟಕದಲ್ಲಿ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಮೆಕ್ಯಾನಿಕಲ್‌ ಬಿ.ಇ. ಮತ್ತು ಎಂ.ಟೆಕ್‌.ನಲ್ಲಿ ಈ ಕುರಿತು ಓದಬಹುದು. ಬೆಂಗಳೂರಿನಲ್ಲಿರುವ ಸೆಂಟ್ರಲ್‌ ಮ್ಯಾನುಫ್ಯಾಕ್ಚರಿಂಗ್‌ ಟ್ರೇನಿಂಗ್‌ ಇನ್‌ಸ್ಟಿಟ್ಯೂಟ್‌ (ಸಿಎಂಟಿಐ) ನಲ್ಲಿ ಅಲ್ಪಾವಧಿ ಕೋರ್ಸ್‌ ಇದೆ. ಮೆಕ್ಯಾನಿಕಲ್‌ನಲ್ಲಿ ಬಿ.ಇ. ಆದ ಮೇಲೆ ಇದಕ್ಕೆ ಸೇರಿಕೊಳ್ಳಬಹುದು.

ಈ 3ಡಿ ಮುದ್ರಣದಲ್ಲಿ ಮೂರು ವಿಭಾಗಗಳನ್ನಾಗಿ ಮಾಡಿ ಅದಕ್ಕೆ ತಕ್ಕಂತೆ ವಿದ್ಯಾರ್ಥಿಗಳಿಗೆ ತರಬೇತಿ ನೀಡಬಹುದು.

ಸಂಸ್ಕರಣೆ ಮತ್ತು ಉತ್ಪಾದನಾ ಕ್ಷೇತ್ರ: ಯಾಂತ್ರಿಕ ಉತ್ಪಾದನೆ, ಆಟೊಮೊಬೈಲ್ ತಯಾರಿಕೆ, ವಿದ್ಯುತ್ ತಂತ್ರಜ್ಞಾನ, ಅಚ್ಚು ತಂತ್ರಜ್ಞಾನ, ಸಂಖ್ಯಾತ್ಮಕ ನಿಯಂತ್ರಣ ತಂತ್ರಜ್ಞಾನ, ಹಡಗು ನಿರ್ಮಾಣ ಇತ್ಯಾದಿ.

ಔದ್ಯೋಗಿಕ ವಿನ್ಯಾಸ ಕ್ಷೇತ್ರ: ಬಟ್ಟೆ ವಿನ್ಯಾಸ, ನಿರ್ಮಾಣ ಎಂಜಿನಿಯರಿಂಗ್, ಉತ್ಪನ್ನ ವಿನ್ಯಾಸ, ಪ್ಲಾಸ್ಟಿಕ್ ಛಾವಣಿ, ಪೀಠೋಪಕರಣ ವಿನ್ಯಾಸ ಮತ್ತು ಉತ್ಪಾದನೆ.

ಕೈಗಾರಿಕಾ ವಿನ್ಯಾಸ: ಡಿಜಿಟಲ್ ಇಮೇಜಿಂಗ್ ತಂತ್ರಜ್ಞಾನ

ಕನಿಷ್ಠ ಶೈಕ್ಷಣಿಕ ಅರ್ಹತೆ : ಮೆಕ್ಯಾನಿಕಲ್ ಎಂಜಿನಿಯರಿಂಗ್, ಪ್ರೊಡಕ್ಶನ್ ಎಂಜಿನಿಯರಿಂಗ್, ಟೂಲ್ ಎಂಜಿನಿಯರಿಂಗ್, ಆಟೊಮೊಬೈಲ್ ಎಂಜಿನಿಯರಿಂಗ್, ಇಂಡಸ್ಟ್ರಿಯಲ್ ಎಂಜಿನಿಯರಿಂಗ್‌ನಲ್ಲಿ ಪದವಿ.

(ಲೇಖಕರು ಸಹಾಯಕ ಅಧ್ಯಾಪಕರು,ಎ.ಜೆ. ಇನ್‌ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಮತ್ತು ಟೆಕ್ನಾಲಜಿ ರಾಯಚೂರು)

**
ತರಬೇತಿ ಸಂಸ್ಥೆಗಳು
*
ನೆಟ್ಟುರ್ ಟೆಕ್ನಿಕಲ್ ಟ್ರೈನಿಂಗ್ ಫೌಂಡೇಶನ್ (NTTF)
*ಆಡಿಟಿವ್ ಮ್ಯಾನುಫ್ಯಾಕ್ಚರಿಂಗ್ ಸೊಸೈಟಿ ಆಫ್ ಇಂಡಿಯಾ (AMSI)
*ಸೆಂಟ್ರಲ್ ಮ್ಯಾನುಫ್ಯಾಕ್ಚರಿಂಗ್ ಟೆಕ್ನಾಲಜಿ ಇನ್‌ಸ್ಟಿಟ್ಯೂಟ್‌ (CMTI)
*ಸ್ಟಾರ್ಟ್‌ನೆಲ್ ಟ್ರೈನಿಂಗ್ ಇನ್‌ಸ್ಟಿಟ್ಯೂಟ್‌
*ಇನ್‌ಸ್ಟಿಟ್ಯೂಟ್‌ ಆಫ್ ಇಂಡಸ್ಟ್ರಿಯಲ್ ಡಿಸೈನ್
*ವಿಪ್ರೋ 3ಡಿ
*IMTMA ಟೆಕ್ನಾಲಜಿ ಸೆಂಟರ್
(ಎಲ್ಲವೂ ಬೆಂಗಳೂರಿನಲ್ಲಿವೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.