ADVERTISEMENT

ಅಬ್ದುಲ್ ಕಲಾಂ ಜನ್ಮದಿನ; ಇಂದು ವಿಶ್ವ ವಿದ್ಯಾರ್ಥಿಗಳ ದಿನ

ಅಬ್ದುಲ್ ಕಲಾಂ ಜನ್ಮದಿನವನ್ನು ವಿದ್ಯಾರ್ಥಿಗಳ ದಿನವಾಗಿ ಆಚರಿಸಲು ವಿಶ್ವಸಂಸ್ಥೆ 2010ರಲ್ಲಿ ಕರೆ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2019, 5:20 IST
Last Updated 15 ಅಕ್ಟೋಬರ್ 2019, 5:20 IST
ಮಾಜಿ ರಾಷ್ಟ್ರಪತಿ, ವಿಜ್ಞಾನಿ ಎಪಿಜೆ ಅಬ್ದುಲ್‌ ಕಲಾಂ
ಮಾಜಿ ರಾಷ್ಟ್ರಪತಿ, ವಿಜ್ಞಾನಿ ಎಪಿಜೆ ಅಬ್ದುಲ್‌ ಕಲಾಂ    

ಮಕ್ಕಳೆಂದರೆ ನಮ್ಮ ಕನಸುಗಳನ್ನು ಸಾಕಾರಗೊಳಿಸಲು ಇರುವ ಯಂತ್ರವಲ್ಲ. ಮಕ್ಕಳಿಂದಲೂ ಕಲಿಯುವುದು ಸಾಕಷ್ಟಿದೆ ಎಂಬ ನಮ್ರ ನುಡಿಗಳು ಕಲಾಂರದ್ದಾಗಿತ್ತು. ಶಿಷ್ಯರಿಗೆ ನೆಚ್ಚಿನ ಗುರುವಾಗಿದ್ದ ಅವರು, ದೇಶದ ಉದ್ದಗಲಕ್ಕೂ ಇರುವ ವಿದ್ಯಾರ್ಥಿ ಸಮೂಹದಲ್ಲಿ ಸ್ಫೂರ್ತಿ ತುಂಬುವ ಅವಿರತ ಪ್ರಯತ್ನ ನಡೆಸಿದ್ದರು.ಇಂಥಮಹಾನ್‌ ಚೇತನವನ್ನು ನೆನೆಯಲು ಸುಸಂದರ್ಭ.

ತಮಿಳುನಾಡಿನ ರಾಮೇಶ್ವರಂ ಬಳಿಯ ಪುಟ್ಟ ಹಳ್ಳಿಯೊಂದರ ಬಡ ಕುಟುಂಬದಲ್ಲಿ ಜನಿಸಿದ ಕಲಾಂ, ಮನೆ ಮನೆಗಳಿಗೆ ನಿತ್ಯ ಪತ್ರಿಕೆಗಳನ್ನು ಹಾಕುತ್ತಾ ಚಿಕ್ಕಂದಿನಿಂದಲೇ ಶ್ರಮಜೀವನವನ್ನು ರೂಢಿಸಿಕೊಂಡೇ ಬೆಳೆದವರು. ಆದರೆ, ಪ್ರತಿಭೆಯೊಂದನ್ನೇ ಶಕ್ತಿಯಾಗಿಸಿಕೊಂಡ ಅವರು ವಿಜ್ಞಾನ, ತಂತ್ರಜ್ಞಾನ ಕ್ಷೇತ್ರಗಳಲ್ಲಿ ಪರಿಣತಿ ಸಾಧಿಸಿ,ದೇಶದ ಅತ್ಯುನ್ನತ ಸಾಂವಿಧಾನಿಕ ಹುದ್ದೆ ಅಲಂಕರಿಸುವವರೆಗೂ ತಲುಪಿದರು. ನಿರಂತರ ಶ್ರಮ, ಬದ್ಧತೆಗೆ ಅವರು ಅನ್ವರ್ಥವಾಗಿದ್ದರು. ಹೀಗಾಗಿಯೇ ಇಂದಿಗೂ ಅವರು ವಿದ್ಯಾರ್ಥಿಗಳ ನೆಚ್ಚಿನ ಆದರ್ಶ ವ್ಯಕ್ತಿ. ಅವರನ್ನು ಸ್ಮರಿಸುತ್ತಾ ಹಲವು ಶಾಲೆಗಳಲ್ಲಿ ಅವರ ಜನ್ಮದಿನಾಚರಣೆ ಆಚರಿಸಲಾಗುತ್ತದೆ.

ಪ್ರತಿ ವರ್ಷ ಅವರ ಜನ್ಮ ದಿನವನ್ನು ವಿಶ್ವದ ವಿವಿಧ ದೇಶಗಳಲ್ಲಿ ಆಚರಿಸಲಾಗುತ್ತಿದೆ. ಅವರು ರಾಷ್ಟ್ರಪತಿಯಾಗಿದ್ದಾಗ 2005ರ ಮೇ 23ರಂದು ಸ್ವಿಟ್ಜರ್ಲೆಂಡ್‌ ಪ್ರವಾಸ ಕೈಗೊಂಡಿದ್ದರು ಅವರ ಸ್ವಿಟ್ಜರ್ಲೆಂಡ್‌ಗೆ ಭೇಟಿ ನೀಡಿದ ನೆನಪಿನ ಅಂಗವಾಗಿ ಆ ದೇಶ ಪ್ರತಿ ವರ್ಷ ಮೇ 23ರಂದು ರಾಷ್ಟ್ರೀಯ ವಿಜ್ಞಾನ ದಿನ ಆಚರಿಸುತ್ತಿದೆ.

ವಿದ್ಯಾರ್ಥಿಗಳು ಮತ್ತು ಯುವ ಸಮುದಾಯವನ್ನು ದೃಷ್ಟಿಯಲ್ಲಿಟ್ಟುಕೊಂಡು, ಸ್ಫೂರ್ತಿ ತುಂಬುವ ಹಲವು ಪುಸ್ತಕಗಳನ್ನೂ ಅವರು ಬರೆದಿದ್ದಾರೆ. ಶಿಲ್ಲಾಂಗ್, ಅಹಮದಾಬಾದ್‌ ಮತ್ತು ಇಂಡೋರ್‌ ಐಐಎಂಗಳಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ, ತಮಿಳುನಾಡಿನ ಅಣ್ಣಾ ವಿಶ್ವವಿದ್ಯಾಲಯದ ಏರೊಸ್ಪೇಸ್ ಎಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕರಾಗಿ ತಿರುವನಂತಪುರಂನ ಭಾರತೀಯ ಬಾಹ್ಯಾಕಾಶ ಮತ್ತು ತಂತ್ರಜ್ಞಾನ ಸಂಸ್ಥೆಯ ಕುಲಪತಿಯಾಗಿ ಅವರು ಸೇವೆ ಸಲ್ಲಿಸಿದ್ದಾರೆ.

48- ಕಲಾಂ ಅವರಿಗೆ ಗೌರವ ಡಾಕ್ಟರೇಟ್‌ ನೀಡಿರುವ ವಿಶ್ವವಿದ್ಯಾಲಯಗಳು

22 -ಕಲಾಂಗೆ ಸಂದಿರುವ ಪ್ರಶಸ್ತಿ ಮತ್ತು ಪುರಸ್ಕಾರಗಳು

ಜನನ: 15 ಅಕ್ಟೋಬರ್‌ 1931

ನಿಧನ: 27 ಜುಲೈ 2015

1960 -ಮದ್ರಾಸ್‌ ಐಐಟಿಯಿಂದ ಏರೊಸ್ಪೇಸ್ ಎಂಜಿನಿಯರಿಂಗ್‌ನಲ್ಲಿ ಪದವಿ

1981- ಪದ್ಮಭೂಷಣ

1990-ಪದ್ಮವಿಭೂಷಣ

1997-ಭಾರತರತ್ನ

ಪ್ರಮುಖ ಪುಸ್ತಕಗಳು

* ವಿಂಗ್ಸ್ ಆಫ್ ಫೈರ್‌: ಆತ್ಮಕತೆ

* ಇಗ್ನೈಟೆಡ್ ಮೈಂಡ್ಸ್‌: ಗುಜರಾತ್‌ನ ಪಿಯು ವಿದ್ಯಾರ್ಥಿ ಸ್ನೇಹಲ್ ಥಕ್ಕರ್‌ಗೆ ಅರ್ಪಣೆ.

* ದಿ ಲ್ಯುಮಿನಸ್ ಸ್ಪಾರ್ಕ್ಸ್‌: ಯುವಕರಿಗೆ ಪ್ರೇರಣೆ ನೀಡುವ ಕತೆ, ಕವನಗಳು.

* ಇನ್‌ಸ್ಪೈರಿಂಗ್ ಥಾಟ್ಸ್‌: ನುಡಿಮುತ್ತುಗಳ ಸಂಗ್ರಹ, ಹೇಳಿಕೆಗಳು ಮತ್ತು ಲೇಖನಗಳು

* ಯು ಆರ್ ಬಾರ್ನ್ ಟೂ ಬ್ಲಾಸಂ: ಭಾರತದ ಶಾಲಾ ವ್ಯವಸ್ಥೆ ಬಗ್ಗೆ ಚಿತ್ರಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.