ADVERTISEMENT

ಕೃತಕ ಬುದ್ಧಿಮತ್ತೆ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2019, 20:00 IST
Last Updated 26 ಮಾರ್ಚ್ 2019, 20:00 IST
Smart machines artificial intelligence concept
Smart machines artificial intelligence concept   

ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಕೃತಕ ಬುದ್ಧಿಮತ್ತೆ (ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌– ಎಐ)ಯನ್ನು ಐಚ್ಛಿಕ ವಿಷಯವನ್ನಾಗಿ ಆರಂಭಿಸುವ ಸಿಬಿಎಸ್‌ಇ (ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ) ನಿರ್ಧಾರದಿಂದ ವಿದ್ಯಾರ್ಥಿಗಳಲ್ಲಷ್ಟೇ ಅಲ್ಲ, ಶಿಕ್ಷಕರಲ್ಲೂ ಒಂದು ರೀತಿಯ ಕುತೂಹಲ ಶುರುವಾಗಿದೆ. ಕೌಶಲ ಅಭಿವೃದ್ಧಿಗೆ ಈ ವಿಷಯವನ್ನು ಆರಂಭಿಸಲು ನಿರ್ಧರಿಸಲಾಗಿದ್ದು, ಇದು ಹೇಗೆ ವಿದ್ಯಾರ್ಥಿಗಳ ಸಾಧನೆ, ಸಾಮರ್ಥ್ಯದ ಮೇಲೆ ಪರಿಣಾಮ ಬೀರಲಿದೆ ಎಂಬುದೇ ಈ ಕುತೂಹಲಕ್ಕೆ ಕಾರಣ.

ಸದ್ಯ ಸಿಬಿಎಸ್‌ಇ 20,299 ಶಾಲೆಗಳನ್ನು ಹೊಂದಿದ್ದು, ಇತರ 25 ದೇಶಗಳ 220 ಶಾಲೆಗಳು ಇದರ ವ್ಯಾಪ್ತಿಯಲ್ಲಿವೆ. ಸಿಬಿಎಸ್‌ಇ ಪಠ್ಯದ ವಿದ್ಯಾರ್ಥಿಗಳಿಗೆ ಈ ಶೈಕ್ಷಣಿಕ ವರ್ಷದಿಂದ ಇದನ್ನು ಬೋಧಿಸಲಾಗುತ್ತಿದ್ದು, ವಿದ್ಯಾರ್ಥಿಗಳ ಕೌಶಲ ಆಧಾರಿತ ಶಿಕ್ಷಣದ ಒಂದು ಭಾಗವೆಂದೇ ವಿಶ್ಲೇಷಿಸಲಾಗುತ್ತಿದೆ. ಇದುವರೆಗೆ ಪ್ರತಿಪಾದಿಸಲಾಗುತ್ತಿದ್ದ ಜ್ಞಾನ ಆಧಾರಿತ ಶಿಕ್ಷಣಕ್ಕೆ ಇದು ವ್ಯತಿರಿಕ್ತವಾಗಿದ್ದು, ಭವಿಷ್ಯದ ತಲೆಮಾರಿನವರನ್ನು ಕೃತಕ ಬುದ್ಧಿಮತ್ತೆಗೆ ಸಂಪೂರ್ಣ ಸನ್ನದ್ಧಗೊಳಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ. ಅಂದರೆ ಇನ್ನು ಕೆಲವೇ ವರ್ಷಗಳಲ್ಲಿ ಬಹುತೇಕ ಉತ್ಪಾದನಾ ವಲಯ ಕೃತಕ ಬುದ್ಧಿಮತ್ತೆಯನ್ನು ಅವಲಂಬಿಸುವ ಸೂಚನೆ ಇದಾಗಿದೆ ಎನ್ನಬಹುದು.

ಮಾತು, ಶ್ರವಣ, ದೃಷ್ಟಿ ಒತ್ತಟ್ಟಿಗಿರಲಿ, ಯೋಚಿಸುವ, ಕಲಿಯುವ, ನಿರ್ಧಾರ ಕೈಗೊಳ್ಳುವ ಮಾನವನ ಕೌಶಲವನ್ನೂ ಲೀಲಾಜಾಲವಾಗಿ ನಿಭಾಯಿಸುವ ಈ ಕೃತಕ ಬುದ್ಧಿಮತ್ತೆ ಅಥವಾ ಯಂತ್ರಮಾನವ ಶಾಲೆಗಳನ್ನು ಪ್ರವೇಶಿಸುವ ಯೋಚನೆಯೇ ಪುಳಕ ಹುಟ್ಟಿಸುವಂತಹದ್ದು. ಹೀಗಿರುವಾಗ ಕೃತಕ ಬುದ್ಧಿಮತ್ತೆಯಿಂದ ಕಲಿಕಾ ತಂತ್ರಜ್ಞಾನವನ್ನು ಮಕ್ಕಳ ಮೇಲೆ ಹೇಗೆ ಪ್ರಯೋಗಿಸಬಹುದು ಎಂಬುದು ಕುತೂಹಲವನ್ನು ಇನ್ನಷ್ಟು ಹೆಚ್ಚಿಸಿದೆ.

ADVERTISEMENT

ಕೈಗಾರಿಕಾ ಕ್ರಾಂತಿಯ ನಂತರದ ದಿನಗಳಲ್ಲಿ ಶೈಕ್ಷಣಿಕ ಕ್ರಾಂತಿ ಮುನ್ನೆಲೆಗೆ ಬಂತು. ಆಗ ಸಂಪನ್ಮೂಲ ಕೊರತೆಯಿಂದಾಗಿ ಕಾರ್ಮಿಕರಿಗೆ ಒಂದೇ ರೀತಿಯ ಶಿಕ್ಷಣ ಅಂದರೆ ಅದು ಎಲ್ಲರಿಗೂ ಹೊಂದುವಂತಹದ್ದು ಎಂಬ ನಂಬಿಕೆಯ ಮೇಲೆ ನೀಡುತ್ತ ಬರಲಾಯಿತು. ಆದರೆ ಹೆಚ್ಚಿನ ವಿದ್ಯಾರ್ಥಿಗಳಿಗೆ ಅವರ ಆಸಕ್ತಿ, ಕುತೂಹಲ ತಣಿಸಲು ಈ ರೀತಿಯ ಬೋಧನಾ ಕ್ರಮ ವಿಫಲವಾಯಿತು ಎನ್ನಬಹುದು. ಹೀಗಾಗಿ ಕಲಿಕೆ ಎನ್ನುವುದು ತಲಸ್ಪರ್ಶಿಯಾಗಿರದೇ ಬೇಸಿಕ್‌ ಎನ್ನುವಂತಾಯಿತು. ಸಮಸ್ಯೆಯನ್ನು ವಿದ್ಯಾರ್ಥಿಯ ಮುಂದೆ ಹಿಡಿದರೆ ತಾನೇ, ಆತನಿಗೆ ಅದನ್ನು ಪರಿಹರಿಸಿಕೊಳ್ಳುವ ತುರ್ತು ಹುಟ್ಟಿಕೊಳ್ಳುತ್ತದೆ.

ತಂತ್ರಜ್ಞಾನ ಆಧಾರಿತ ಕಲಿಕಾ ವಿಧಾನ
ಹೀಗಾಗಿ ಸ್ವಯಂ ಕಲಿಕಾ ಕ್ರಮಕ್ಕೆ ಹೆಚ್ಚು ಒತ್ತು ನೀಡತೊಡಗಿದ್ದು. 60– 70ರ ದಶಕಗಳಲ್ಲಿ ವೈಯಕ್ತಿಕವಾದ, ವಿಶಿಷ್ಟವಾದ ಕಲಿಕೆಗೆ ಪ್ರೋತ್ಸಾಹ ನೀಡಲಾಯಿತು. ವಿದ್ಯಾರ್ಥಿಗಳ ಸಾಮರ್ಥ್ಯ, ಅವಶ್ಯಕತೆ, ಆಸಕ್ತಿ, ಪೈಪೋಟಿ ನೀಡುವಂತಹ ಗುಣವನ್ನು ಪರಿಗಣಿಸಿ ನೀಡುವ ಶಿಕ್ಷಣದಿಂದ ಆಗುವ ಲಾಭ ಅಸಾಧಾರಣ. 21ನೇ ಶತಮಾನದಲ್ಲಿ ತಂತ್ರಜ್ಞಾನ ಅಭಿವೃದ್ಧಿಯಿಂದ ವಿವಿಧ ರೀತಿಯಲ್ಲಿ ಕಲಿಕಾ ವಿಧಾನಗಳನ್ನು ಅಳವಡಿಸಿಕೊಳ್ಳಲಾಗಿದೆ. ಅದರಲ್ಲಿ ಈ ವೈಯಕ್ತಿಕ ಕಲಿಕೆಗೆ ವಿಶೇಷ ಸ್ಥಾನಮಾನ ನೀಡಲಾಗಿದೆ.

ಸುಲಭವಾಗಿ ಅಳವಡಿಸಿಕೊಳ್ಳಬಹುದಾದ ಕಲಿಕಾ ತಂತ್ರಜ್ಞಾನದಿಂದಾಗಿ ವೈಯಕ್ತಿಕ ಕಲಿಕೆ ಎನ್ನುವುದು ಈಗ ಎಲ್ಲರಿಗೂ ಕೈಗೆಟಕುವಂತಹದ್ದು. ಕೃತಕ ಬುದ್ಧಿಮತ್ತೆಯಿಂದಾಗಿ ಪ್ರತಿಯೊಬ್ಬ ವಿದ್ಯಾರ್ಥಿಯ ಆಸಕ್ತಿ ಹಾಗೂ ತಿಳಿವಳಿಕೆಯ ಮಟ್ಟವನ್ನು ವಿಶ್ಲೇಷಿಸುವಂತಹ ಸಾಮರ್ಥ್ಯವೂ ಇದೆ. ರಾಶಿ ರಾಶಿ ಡೇಟಾವನ್ನು ಸಂಸ್ಕರಿಸುವ ಶಕ್ತಿಯೂ ಈ ತಂತ್ರಜ್ಞಾನಕ್ಕಿದೆ. ವಿದ್ಯಾರ್ಥಿಯು ವಿವಿಧ ವಿಷಯಗಳಲ್ಲಿ ಯಾವ ಮಟ್ಟದ ಜ್ಞಾನ ಹೊಂದಿದ್ದಾನೆ ಎಂಬುದನ್ನು ಕರಾರುವಕ್ಕಾಗಿ ಗ್ರಹಿಸುವ ಹಲವು ವಿಧದ ಪರೀಕ್ಷೆಗಳು ಇವೆ.

ಹಲವು ವರ್ಷಗಳಿಂದ ಕ್ರೋಢೀಕರಿಸಿದ ಅಂಕಿ– ಅಂಶಗಳ ಆಧಾರದ ಮೇಲೆ ಪ್ರಶ್ನೆಗಳನ್ನು ಸಿದ್ಧಪಡಿಸಲಾಗುತ್ತಿದೆ. ಈ ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸಿದ ವಿದ್ಯಾರ್ಥಿಗಳು ಎಷ್ಟು, ಕಷ್ಟಪಟ್ಟವರು ಎಷ್ಟು ಮಂದಿ ಎಂಬುದನ್ನು ಆಧಾರವಾಗಿ ಇಟ್ಟುಕೊಂಡು ಸುಲಭದ ಪ್ರಶ್ನೆಯಿಂದ ಕಷ್ಟದ ಪ್ರಶ್ನೆಗಳನ್ನು ಕೇಳಿ ವಿದ್ಯಾರ್ಥಿಗಳ ಸಾಧನೆ, ಸಾಮರ್ಥ್ಯದ ಮಟ್ಟ ಅಳೆಯಲಾಗುತ್ತದೆ.

ವೈಯಕ್ತಿಕ ನಿಗಾ
ಈ ಕಲಿಕಾ ತಂತ್ರಜ್ಞಾನ ಬರುವುದಕ್ಕಿಂತ ಮುಂಚೆ ವೈಯಕ್ತಿಕ ಕಲಿಕಾ ಪದ್ಧತಿ ಕಷ್ಟವಾಗಿತ್ತು. ಇದಕ್ಕೆ ನುರಿತ ಶಿಕ್ಷಕರು ಹಾಗೂ ಸಂಪನ್ಮೂಲದ ಕೊರತೆಯೂ ಕಾರಣ ಎನ್ನಬಹುದು. ಹೀಗಾಗಿ ಹೆಚ್ಚಿನ ಪೋಷಕರು ದುಬಾರಿ ಶುಲ್ಕ ತೆತ್ತು ಮನೆಪಾಠಕ್ಕೆ ಕಳಿಸುವುದು. ಆದರೆ ಈಗ ಈ ತಂತ್ರಜ್ಞಾನ ಟ್ಯೂಷನ್‌ ಶುಲ್ಕಕ್ಕಿಂತಲೂ ಕಡಿಮೆ ವೆಚ್ಚಕ್ಕೆ ಲಭ್ಯವಿದ್ದು, ಗುಣಮಟ್ಟದ ಶಿಕ್ಷಣವನ್ನು ಬಹುತೇಕ ಶಾಲೆಗಳು ಅಳವಡಿಸಿಕೊಂಡಿವೆ. ಜೊತೆಗೆ ಅಂತರ್ಜಾಲ ಹಾಗೂ ಡಿಜಿಟಲ್‌ ಬಳಕೆಯಿಂದಾಗಿ ದೇಶದ ದೂರದ ಊರಿನಲ್ಲಿರುವ ಶಾಲೆಗಳಲ್ಲೂ ತಂತ್ರಜ್ಞಾನ ಆಧಾರಿತ ಕಲಿಕಾ ಪದ್ಧತಿ ಕಾಲಿಟ್ಟಿದೆ.

ಈ ಕೃತಕ ಬುದ್ಧಿಮತ್ತೆ ಆಧಾರಿತ ಕಲಿಕಾ ಪದ್ಧತಿಯಿಂದಾಗಿ ಕಲಿಕೆಯ ಗುಣಮಟ್ಟ ಸುಧಾರಿಸಿದ್ದು, ವೆಚ್ಚವೂ ತಗ್ಗಿದೆ. ಹೆಚ್ಚು ಮಂದಿ ವಿದ್ಯಾರ್ಥಿಗಳಿಗೂ ಲಭಿಸಿದೆ. ಶೈಕ್ಷಣಿಕ ತಂತ್ರಜ್ಞಾನದ ಟೂಲ್‌ಗಳು, ಕೃತಕ ಬುದ್ಧಿಮತ್ತೆ ಆಧಾರಿತ ಸುಧಾರಿತ ಭಾಷಾ ಕಲಿಕಾ ಟೂಲ್‌ ಹಾಗೂ ಸ್ಮಾರ್ಟ್‌ ಕ್ಲಾಸ್‌ರೂಮ್‌ಗಳು ನಮ್ಮ ದೇಶದ ಇಡೀ ಶೈಕ್ಷಣಿಕ ಕ್ಷೇತ್ರವನ್ನೇ ಬದಲಾಯಿಸಲಿವೆ.

ಕೃತಕ ಬುದ್ಧಿಮತ್ತೆ ಕುರಿತ ಕೋರ್ಸ್‌ಗಳಿಂದಾಗಿ ವಿದ್ಯಾರ್ಥಿಗಳಿಗೆ ತಂತ್ರಜ್ಞಾನದ ಅರಿವು ಇನ್ನಷ್ಟು ಹೆಚ್ಚಾಗುವುದರಲ್ಲಿ ಸಂಶಯವಿಲ್ಲ. ತಂತ್ರಜ್ಞಾನದಿಂದ ಭವಿಷ್ಯವನ್ನು ನಿರ್ಮಾಣ ಮಾಡುವ ನಿಟ್ಟಿನಲ್ಲಿ ಇದೊಂದು ತ್ರಿವಿಕ್ರಮ ಹೆಜ್ಜೆಯಾಗಲಿದೆ. ಡೇಟಾ ಅನಾಲಿಟಿಕ್‌ ಮತ್ತು ಬಿಗ್‌ ಡೇಟಾ ಜೊತೆ ಇದೂ ಸೇರಿಕೊಂಡರೆ ಭಾರತದ ಶಿಕ್ಷಣ ಕ್ಷೇತ್ರ ಜಾಗತಿಕವಾಗಿ ಪೈಪೋಟಿ ನೀಡಬಹುದು.

**

ಕೃತಕ ಬುದ್ಧಿಮತ್ತೆ ಕಂಪ್ಯೂಟರ್‌ ವಿಜ್ಞಾನದ ಒಂದು ಶಾಖೆ. ಮಾನವನಂತೆ ಯೋಚಿಸುವ, ಪ್ರತಿಕ್ರಿಯಿಸುವ ಯಂತ್ರಗಳ ಸೃಷ್ಟಿಗೆ ಇದು ಒತ್ತು ನೀಡುತ್ತದೆ. ಮಾತನ್ನು ಗುರುತಿಸುವುದು, ಸಮಸ್ಯೆ ಪರಿಹರಿಸುವುದು, ಕಲಿಕೆಯಂಥ ಟಾಸ್ಕ್‌ ಈ ಕೃತಕಬುದ್ಧಿಮತ್ತೆಗೆ ಸಾಧ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.